ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಕ್ಯಾತೆ ತೆಗೆದ ಎಂಇಎಸ್ | ಕನ್ನಡ ಹೋರಾಟಗಾರರ ವಿರುದ್ಧ ಅವಹೇಳನ

Last Updated 17 ಜೂನ್ 2019, 15:53 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ನಗರಪಾಲಿಕೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕ್ರಿಯಾಶೀಲವಾಗಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಸದಸ್ಯರು, ಕನ್ನಡ ಹೋರಾಟಗಾರರ ಕುರಿತು ಅವಹೇಳನ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಡುವ ಮೂಲಕ ಕ್ಯಾತೆ ಆರಂಭಿಸಿದ್ದಾರೆ.

ಕನ್ನಡ ಹೋರಾಟಗಾರರ ಗುಂಪೊಂದು ಭಾನುವಾರ ಆರ್‌ಪಿಡಿ ವೃತ್ತದ ಸಮೀಪ ಅಂಗಡಿಗಳಿಗೆ ತೆರಳಿ, ಫಲಕಗಳಲ್ಲಿ ಕನ್ನಡಕ್ಕೆ ಆದ್ಯತೆ ಕೊಡುವಂತೆ ಕೋರಿ ಗುಲಾಬಿ ಹೂ ನೀಡಿತ್ತು. ಮರಾಠಿ, ಇಂಗ್ಲಿಷ್‌ ಬದಲಿಗೆ ಕನ್ನಡಕ್ಕೆ ಅಗ್ರಸ್ಥಾನ ಕೊಡಬೇಕು ಎಂದು ತಿಳಿಸಿದ್ದರು. ಇದಕ್ಕೆ ಪ್ರತಿಯಾಗಿ ಎಂಇಎಸ್‌ನವರು, ಗಡಿ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದ್ದರೂ, ಕನ್ನಡ ಹೋರಾಟಗಾರರು ತಮ್ಮ ವಿರುದ್ಧ ದಬ್ಬಾಳಿಕೆ ನಡೆಸುತ್ತಿದ್ದಾರೆ ಎನ್ನುವ ವಿಡಿಯೊ ಮಾಡಿ ಹರಿಬಿಟ್ಟಿದ್ದಾರೆ. ಕನ್ನಡ ಅಭಿಯಾನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಎಂಇಎಸ್ ಮುಖಂಡರಾದ ಮನೋಹರ ಕಿಣೇಕರ, ಮಾಲೋಜಿ ಅಷ್ಟೇಕರ, ದೀಪಕ ದಳವಿ ಕೂಡ ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

‘ಕನ್ನಡ ಹೋರಾಟಗಾರರು ಫಲಕಗಳಲ್ಲಿ ಕನ್ನಡದಲ್ಲಷ್ಟೇ ಬರೆಸಬೇಕು ಎಂದು ಒತ್ತಾಯ ಹೇರುವ ಮೂಲಕ ನಗರದಲ್ಲಿ ಶಾಂತಿ ಕದಡಲು ಪ್ರಯತ್ನಿಸಿದ್ದಾರೆ. ಕಾನೂನು ಕೈಗೆತ್ತಿಕೊಂಡಿದ್ದಾರೆ. ಇದು ಅನೈತಿಕ ಹಾಗೂ ಖಂಡನೀಯವಾಗಿದೆ. ಮರಾಠಿ ಭಾಷಿಕರು ನಡೆಸುವ ವಾಣಿಜ್ಯ ಮಳಿಗೆಗಳಲ್ಲಿ ತ್ರಿಭಾಷಾ ಸೂತ್ರವನ್ನು ಅಳವಡಿಸಿಕೊಂಡಿದ್ದಾರೆ. ಇದನ್ನು ಎಲ್ಲರೂ ಗೌರವಿಸಬೇಕು. ಆದಾಗ್ಯೂ ತೊಂದರೆ ಕೊಡುತ್ತಿರುವುದನ್ನು ತಡೆಯಲು ಮಧ್ಯಪ್ರವೇಶಿಸಬೇಕು. ಇಲ್ಲವಾದಲ್ಲಿ ಮುಂದಿನ ಬೆಳವಣಿಗೆಗಳಿಗೆ ನೀವೇ ಜವಾಬ್ದಾರರಾಗಬೇಕಾಗುತ್ತದೆ’ ಎಂದು ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.

‘ಎಂಇಎಸ್‌ನವರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಫಲಕಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು ಎನ್ನುವುದು ನಿಯಮ. ಇದನ್ನು ಕನ್ನಡ ಹೋರಾಟಗಾರರು ಸೌಹಾರ್ದಯುತವಾಗಿ ತಿಳಿಸಿ ಬಂದಿದ್ದಾರೆ. ಆದರೆ, ದಬ್ಬಾಳಿಕೆ ನಡೆಸಿದ್ದಾರೆ ಎಂದು ಎಂಇಎಸ್‌ನವರು ಸಾಮಾಜಿಕ ಮಾಧ್ಯಮದಲ್ಲಿ ಹಬ್ಬಿಸಿದ್ದಾರೆ. ಕನ್ನಡ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಹೀಗಾಗಿ, ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜೂನ್ 18ರಂದು ನಾವು ಕೂಡ ಸೈಬರ್‌ ಕ್ರೈಂ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಿದ್ದೇವೆ’ ಎಂದು ಕರವೇ ಜಿಲ್ಲಾ ಯುವ ಘಟಕದ ಅಧ್ಯಕ್ಷ ದೀಪಕ ಗುಡಗೇನಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT