ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಂಡಲ’ ಅಧ್ಯಕ್ಷರ ನೇಮಕದಲ್ಲಿ ಗೊಂದಲ

Last Updated 13 ಜನವರಿ 2020, 20:00 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಬಿಜೆಪಿಯ ಮಂಡಲಗಳ ಅಧ್ಯಕ್ಷರ ನೇಮಕ ಪ್ರಕ್ರಿಯೆ ಬಹುತೇಕ ಮುಗಿದಿದ್ದು, ಅಧ್ಯಕ್ಷರ ನೇಮಕ ಬೇಕಾಬಿಟ್ಟಿ ನಡೆದಿದ್ದು, ಅರ್ಹರು ಮತ್ತು ನಿಷ್ಠಾವಂತರಿಗೆ ಆದ್ಯತೆ ನೀಡಿಲ್ಲ ಎಂಬ ಕೂಗು ಕೇಳಿ ಬಂದಿದೆ.

ಒಬ್ಬರಿಗೆ ಒಂದೇ ಹುದ್ದೆ ಎಂಬ ನಿಯಮ ಮಂಡಲಕ್ಕೂ ಅನ್ವಯವಾಗುತ್ತದೆ. ಆದರೆ, ಮಂಡಲ ಅಧ್ಯಕ್ಷರುಗಳ ನೇಮಕದಲ್ಲಿ ಇದರ ಪಾಲನೆ ಆಗಿಲ್ಲ. ಒಂದಕ್ಕಿಂತ ಹೆಚ್ಚು ಹುದ್ದೆಗಳನ್ನು ಹೊಂದಿರುವವರಿಗೂ ಅಧ್ಯಕ್ಷ ಸ್ಥಾನ ನೀಡಿದ್ದು, ಬೆಂಗಳೂರು ನಗರದಲ್ಲಿ ಮುಂದಿನ ಬಿಬಿಎಂಪಿ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಪಾಲಿಕೆ ಸದಸ್ಯರು ತಮಗೆ ಬೇಕಾದವರನ್ನು ಅಧ್ಯಕ್ಷ ಹುದ್ದೆಗೆ ನೇಮಕಗೊಳ್ಳುವಂತೆ ಮಾಡಿದ್ದಾರೆ ಎಂಬ ದೂರು ಕೇಳಿ ಬಂದಿದೆ.

ಚುನಾವಣೆ ಮೂಲಕ ಅಧ್ಯಕ್ಷ ನೇಮಕ ಆಗಬೇಕು ಎಂದು ಪಕ್ಷದ ನಿಯಮ ಹೇಳುತ್ತದೆ. ಆದರೆ, ಎಲ್ಲೂ ಚುನಾವಣೆ ನಡೆದಿಲ್ಲ. ಅವಿರೋಧ ಆಯ್ಕೆ ಎಂದು ಬೇಕು ಬೇಕಾದವರನ್ನು ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಬೆಂಗಳೂರು ನಗರದಲ್ಲಿ 28 ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು 35 ಮಂಡಲಗಳಿವೆ. ಬಹುತೇಕ ಕಡೆ ಹೊಸಬರಿಗೆ ಅವಕಾಶಗಳು ಸಿಕ್ಕಿಲ್ಲ. ಬ್ಯಾಟರಾಯನಪುರದಲ್ಲಿ ಸ್ಥಳೀಯ ಪಾಲಿಕೆ ಸದಸ್ಯರೇ ಮಂಡಲದ ಅಧ್ಯಕ್ಷರಾಗಿದ್ದಾರೆ. ಅವರು ಈಗಾಗಲೇ ಸ್ಥಾಯಿ ಸಮಿತಿಯಲ್ಲೂ ಇದ್ದಾರೆ. ಮಂಡಲಕ್ಕೂ ಅಧ್ಯಕ್ಷರನ್ನು ಮಾಡಿದ್ದು ಎಷ್ಟು ಸರಿ ಎಂದು ಬಿಜೆಪಿ ನಾಯಕರೊಬ್ಬರು
ಪ್ರಶ್ನಿಸಿದ್ದಾರೆ.

ರಾಜರಾಜೇಶ್ವರಿ ನಗರ ಮತ್ತು ಯಲಹಂಕದಲ್ಲೂ ಇದೇ ರೀತಿ ಆಗಿದೆ. ಇದರಿಂದಾಗಿ ಸದ್ಯದಲ್ಲೇ ನಡೆಯುವ ಬಿಬಿಎಂಪಿ ಚುನಾವಣೆಯಲ್ಲಿ ಬಿ ಫಾರಂ ನೀಡುವಾಗ ತಮಗೆ ಬೇಕಾದವರಿಗೇ ನೀಡುವ ಸಾಧ್ಯತೆ ಇರುತ್ತದೆ. ಇತ್ತೀಚೆಗೆ ಬಿಜೆಪಿ ಕಚೇರಿಯಲ್ಲಿ ಸಭೆ ನಡೆದಾಗಲೂ ಕೆಲವು ಪದಾಧಿಕಾರಿಗಳು ತಮ್ಮ ಅಸಮಾಧಾ
ನವನ್ನು ಬಹಿರಂಗವಾಗಿಯೇ ತೋಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಧ್ಯಕ್ಷ ಹುದ್ದೆಗೆ ಆಯ್ಕೆ ಮಾಡುವಾಗ ಪಕ್ಷಕ್ಕೆ ದುಡಿದವರಿಗೆ ಮಣೆ ಹಾಕಿಲ್ಲ. ಆಯ್ಕೆ ಸಮಿತಿ ಬಳಿ ಹೋದವರನ್ನಷ್ಟೇ ಪರಿಗಣಿಸಲಾಗಿದೆ. 15–20 ವರ್ಷಗಳಿಂದ ದುಡಿದವರನ್ನು ಗಮನಿಸಿ, ಹುದ್ದೆಗಳನ್ನು ನೀಡಬೇಕು. ಅದನ್ನು ಬಿಟ್ಟು ನಾಯಕರ ಸುತ್ತ ಸುತ್ತುವವರನ್ನೇ ಪರಿಗಣಿಸುವುದಾದರೆ, ಪಕ್ಷದ ಸಂಘಟನೆ ಬಿಟ್ಟು ನಾಯಕರ ಸುತ್ತ ಸುತ್ತು ಹಾಕುವುದಕ್ಕೆ ಆದ್ಯತೆ ನೀಡಬೇಕಾಗುತ್ತದೆ ಎಂದು ಮಂಡಲ ನೇಮಕ ಕುರಿತ ಸಭೆಯಲ್ಲಿ ಪ್ರಶ್ನಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT