ಗೋವಿನ ಜೋಳ: ಇಳುವರಿಯೂ ಇಲ್ಲ, ಬೆಲೆಯೂ ಇಲ್ಲ

7
ಖರೀದಿ ಕೇಂದ್ರಕ್ಕಾಗಿ ಕಾಯುತ್ತಿರುವ ರೈತರು

ಗೋವಿನ ಜೋಳ: ಇಳುವರಿಯೂ ಇಲ್ಲ, ಬೆಲೆಯೂ ಇಲ್ಲ

Published:
Updated:
Deccan Herald

ಹಾವೇರಿ: ಇತ್ತ ನಿರೀಕ್ಷಿತ ಇಳುವರಿಯೂ ಬಾರದೇ, ಅತ್ತ ಕನಿಷ್ಠ ಬೆಂಬಲ ಬೆಲೆಯೂ ಸಿಗದೇ ಗೋವಿನ ಜೋಳ ಬೆಳೆದ ರೈತರು ಕಂಗಾಲಾಗಿದ್ದಾರೆ.

ಕೇಂದ್ರ ಸರ್ಕಾರವು ಗೋವಿನ ಜೋಳ ಕ್ವಿಂಟಲ್‌ಗೆ ₹1,700 ಬೆಂಬಲ ಬೆಲೆಯನ್ನೇನೋ ಘೋಷಿಸಿದೆ. ಆದರೆ ರಾಜ್ಯದಲ್ಲಿ ಖರೀದಿ ಕೇಂದ್ರವೇ ಇನ್ನೂ ಆರಂಭವಾಗಿಲ್ಲ.

‘ಬೆಂಬಲ ಬೆಲೆಯಡಿ ಖರೀದಿಸಿದ ಗೋವಿನ ಜೋಳವನ್ನು ಪಡಿತರದಲ್ಲಿ ಮಾರಾಟ ಮಾಡಬೇಕು ಎಂದು ಕೇಂದ್ರ ಸರ್ಕಾರವು ಷರತ್ತು ವಿಧಿಸಿದೆ. ಆದರೆ, ಉತ್ತರ ಭಾರತದಂತೆ ಗೋವಿನಜೋಳವನ್ನು ನಮ್ಮಲ್ಲಿ ಆಹಾರದಲ್ಲಿ ಬಳಕೆ ಮಾಡುವುದಿಲ್ಲ. ‘ಉತ್ತರ‘ದ ಹೇರಿಕೆಯೇ ತಪ್ಪಾಗಿದೆ. ಇತ್ತ ರಾಜ್ಯ ಸರ್ಕಾರವು ಮೂರು ವರ್ಷಗಳಿಂದ ಪರ್ಯಾಯವನ್ನೂ ಕಂಡುಕೊಂಡಿಲ್ಲ; ಖರೀದಿ ಕೇಂದ್ರವನ್ನೂ ಆರಂಭಿಸಿಲ್ಲ. ಅತ್ತ, ಕೇಂದ್ರವೂ ಷರತ್ತು ಸಡಿಲಿಸಿಲ್ಲ. ಇಬ್ಬರ ಜಗಳದಲ್ಲಿ ರೈತರ ಬದುಕು ಬೀದಿಗೆ ಬಂದಿದೆ’ ಎಂದು ದೂರುತ್ತಾರೆ ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ. 

ಜಿಲ್ಲೆಯ ಒಟ್ಟು 3.32 ಲಕ್ಷ ಹೆಕ್ಟೇರ್ ಸಾಗುವಳಿ ಭೂಮಿ ಪೈಕಿ, ಈ ಮುಂಗಾರು ಹಂಗಾಮಿನಲ್ಲಿ 1.6 ಲಕ್ಷ ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ಗೋವಿನ ಜೋಳ ಬಿತ್ತನೆಯಾಗಿದೆ. ಒಟ್ಟು 2.18 ಲಕ್ಷ ರೈತ ಕುಟುಂಬಗಳ ಪೈಕಿ ಶೇ 50ಕ್ಕೂ ಹೆಚ್ಚು ರೈತರು ಇದನ್ನು ಅವಲಂಬಿಸಿದ್ದಾರೆ.

‘ಕಳೆದ ವರ್ಷ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ₹900– ₹1200 ಇತ್ತು. ಈ ವರ್ಷ ₹ 1,100 ರಿಂದ 1,350ರ ತನಕ ಇದೆ. ಆದರೆ, ಸರ್ಕಾರ ಸತತ ಮೂರು ವರ್ಷಗಳಿಂದ ಖರೀದಿ ಕೇಂದ್ರ ತೆರೆದಿಲ್ಲ. ಇದರಿಂದ ರೈತರ ಪಾಡು ವರ್ಷದಿಂದ ವರ್ಷಕ್ಕೆ ಹದಗೆಡುತ್ತಿದೆ’ ಎಂದು ರೈತ ಮುಖಂಡ ರಾಮಣ್ಣ ಕೆಂಚಳ್ಳೇರ ಅಲವತ್ತುಕೊಂಡರು. 

‘ಈ ಬಾರಿ ಪೂರ್ವ ಮುಂಗಾರು ಭರವಸೆ ಮೂಡಿಸಿತ್ತು. ಹೀಗಾಗಿ, ರೈತರು ಗೋವಿನಜೋಳ ಬಿತ್ತನೆ ಮಾಡಿದರು. ಅನಂತರ ಅನಿಯಂತ್ರಿತ ಮಳೆಯಾಯಿತು. ಮಳೆ ಕೊರತೆ ಪ್ರದೇಶದಲ್ಲಿ ಸಸಿ ಒಣಗಿದರೆ, ನಿರಂತರ ಮಳೆ ಹಾಗೂ ಮೋಡ ಕವಿದ ಪ್ರದೇಶಗಳಲ್ಲಿ ಸೈನಿಕ ಹುಳು ಬಾಧೆ ಕಾಡಿತು. ಇದರಿಂದಾಗಿ ಎಕರೆಗೆ 25ರಿಂದ 35 ಕ್ವಿಂಟಲ್‌ ಇಳುವರಿ ನಿರೀಕ್ಷೆಯಲ್ಲಿದ್ದ ರೈತರಿಗೆ ದಕ್ಕಿದ್ದು 9ರಿಂದ 12 ಕ್ವಿಂಟಲ್‌ನಷ್ಟು ಮಾತ್ರ. ಕೆಲವೆಡೆ ಅದೂ ಇಲ್ಲ’ ಎಂದು ಹಾವನೂರಿನ ರೈತ ಮಂಜಪ್ಪ ಅಬ್ಬಿಗೇರಿ ನೋವು ತೋಡಿಕೊಂಡರು.

**

ಹಾವೇರಿ ಜಿಲ್ಲೆಯಲ್ಲಿ ಮುಂಗಾರಿನಲ್ಲಿ ಗೋವಿನಜೋಳ (ಹೆಕ್ಟೇರ್‌ಗಳಲ್ಲಿ)

ಬೆಳೆ; ಗುರಿ; ಸಾಧನೆ
ಮಳೆಯಾಶ್ರಿತ; 1.44 ಲಕ್ಷ; 1.48 ಲಕ್ಷ;
ನೀರಾವರಿ; 18.45 ಸಾವಿರ; 17.19 ಸಾವಿರ

**
ಗೋವಿನಜೋಳ ಖರೀದಿ ಕೇಂದ್ರ ಆರಂಭಿಸಲು ಬೇಕಾದ ಸಿದ್ಧತೆ ಮಾಡಿಕೊಂಡಿದ್ದು, ಸರ್ಕಾರದ ಆದೇಶಕ್ಕಾಗಿ ಕಾಯುತ್ತಿದ್ದೇವೆ
- ಡಾ.ವೆಂಕಟೇಶ್‌ ಎಂ.ವಿ, ಜಿಲ್ಲಾಧಿಕಾರಿ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !