ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಿದಾದ ಜಲಾಶಯಗಳ ಒಡಲು!

ಮೂರು ಅಣೆಕಟ್ಟೆಗಳಲ್ಲಿ ನೀರಿನ ಸಂಗ್ರಹ ಶೇ 10ಕ್ಕೂ ಕಡಿಮೆ; ನಾಲ್ಕರಲ್ಲಿ ಒಳಹರಿವೇ ಇಲ್ಲ
Last Updated 13 ಮೇ 2019, 1:54 IST
ಅಕ್ಷರ ಗಾತ್ರ

ಬೆಂಗಳೂರು: ಮುಂಗಾರು, ಹಿಂಗಾರು ಮಳೆ ಕೊರತೆ, ಆ ಬೆನ್ನಿಗೇ ತಾಪಮಾನ ಏರಿಕೆಯಿಂದಾಗಿ ಜಲಮೂಲಗಳು ಸಂಪೂರ್ಣ ಬತ್ತಿವೆ. ನೀರಿನ ಒಳಹರಿವು ಪ್ರಮಾಣ ದಿನೇ ದಿನೇ ಕ್ಷೀಣಿಸುತ್ತಿದೆ. ಪರಿಣಾಮ, ರಾಜ್ಯದ ಬಹುತೇಕ ಜಲಾಶಯಗಳ ಒಡಲು ಬರಿದಾಗುತ್ತಿದ್ದು, ಆತಂಕದಿಂದ ಆಕಾಶದತ್ತ ನೋಡುವ ಸ್ಥಿತಿ ನಿರ್ಮಾಣವಾಗಿದೆ.

ಬರದ ಛಾಯೆ ಜೊತೆಗೇ ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ. ಬಾವಿಗಳ ತಳ ಇಣುಕುವ, ಕೊಡ ಹಿಡಿದು ಮೈಲುದ್ದ ಸಾಗುವ, ಸರದಿಯಲ್ಲಿ ನಿಂತು ಬಡಿದಾಡುವ ಸಂಕಷ್ಟದ ದಿನಗಳು ಬಂದಿವೆ. ಜಾನುವಾರುಗಳು ಮೇವಿಲ್ಲದೆ ಸೊರಗುತ್ತಿವೆ. ವಿದ್ಯುತ್ ಉತ್ಪಾದನೆ ಕುಂಠಿತಗೊಂಡಿದೆ. ನೂರಾರು ಎಕರೆಗಳಲ್ಲಿ ಕಟಾವಿಗೆ ಬಂದ ಬೆಳೆಗಳು ಕಳೆಗುಂದಿವೆ.

ರಾಜ್ಯದ ‍ಪ್ರಮುಖ 13 ಜಲಾಶಯಗಳ ಪೈಕಿ, ಲಿಂಗನಮಕ್ಕಿ ಮತ್ತು ಆಲಮಟ್ಟಿ ಸೇರಿ ಒಂಬತ್ತು ಜಲಾಶಯಗಳಲ್ಲಿ ನೀರಿನ ಸಂಗ್ರಹಣಾ ಸಾಮರ್ಥ್ಯ ಶೇ 20ಕ್ಕಿಂತಲೂ ಕೆಳಗೆ ಹೋಗಿದೆ. ಅದರಲ್ಲೂ ತುಂಗಭದ್ರಾ, ಮಲಪ್ರಭಾ ಮತ್ತು ಘಟಪ್ರಭಾ ಜಲಾಶಯಗಳಲ್ಲಿ ಸಂಗ್ರಹ ಸಾಮರ್ಥ್ಯ ಶೇ 10ಕ್ಕಿಂತಲೂ ಕಡಿಮೆ ಇದೆ. ಅಷ್ಟೇ ಅಲ್ಲ, ಈ ಮೂರು ಜಲಾಶಯಗಳು ಮತ್ತು ಆಲಮಟ್ಟಿ ಜಲಾಶಯಕ್ಕೆ ನೀರಿನ ಒಳಹರಿವು ಸಂಪೂರ್ಣ ನಿಂತುಹೋಗಿದೆ.

ಜಲಾಶಯಗಳಲ್ಲಿ ಒಳಹರಿವು ಇಲ್ಲದ ಕಾರಣ, ಲಭ್ಯವಿರುವ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸುವಂತೆ ಆಯಾ ಪ್ರಾದೇಶಿಕ ಆಯುಕ್ತರಿಗೆ ಜಲ ಸಂಪನ್ಮೂಲ ಇಲಾಖೆ ಜ. 25ರಂದೇ ಆದೇಶ ಹೊರಡಿದೆ. ಆದರೂ, ಲೋಕಸಭೆ ಚುನಾವಣೆ ಕಾರಣಕ್ಕೆ ಮತ ಬ್ಯಾಂಕಿನ ಮೇಲೆ ಕಣ್ಣಿಟ್ಟು ಕೆಆರ್‌ಎಸ್‌ ಸೇರಿದಂತೆ ಕೆಲವು ಜಲಾಶಯಗಳ ನೀರನ್ನು ಕೃಷಿ ಚಟುವಟಿಕೆಗೆ ಬಿಡಲಾಗಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಈ ಬಾರಿ ಮುಂಗಾರು ಮತ್ತು ಹಿಂಗಾರು ಎರಡೂ ಕೈಕೊಟ್ಟಿದೆ. ಹೀಗಾಗಿ, ಈ ಭಾಗದಲ್ಲಿರುವ ನದಿ, ಕೆರೆ, ಜಲಾಶಯಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಹರಿದುಬಂದಿಲ್ಲ. ಆದರೆ, ಮಲೆನಾಡು ಮತ್ತು ಪಶ್ಚಿಮಘಟ್ಟ ಪ್ರದೇಶದಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಿದ್ದ ಕಾರಣ ಕಾವೇರಿ ನದಿಪಾತ್ರದಲ್ಲಿರುವ ನಾಲ್ಕೂ (ಕೆಆರ್‌ಎಸ್‌, ಹೇಮಾವತಿ, ಕಬಿನಿ, ಹಾರಂಗಿ) ಜಲಾಶಯಗಳು ಭರ್ತಿ ಆಗಿದ್ದವು.

ಅದರಲ್ಲೂ ಪಶ್ಚಿಮ ಘಟ್ಟದಲ್ಲಿ ಸುರಿದ ಮಹಾಮಳೆ ಪರಿಣಾಮ ಈ ಭಾಗದಲ್ಲಿ ವರ್ಷವಿಡೀ ನೀರು ಹರಿಯುವ ವಾತಾವರಣ ಸೃಷ್ಟಿಯಾಗಿತ್ತು.ಆದರೆ, ಮಲೆನಾಡು, ಘಟ್ಟ ಪ್ರದೇಶದಲ್ಲಿ ಭಾರಿ ಭೂಕುಸಿತ ಉಂಟಾದ ಕಾರಣ, ಗುಡ್ಡಗಳಲ್ಲಿ ನೀರ ಸೆಲೆಯೇ ಬತ್ತಿ ಹೋಗಿದೆ. ಹೀಗಾಗಿ, ನದಿಪಾತ್ರಗಳಿಗೆನೀರಿನ ಒಳಹರಿವು ಪ್ರಮಾಣ ಕುಸಿದಿದೆ. ಕುಮಾರಧಾರ, ಕೆಂಪುಹೊಳೆ,
ಅಡ್ಡಹೊಳೆ ಬತ್ತಿ ಹೋಗುವ ಸ್ಥಿತಿಯಿದೆ. ಪರಿಣಾಮ, ಜನ ಸಂಕಷ್ಟ ಅನುಭವಿಸಿದರೆ, ನೀರು ಹುಡುಕಿಕೊಂಡು ಕಾಡಿನ ಪ್ರಾಣಿಗಳು ನಾಡಿಗೆ ಕಾಲಿಡುತ್ತಿವೆ.

ಬಿಸಿಲನಾಡು ಹೈದರಾಬಾದ್‌– ಕರ್ನಾಟಕದ ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿಈ ಬಾರಿ ಮಳೆ ಕೈಕೊಟ್ಟಿದೆ. ಹೀಗಾಗಿ, ತುಂಗಭದ್ರಾ ಜಲಾಶಯ ಭರ್ತಿ ಆಗಿಲ್ಲ. ರೈತರು ತುಂಗಭದ್ರಾ ನೀರನ್ನೇ ಸಂಪೂರ್ಣ ಅವಲಂಬಿಸಬೇಕಾದ ಅನಿವಾರ್ಯತೆ ಎದುರಾಯಿತು. ಈ ಜಲಾಶಯದಲ್ಲಿ ಈಗ ಕೇವಲ 3 ಟಿಎಂಸಿ ನೀರು ಸಂಗ್ರಹವಿದೆ. ಸದ್ಯ ಕುಡಿಯುವ ಅಗತ್ಯಕ್ಕೆ ಮಾತ್ರ ನೀರು
ಬಳಕೆಯಾಗುತ್ತಿದೆ.

ಜಲಾಶಯದ ಬಳಿಯ ಕಾರ್ಖಾನೆಗಳಿಗೆ ಅಧಿಕಾರಿಗಳು ಒಪ್ಪಂದ ಮಾಡಿಕೊಂಡು ಅಕ್ರಮವಾಗಿ ನೀರು ಬಿಟ್ಟಿರುವುದು ಗುಟ್ಟಾಗಿ ಉಳಿದಿಲ್ಲ. ನೀರು ಕಳವು ತಡೆಯಲು ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುತ್ತದೆ ಎನ್ನುವ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಈ ಭಾಗದ ರೈತ ಹೋರಾಟಗಾರರು ದೂರುತ್ತಾರೆ. ಮುಂಗಾರು ವಿಳಂಬವಾದರೆ ಈ ಮೂರೂ ಜಿಲ್ಲೆಗಳಲ್ಲಿ ಭೀಕರ ಸಮಸ್ಯೆ ಉದ್ಭವವಾಗುವ ಆತಂಕ ಎದುರಾಗಿದೆ.

ರಾಯಚೂರು, ಯಾದಗಿರಿ, ಕಲಬುರ್ಗಿ (ಜೇವರ್ಗಿ, ಅಫ್ಜಲ್‌ಪುರ), ವಿಜಯಪುರ (ಇಂಡಿ, ಸಿಂದಗಿ) ಭಾಗದ ಜಲನಾಡಿ ನಾರಾಯಣಪುರ ಜಲಾಶಯ. ಈ ಜಿಲ್ಲೆಗಳ ಆರು ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ ಇಲ್ಲಿಂದ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ಈ ವರ್ಷ ಮಳೆ ಕೈ ಕೊಟ್ಟ ಪರಿಣಾಮ ಕೇವಲ ಒಂದು ಬೆಳೆಗೆ ಮಾತ್ರ ನೀರು ಹರಿಸಲಾಗಿದೆ. 8 ವರ್ಷಗಳ ಹಿಂದೆ ಇಂಥ ಭೀಕರ ಸ್ಥಿತಿ ನಿರ್ಮಾಣವಾಗಿತ್ತು. ರಾಯಚೂರು ನಗರದ ಅರ್ಧ ಭಾಗಕ್ಕೆ ತುಂಗಭದ್ರಾ ನದಿಯಿಂದ ನೀರು ಹರಿಸಿದರೆ, ಇನ್ನರ್ಧ ಭಾಗಕ್ಕೆ ಕೃಷ್ಣಾ ನದಿಯಿಂದ ಪೂರೈಸಲಾಗುತ್ತಿದೆ.

ಉತ್ತರ ಕರ್ನಾಟಕದ ಬೆಳಗಾವಿ, ಗದಗ, ಹಾವೇರಿ ಜಿಲ್ಲೆಗಳಿಗೆ ಮಲಪ್ರಭಾ ಮತ್ತು ಘಟಪ್ರಭಾ ಜಲಾಶಯಗಳು ನೀರುಣಿಸುತ್ತಿವೆ. ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ, ಈ ಎರಡೂ ಜಲಾಶಯಗಳಲ್ಲಿ ನೀರಿನ ಸಂಗ್ರಹ ಸ್ವಲ್ಪ ಹೆಚ್ಚಿದೆ. ಆದರೆ, ಬಿಸಿಲ ಝಳ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಮುಂದಿನ ದಿನಗಳಲ್ಲಿ ನೀರಿನ ಅಭಾವ ಉಂಟಾಗುವುದು ನಿಚ್ಚಳ.

ಕಡಲ ತಡಿಯ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲೂ ನೀರಿನ ತೀವ್ರ ಕೊರತೆ ಉಂಟಾಗಿದೆ. ಮಂಗಳೂರು ನಗರಕ್ಕೆ ನೀರುಣಿಸುವ ತುಂಬೆ ಕಿಂಡಿ ಅಣೆಕಟ್ಟೆಯಲ್ಲಿಸದ್ಯ ನೀರಿದೆ. ಆದರೆ, ಗ್ರಾಮೀಣ ಪ್ರದೇಶಗಳ ಜನ ನೀರಿಗಾಗಿ ಮೈಲು ದೂರ ನಡೆಯಬೇಕು. ಬಂಟ್ವಾಳದ ಸರಪಾಡಿಯಲ್ಲಿರುವ ಎಂಆರ್‌ಪಿಎಲ್‌ ಡ್ಯಾಂ ಬರಿದಾದ ಕಾರಣ ಸುರತ್ಕಲ್‌ನಲ್ಲಿರುವ ಮಂಗಳೂರು ರಿಫೈನರಿ ಅಂಡ್‌ ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್‌(ಎಂಆರ್‌ಪಿಎಲ್‌) ತನ್ನ ಎರಡು ಘಟಕಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಮಲೆನಾಡಿನ ತವರೂರು ಎನಿಸಿದ ಶಿವಮೊಗ್ಗ ಜಿಲ್ಲೆಯಲ್ಲೇ ಕುಡಿಯುವ ನೀರಿಗೆ ತತ್ವಾರ ಎದುರಾಗಿದೆ.

ಇನ್ನು ಕಾವೇರಿ ಕೊಳ್ಳದ ಕೆಆರ್‌ಎಸ್‌ (ಕೃಷ್ಣರಾಜ ಸಾಗರ), ಹೇಮಾವತಿ, ಕಬಿನಿ, ಹಾರಂಗಿ ಜಲಾಶಯಗಳ ನೀರು ಮಂಡ್ಯ, ಮೈಸೂರು, ಹಾಸನ, ತುಮಕೂರು, ಬೆಂಗಳೂರಿನ ಅಚ್ಚುಕಟ್ಟು ಪ್ರದೇಶಕ್ಕೆ ಆಧಾರ. ಮೈಸೂರು, ಬೆಂಗಳೂರು ನಗರ ಸೇರಿದಂತೆ 47 ಪಟ್ಟಣಗಳು, 625 ಹಳ್ಳಿಗಳು ಕುಡಿಯಲು ಕಾವೇರಿ (ಕೆಆರ್‌ಎಸ್‌) ನೀರನ್ನು ಅವಲಂಬಿಸಿವೆ. ಮಂಡ್ಯ ಜಿಲ್ಲೆಯಲ್ಲಿ ಬೆಳೆದು ನಿಂತ ಕಬ್ಬು ಬೆಳೆಗೆ ವಿಶ್ವೇಶ್ವರಯ್ಯ ನಾಲೆ ಮೂಲಕ ಹರಿಸುತ್ತಿರುವ ನೀರನ್ನು ಮೇ 8ರಿಂದ ಸ್ಥಗಿತಗೊಳಿಸಲಾಗಿದೆ.

ಹಾಸನ ಮತ್ತು ತುಮಕೂರು ಜಿಲ್ಲೆಯ ಜೀವನಾಡಿ ಹೇಮಾವತಿ ಜಲಾಶಯ. ಸುಮಾರು 6.66 ಲಕ್ಷ ಎಕರೆ ಪ್ರದೇಶಕ್ಕೆ ಈ ಜಲಾಶಯದಿಂದ ನೀರು ಪೂರೈಕೆಯಾಗುತ್ತದೆ. ಮುಂಗಾರು ಉತ್ತಮ ಮಳೆಯಾಗಿದ್ದರಿಂದ ನಾಲ್ಕು ವರ್ಷಗಳ ಬಳಿಕ ಹೇಮಾವತಿ ಭರ್ತಿಯಾಗಿತ್ತು. ಅಚ್ಚುಕಟ್ಟು ಪ್ರದೇಶಗಳಿಗೆ ಸಮೃದ್ಧವಾಗಿ ನೀರು ಹರಿಯಿತು. ಆದರೆ, ಹಿಂಗಾರು ಹಂಗಾಮಿನಲ್ಲಿ ಮಳೆ ಆಗದೇ ಇದ್ದುದರಿಂದ ಜಲಾಶಯಕ್ಕೆ ನೀರು ಬರಲಿಲ್ಲ. ಹಾಗಾಗಿ, ಬೇಸಿಗೆ ಬೆಳೆಗೆ ನೀರು ಕೊಡಲು ಸಾಧ್ಯವಾಗಿಲ್ಲ.

‘ಮುಂಗಾರು ವಿಳಂಬವಾದರೆ ಸಂಕಷ್ಟ ಎದುರಾಗಬಹುದು. ಬಿತ್ತನೆ ಮೇಲೆ ಪರಿಣಾಮ ಬೀರುವ ಜೊತೆಗೆ ಅಂತರ್ಜಲ ಮಟ್ಟ ಮತ್ತಷ್ಟು ಕುಸಿಯಬಹುದು. ಅಂತರರಾಜ್ಯ ಜಲ ವಿವಾದಕ್ಕೆ ಅನುಗುಣವಾಗಿ ನೀರು ಹಂಚಿಕೆ ಮಾಡಿ, ಹೆಚ್ಚುವರಿ ನೀರನ್ನು ಸಂಗ್ರಹಿಸಿಡುವ ನಿಟ್ಟಿನಲ್ಲಿ ಬೃಹತ್‌ ಯೋಜನೆಗಳನ್ನು ಕಾರ್ಯಗತಗೊಳಿಸುವ ಕಡೆಗೆ ನಾವು ಗಮನಹರಿಸಬೇಕಿದೆ’ಎನ್ದುವ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಜಿ.ಎಸ್‌. ಶ್ರೀನಿವಾಸ ರೆಡ್ಡಿ ಅವರ ಹೇಳಿಕೆಯಲ್ಲಿ ಗಂಭೀರ ಚಿತ್ರಣ ಅಡಗಿದೆ.

ಒಳಹರಿವಿನ ತೀವ್ರ ಕುಸಿತ ಸಮಸ್ಯೆಗೆ ಕಾರಣ’

‘ಮುಂಗಾರು ಆರಂಭದ ತಿಂಗಳುಗಳಲ್ಲಿ ಸುರಿದ ವರ್ಷಧಾರೆಯಿಂದಾಗಿ ನದಿಗಳು ಉಕ್ಕಿ ಹರಿದ ಪರಿಣಾಮ ಕಾವೇರಿ, ಕೃಷ್ಣಾ, ತುಂಗಭದ್ರಾ ಜಲಾಶಯಗಳಿಂದ 1000 ಟಿ.ಎಂ.ಸಿ ಅಡಿಯಷ್ಟು ನೀರು ಹೊರಗೆ ಹರಿದುಹೋಗಿದೆ. ಆದರೆ, ಆಗಸ್ಟ್‌, ಸೆಪ್ಟೆಂಬರ್‌, ನವೆಂಬರ್‌ ತಿಂಗಳಲ್ಲಿ ನದಿಪಾತ್ರಗಳಲ್ಲಿ ಮಳೆಕೈಕೊಟ್ಟದ್ದರಿಂದ ಒಳಹರಿವು ಪ್ರಮಾಣ ಶೇ 50ರಷ್ಟು ಮಾತ್ರ ಇತ್ತು. ಜಲಾಶಯಗಳಲ್ಲಿ ನೀರು ಕಡಿಮೆ ಇದು ಕಾರಣ’ ಎಂದು ವಿಶ್ಲೇಷಿಸುತ್ತಾರೆ ಜಿ.ಎಸ್‌. ಶ್ರೀನಿವಾಸ ರೆಡ್ಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT