ಶನಿವಾರ, ಫೆಬ್ರವರಿ 22, 2020
19 °C
ವಿಟಿಯು ಘಟಿಕೋತ್ಸವ: ಯುವತಿಯರ ಮುಡಿಗೆ ಹೆ‌ಚ್ಚಿನ ಸುವರ್ಣ

ಬೆಳಗಾವಿ: ಮೆಕ್ಯಾನಿಕ್‌ ಪುತ್ರಿಗೆ 13 ಚಿನ್ನದ ಪದಕ

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಮಂಗಳೂರಿನ ಸಂತ ಜೋಸೆಫ್‌ ಎಂಜಿನಿಯರಿಂಗ್‌ ಕಾಲೇಜಿನ ಮಹಿಮಾ ಎಸ್. ರಾವ್‌ ಬಿಇ (ಸಿವಿಲ್‌)ಯಲ್ಲಿ ಮೊದಲ ರ‍್ಯಾಂಕ್‌ ಗಳಿಸಿ 13 ಚಿನ್ನದ ಪದಕಗಳನ್ನು ಪಡೆದು ‘ಹೊನ್ನಿನ ನಗೆ’ ಬೀರಿದರು.

ಅವರಿಗೆ, ಇಲ್ಲಿನ ವಿಟಿಯುನಲ್ಲಿ ಶನಿವಾರ ನಡೆದ 19ನೇ ಘಟಿಕೋತ್ಸವದಲ್ಲಿ ರಾಷ್ಟ್ರೀಯ ಮಾನ್ಯತಾ ಮಂಡಳಿ (ಎನ್‌ಬಿಎ) ಅಧ್ಯಕ್ಷ ಪ್ರೊ.ಕೆ.ಕೆ.ಅಗರ್‌ವಾಲ್‌ ಪದಕಗಳನ್ನು ಪ್ರದಾನ ಮಾಡುವಾಗ ಸಭಾಂಗಣದಲ್ಲಿ ಚಪ್ಪಾಳೆಗಳ ಸುರಿಮಳೆಯಾಯಿತು.

ಕಾಸರಗೋಡಿನಲ್ಲಿ ಆಟೊರಿಕ್ಷಾ ಮೆಕ್ಯಾನಿಕ್‌ ಆಗಿರುವ ಸತ್ಯಸಾಯಿರಾವ್‌– ಗೃಹಿಣಿ ಶ್ರೀದೇವಿ ದಂಪತಿಯ ಪುತ್ರಿಯಾದ ಇವರು, ಕೋಚಿಂಗ್‌ಗೆ ಹೋಗದೆ ಈ ಸಾಧನೆ ತೋರಿದ್ದಾರೆ.

ಕಾಸರಗೋಡಿನಲ್ಲಿ ಎಸ್ಸೆಸ್ಸೆಲ್ಸಿವರೆಗೂ ಕನ್ನಡ ಮಾಧ್ಯಮದಲ್ಲಿ ಕಲಿತಿದ್ದ ಅವರು, ‌‘ಎ ಪ್ಲಸ್‌’ ಗ್ರೇಡ್ ಪಡೆದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರಶಸ್ತಿಗೆ ಭಾಜನವಾಗಿದ್ದರು. ಪ್ರಸ್ತುತ ಮಂಗಳೂರಿನ ಎಚ್‌ಐಎಫ್‌ಎಸ್‌ಇ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿದ್ದಾರೆ. ಉಪನ್ಯಾಸಕಿ ಆಗುವ ಕನಸು ಅವರದು.

‘ತಂದೆ ಬಹಳ ಕಷ್ಟಪಟ್ಟು, ಸಾಲ ಮಾಡಿ ಓದಿಸಿದ್ದಾರೆ. ಅವರ ತ್ಯಾಗಕ್ಕೆ ಬೆಲೆ ತಂದುಕೊಟ್ಟಿದ್ದಕ್ಕೆ ಹೆಮ್ಮೆ ಇದೆ. ಎಸ್ಸೆಸ್ಸೆಲ್ಸಿವರೆಗೂ ಕನ್ನಡ ಮಾಧ್ಯಮದಲ್ಲಿ ಓದಿದ್ದ ನನಗೆ, ಪಿಯುಸಿಯಲ್ಲಿ ಇಂಗ್ಲಿಷ್ ಮಾಧ್ಯಮ ಕೊಂಚ ಕಷ್ಟವಾಯಿತು. ನಂತರ ಸುಧಾರಿಸಿಕೊಂಡೆ. ಶಬ್ದಕೋಶ ಬಹಳ ನೆರವಾಯಿತು’ ಎಂದು ಪ್ರತಿಕ್ರಿಯಿಸಿದರು.

‘ಓದಿನೊಂದಿಗೆ, ಭರತನಾಟ್ಯದ ‘ವಿದ್ವತ್‌’ ಪದವಿ ಪಡೆದಿದ್ದೇನೆ. ಪಠ್ಯೇತರ ಚಟುವಟಿಕೆಗಳಲ್ಲಿದ್ದರೆ ಪಠ್ಯದತ್ತ ಆಸಕ್ತಿ ಕಡಿಮೆಯಾಗುತ್ತದೆ ಎನ್ನುವ ಭಾವನೆ ಬಹುತೇಕರಲ್ಲಿದೆ. ಇದು ಸರಿಯಲ್ಲ. ಭರತನಾಟ್ಯದಿಂದ ಬಹಳ ಅನುಕೂಲವಾಗಿದೆ. ಬೇರೆ ಆಲೋಚನೆಗೆ ಸಮಯವೇ ಇರುತ್ತಿರಲಿಲ್ಲ. ಕಾರ್ಯಕ್ರಮಕ್ಕೆ ಹೋಗುವಾಗ, ಬ್ಯಾಕ್‌ ಸ್ಟೇಜ್‌ನಲ್ಲೂ ಓದುತ್ತಿದ್ದೆ. ಅದಕ್ಕೆ ಗೌರವ ಸಿಕ್ಕಿದ್ದಕ್ಕೆ ಖುಷಿಯಾಗುತ್ತಿದೆ’ ಎನ್ನುವಾಗ ಅವರ ಕಣ್ಣಂಚಲ್ಲಿ ನೀರಿತ್ತು.

‘ನಮಗೆ ಓದಲಾಗಲಿಲ್ಲ; ಹೀಗಾಗಿ ಮಗಳನ್ನು ಓದಿಸಿದ್ದೇವೆ. ಆಕೆ ರ‍್ಯಾಂಕ್‌ ಗಳಿಸುವ ನಿರೀಕ್ಷೆ ಇತ್ತು. ಆದರೆ, ಇಷ್ಟೊಂದು ಚಿನ್ನದ ಪದಕಗಳು ಸಿಗುತ್ತದೆ ಎಂಬ ಕಲ್ಪನೆ ಇರಲಿಲ್ಲ’ ಎಂದು ಪೋಷಕರು ಪ್ರತಿಕ್ರಿಯಿಸಿದರು.

ಸನ್ಮತಿಗೆ 11 ಚಿನ್ನ

ಮೂಡಬಿದಿರೆ ಮಂಗಳೂರು ತಾಂತ್ರಿಕ ಸಂಸ್ಥೆಯ ಬಿಇ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿದ್ಯಾರ್ಥಿನಿ, ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಸನ್ಮತಿ ಎಸ್. ಪಾಟೀಲ 11 ಚಿನ್ನದ ಪದಕಗಳೊಂದಿಗೆ ಕಂಗೊಳಿಸಿದರು. ಪ್ರಾಂಶುಪಾಲ ಶ್ರೀಕಾಂತ್‌–ವಕೀಲೆ ಮಾಧುರಿ ಕುಲಕರ್ಣಿ ದಂಪತಿಯ ಪುತ್ರಿಯಾದ ಇವರು, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ.

‘ಎಂಜಿನಿಯರ್‌ ಆಗುವ ಕನಸಿತ್ತು. ಶಿಸ್ತಿನಿಂದ ಅಭ್ಯಾಸ ಮಾಡುತ್ತಿದ್ದೆ. ಅಂದಿನ ಪಾಠ ಅಂದೇ ಮನನ ಮಾಡುತ್ತಿದ್ದೆ. ನಮ್ಮ ಕಾಲೇಜಿನಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್ ವಿಭಾಗದಲ್ಲಿ ಮೂವರು ಹುಡುಗಿಯರಷ್ಟೇ ಇದ್ದೆವು. ಮೆಕ್ಯಾನಿಕಲ್‌, ಎಲೆಕ್ಟ್ರಿಕಲ್‌ ಎಂದರೆ ಅದು ಹುಡುಗರ ವಿಷಯ ಎನ್ನುವ ಅಭಿಪ್ರಾಯವಿದೆ. ಅದು ತಪ್ಪು. ಯುವತಿಯರೂ ಸಾಧಿಸಬಹುದು’ ಎಂದು ಪ್ರತಿಕ್ರಿಯಿಸಿದರು.

ಪ್ರಾವಿಷನ್‌ ಸ್ಟೋರ್‌ ಮಾಲೀಕನ ಪುತ್ರಿ ಸಾಧನೆ

ಬೆಂಗಳೂರು ತಾಂತ್ರಿಕ ಸಂಸ್ಥೆಯ ವಿದ್ಯಾ ಜಿ.ಎಸ್. ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ನಲ್ಲಿ 7 ಚಿನ್ನದ ಪದಕಗಳಿಗೆ ಕೊರಳೊಡ್ಡಿದರು. ಪ್ರಾವಿಷನ್‌ ಸ್ಟೋರ್‌ ಇಟ್ಟಿರುವ ಶ್ರೀನಿವಾಸ ಗುಪ್ತ– ವೀಣಾ ಲಕ್ಷ್ಮಿ ದಂಪತಿಯ ಪುತ್ರಿ. ಪ್ರಸ್ತುತ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದಾರೆ.

‘ಉಪನ್ಯಾಸಕರು ಹೇಳುವುದನ್ನು ಆಸಕ್ತಿಯಿಂದ ಕೇಳಿಸಿಕೊಳ್ಳುತ್ತಿದ್ದೆ. ಅದು ಪರೀಕ್ಷೆಗೆ ಪುನರ್ಮನನ ಮಾಡುವಾಗ ಸಹಕಾರಿಯಾಯಿತು. ಎಂಜಿನಿಯರಿಂಗ್‌ನಲ್ಲಿ ಕಲಿತದ್ದನ್ನು ಬಳಸೋಣ ಎಂದು ಸದ್ಯ ಕೆಲಸಕ್ಕೆ ಸೇರಿದ್ದೇನೆ. ಉನ್ನತ ಶಿಕ್ಷಣ ಪಡೆಯುವ ಉದ್ದೇಶವಿದೆ’ ಎಂದು ತಿಳಿಸಿದರು.

ಕೃಷಿಕನ ಪುತ್ರಿಗೆ 6 ಸ್ವರ್ಣ

ದಕ್ಷಿಣ ಕನ್ನಡದ ಪುತ್ತೂರಿನ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಸಿಂದೂರ ಎಸ್. ಸರಸ್ವತಿ 6 ಚಿನ್ನದ ಪದಕಗಳನ್ನು ಪಡೆದರು. ‘ಎಂಜಿನಿಯರ್‌ ಆಗಲು ತಂದೆ ಮುರಳೀಧರ ಭಟ್‌ ಬಂಗಾರಡ್ಕ ಅವರೇ ನನಗೆ ಸ್ಫೂರ್ತಿ. ಎಂಜಿನಿಯರ್‌ ಆಗಿದ್ದ ಅವರು ಕೃಷಿ ಮಾಡುತ್ತಿದ್ದಾರೆ. ಬೇಸಾಯದಲ್ಲಿ ತಂತ್ರಜ್ಞಾನ ಬಳಸುತ್ತಿದ್ದಾರೆ’ ಎಂದು ತಿಳಿಸಿದರು.

‘ನಾನು ಹಗಲಿಗಿಂತಲೂ ತಡರಾತ್ರಿ ಹೆಚ್ಚು ಓದುತ್ತಿದ್ದೆ. ಇದರಿಂದ ಚೆನ್ನಾಗಿ ಅರ್ಥವಾಗುತ್ತಿತ್ತು. ಉದ್ಯಮಿಯಾಗಿ ಸಮಾಜಕ್ಕೆ ನೆರವಾಗಬೇಕು ಎನ್ನುವ ಬಯಕೆ ಇದೆ. ಈ ಮೂಲಕ ದೇಶಕ್ಕೆ ಕೊಡುಗೆ ಕೊಡುವ ಆಸೆ ಇದೆ’ ಎಂದು ಕನಸು ಹಂಚಿಕೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು