ಶನಿವಾರ, ಏಪ್ರಿಲ್ 4, 2020
19 °C
ಇನ್ನೂ ತೊಲಗದ ಅನಿಷ್ಟ ಪದ್ಧತಿಗಳು, ಪ್ರಯೋಜನಕ್ಕೆ ಬಾರದ ಅರಿವು ಕಾರ್ಯಕ್ರಮ

ದಾವಣಗೆರೆ: ಇಲ್ಲಿದೆ ಮುಟ್ಟಾದವರಿಗೊಂದು ಪ್ರತ್ಯೇಕ ಮನೆ!

ರಾಕೇಶ ಎಂ. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ರಾಜ್ಯ ಸರ್ಕಾರ ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ತಂದರೂ ದಾವಣಗೆರೆ ತಾಲ್ಲೂಕಿನ ದಿಂಡದಹಳ್ಳಿಯಲ್ಲಿ ಇನ್ನೂ ಅನಿಷ್ಟ ಪದ್ಧತಿಗಳು ಜೀವಂತವಾಗಿವೆ. ಮಹಿಳೆಯರು ಮುಟ್ಟಾದಾಗ ತಮ್ಮ ಕುಟುಂಬವನ್ನು ಬಿಟ್ಟು ಹೊರಗೆ ಇರಬೇಕು. ಈ ಗ್ರಾಮದಲ್ಲಿ ಅಂತಹವರಿಗೆಂದೇ ಪ್ರತ್ಯೇಕ ಚಿಕ್ಕ ಮನೆ ಇದೆ. ನಿತ್ಯ ಏಳೆಂಟು ಮಹಿಳೆಯರು ಅಲ್ಲಿ ಇರುತ್ತಾರೆ.

ಹೆರಿಗೆಯಾದಾಗ ಹಾಗೂ ಮುಟ್ಟಾದಾಗ ಗೊಲ್ಲ ಹೆಣ್ಣುಮಕ್ಕಳು ಐದು ದಿನ ಈ ಮನೆಯಲ್ಲಿ ಇರಬೇಕು ಎನ್ನುವುದು ನಂಬಿಕೆ. ವಿಪರ್ಯಾಸ ಎಂದರೆ, ವಿದ್ಯಾವಂತ ಯುವತಿಯರೂ ಈ ಪದ್ಧತಿಯನ್ನು ವಿರೋಧಿಸದೇ ಪಾಲನೆ ಮಾಡುತ್ತಿದ್ದಾರೆ.

ಈ ಗ್ರಾಮದಲ್ಲಿ ಕಾಡುಗೊಲ್ಲ ಸಮುದಾಯದ ಸುಮಾರು 150 ಮನೆಗಳಿವೆ. ಸುಮಾರು 1,500 ಮಂದಿ ಇದ್ದಾರೆ. ಆ ಪೈಕಿ ಸುಮಾರು 500 ಮಹಿಳೆಯರು ಇದ್ದಾರೆ.

‘ಜಿಲ್ಲಾ ಪಂಚಾಯಿತಿ, ಮಹಿಳಾ ಆಯೋಗ, ವಿವಿಧ ಸಂಘ ಸಂಸ್ಥೆಗಳು ಅನಿಷ್ಟ ಪದ್ಧತಿಗಳನ್ನು ತೊರೆಯುವಂತೆ ಮನವರಿಕೆ ಮಾಡಿದರೂ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಗ್ರಾಮದ ಸಮುದಾಯದ ಮುಖಂಡ ಬಸವರಾಜಪ್ಪ.

‘ದೊಡ್ಡವರೇ ಮಾಡುತ್ತಿದ್ದಾರೆ ಎಂದು ವಿದ್ಯಾವಂತ ಯುವತಿಯರೂ ಅದೇ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಎಷ್ಟು ಬುದ್ಧಿ ಹೇಳಿದರೂ ಕೇಳುತ್ತಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು. 

ಒಂದೇ ದಿನಕ್ಕೆ ಸೀಮಿತ: ಜಿಲ್ಲಾಡಳಿತ ಒಮ್ಮೆ ಈ ಗ್ರಾಮಕ್ಕೆ ಭೇಟಿ ನೀಡಿ ಇಂತಹ ಪದ್ಧತಿಗಳನ್ನು ಪಾಲನೆ ಮಾಡಬಾರದು ಎಂದು ತಿಳಿಹೇಳಿತ್ತು. ಆ ದಿನ ಮಾತ್ರ ಸಮುದಾಯದವರು ಹೇಳಿದ ಮಾತನ್ನು ಕೇಳಿದಂತೆ ವರ್ತಿಸಿದ್ದರು. ಮರುದಿನದಿಂದ ಮತ್ತೆ ಅದೇ ಚಾಳಿ ಮುಂದುವರಿಸಿದರು.

ಚಿಕ್ಕ ಮನೆ, ಬೆಳಕು ಮತ್ತು ಗಾಳಿ ಕೊರತೆ: ‘ಮುಟ್ಟಾದ ಮಹಿಳೆಯರು ಇರುವ ಮನೆಯ ಸ್ಥಿತಿಯೂ ಚೆನ್ನಾಗಿಲ್ಲ. ಬೆಳಕು ಮತ್ತು ಗಾಳಿ ಸರಿಯಾಗಿ ಬರುವುದಿಲ್ಲ. ಅಲ್ಲದೇ ಮುಖ್ಯರಸ್ತೆಯ ಪಕ್ಕದಲ್ಲಿಯೇ ಸ್ನಾನದ ಕೊಠಡಿ ಇದೆ. ಮೂರು ಕಡೆಯಿಂದ ಐದಾರು ಅಡಿ ಎತ್ತರದ ಗೋಡೆ ಕಟ್ಟಲಾಗಿದೆ. ದಿನವಿಡೀ ಆ ಮನೆಯಲ್ಲಿಯೇ ಇರುತ್ತಾರೆ. ಇಲ್ಲಿ ಪದೇ ಪದೇ ಹಾವು ಕಾಣಿಸಿಕೊಳ್ಳುತ್ತಿದ್ದರೂ ಅದೇ ಮನೆಯಲ್ಲಿ ಮಲಗುತ್ತಾರೆ’ ಎಂದರು ಗ್ರಾಮದ ಕೃಷ್ಣಪ್ಪ.

‘ಮೊದಲು ಬೇವಿನ ಮರದ ಕೆಳಗೆ ಇರುತ್ತಿದ್ದೆವು. ಏಳೆಂಟು ವರ್ಷಗಳ ಹಿಂದೆ ಈ ಮನೆ ಕಟ್ಟಿದ್ದಾರೆ. ಮುಟ್ಟಾದವರಿಗೆ ಅಗಸರ ಮಹಿಳೆ ಬಂದು ನೀರು ಹಾಕುವವರೆಗೆ ಅವರು ಮನೆಗೆ ಹೋಗುವಂತಿಲ್ಲ. ಮೊದಲು ಅಣ್ಣಾಪುರ ಗ್ರಾಮದಲ್ಲಿ ಇದ್ದ ಅಗಸರ ಮನೆಗೆ ಹೋಗಿ ನೀರು ಹಾಕಿಸಿಕೊಳ್ಳುತ್ತಿದ್ದೆವು’ ಎನ್ನುತ್ತಾರೆ ಇಲ್ಲಿನ ಹಿರಿಯ ಮಹಿಳೆಯರು.

ದಲಿತರಿಗೆ ಮನೆಯೊಳಗೆ ಪ್ರವೇಶವಿಲ್ಲ: ‘ದಿಂಡದಹಳ್ಳಿಯ ಗೊಲ್ಲ ಸಮುದಾಯದವರ ಮನೆಗಳಿಗೆ ಈಗಲೂ ದಲಿತರಿಗೆ ಪ್ರವೇಶವಿಲ್ಲ. ಅವರು ನಮ್ಮನ್ನು ನೋಡುವ ದೃಷ್ಟಿಯೇ ಬೇರೆ’ ಎಂದು ಗ್ರಾಮದ ಯುವಕರೊಬ್ಬರು ಬೇಸರ ವ್ಯಕ್ತಪಡಿಸುತ್ತಾರೆ.

ಹೆರಿಗೆಯಾದರೆ ಐದು ದಿನ ಹೊರಗೆ:  ಕಾಡುಗೊಲ್ಲ ಸಮುದಾಯದಲ್ಲಿ ಇರುವ ಮತ್ತೊಂದು ಅನಿಷ್ಟ ಪದ್ಧತಿ ಇದು. ‘ಮೊದಲೆಲ್ಲಾ ಹೆರಿಗೆಯಾದ ನಂತರ ಈ ಮನೆಯಲ್ಲಿ ಇರುತ್ತಿದ್ದರು. ಇತ್ತೀಚೆಗೆ ಆಸ್ಪತ್ರೆಗಳಲ್ಲಿ ಹೆರಿಗೆ ಆಗುತ್ತಿರುವುದರಿಂದ 3–4 ದಿನ ಅಲ್ಲಿಯೇ ಇರುತ್ತಾರೆ. ಐದನೇ ದಿನ ಈ ಮನೆಗೆ ಬಂದು ಅಗಸರ ಮಹಿಳೆ ನೀರು ಹಾಕಿದ ನಂತರ ಮೈಲಿಗೆ ಹೋಗುತ್ತದೆ ಎಂಬ ನಂಬಿಕೆ ಈಗಲೂ ಅವರಲ್ಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು