ಶನಿವಾರ, ಮಾರ್ಚ್ 28, 2020
19 °C
ಏರ್‌ಪೋರ್ಟ್ಸ್‌ ಕೌನ್ಸಿಲ್‌ ಇಂಟರ್‌ನ್ಯಾಷನಲ್‌ (ಎಸಿಐ) ಸಮೀಕ್ಷೆಯಲ್ಲಿ ಪ್ರಶಸ್ತಿ

ಮಂಗಳೂರು ವಿಮಾನ ನಿಲ್ದಾಣಕ್ಕೆ ಅಗ್ರಪಟ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಏರ್‌ಪೋರ್ಟ್ಸ್‌ ಕೌನ್ಸಿಲ್‌ ಇಂಟರ್‌ನ್ಯಾಷನಲ್‌ (ಎಸಿಐ) ನಡೆಸಿದ ಸಮೀಕ್ಷೆಯಲ್ಲಿ ಬಜ್ಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಜಗತ್ತಿನ ಅತ್ಯುತ್ತಮ ವಿಮಾನ ನಿಲ್ದಾಣ ಸ್ಥಾನವನ್ನು ಮುಡಿಗೇರಿಸಿಕೊಂಡಿದೆ.

‘ಎಸಿಐ ನಡೆಸಿದ ಏರ್‌ಪೋರ್ಟ್‌ ಸರ್ವಿಸ್‌ ಕ್ವಾಲಿಟಿ (ಎಎಸ್‌ಕ್ಯೂ) ಸಮೀಕ್ಷೆಯಲ್ಲಿ ಭಾರತದ ನಾಲ್ಕು ವಿಮಾನ ನಿಲ್ದಾಣಗಳು ಜಗತ್ತಿನ ಅತ್ಯುತ್ತಮ ವಿಮಾನ ನಿಲ್ದಾಣಗಳೆಂಬ ರೇಟಿಂಗ್‌ ಪಡೆದಿವೆ. ಮಂಗಳೂರು, ಚಂಡೀಗಡ, ತಿರುವನಂತಪುರ ಮತ್ತು ಲಖನೌ ವಿಮಾನ ನಿಲ್ದಾಣಗಳು ತಲಾ ಹತ್ತು ಪ್ರಶಸ್ತಿಗಳೊಂದಿಗೆ ಈ ಮಾನ್ಯತೆ ಪಡೆದಿವೆ’ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ಪ್ರಕಟಣೆ ತಿಳಿಸಿದೆ.

ವಿಮಾನ ನಿಲ್ದಾಣಕ್ಕೆ ಸಂಪರ್ಕ ಲಭ್ಯತೆ, ಚೆಕ್‌ ಇನ್‌, ಭದ್ರತಾ ತಪಾಸಣೆ, ಪ್ರಯಾಣಿಕ ಸ್ನೇಹಿ ಸೌಲಭ್ಯಗಳು, ಆಹಾರದ ಲಭ್ಯತೆ, ಪರಿಸರ ಸ್ನೇಹಿ ವಾತಾವರಣ, ಪ್ರಯಾಣಿಕರ ಆಗಮನ ವಿಭಾಗದಲ್ಲಿನ ಸೌಕರ್ಯಗಳು ಸೇರಿದಂತೆ 34 ಅಂಶಗಳನ್ನು ಆಧರಿಸಿ ಎಂಟು ಪ್ರಮುಖ ವಿಭಾಗಗಳಲ್ಲಿ ಎಸಿಐ ಅಂತರರಾಷ್ಟ್ರೀಯ ಮಟ್ಟದ ಸಮೀಕ್ಷೆ ನಡೆಸಿತ್ತು. ಜಗತ್ತಿನಾದ್ಯಂತ 356 ವಿಮಾನ ನಿಲ್ದಾಣಗಳು 2019ರಲ್ಲಿ ನಡೆದ ಈ ಸಮೀಕ್ಷೆಯ ಭಾಗವಾಗಿದ್ದವು ಎಂದು ಪ್ರಾಧಿಕಾರ ಮಾಹಿತಿ ನೀಡಿದೆ.

ಏಷ್ಯಾ– ಪೆಸಿಫಿಕ್‌ ವಲಯದಲ್ಲಿ 20ರಿಂದ 50 ಲಕ್ಷ ಪ್ರಯಾಣಿಕರ ಬಳಕೆಯ ವಿಮಾನ ನಿಲ್ದಾಣಗಳ ವಿಭಾಗದಲ್ಲಿ ಮಂಗಳೂರು, ಚಂಡೀಗಡ ಮತ್ತು ತಿರುವನಂತಪುರ ವಿಮಾನ ನಿಲ್ದಾಣಗಳು ಅಗ್ರ ರ‍್ಯಾಂಕಿಂಗ್‌ ಪಡೆದಿವೆ. ಇದೇ ವಲಯದಲ್ಲಿ 50 ಲಕ್ಷದಿಂದ 1.5 ಕೋಟಿ ಪ್ರಯಾಣಿಕರ ಬಳಕೆ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಲಖನೌ ನಿಲ್ದಾಣ ಅಗ್ರ ರ‍್ಯಾಂಕಿಂಗ್‌ ಪಡೆದಿದೆ ಎಂದು ಎಎಐ ಹೇಳಿದೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಬಳಕೆಗಾಗಿ ಎರಡು ಹೊಸ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಟರ್ಮಿನಲ್‌ ಕಟ್ಟಡವನ್ನು ಮೇಲ್ದರ್ಜೆಗೇರಿಸಲಾಗಿದೆ. ತಂತ್ರಾಂಶ ಆಧಾರಿತ ಕ್ಯಾಬ್‌ ಸೌಲಭ್ಯ ಕಲ್ಪಿಸಲಾಗಿದೆ. ಪ್ರಯಾಣಿಕರ ಆಗಮನ ಹಾಗೂ ವಿದೇಶಿ ಪ್ರಯಾಣಿಕರ ನಿರ್ಗಮನ ದ್ವಾರಗಳಲ್ಲಿ ಎಲೆಕ್ಟ್ರಾನಿಕ್‌ ಸ್ವಯಂಚಾಲಿಕ ನಿಯಂತ್ರಣ ವ್ಯವಸ್ಥೆ ಹಾಗೂ ಇ– ಗೇಟ್‌ಗಳನ್ನು ಅಳವಡಿಸಲಾಗಿದೆ. 500 ಹೊಸ ಟ್ರಾಲಿಗಳನ್ನು ಒದಗಿಸಲಾಗಿದೆ. ಎಟಿಎಂ ಕೇಂದ್ರಗಳನ್ನು ತೆರೆಯಲಾಗಿದೆ. ಇವೆಲ್ಲವೂ ರ‍್ಯಾಂಕಿಂಗ್‌ನಲ್ಲಿ ಮೇಲಕ್ಕೇರಲು ಕಾರಣ ಎಂದು ಪ್ರಾಧಿಕಾರ ತಿಳಿಸಿದೆ.

‘ಮಂಗಳೂರು ವಿಮಾನ ನಿಲ್ದಾಣದಲ್ಲಿ ನಗದುರಹಿತ ವಹಿವಾಟಿಗೆ ಆದ್ಯತೆ ನೀಡಲಾಗಿದೆ. ಪರಿಸರ ಸ್ನೇಹಿ ನಿಲ್ದಾಣವನ್ನಾಗಿ ಬದಲಾಯಿಸಲಾಗಿದೆ. ಸ್ಥಳೀಯ ಕಲೆ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಲಾಕೃತಿಗಳನ್ನು ಪ್ರದರ್ಶಿಸಿರುವುದೂ ಈ ಸ್ಥಾನ ದೊರಕಲು ಕಾರಣ’ ಎಂದು ಪ್ರಾಧಿಕಾರದ ಕಾರ್ಪೋರೇಟ್‌ ಸಂವಹನ ವಿಭಾಗದ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು