ಗೌರಿಯನ್ನು ಕೆಲಸಕೊಡಿಸೋ ಏಜೆಂಟಳಂತೆ ಬಿಂಬಿಸುತ್ತಿರುವ ಚಳವಳಿಗಾರರು: ಮಲ್ಲಿಕಾ ಘಂಟಿ

7
ಮಲ್ಲಿಕಾಘಂಟಿ ಪ್ರತಿಕ್ರಿಯೆ

ಗೌರಿಯನ್ನು ಕೆಲಸಕೊಡಿಸೋ ಏಜೆಂಟಳಂತೆ ಬಿಂಬಿಸುತ್ತಿರುವ ಚಳವಳಿಗಾರರು: ಮಲ್ಲಿಕಾ ಘಂಟಿ

Published:
Updated:
Deccan Herald

ಬೆಂಗಳೂರು: ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಮಲ್ಲಿಕಾಘಂಟಿ ಹಲವು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡರು. ಕೊಡಗು–ಕೇರಳ ಪ್ರವಾಹದ ಸಂದರ್ಭದಲ್ಲಿ ಹೊಸಪೇಟೆಯಲ್ಲಿ ಸೆರಗೊಡ್ಡಿ ಭಿಕ್ಷೆ ಬೇಡಿದ ದೃಶ್ಯ ಇಂದಿಗೂ ಜನಮಾನಸದಲ್ಲಿ ಹಸಿರಾಗಿದೆ. ನ.16ರಿಂದ 18ರವರೆಗೆ ಮೂಡುಬಿದಿರೆಯಲ್ಲಿ ನಡೆಯುವ ಆಳ್ವಾಸ್ ನುಡಿಸಿರಿಗೆ ಮಲ್ಲಿಕಾ ಘಂಟಿ ಸರ್ವಾಧ್ಯಕ್ಷರಾಗಿದ್ದಾರೆ. ಮಲ್ಲಿಕಾ ಅವರು ನುಡಿಸಿರಿಯ ಆಹ್ವಾನ ಒಪ್ಪಿಕೊಂಡದ್ದರ ಪರ ಮತ್ತು ವಿರುದ್ಧ ಚರ್ಚೆಗಳು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಗರಿಗೆದರಿವೆ. ಆಳ್ವಾಸ್ ನುಡಿಸಿರಿಯಲ್ಲಿ ಭಾಗವಹಿಸುವ ತಮ್ಮ ನಿರ್ಧಾರ ಕುರಿತು ಪ್ರಶ್ನಿಸುತ್ತಿರುವವರು ಚರ್ಚೆಯಲ್ಲಿ ಗೌರಿ ಲಂಕೇಶ್ ಹೆಸರು ಪ್ರಸ್ತಾಪಿಸುತ್ತಿರುವುದನ್ನು ಮಲ್ಲಿಕಾ ಘಂಟಿ ಆಕ್ಷೇಪಿಸಿದ್ದಾರೆ.

ದಿ ಸ್ಟೇಟ್’ ಜಾಲತಾಣದಲ್ಲಿ ಪ್ರಕಟಿಸಿರುವ ತಮ್ಮ ಹೇಳಿಕೆಯಲ್ಲಿ ಮಲ್ಲಿಕಾ ಘಂಟಿ ತಮ್ಮ ನಿಲುವನ್ನು ಸ್ಟಪ್ಟಪಡಿಸಿದ್ದಾರೆ.  ಅವರ ಪ್ರತಿಕ್ರಿಯೆಯ ಪ್ರಮುಖ ಅಂಶಗಳು ಇವು...

‘ಇಡೀ ಚರ್ಚೆಯ ಪ್ರಾರಂಭದಲ್ಲಿ ಇಲ್ಲದ ಗೌರಿಯನ್ನು ಎಳೆದುತಂದದ್ದರ ಬಗ್ಗೆ ನನಗೆ ಆಕ್ಷೇಪಣೆಗಳಿವೆ. ಗೌರಿಗೂ ನನಗೂ ಇರುವ ಸ್ನೇಹ ಒಂದು ದಿನ, ವರ್ಷದ್ದಲ್ಲ; ಅಖಂಡ ಇಪ್ಪತ್ತು ವರ್ಷದ್ದು. ಇಲ್ಲದ ಗೌರಿಯನ್ನು ಬಂಡವಾಳ ಮಾಡಿಕೊಂಡು ಬದುಕುತ್ತಿರುವ ಕೆಲವು ಕೈಗೂಲಿ ಚಳವಳಿಗಾರರ ಬಗ್ಗೆ ಕನಿಕರವಿದೆ. ಗೌರಿಯ ಬಗ್ಗೆ ಗೌರವವಿದ್ದವರು ಗೌರಿಯನ್ನು ಕೆಲಸ ಕೊಡಿಸುವ ಏಜೆಂಟಳಂತೆ ಬಿಂಬಿಸುತ್ತಿರಲಿಲ್ಲ. ನಾನೆಂದೂ ಗೌರಿಯನ್ನು ನನ್ನ ಖಾಸಗಿ ಕೆಲಸಕ್ಕಾಗಿ ಬಳಸಿಕೊಂಡಿಲ್ಲ. ನಮ್ಮಿಬ್ಬರ ಸ್ನೇಹ ಬರಹಗಾರರದ್ದು ಮತ್ತು ಚಳವಳಿಗಾರರದ್ದು. ಗೌರಿ ಬದುಕಿದ್ದಿದ್ದರೆ ಇಂಥದ್ದಕ್ಕೆ ಖಂಡಿತವಾಗಿಯೂ ಏರುದನಿಯಲ್ಲಿಯೇ ಪ್ರತಿಭಟಿಸುತ್ತಿದ್ದಳು.

‘ದಲಿತ ಬಂಡಾಯ ಸಾಹಿತ್ಯ ಸಂಘಟನೆಗೆ ಹತ್ತು ವರ್ಷ ತುಂಬಿದ ಸಂದರ್ಭ ಬೆಂಗಳೂರಿನಲ್ಲಿ ನಡೆದ ಸಮ್ಮೇಳನದಲ್ಲಿ ‘ಯಾವುದೇ ಸಂಘಟನೆ, ವೇದಿಕೆಗಳು ಕರೆದರೂ ಬಂಡಾಯದ ಮಿತ್ರರು ಹೋಗಬೇಕು; ಅಲ್ಲಿ ನಮ್ಮ ವಿಚಾರಗಳನ್ನು ಹಂಚಿಕೊಳ್ಳಬೇಕು’ ಎಂಬ ನಿರ್ಣಯ ಕೈಗೊಂಡ ನೆನಪಿದೆ. ಆ ಕಾರಣದಿಂದಲೇ ಈ ಹಿಂದೆ ಆಳ್ವಾಸ್ ನುಡಿಸಿರಿಯ ಆಹ್ವಾನವನ್ನು ಹಲವು ಹಿರಿಯರು ಒಪ್ಪಿಕೊಂಡಿದ್ದರು. ಹಿರಿಯರು ಈಗಾಗಲೇ ಹಂಚಿಕೊಂಡಿರುವ ವೇದಿಕೆಯನ್ನು ಬಳಸಿಕೊಳ್ಳುವುದರ ಬಗ್ಗೆ ನನಗೆ ಸ್ಪಷ್ಟತೆಯಿದೆ.

‘ಯಾರಾದರೂ ಸಹಾಯ ಮಾಡುತ್ತಾರೆಂದು ನಾನು ಎಂದೂ ಕೆಲಸ ಮಾಡಿದವಳಲ್ಲ. ಸಂಡೂರಿನ ಕುಮಾರಸ್ವಾಮಿ ದೇವಾಲಯಕ್ಕೆ ಮಹಿಳೆಯ ಪ್ರವೇಶ ನಿಷೇಧಿಸಿದ್ದ ರಾಜಕಾರಣಕ್ಕೆ ಎದುರಾಗಿ ಮಹಿಳೆಯರಿಗೆ ಪ್ರವೇಶ ಕಲ್ಪಿಸಿಕೊಂಡಾಗ ಯಾರನ್ನೂ ನನ್ನ ಸಹಾಯಕ್ಕೆ ಕರೆಯಲಿಲ್ಲ. ಸಂಡೂರಿನಲ್ಲಿ ಊರಮ್ಮನ ಜಾತ್ರೆಯಲ್ಲಿ ಕೋಣ ಬಲಿಯನ್ನು ತಡೆದಿರುವೆ. ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರಕ್ಕೆ ಹಗಲುರಾತ್ರಿಯನ್ನದೆ ಗಣಿ ಲಾರಿಗಳಲ್ಲಿ ಓಡಾಡುವಾಗ, ವಿದ್ಯಾರ್ಥಿಗಳನ್ನು ಬಾಬಾಬುಡನ್‍ಗಿರಿ ಹೋರಾಟಕ್ಕೆ ಕರೆದುಕೊಂಡು ಹೋಗಿದ್ದು ನನ್ನ ಬದ್ಧತೆಯ ಕಾರಣಕ್ಕೆ ಹೊರತಾಗಿ ಏನನ್ನೋ ಪಡೆಯಲು ಅಲ್ಲ.

‘ಹಳ್ಳಿಯಿಂದ, ರೈತ ಕುಟುಂಬದಿಂದ ಹೇಗೆಹೇಗೋ ಅಕ್ಷರಲೋಕಕ್ಕೆ ತೆರೆದುಕೊಂಡಿರುವ ನಾನು, ಕಳೆದುಕೊಳ್ಳಲು ಪಡೆದುಕೊಂಡದ್ದು ಇದ್ದರೆ ತಾನೇ? ಕಳೆದ ಮೂವತ್ತು ವರ್ಷಗಳಿಂದ ನಾನು ನಂಬಿರುವ ಸಿದ್ಧಾಂತಕ್ಕೆ ಬದ್ಧಳಾಗಿಯೇ ಇರುವೆ. ಕುಲಪತಿಯಾದ ಮೇಲಿಂದ ಸೋಕಾಲ್ಡ್ ಹೋರಾಟಗಾರರು ನಿದ್ದೆ ಕೆಡಿಸಿಕೊಂಡು ಹಗಲಿನಲ್ಲಿಯೂ ಕಂದೀಲು ಹಿಡಿದು ನನ್ನ ಬೆನ್ನು ಬಿದ್ದಿರುವುದು ನನಗೆ ಗೊತ್ತಿದೆ. ನಿನ್ನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಎಲ್ಲದರ ಬಗ್ಗೆಯೂ ನನಗೆ ಗೌರವವಿದೆ. ಆಳ್ವಾಸ್ ನುಡಿಸಿರಿ ವೇದಿಕೆ ಯಾರದ್ದು ಎಂಬುದು ನನಗೆ ಗೊತ್ತಿದೆ. ನಾನು ಮಾತನಾಡಿದ ಮೇಲೆ ಚರ್ಚೆಗಳು ನಡೆದಿದ್ದರೆ ಅದಕ್ಕೊಂದು ಅರ್ಥವಿರುತ್ತಿತ್ತು. ಅವಸರಕ್ಕೆ ಬಿದ್ದು ನನ್ನ ವೈಯಕ್ತಿಕ ಬದುಕಿನ ಬಗ್ಗೆ ಬರೆಯುವ ಮುಂಚೆ ತಾಳ್ಮೆ ಇರಲಿ. ನಾನು ಸಂಘಟನೆ, ಚಳವಳಿ ಪ್ರಾರಂಭಿಸಿದ ಹೊತ್ತಿನಲ್ಲಿ ನೀವ್ಯಾರೂ ಇನ್ನೂ ಹುಟ್ಟಿರಲಿಲ್ಲ.

‘ಚಳವಳಿ, ಹೋರಾಟ, ಸಂಘಟನೆ ಕಟ್ಟಿದ ಹಲವಾರು ಹಿರಿಯರು ಒಳ ಕಿರುಕುಳಕ್ಕೆ ಬೇಸತ್ತು ಹೊರಗೆ ಹೋಗಿರುವರು. ಹಾಗಂತ ಅವರ ಶಕ್ತಿಯಾಗಲೀ, ಅವರ ಬಗ್ಗೆ ಲೋಕಕ್ಕೆ ಇರುವ ಅಭಿಪ್ರಾಯವಾಗಲೀ ಬದಲಾಗಿಲ್ಲ. ಆದರೆ, ನಷ್ಟ ಆಗಿರುವುದು ಸಂಘಟನೆಗೆ. ಮನುಷ್ಯ ಸಮಾಜದಲ್ಲಿ ಬದುಕುತ್ತಿರುವ ನಾವು, ‘ಎಲ್ಲ ದೌರ್ಬಲ್ಯಗಳೊಂದಿಗೂ ಮನುಷ್ಯನನ್ನು ಪ್ರೀತಿಸು’ ಎಂಬ ಮಾತನ್ನು ಮರೆತು, ‘ಅಲ್ಲೇಕೆ ಹೋಗುತ್ತೀರಿ?’ ‘ಅವರನ್ನೇಕೆ ಮಾತನಾಡಿಸುತ್ತೀರಿ?’ ‘ಅಲ್ಲೇನು ನಿಮ್ಮ ಕೆಲಸ?’ ಎಂದು ದಾದಾಗಿರಿ ಮಾಡಿದರೆ, ದಾದಾಗಿರಿ ಮಾಡಿಸಿಕೊಂಡವರಿಗೆ ನಷ್ಟವಿಲ್ಲ; ಬದಲಿಗೆ, ದಾದಾಗಿರಿ ಮಾಡಿದವರಿಗೆ ನಷ್ಟ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ವೇದಿಕೆ ನೋಡಿ, ಲೆಕ್ಕಾಚಾರ ಹಾಕಿ ಮಾತನಾಡುವ, ಕೆಲಸ ಮಾಡುವ ಜಾಯಮಾನ ನನ್ನದಲ್ಲ. ದಾಸರು ನೆನಪಾಗುತ್ತಾರೆ: 'ನಿಂದಕರು ಇರಬೇಕು ಹಂದಿಯ ತೆರದಿ.’ ನೀವು ನಿಂದಿಸಿದಷ್ಟೂ ನಾನು ಎಚ್ಚರವಾಗಿರಲು ಸಾಧ್ಯವಾಗುತ್ತದೆ. ಅದಕ್ಕೇ ನೀವು ನನಗೆ ಬಂಧುಗಳು. ನಿಮಗೆ ಧನ್ಯವಾದಗಳು’.

ಹಿಂದುಳಿದ ಜಾತಿಯಿಂದ ಬಂದ ನನ್ನ ಕುರಿತು ಈ ಜಾತಿವಾದಿಗಳು ಎಂತೆಂಥ ಪಿತೂರಿ ಮಾಡಿರುವರು, ಮಾಡುತ್ತಿರುವರು ಎಂಬುದು ನನಗೆ ದಾಖಲೆ ಸಹಿತ ಮಾಹಿತಿ ಇದೆ. ಅದನ್ನು ಬಿಚ್ಚಿಟ್ಟರೆ ಬೆರಳೆಣಿಕೆಯಷ್ಟಿರುವ ಪ್ರಗತಿಪರ ಶಕ್ತಿಯನ್ನು ವಿರೋಧಿಗಳು ಹಣಿಯಬಹುದು ಎಂಬ ಕಾರಣದಿಂದ ನನ್ನೊಳಗೆ ಕೊನೆಯವರೆಗೂ ಇಟ್ಟುಕೊಳ್ಳುವೆ.

ಫೇಸ್‌ಬುಕ್‌ನಲ್ಲಿ ಗರಿಗೆದರಿದ ಚರ್ಚೆ

ಆಳ್ವಾಸ್ ನುಡಿಸಿರಿಯಲ್ಲಿ ಭಾಗವಹಿಸುವ ಮಲ್ಲಿಕಾ ಘಂಟಿ ಅವರ ನಿರ್ಧಾರದ ಪರ ಮತ್ತು ವಿರುದ್ಧ ಚರ್ಚೆ ಫೇಸ್‌ಬುಕ್‌ನಲ್ಲಿ ಗರಿಗೆದರಿದೆ.

‘ಹೋಗಿ "ಸಿರಿ" ಯಲ್ಲಿ ಮಿಂದೆದ್ದು ಬನ್ನಿ’ ಎಂದು ತಮ್ಮ ಫೇಸ್‌ಬುಕ್ ವಾಲ್‌ನಲ್ಲಿ ಸಲಹೆ ಮಾಡಿರುವ ಹರ್ಷಕುಮಾರ್ ಕುಗ್ವೆ ನುಡಿಸಿರಿಯಲ್ಲಿ ಏನೆಲ್ಲಾ ಮಾತನಾಡಬಹುದು, ಯಾವುದನ್ನು ಮಾತನಾಡಬಾರದು ಎಂದು ಕೆಲವು ಅಂಶಗಳನ್ನು ಪಟ್ಟಿ ಮಾಡಿದ್ದಾರೆ.

‘ಬರಗೂರು, ಕಲ್ಬುರ್ಗಿ, ಅನಂತಮೂರ್ತಿಯಂತಹ ದಿಗ್ಗಜರು (ಇವರಿಗೆಲ್ಲ ಬಹಿರಂಗ ಪ್ರಶ್ನೆಗಳು ಎದುರಾಗಿವೆ) ನುಡಿಸಿರಿಗೆ ಹೋಗಿದ್ದಾರೆ. ಅಲ್ಲಿ ತಮ್ಮ ಎಂದಿನ‌ ಶೈಲಿಯ ಮಾತುಗಳನ್ನೇ ಆಡಿದ್ದಾರೆ. ಅದರಿಂದ ಯಾವಪರಿವರ್ತನೆಯೂ ಆಗಿಲ್ಲ. ಇವರೆಲ್ಲರ ಭಾಗವಹಿಸುವಿಕೆಯ ನಂತರದ ದಿನಗಳಲ್ಲೇ ವಿಎಚ್‌ಪಿ ಬ್ಯಾನರ್‌ನಡಿ ಹಿಂದು ಸಮಾಜೋತ್ಸವಗಳನ್ನು ನುಡಿಸಿರಿಯ ಆಯೋಜಕರಾದ ಮೋಹನ ಅಳ್ವರು ಸಂಘಟಿಸಿದ್ದಾರೆ’ ಎಂದು ಅಬ್ದುಲ್ ಮುನೀರ್ ಅವರು ನೆನಪಿಸಿಕೊಂಡಿದ್ದಾರೆ.

ಲೇಖಕ ವಿ.ಆರ್.ಕಾರ್ಪೆಂಟರ್, ‘ಯಾರು ಏನೇ ಹೇಳಲಿ ನಾನು ಮಲ್ಲಿಕಾ ಘಂಟಿ ಅವರ ಪರ! ಅವಕಾಶ ವಂಚಿತರು, ಅವಕಾಶ ಸಿಕ್ಕಾಗ ಬಾಚಿಕೊಂಡು ತಾವು ನಂಬಿದ ಸಿದ್ದಾಂತವನ್ನು ಅಪ್ಲೈ ಮಾಡುವುದರಲ್ಲಿ ಏನು ತಪ್ಪಿದೆ? 

ನಿರ್ವಾತ ಪ್ರದೇಶದಲ್ಲೂ ಉಸಿರಾಡುವ ಜೀವದ್ರವ್ಯವನ್ನು ಪಸರಿಸುವ ಎಲ್ಲರೂ ಜೀವಪರರು...’ ಎಂದು ಸಮರ್ಥಿಸಿಕೊಂಡಿದ್ದಾರೆ.

ಮಲ್ಲಿಕಾ ಘಂಟಿ ಅವರ ನಿಲುವನ್ನು ಕಥೆಗಾರ ವೀರಣ್ಣ ಮಡಿವಾಳರ ಸಹ ಸಮರ್ಥಿಸಿಕೊಂಡಿದ್ದಾರೆ. ‘ಅಷ್ಟೊಂದು ನಮ್ಮ ಯುವಕರು ಅತ್ತಕಡೆಗೆ ಹೋಗಿರುವರಲ್ಲ. ಯಾಕೆ ಹೋದರು. ಅವರನ್ನು ಕರೆದುಕೊಂಡು ಬರುವವರು ಯಾರು. ನಮ್ಮ ಮಕ್ಕಳು ಅಲ್ಲಿಗೆ ಹೊಗುವಂತೆ ಮಾಡಿದವರು ನಾವೆ. ಇನ್ನಾದರು ಮಡಿವಂತಿಕೆ ಬಿಟ್ಟು ಅವರಿದ್ದ ಕಡೆ ಹೋಗಿ ಕರೆದುಕೊಂಡು ಬರೋಣ’ ಎನ್ನುವ ಮಲ್ಲಿಕಾ ಘಂಟಿ ಅವರ ಮಾತುಗಳನ್ನು ಕೇಳಿಸಿಕೊಳ್ಳದೆ ಕಾಮೆಂಟ್ ಮಾಡಬ್ಯಾಡ್ರಿ . ಷರಾ ಬರೀಬ್ಯಾಡ್ರಿ’ ಎಂದು ಅವರು ವಿನಂತಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 17

  Happy
 • 3

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !