ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾತೆ ಹಂಚಿಕೆ ಸೋಮವಾರ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ

ನೂತನ ಸಚಿವರ ಖಾತೆ ಆಸೆಗೆ ಭಂಗ
Last Updated 9 ಫೆಬ್ರುವರಿ 2020, 5:15 IST
ಅಕ್ಷರ ಗಾತ್ರ

ಬೆಂಗಳೂರು: ‘ನೂತನ ಸಚಿವರ ಖಾತೆ ಹಂಚಿಕೆಯ ಪಟ್ಟಿ ಸಿದ್ಧವಾಗಿದೆ,ಸೋಮವಾರ ಖಾತೆ ಹಂಚಿಕೆ ಮಾಡುತ್ತೇನೆ, ಇದಕ್ಕಾಗಿ ದೆಹಲಿಗೆ ತೆರಳುವುದಿಲ್ಲ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಶನಿವಾರ ವಿಧಾನಸೌಧದ ಮುಂಭಾಗ ಬಿಬಿಎಂಪಿ ವತಿಯಿಂದ ಆರಂಭಿಸಲಾದ ಹಲವು ಸೌಲಭ್ಯಗಳಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎರಡನೇ ಶನಿವಾರ ರಜೆ ಇರುವ ಕಾರಣ ಇಂದು ಖಾತೆ ಹಂಚಿಕೆ ಮಾಡುತ್ತಿಲ್ಲ,ಸೋಮವಾರ ಮಾಡುತ್ತೇನೆ’ ಎಂದರು.

ಬಯಸಿದ್ದು ಸಿಗದು: ಇತ್ತೀಚೆಗೆ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿರುವ ವಲಸಿಗರು, ಬಿಜೆಪಿ ಸೇರುವ ಮುನ್ನ ಇಂತಹದೇ ಖಾತೆ ಬೇಕು ಎಂದು ಬೇಡಿಕೆ ಮಂಡಿಸಿದ್ದರು. ಮೈತ್ರಿ ಸರ್ಕಾರ ಬೀಳಿಸುವ ಹೊತ್ತಿನಲ್ಲಿ, ನಿರ್ದಿಷ್ಟ ಖಾತೆಯನ್ನೇ ನೀಡುವುದಾಗಿ ಬಿಜೆಪಿ ವರಿಷ್ಠರು ಭರವಸೆ ಕೊಟ್ಟಿದ್ದರು ಎಂದು ವಲಸಿಗರು ಹೇಳಿಕೊಂಡಿದ್ದರು. ಅಪೇಕ್ಷೆ ಪಟ್ಟಿರುವ ಖಾತೆ ಕೊಡಲಾಗದು ಎಂದು ಯಡಿಯೂರಪ್ಪ ಹೇಳಿರುವುದರಿಂದಾಗಿ, ಸಚಿವರು ಕೊಟ್ಟ ಖಾತೆ
ಯನ್ನು ವಹಿಸಿಕೊಳ್ಳಬೇಕಾದ ಸ್ಥಿತಿ ಎದುರಾಗಿದೆ. ರಮೇಶ ಜಾರಕಿಹೊಳಿ ಜಲಸಂಪನ್ಮೂಲ, ಎಸ್.ಟಿ.ಸೋಮಶೇಖರ್‌ ಬೆಂಗಳೂರು ಅಭಿವೃದ್ಧಿ, ಬೈರತಿ ಬಸವರಾಜ್ ನಗರಾಭಿವೃದ್ಧಿ, ಬಿ.ಸಿ. ಪಾಟೀಲ ಗೃಹ ಖಾತೆ ಮೇಲೆ ಕಣ್ಣಿಟ್ಟಿದ್ದರು.

ತಮ್ಮ ಸೋದರ ಬಾಲಚಂದ್ರ ಜಾರಕಿಹೊಳಿ ಜತೆ ಮುಖ್ಯಮಂತ್ರಿ ಭೇಟಿ ಮಾಡಿದ ರಮೇಶ, ‘ನಾನು ಗೆದ್ದರೆ ಜಲಸಂಪನ್ಮೂಲ ಸಚಿವನಾಗುತ್ತೇನೆ. ನೀರಾವರಿ ಅಭಿವೃದ್ಧಿ ಮಾಡಲು ಸಾಧ್ಯ ಎಂದು ಕ್ಷೇತ್ರದ ಮತದಾರರ ಮುಂದೆ ಹೇಳಿದ್ದೇನೆ. ನನಗೆ ಅದೇ ಖಾತೆ ಬೇಕು’ ಎಂದು ಬೇಡಿಕೆ ಮಂಡಿಸಿದರು.

ಪ್ರತ್ಯೇಕವಾಗಿ ತೆರಳಿದ್ದ ಬೈರತಿ ಹಾಗೂ ಸೋಮಶೇಖರ್‌ ಕೂಡ ನಿರ್ದಿಷ್ಟ ಖಾತೆಗಳೇ ಬೇಕು ಎಂದು ಪಟ್ಟು ಹಿಡಿದಿದ್ದರು.

‘ಉತ್ತಮ ಹಾಗೂ ಜನಸ್ನೇಹಿ ಆಡಳಿತ ನೀಡಬೇಕಾಗಿರುವುದರಿಂದ ಬಯಸಿದ ಖಾತೆಗಳನ್ನು ಈ ಹಂತದಲ್ಲಿ ನಿಮಗೆ ಕೊಡಲಾಗುವುದಿಲ್ಲ. ನಿಮಗೆ ಕೊಟ್ಟಿದ್ದ ಎಲ್ಲ ಭರವಸೆಗಳನ್ನು ಸದ್ಯಕ್ಕೆ ಈಡೇರಿಸುವುದು ಕಷ್ಟ. ವರಿಷ್ಠರ ಸೂಚನೆ ಅನುಸಾರ ಖಾತೆ ಹಂಚಿಕೆ ಮಾಡುತ್ತೇನೆ. ಸದ್ಯಕ್ಕೆ ಸಹಕಾರ ಕೊಡಿ’ ಎಂದು ಯಡಿಯೂರಪ್ಪ ಅವರು ಸಚಿವರಿಗೆ ಮನವರಿಕೆ ಮಾಡಿದ್ದಾರೆ. ಅದನ್ನು ಸಚಿವರೂ ಒಪ್ಪಿಕೊಂಡಿದ್ದಾರೆ’ ಎಂದು ಪಕ್ಷದ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT