ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಕ್ಕೆಜೋಳ ಮುತ್ತಿದ ಸೈನಿಕ ಹುಳು

ಇದೇ ಮೊದಲ ಬಾರಿಗೆ ಬೆಂಬಿಡದೇ ಕಾಡಿದ ‘ಫಾಲ್‌ ಆರ್ಮಿ ವರ್ಮ್‘
Last Updated 3 ನವೆಂಬರ್ 2018, 20:15 IST
ಅಕ್ಷರ ಗಾತ್ರ

ಮೈಸೂರು‌: ರಾಜ್ಯದೆಲ್ಲೆಡೆ ಬಿತ್ತನೆಯಾಗಿರುವ ಮೆಕ್ಕೆಜೋಳದ ಬೆಳೆಗೆ ಸೈನಿಕ ಹುಳುಗಳ ಹಾವಳಿ ಹೆಚ್ಚಾಗಿದ್ದು, ಕೀಟನಾಶಕ ಸಿಂಪಡಿಸಿದರೂ ಒಂದೆರಡು ದಿನಗಳ ನಂತರ ಹುಳುಗಳು ಮತ್ತೆ ದಾಳಿ ಮಾಡಿ ಬೆಳೆನಾಶ ಪಡಿಸುತ್ತಿವೆ.

ಮುಂಗಾರು ಮತ್ತು ನಂತರದಲ್ಲಿ ಬಿತ್ತನೆ ಮಾಡಿದ ಬೆಳೆಯನ್ನು ತಿಂದುಹಾಕಿವೆ. ಈ ಕುರಿತು ಸಂಶೋಧನೆ ನಡೆಸಿರುವ ವಿಜ್ಞಾನಿಗಳು, ಆಫ್ರಿಕಾದಲ್ಲಿ 2016ರಲ್ಲಿ ಕಾಣಿಸಿಕೊಂಡು ಅಲ್ಲಿ ಆಹಾರ ಉತ್ಪಾದನೆ ಕುಸಿಯಲು ಪ್ರಮುಖ ಕಾರಣವಾದ ‘ಫಾಲ್‌ ಆರ್ಮಿ ವರ್ಮ್‘ ಎಂದು ಪತ್ತೆ ಹಚ್ಚಿದ್ದಾರೆ.

ಈ ಹುಳುಗಳು 80 ಬಗೆಯ ಬೆಳೆಗಳ ಎಲೆಗಳನ್ನು ತಿನ್ನುತ್ತವೆ. ನಿಯಂತ್ರಿಸದಿದ್ದರೆ ದೇಶದ ಆಹಾರ ಉತ್ಪಾದನೆ ಭಾರಿ ಪ್ರಮಾಣದಲ್ಲಿ ಕುಸಿಯಲಿದೆ ಎಂದು ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ (ಯುಎಎಚ್‌ಎಸ್‌) ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

ಇದನ್ನು ಖಚಿತಪಡಿಸಿರುವ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್‌)ಯ ನ್ಯಾಷನಲ್ ಬ್ಯೂರೊ ಆಫ್ ಅಗ್ರಿಕಲ್ಚರ್ ಇನ್‌ಸೆಟ್‌ ರಿಸೋರ್ಸ್ (ಎನ್‌ಎಐಆರ್‌) ವಿವರವಾದ ವರದಿ ಪ್ರಕಟಿಸಿದೆ. ಚಿಕ್ಕಬಳ್ಳಾಪುರದಲ್ಲಿ ಬಿತ್ತನೆಯಾಗಿರುವ 42,053 ಹೆಕ್ಟೇರ್‌ ಪ್ರದೇಶದ ಶೇ 70ರಷ್ಟು ಪ್ರದೇಶ ಈ ಕೀಟಬಾಧೆಗೆ ತುತ್ತಾಗಿದೆ ಎಂದು ಅದು ತಿಳಿಸಿದೆ.‌

ರಾಜ್ಯದ ಉದ್ದಗಲಕ್ಕೂ ಈ ಹುಳುಗಳು ಹರಡಿವೆ. ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದಲ್ಲೂ ಸೈನಿಕ ಹುಳುಗಳು ಕಾಣಿಸಿಕೊಂಡಿವೆ. ಆಫ್ರಿಕಾದಿಂದ ಅಮೆರಿಕಕ್ಕೆ ಹರಡಿದ ಈ ಕೀಟಗಳ ಮೊಟ್ಟೆಗಳು ನಂತರ ಅಲ್ಲಿಂದ ಆಮದಾಗುವ ಸಾಮಗ್ರಿಗಳ ಕಂಟೇನರ್‌ಗಳ ಮೂಲಕ ಭಾರತಕ್ಕೆ ಬಂದಿರುವ ಸಾಧ್ಯತೆಗಳಿವೆ ಎಂದು ವಿಜ್ಞಾನಿಗಳು ಅಂದಾಜು ಮಾಡಿದ್ದಾರೆ. 30 ಗಂಟೆಗಳಲ್ಲಿ 3,600 ಕಿ.ಮೀ ದೂರದವರೆಗೂ ಕ್ರಮಿಸುವ ಶಕ್ತಿ ಪಡೆದಿವೆ. ಹೀಗಾಗಿ, ಇವು ಅತಿ ವೇಗದಲ್ಲಿ ಪಸರಿಸುತ್ತವೆ.

ಕೃಷಿ ಇಲಾಖೆ ನೀಡಿದ ಸಲಹೆಯಂತೆ ಕ್ಲೋರೋಫೈರಿಫಾಸ್ ದ್ರಾವಣ ಸಿಂಪಡಿಸಿದರೂ ತಡೆಗಟ್ಟಲು ಸಾಧ್ಯವಾಗಿಲ್ಲ. ಮುಂಗಾರಿನಲ್ಲಿ ಸಮಯಕ್ಕೆ ಸರಿಯಾಗಿ ಬಿತ್ತನೆ ಮಾಡಿದ ಬೆಳೆಯನ್ನು ಕಾಡಿಲ್ಲ. ಆಗಸ್ಟ್‌ ನಂತರ ಬಿತ್ತನೆ ಮಾಡಿದ ಶೇ 80ರಷ್ಟು ಬೆಳೆ ಕೀಟಬಾಧೆಗೆ ತುತ್ತಾಗಿದೆ.

ಅಕ್ಟೋಬರ್‌ನಲ್ಲಿ ಲುಧಿಯಾನದಲ್ಲಿ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್‌), ಭಾರತೀಯ ಮೆಕ್ಕೆಜೋಳ ಸಂಶೋಧನಾ ಸಂಸ್ಥೆ ಏರ್ಪಡಿಸಿದ್ದ 13ನೇ ಏಷ್ಯನ್ಮೆಕ್ಕೆಜೋಳ ಸಮ್ಮೇಳನದಲ್ಲಿ ಈ ವಿಷಯವನ್ನೇ ಚರ್ಚಿಸಲಾಗಿದೆ.

ನಿಯಂತ್ರಣಕ್ಕೆ ಕಾರ್ಯಾಗಾರ

ಮೈಸೂರಿನ ನಾಗನಹಳ್ಳಿ ಸಾವಯವ ಕೃಷಿ ಸಂಶೋಧನಾ ಕೇಂದ್ರವು ‘ಫಾಲ್‌ ಆರ್ಮಿ ವರ್ಮ್‘ ಹುಳುಗಳ ಹತೋಟಿ ಕುರಿತು ಈಚೆಗೆ ವಿಜ್ಞಾನಿಗಳ ಜತೆ ರೈತರ ಸಂವಾದ ಕಾರ್ಯಾಗಾರವನ್ನು ಏರ್ಪಡಿಸಿತ್ತು. ನಿಯಂತ್ರಣಕ್ಕೆ ಸಾವಯವ ವಿಧಾನಗಳನ್ನು ರೈತರಿಗೆ ಪರಿಚಯಿಸಲಾಯಿತು.

‘ಇದೊಂದು ಹೊಸ ಬಗೆಯ ಕೀಟ. ಬಾತುಕೋಳಿಗಳನ್ನು ಬಿಟ್ಟರೆ ಇಂತಹ ಹುಳುಗಳನ್ನು ತಿನ್ನುತ್ತವೆ. ಹುಳುಗಳ ಬೆಳವಣಿಗೆಯ 1ನೇ ಮತ್ತು 2ನೇ ಹಂತದಲ್ಲಿ ಕೀಟನಾಶಕ ಸಿಂಪಡಿಸಿದರೆ ಹತೋಟಿ ಸಾಧ್ಯ’ ಎಂದು ಕೇಂದ್ರದ ವಿಸ್ತರಣಾ ಶಿಕ್ಷಣ ಘಟಕದ ಪ್ರಾಧ್ಯಾಪಕ ಸಿ.ಗೋವಿಂದರಾಜು ಹೇಳಿದರು.

ರಾಜ್ಯದಲ್ಲಿ ಬಿತ್ತನೆ ಪ್ರಮಾಣ (ಹೆಕ್ಟೇರ್‌)

ರಾಜ್ಯದಲ್ಲಿ ಈ ವರ್ಷ ಮೆಕ್ಕೆಜೋಳವನ್ನು ಹೆಚ್ಚಿನ ಪ್ರಮಾಣದಲ್ಲಿ ದಾವಣಗೆರೆಯಲ್ಲಿ 1.89 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗಿದೆ. ನಂತರದ ಸ್ಥಾನದಲ್ಲಿ ಹಾವೇರಿ (1.69 ಲಕ್ಷ ಹೆಕ್ಟೇರ್), ಬೆಳಗಾವಿ (1.14 ಲಕ್ಷ ಹೆಕ್ಟೇರ್)ಯಲ್ಲಿ ಬಿತ್ತನೆ ಮಾಡಲಾಗಿದೆ.

ರಾಜ್ಯದಲ್ಲಿ ಮೆಕ್ಕೆಜೋಳ ಬಿತ್ತನೆ ಪ್ರಮಾಣ (ಹೆಕ್ಟೇರ್‌)

ರಾಜ್ಯದಲ್ಲಿ ಈ ವರ್ಷ ಮೆಕ್ಕೆಜೋಳವನ್ನು ಹೆಚ್ಚಿನ ಪ್ರಮಾಣದಲ್ಲಿ ದಾವಣಗೆರೆಯಲ್ಲಿ 1.89 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗಿದೆ. ನಂತರದ ಸ್ಥಾನದಲ್ಲಿ ಹಾವೇರಿ (1.69 ಲಕ್ಷ ಹೆಕ್ಟೇರ್), ಬೆಳಗಾವಿ (1.14 ಲಕ್ಷ ಹೆಕ್ಟೇರ್)ಯಲ್ಲಿ ಬಿತ್ತನೆ ಮಾಡಲಾಗಿದೆ.

* ರೈತರು ಒಟ್ಟಾಗಿ ಕೀಟನಾಶಕ ಸಿಂಪಡಿಸಿದರೆ ಹತೋಟಿಗೆ ತರಬಹುದು. ಮುಂದಿನ ವರ್ಷ ಹುಳುಗಳ ಬೆಳವಣಿಯ 1ನೇ, 2ನೇ ಹಂತದಲ್ಲಿ ಕೀಟನಾಶಕ ಸಿಂಪಡಿಸಬೇಕು

-ಡಾ.ಸಿ.ಗೋವಿಂದರಾಜು, ಸಸ್ಯ ಸಂರಕ್ಷಣೆ ವಿಭಾಗದ ಪ್ರಾಧ್ಯಾಪಕ. ವಿಸ್ತರಣಾ ಶಿಕ್ಷಣ ಘಟಕ, ನಾಗನಹಳ್ಳಿ ಸಾವಯವ ಕೃಷಿ ಸಂಶೋಧನಾ ಘಟಕ, ಮೈಸೂರು

* ಮೈಸೂರು ಜಿಲ್ಲೆಯಲ್ಲಿ ಸೈನಿಕ ಹುಳು ಕಾಟ ನಿಧಾನವಾಗಿ ನಿಯಂತ್ರಣಕ್ಕೆ ಬರುತ್ತಿದೆ. ಹುಣಸೂರು, ಪಿರಿಯಾಪಟ್ಟಣ, ಎಚ್.ಡಿ.ಕೋಟೆ ಭಾಗಗಳಲ್ಲಿ ಅರಿವು ಮೂಡಿಸಲಾಗಿದೆ

-ಮಹಾಂತಪ್ಪ,‌ ಜಂಟಿ ಕೃಷಿ ನಿರ್ದೇಶಕ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT