ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮದ ಹೆಸರಲ್ಲಿ ಒಡೆದು ಆಳುವ ನೀತಿಗೆ ಮನ್ನಣೆ ಸಿಕ್ಕಿಲ್ಲ: ಮಲ್ಲಿಕಾರ್ಜುನ ಖರ್ಗೆ

ದೆಹಲಿ ಚುನಾವಣಾ ಫಲಿತಾಂಶ ಕುರಿತು ಪ್ರತಿಕ್ರಿಯೆ
Last Updated 13 ಫೆಬ್ರುವರಿ 2020, 8:41 IST
ಅಕ್ಷರ ಗಾತ್ರ

ಬೆಳಗಾವಿ: ‘ಧರ್ಮದ ಹೆಸರಿನಲ್ಲಿ ಒಡೆದು ಆಳುವವರನ್ನು ದೆಹಲಿಯ ಮತದಾರರು ದೂರ ಇಟ್ಟಿದ್ದಾರೆ. ಅವರ ಸಿದ್ಧಾಂತಗಳಿಗೆ, ತತ್ವಗಳಿಗೆ ಮನ್ನಣೆ ನೀಡಿಲ್ಲ’ ಎಂದು ಕಾಂಗ್ರೆಸ್‌ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.

ಇಲ್ಲಿಗೆ ಸಮೀಪದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನಾವೇ ಗೆಲ್ಲುತ್ತೇವೆಂದು ಬಿಜೆಪಿಯ ನಾಯಕರು, ಕೇಂದ್ರದ ಹತ್ತಾರು ಸಚಿವರು ನಡೆಸಿದ್ದ ಪ್ರಚಾರಕ್ಕೆ ಯಶಸ್ಸು ಸಿಕ್ಕಿಲ್ಲ’ ಎಂದರು.

‘ನಮ್ಮ ಪಕ್ಷವೂ (ಕಾಂಗ್ರೆಸ್‌) ಚುನಾವಣೆಯಲ್ಲಿ ಸ್ಪರ್ಧಿಸಿತ್ತು. ಆದರೆ, ಯಶಸ್ಸು ಸಿಗಲಿಲ್ಲ. ಸೋಲು– ಗೆಲುವು ಸಾಮಾನ್ಯ. ನಮ್ಮ ಪಕ್ಷದ ನ್ಯೂನ್ಯತೆ ಹಾಗೂ ಕೊರತೆಗಳನ್ನು ಚರ್ಚಿಸಿ, ಸರಿಪಡಿಸುವ ಕೆಲಸ ಮಾಡಲಾಗುವುದು’ ಎಂದು ಹೇಳಿದರು.

‘ಚುನಾವಣೆಯಲ್ಲಿ ಕೇವಲ ಅಭಿವೃದ್ಧಿ ವಿಷಯವೊಂದೇ ಮುಖ್ಯವಾಗಲ್ಲ. ಭಾವನಾತ್ಮಕ ವಿಷಯವೂ ಪರಿಣಾಮ ಬೀರುತ್ತದೆ. ಯುವಕರಿಗೆ 2 ಕೋಟಿ ಉದ್ಯೋಗ ನೀಡುತ್ತೇನೆ, ಪ್ರತಿಯೊಬ್ಬರ ಬ್ಯಾಂಕ್‌ ಖಾತೆಗೆ ₹ 15 ಲಕ್ಷ ಹಾಕುತ್ತೇನೆ, ಅಚ್ಛೇ ದಿನ್‌ ಬರುತ್ತವೆಂದು ಪ್ರಧಾನಿ ನರೇಂದ್ರ ಮೋದಿ ಮತದಾರರನ್ನು ಭಾವನಾತ್ಮಕವಾಗಿ ಸೆಳೆದು, ಎರಡು ಬಾರಿ ಪ್ರಧಾನಿಯಾಗಲಿಲ್ಲವೇ’ ಎಂದರು.

ಮೀಸಲಾತಿಯು ಮೂಲಭೂತ ಹಕ್ಕಲ್ಲ ಎಂದು ಹೇಳಿರುವ ಸುಪ್ರೀಂ ಕೋರ್ಟ್‌ ತೀರ್ಪಿಗೆ ವಿರೋಧ ವ್ಯಕ್ತಪಡಿಸಿದ ಅವರು, ‘ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಮಹಾತ್ಮ ಗಾಂಧಿ ಅವರ ಜೊತೆ ಚರ್ಚಿಸಿ, ಪೂನಾ ಒಪ್ಪಂದದ ಭಾಗವಾಗಿ ಮೀಸಲಾತಿಯನ್ನು ನೀಡಿದ್ದಾರೆ. ಸಂವಿಧಾನದ 16ನೇ ವಿಧಿಯಲ್ಲಿ ಮೀಸಲಾತಿ ಕಲ್ಪಿಸಿದ್ದಾರೆ. ಆದರೆ, ಉತ್ತರಾಖಂಡ ಪ್ರಕರಣದಲ್ಲಿ ಇದನ್ನು ತಪ್ಪಾಗಿ ವ್ಯಾಖ್ಯಾನಿಸಲಾಗಿದೆ’ ಎಂದು ಹೇಳಿದರು.

‘ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸದ್ಯದಲ್ಲಿಯೇ ನೇಮಕ ಮಾಡಲಾಗುವುದು. ಪಕ್ಷದ ಎಲ್ಲ ಪ್ರಮುಖ, ಹಿರಿಯ ಮುಖಂಡರ ಜೊತೆ ಹಾಗೂ ಜಿಲ್ಲಾ ಮಟ್ಟದ ನಾಯಕರ ಜೊತೆ ಚರ್ಚಿಸಲಾಗುತ್ತಿದ್ದು, ಸದ್ಯದಲ್ಲಿಯೇ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT