ಶನಿವಾರ, ಜುಲೈ 24, 2021
28 °C

ಪಕ್ಷಕ್ಕೆ ಬರಲು ಹಲವರ ಕಾತರ: ಡಿ.ಕೆ.ಶಿವಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕಾಂಗ್ರೆಸ್‌ನಿಂದ ಬೇರೆ ಪಕ್ಷಕ್ಕೆ ಹೋಗಿರುವ ಅನೇಕ ನಾಯಕರು ಮತ್ತೆ ಪಕ್ಷಕ್ಕೆ ಮರಳಲು ಇಚ್ಛಿಸಿದ್ದಾರೆ. ಇದರ ಬಗ್ಗೆ ಪರಾಮರ್ಶೆ ನಡೆಸಲು ಅಲ್ಲಂ ವೀರಭದ್ರಪ್ಪ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಈ ಸಮಿತಿಯ ಶಿಫಾರಸು ಆಧರಿಸಿ, ಯಾರನ್ನು ಸೇರಿಸಿಕೊಳ್ಳಬೇಕು ಎಂಬ ಬಗ್ಗೆ ಇತರ ನಾಯಕರು ಹಾಗೂ ಸ್ಥಳೀಯ ಕಾರ್ಯಕರ್ತರ ಜತೆ ಚರ್ಚೆ ನಡೆಸಿ ಪಕ್ಷಕ್ಕೆ ಬರಮಾಡಿಕೊಳ್ಳಲಾಗುವುದು ಎಂದು ಅವರು ಹೇಳಿದರು.

ವಿಶ್ವ ಪರಿಸರ ದಿನದ ಅಂಗವಾಗಿ ಶುಕ್ರವಾರ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಗಿಡ ನೆಟ್ಟ ಬಳಿಕ ಮಾಧ್ಯಮಗಳ ಜತೆ ಅವರು ಮಾತನಾಡಿದರು.

‘ಕೇವಲ ಅಧಿಕಾರದ ಆಸೆಯಿಂದ ಪಕ್ಷಕ್ಕೆ ಮರಳುವವರ ಅಗತ್ಯ ನಮಗಿಲ್ಲ. ಪಕ್ಷದ ಸಿದ್ಧಾಂತ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ನಾಯಕತ್ವದ ಮೇಲೆ ನಂಬಿಕೆ ಇಟ್ಟು, ತಾಲ್ಲೂಕು ಮಟ್ಟದಲ್ಲಿ ಕಾರ್ಯಕರ್ತರ ಜತೆ ಬೆರೆತು ಕೆಲಸ ಮಾಡಲು ಸಿದ್ಧವಿದ್ದರೆ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು’ ಎಂದರು.‌

‘ಸ್ಥಳೀಯ ಮಟ್ಟದಲ್ಲಿ ಚರ್ಚೆ ನಡೆಸದೇ ಪಕ್ಷಕ್ಕೆ ಸೇರಿಸಿಕೊಂಡರೆ ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆಗಳು ಎದುರಾಗದಂತೆ ಸ್ಥಳೀಯ ಮಟ್ಟದಲ್ಲೂ ಕಾರ್ಯಕರ್ತರೊಂದಿಗೆ ಚರ್ಚಿಸುವ ಅಗತ್ಯ ಇದೆ’ ಎಂದರು.

‘ಕೆಲವು ತಲೆಹಿಡುಕರು ತಮಗೆ ಮನಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಚುನಾವಣೆಯನ್ನು ಕಡಲೆಪುರಿ ವ್ಯಾಪಾರ ಎಂದು ಭಾವಿಸಿ 20, 30 ಎಂದು ನಂಬರ್ ಹೇಳುತ್ತಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ಶಾಸಕರಿಗೆ ಅಗೌರವ ನೀಡುವುದು ಬೇಡ. ಯಾವ ಮಂತ್ರಿ ಯಾವ ಹೇಳಿಕೆ ನೀಡುತ್ತಿದ್ದಾರೆ. ಯಾವ ಹೋಟೆಲ್‌ನಲ್ಲಿ ಯಾರು ಸಭೆ ನಡೆಸುತ್ತಿದ್ದಾರೆ, ನಿನ್ನೆ ರಾತ್ರಿ ಯಾರು, ಎಲ್ಲಿ, ಏನು ಸಭೆ ನಡೆಸಿದ್ದಾರೆ ಎಂಬುದನ್ನು ಗಮನಿಸುತ್ತಿದ್ದೇವೆ. ನಾವು ಇಲ್ಲಿ ಸುಮ್ಮನೆ ಕೂತಿಲ್ಲ. ನಮಗೆ ಬೇರೆಯವರ ಮನೆ ವಿಚಾರ ಬೇಡ. ನಾವುಂಟು ನಮ್ಮ ಮನೆ ಉಂಟು, ನಮ್ಮ ಶಾಸಕರುಂಟು’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು