ಗುರುವಾರ , ಜುಲೈ 29, 2021
23 °C

ಗುಣಮುಖರಾದವರ ಸಂಖ್ಯೆಯನ್ನೂ ಪ್ರಚಾರ ಮಾಡಿ: ಸಚಿವ ಡಾ.ಕೆ. ಸುಧಾಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ರಾಯಚೂರು: ಮಾಧ್ಯಮಗಳಲ್ಲಿ ಕೋವಿಡ್‌-19 ಕುರಿತು ಹೊಸ ಹೊಸ ಪದ ಬಳಸಿ ಸೋಂಕಿತರ ಸಂಖ್ಯೆಯೊಂದನ್ನೇ ಹೆಚ್ಚು ಪ್ರಚಾರ ಮಾಡಲಾಗುತ್ತಿದ್ದು, ಇದರಿಂದ ಜನಸಾಮಾನ್ಯರಲ್ಲಿ ಆತಂಕ ಹೆಚ್ಚಿದೆ. ಸೋಂಕಿತರಲ್ಲಿ ಎಷ್ಟು ಜನರು ಗುಣಮುಖರಾಗಿದ್ದಾರೆ. ಸಾವಿನ ಪ್ರಮಾಣ ಎಷ್ಟಿದೆ ಎಂಬುದರ ಅಂಕಿ–ಅಂಶವನ್ನು ಜನರ ಮುಂದೆ ಇಡಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕೋವಿಡ್‌ ಕುರಿತು ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಜನರು ಸಾಮಾನ್ಯವಾಗಿ ಬರುವ ನೆಗಡಿ, ಕೆಮ್ಮು ಹಾಗೂ ಜ್ವರಕ್ಕೆ ಚಿಕಿತ್ಸೆ ಪಡೆಯುವುದಕ್ಕೆ ಮನೆಯಿಂದ ಹೊರ ಬರದಂತಹ ಸ್ಥಿತಿ ನಿರ್ಮಾಣವಾಗಿದೆ. ಸೋಂಕಿನ ತಪಾಸಣೆಗೆ ಜನರು ಹಿಂಜರಿಯಬಾರದು. ಈ ವಿಷಯದಲ್ಲಿ ಜನರು ಸರ್ಕಾರದೊಂದಿಗೆ ಸಹಕರಿಸಿದರೆ ಆದಷ್ಟು ಬೇಗನೆ ಕೊರೊನಾದಿಂದ ಮುಕ್ತವಾಗಬಹುದು ಎಂದು ತಿಳಿಸಿದರು.

ನಿಫಾ, ಸಾರ್ಸ್‌ನಂತಹ ಸೋಂಕುಗಳಿಗೆ ಹೋಲಿಸಿದರೆ ಕೊರೊನಾ ಸೋಂಕಿನ ಮರಣ ಪ್ರಮಾಣ ಕಡಿಮೆ ಇದೆ. ರಾಜ್ಯದಲ್ಲಿ ಇದುವರೆಗೂ 6,516 ಜನರಿಗೆ ಸೋಂಕು ತಗುಲಿದೆ. ಅದರಲ್ಲಿ ಶೇ 52.8 ರಷ್ಟು ಜನರು ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಸಾವಿನ ಪ್ರಮಾಣ ಶೇ 1.2 ರಷ್ಟು ಮಾತ್ರ ಇದೆ. ಉಸಿರಾಟದ ತೊಂದರೆಯಿಂದ ಬಳಲುವವರಿಗೆ ಮಾತ್ರ ಸೋಂಕು ಅಪಾಯಕಾರಿ. ರಾಷ್ಟ್ರೀಯ ಸರಾಸರಿ ಪ್ರಮಾಣಕ್ಕಿಂತಲೂ ಸಾವಿನ ಸಂಖ್ಯೆ ಕಡಿಮೆ ಇದೆ.  ಜನರು ಆತಂಕ ಪಡುವ ಅಗತ್ಯವಿಲ್ಲ. ಆದರೆ, ಜಾಗೃತಿ ವಹಿಸಿ, ಮಾಸ್ಕ್‌ ಧರಿಸಬೇಕು. ಸ್ಯಾನಿಟೈಸರ್‌ ಬಳಕೆ ಮಾಡಬೇಕು. ಇಷ್ಟು ಸಣ್ಣ ಕೆಲಸದಿಂದ ದೊಡ್ಡಮಟ್ಟದ ಬದಲಾವಣೆ ತರಬಹುದು ಎಂದರು.

ಓಪೆಕ್‌ಗೆ ಹೊಸರೂಪ: ರಾಯಚೂರಿನಲ್ಲಿರುವ ಓಪೆಕ್‌ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ಮುಂದಿನ ಮೂರು ತಿಂಗಳುಗಳಲ್ಲಿ ಹೊಸ ರೂಪ ನೀಡಲಾಗುವುದು ಎಂದು ಭರವಸೆ ನೀಡಿದರು.

ರಿಮ್ಸ್‌ ವೈದ್ಯಕೀಯ ಸಂಸ್ಥೆಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲೂ ಕೆಲವು ನ್ಯೂನ್ಯತೆಗಳು ಕಂಡುಬಂದಿವೆ. ಈ ಬಗ್ಗೆ ನಿರ್ದೇಶಕರಿಗೆ ಸ್ಪಷ್ಟ ಸೂಚನೆಗಳನ್ನು ಕೊಡಲಾಗಿದ್ದು, ಹೆಚ್ಚು ಅನುದಾನ ಪಡೆದುಕೊಳ್ಳುವ ಕ್ರಮಗಳ ಬಗ್ಗೆ ತಿಳಿಸಲಾಗಿದೆ. ಅಲ್ಲಿ ಕೂಡಾ ಪರಿಸ್ಥಿತಿ ಸುಧಾರಿಸಲಾಗುವುದು ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು