ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ ಸಂಪುಟದ ಮಂತ್ರಿಗಳ ಪರಿಚಯ

Last Updated 21 ಆಗಸ್ಟ್ 2019, 9:06 IST
ಅಕ್ಷರ ಗಾತ್ರ

ಬಿ.ಎಸ್‌ ಯಡಿಯೂರಪ್ಪ ಅವರ ನೇತೃತ್ವದಲ್ಲಿ ರಚನೆಯಾಗಿರುವ ಬಿಜೆಪಿ ಸರ್ಕಾರದ ಸಚಿವಸಂಪುಟಹೆಚ್ಚು ಕಡಿಮೆ ತಿಂಗಳ ನಂತರ ರಚನೆಯಾಗಿದೆ. ಮಂಗಳವಾರ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ 17 ಮಂದಿ ಮಂತ್ರಿಗಳಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಈ ಎಲ್ಲ ಸಚಿವರ ಪರಿಚಯ, ಮಾಹಿತಿ ಇಲ್ಲಿದೆ.

ಗೋವಿಂದ ಕಾರಜೋಳ
ವಯಸ್ಸು: 69
ಜಾತಿ : ದಲಿತ
ಕ್ಷೇತ್ರ : ಮುಧೋಳ
ವಿದ್ಯಾಭ್ಯಾಸ : ಡಿಪ್ಲೋಮಾ ಇನ್‌ಮೆಟಿರೀಯಲ್
ಮೆನೇಜ್‍ಮೆಂಟ್



ಬಿಜೆಪಿಯ ಪ್ರಬಲ ದಲಿತ ಮುಖಂಡರೆನಿಸಿಕೊಂಡಿರುವ ಗೋವಿಂದ ಕಾರಜೋಳ ಅವರು 1994ರಲ್ಲಿ ಮೊದಲ ಬಾರಿಗೆ ಜನತಾ ಪರಿವಾರದ ಮೂಲಕ ವಿಧಾನಸಭೆ ಪ್ರವೇಶಿಸಿದರು. 1999ರಲ್ಲಿ ಜೆಡಿಯುನಿಂದ ಸ್ಪರ್ಧಿಸಿದ್ದ ಅವರು ಅಲ್ಪ ಅಂತರದಲ್ಲಿ ಸೋಲುಂಡಿದ್ದರು. ನಂತರ ಬಿಜೆಪಿ ಸೇರಿದ ಅವರು 2004ರಿಂದಲೂ ಮುಧೋಳ ಕ್ಷೇತ್ರದಿಂದ ಸತತವಾಗಿ ಆಯ್ಕೆಯಾಗುತ್ತಿದ್ದಾರೆ. ಜೆಡಿಎಸ್‌–ಬಿಜೆಪಿ ಸರ್ಕಾರದಲ್ಲಿ, 2008ರ ಬಿಜೆಪಿ ಸರ್ಕಾರದಲ್ಲಿ ಕಾರಜೋಳ ಅವರು ಮಂತ್ರಿ ಸ್ಥಾನ ನಿಭಾಯಿಸಿದ್ದರು.

***
ಡಾ. ಅಶ್ವತ್ಥ ನಾರಾಯಣ್​ ಸಿ.ಎನ್
ವಯಸ್ಸು: 50
ಜಾತಿ : ಒಕ್ಕಲಿಗ

ಕ್ಷೇತ್ರ : ಮಲ್ಲೇಶ್ವರಂ
ವಿದ್ಯಾಭ್ಯಾಸ : ಎಂಬಿಬಿಎಸ್

ಮಲ್ಲೇಶ್ವರಂ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿರುವ ಡಾ. ಅಶ್ವತ್ಥ್ ನಾರಾಯಣ ಇದೇ ಮೊದಲ ಬಾರಿಗೆ ಸಚಿವರಾಗುತ್ತಿದ್ದಾರೆ. 2004ರಲ್ಲಿ ಮಲ್ಲೇಶ್ವರ ವಿಧಾನಸಭೆಗೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಅವರು ಮಾಜಿ ಸಚಿವ ಸೀತಾರಾಮ್‌ ವಿರುದ್ಧ ಪರಾಭವಗೊಂಡಿದ್ದರು. 2008ರಲ್ಲಿ ಆಯ್ಕೆಯಾಗಿದ್ದ ಅವರು ನಂತರ ಚುನಾವಣೆಗಳಲ್ಲಿ ಸತತ ಗೆಲುವು ದಾಖಲಿಸಿದ್ದಾರೆ. ಸದ್ಯ ಬಿಜೆಪಿ ಹೈಕಮಾಂಡ್‌ ಜತೆಗೆ ಅಶ್ವತ್ಥ ನಾರಾಯಣ ಉತ್ತಮ ಒಡನಾಟ ಹೊಂದಿದ್ದಾರೆ. ಮೈತ್ರಿ ಸರ್ಕಾರವನ್ನು ಉರುಳಿಸಿ ಬಿಜೆಪಿ ಸರ್ಕಾರ ರಚನೆಯಾಗುವಲ್ಲಿ ಅವರ ಪತ್ರ ಮಹತ್ವದ್ದು ಎಂದು ಹೇಳಲಾಗಿದೆ.

***

ಲಕ್ಷ್ಮಣ ಸಂಗಪ್ಪ ಸವದಿ
ವಯಸ್ಸು: 59
ಕ್ಷೇತ್ರ: ಅಥಣಿ
(2018ರ ಚುನಾವಣೆಯಲ್ಲಿ ಸೋಲು)
ವಿದ್ಯಾರ್ಹತೆ: ದ್ವಿತೀಯ ಪಿ.ಯು.ಸಿ
ಜಾತಿ: ಲಿಂಗಾಯತ– ಗಾಣಿಗ

ಆರಂಭದಲ್ಲಿ ಜನತಾ ಪರಿವಾರದ ಜೊತೆ ಗುರುತಿಸಿಕೊಂಡಿದ್ದರು. 1999ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಪರಾಭವಗೊಂಡಿದ್ದರು. 2004ರಲ್ಲಿ ಬಿಜೆಪಿ ಸೇರಿ ಅಲ್ಲಿಂದ ಸತತ ಮೂರು ಚುನಾವಣೆಗಳಲ್ಲಿ ಗೆಲುವು ಸಾಧಿಸುವ ಮೂಲಕ ‘ಹ್ಯಾಟ್ರಿಕ್‌’ ಬಾರಿಸಿದರು. ಬಿ.ಎಸ್‌.ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಸಹಕಾರ ಸಚಿವರಾಗಿದ್ದರು. ವಿಧಾನಸಭೆಯಲ್ಲಿ ಕಲಾಪ ನಡೆಯುತ್ತಿದ್ದ ವೇಳೆ ತಮ್ಮ ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರ ನೋಡಿದ್ದರಿಂದ ಸಚಿವ ಸ್ಥಾನ ಕಳೆದುಕೊಂಡಿದ್ದರು.
ಕಳೆದ ಚುನಾವಣೆಯಲ್ಲಿ ಪರಾಭವಗೊಂಡರು. ನಂತರ ರಾಜ್ಯ ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಆಪ್ತ ಬಳಗದ ಜೊತೆ ಗುರುತಿಸಿಕೊಂಡಿದ್ದಾರೆ.
***
ಕೆ.ಎಸ್‌ ಈಶ್ವರಪ್ಪ
ವಯಸ್ಸು: 70
ಜಾತಿ : ಕುರುಬ
ಕ್ಷೇತ್ರ: ಶಿವಮೊಗ್ಗ ನಗರ
ವಿದ್ಯಾಭ್ಯಾಸ: ವಾಣಿಜ್ಯ ವಿಷಯದಲ್ಲಿ ಪದವಿ

1982ರಲ್ಲಿ ಶಿವಮೊಗ್ಗ ನಗರ ಬಿಜೆಪಿ ಅಧ್ಯಕ್ಷರಾದರು. 1989ರಲ್ಲಿ ಮೊದಲ ಬಾರಿಗೆ ಚುನಾವಣೆ ಎದುರಿಸಿದ ಈಶ್ವರಪ್ಪ ಅವರು ಆರೋಗ್ಯ ಸಚಿವರಾಗಿದ್ದ ಕೆ.ಎಚ್.ಶ್ರೀನಿವಾಸ್ ಅವರನ್ನು ಸೋಲಿಸಿದರು. ಗೆಲುವಿನ ಬಳಿಕ ನಾಲ್ಕು ಬಾರಿ ಶಿವಮೊಗ್ಗ ಕ್ಷೇತ್ರದಿಂದ ಆಯ್ಕೆಯಾದರು. 1999ರಲ್ಲಿ ಸೋಲು ಅನುಭವಿಸಿದರೂ 1992ರಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದರು. ಕೇಂದ್ರದಲ್ಲಿ ಎನ್‌ಡಿಎ ಮೈತ್ರಿಕೂಟದ ಆಡಳಿತವಿದ್ದ ವೇಳೆ ಕೇಂದ್ರ ರೇಷ್ಮೆಮಂಡಳಿಯ ಅಧ್ಯಕ್ಷರಾಗಿ ನೇಮಕವಾದರು. ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಇಂಧನ ಸಚಿವರಾಗಿ ಕಾರ್ಯ ನಿರ್ವಹಿಸಿದರು.
2010ರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು ಮತ್ತು ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಈಶ್ವರಪ್ಪ ಅವರು 2012ರಲ್ಲಿ ಉಪ ಮುಖ್ಯಮಂತ್ರಿಯಾದರು. ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ. 2013ರ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಕಾಂಗ್ರೆಸ್‌ನ ಕೆ.ಬಿ.ಪ್ರಸನ್ನ ಕುಮಾರ್ ಎದುರು ಸೋಲನ್ನನುಭವಿಸಿದರು. ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಅವರನ್ನು ನಾಮ ನಿರ್ದೇಶನ ಮಾಡಲಾಯಿತು.
***
ಆರ್ ಅಶೋಕ್
ವಯಸ್ಸು: 62
ಜಾತಿ : ಒಕ್ಕಲಿಗ
ಕ್ಷೇತ್ರ: ಪದ್ಮನಾಭನಗರ
ವಿದ್ಯಾಭ್ಯಾಸ: ವಿಜ್ಞಾನ ವಿಷಯದಲ್ಲಿ ಪದವಿ

1997ರಲ್ಲಿ ಉತ್ತರಹಳ್ಳಿ ಕ್ಷೇತ್ರಕ್ಕೆ ಎದುರಾದ ಉಪ ಚುನಾವಣೆ ಗೆದ್ದು ವಿಧಾನಸಭೆ ಪ್ರವೇಶಿಸಿದ ಆರ್‌. ಆಶೋಕ್‌ ಅವರು ಈ ವರೆಗೆ ಸತತ ಆರು ಚುನಾವಣೆಗಳಲ್ಲಿ ಗೆದ್ದಿದ್ದಾರೆ. 2004ರಲ್ಲಿ ಕುಮಾರಸ್ವಾಮಿ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಅಶೋಕ್‌ ಬಿಜೆಪಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಗೃಹ ಮತ್ತು ಸಾರಿಗೆ ಖಾತೆಗಳನ್ನು ನಿರ್ವಹಿಸಿದ್ದಾರೆ. 2008ರಲ್ಲಿ ಕ್ಷೇತ್ರ ಮರುವಿಂಗಡಣೆ ನಂತರ ಉತ್ತರಹಳ್ಳಿ ವಿಧಾನಸಭೆ ಕ್ಷೇತ್ರ ಅಸ್ತಿತ್ವ ಕಳೆದುಕೊಂಡಿತ್ತು. ಆಗ ಅದೇ ಕ್ಷೇತ್ರ ವ್ಯಾಪ್ತಿಗೆ ಬರುತ್ತಿದ್ದ ಪದ್ಮನಾಭ ನಗರ ಕ್ಷೇತ್ರವನ್ನು ಆಶೋಕ ಅವರು ಆಯ್ಕೆ ಮಾಡಿಕೊಂಡಿದ್ದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಭಾವಿ ಎನಿಸಿಕೊಂಡಿರುವ ಅವರು, ಬಿಜೆಪಿಯ ಪ್ರಮುಖ ಒಕ್ಕಲಿಗ ನಾಯಕರು.

***

ಜಗದೀಶ್‌ ಶೆಟ್ಟರ್‌
ವಯಸ್ಸು: 64
ಜಾತಿ: ಲಿಂಗಾಯತ
ಕ್ಷೇತ್ರ: ಹುಬ್ಬಳ್ಳಿ–ಧಾರವಾಡ ಕೇಂದ್ರ
ವಿದ್ಯಾಭ್ಯಾಸ: ಎಲ್‌ಎಲ್‌ಬಿ

ಹತ್ತು ತಿಂಗಳ ಕಾಲ ಕರ್ನಾಟಕದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿರುವ ಜಗದೀಶ್‌ ಶೆಟ್ಟರ್‌ ಅವರು ಈ ಬಾರಿ ಯಡಿಯೂರಪ್ಪ ಸರ್ಕಾರದಲ್ಲಿ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಶೆಟ್ಟರ್‌ 1990ರಲ್ಲಿ ಹುಬ್ಬಳ್ಳಿ ಗ್ರಾಮೀಣ ಬಿಜೆಪಿ ಘಟಕದ ಅಧ್ಯಕ್ಷರಾಗಿ ನೇಮಕವಾದರು. ಬಳಿಕ 94ರಲ್ಲಿ ಧಾರವಾಡ ಜಿಲ್ಲಾಘಟಕದ ಅಧ್ಯಕ್ಷರಾದರು. ಅದೇ ವರ್ಷ ಮೊದಲ ಸಲ ವಿಧಾನಸಭೆಗೆ ಆಯ್ಕೆಯಾದ ಶೆಟ್ಟರ್‌ ಇದುವರೆಗೆ ಸತತ ಆರನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ. 2005ರಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರರಾದರು. 2006ರಲ್ಲಿ ಬಿಜೆಪಿ–ಜೆಡಿಎಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರ ರಚನೆಯಾದಾಗ ಎಚ್.ಡಿ.ಕುಮಾರಸ್ವಾಮಿ ಸಂಪುಟದಲ್ಲಿ ಕಂದಾಯ ಇಲಾಖೆಯ ಜವಾಬ್ದಾರಿ ವಹಿಸಿದ್ದರು. 2008-09ರ ಅವಧಿಯಲ್ಲಿ ವಿಧಾನಸಭೆ ಸ್ಪೀಕರ್‌ ಅಗಿಯೂ ಕಾರ್ಯ ನಿರ್ವಹಿಸಿದ್ದ ಶೆಟ್ಟರ್‌ಗೆ ರಾಜ್ಯದ 21ನೇ ಮುಖ್ಯಮಂತ್ರಿಯಾಗುವ ಅದೃಷ್ಟ ಒಲಿದಿತ್ತು. 1999ರಲ್ಲಿ ಎಸ್‌.ಎಂ. ಕೃಷ್ಣ ಮುಖ್ಯಮಂತ್ರಿಯಾಗದ್ದ ಸಂದರ್ಭ ವಿರೋಧ ಪಕ್ಷದ ನಾಯಕನಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದ ಶೆಟ್ಟರ್‌ ಅವರನ್ನು, 2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೇರಿದಾಗಲೂ ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು.

***

ಬಿ. ಶ್ರೀರಾಮುಲು
ವಯಸ್ಸು: 48
ಜಾತಿ: ವಾಲ್ಮೀಕಿ(ಎಸ್‌ಟಿ)
ಕ್ಷೇತ್ರ: ಮೊಳಕಾಲ್ಮೂರು
ವಿದ್ಯಾಭ್ಯಾಸ: ಬಿಎ

ಬಿ. ಶ್ರೀರಾಮುಲು ಅವರು ಬಳ್ಳಾರಿ ಮಟ್ಟಿಗೆ ಪ್ರಭಾವಿ ನಾಯಕ. 1995ರಲ್ಲಿ ಅವರು ಮೊಟ್ಟಮೊದಲ ಬಾರಿಗೆ ನಗರಸಭೆಗೆ ಸ್ಪರ್ಧಿಸಿ ಗೆದ್ದಿದ್ದರು. 1999ರಲ್ಲಿ ಮೊದಲ ಬಾರಿಗೆ ಬಳ್ಳಾರಿ ವಿಧಾನಸಭೆ ಕ್ಷೇತ್ರದಿಂದ ಚುನಾವಣೆಗೆ ನಿಂತು ಸೋತಿದ್ದರು. 2004ರಿಂದ ಸತತವಾಗಿ ವಿಧಾನಸಭೆಗೆ ಪ್ರವೇಶ ಪಡೆಯುತ್ತಿದ್ದಾರೆ. 2004ರಲ್ಲಿ ಬಳ್ಳಾರಿ ಕ್ಷೇತ್ರದಲ್ಲಿ ಶ್ರೀರಾಮುಲು ಅವರಿಗೆ ಸಿಕ್ಕ ಗೆಲುವು ಜಿಲ್ಲೆಯಲ್ಲಿ ಬಿಜೆಪಿಗೂ ದೊಡ್ಡ ಮುನ್ನಡೆ ನೀಡಿತ್ತು. ಕ್ಷೇತ್ರ ಪುನರ್‌ವಿಂಗಡಣೆ ನಂತರ ಅಸ್ತಿತ್ವಕ್ಕೆ ಬಂದ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ 2008ರ ಚುನಾವಣೆ, 2011ರ ಉಪಚುನಾವಣೆ ಮತ್ತು 2013ರ ಚುನಾವಣೆಯಲ್ಲಿ ಸತತ ಗೆಲುವು ಸಾಧಿಸಿದರು. 2018ರಲ್ಲಿ ಚಿತ್ರದುರ್ಗದ ಮೊಳಕಾಲ್ಮೂರು ಕ್ಷೇತ್ರದಿಂದ ಅವರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿಯ ಪ್ರಬಲ ವಾಲ್ಮೀಕಿ ನಾಯಕರಾದ ಶ್ರೀರಾಮುಲು ಕಳೆದ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಿದ್ದರು.

2006ರ ಎಚ್‌.ಡಿ.ಕುಮಾರಸ್ವಾಮಿ ಅವರ ಸಂಪುಟದಲ್ಲಿ ಶ್ರೀರಾಮುಲು ಪ್ರವಾಸೋದ್ಯಮ ಸಚಿವರಾಗಿದ್ದರು. ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ನಂತರ ಗದಗ ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. ಎರಡನೇ ಬಾರಿಗೆ, 2008ರಲ್ಲಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ರಚನೆಯಾದ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದರು.

ಅಕ್ರಮ ಗಣಿಗಾರಿಕೆಯ ಆರೋಪಿ ಜಿ.ಜನಾರ್ದನರೆಡ್ಡಿ ಅವರೊಂದಿಗಿನ ಆಪ್ತನಂಟಿನ ಕಾರಣಕ್ಕೇ ಪಕ್ಷ ಮತ್ತು ಸರ್ಕಾರದಲ್ಲಿ ಪ್ರಾಮುಖ್ಯ ದೊರಕಲಿಲ್ಲ ಎಂದು ಮುನಿಸಿಕೊಂಡು 2011ರಲ್ಲಿ ಬಿಜೆಪಿ ತೊರೆದಿದ್ದ ಅವರು ಬಿಎಸ್‌ಆರ್‌(ಬಡವರ ಶ್ರಮಿಕರ ರೈತರ) ಕಾಂಗ್ರೆಸ್‌ ಪಕ್ಷವನ್ನು ಸ್ಥಾಪಿಸಿ ಚುನಾವಣೆಗೆ ಸ್ಪರ್ಧಿಸಿ ಬಿಜೆಪಿಯನ್ನೇ ಮಣಿಸಿದ್ದರು. 2014ರಲ್ಲಿ ಮುನಿಸು ಮರೆತು ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿದ್ದರು. ನಂತರ ಬಳ್ಳಾರಿ ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದರು.

***

ಎಸ್‌ ಸುರೇಶ್‌ ಕುಮಾರ್‌
ವಯಸ್ಸು: 63
ಜಾತಿ: ಬ್ರಾಹ್ಮಣ
ಕ್ಷೇತ್ರ: ರಾಜಾಜಿನಗರ
ವಿದ್ಯಾರ್ಹತೆ: ಎಲ್‌ಎಲ್‌ಬಿ

ರಾಜಾಜಿನಗರ ವಿಧಾನಸಭಾ ಕ್ಷೇತ್ರದಿಂದ 5 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸುರೇಶ್ ಕುಮಾರ್ ಅವರು 2008ರಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದರು. ಕಿರಿಯ ವಯಸ್ಸಿನಲ್ಲಿಯೇ ಆರ್ ಎಸ್ ಎಸ್ ನಲ್ಲಿ ಸಕ್ರಿಯರಾಗಿದ್ದ ಸುರೇಶ್ ಕುಮಾರ್ ವಿಜ್ಞಾನ ಪದವೀಧರರು. ಎರಡು ಬಾರಿ ಬಿಬಿಎಂಪಿ ಕಾರ್ಪೋರೇಟರ್ ಆಗಿದ್ದರು. 2008ರಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದರು.

***

ವಿ.ಸೋಮಣ್ಣ
ವಯಸ್ಸು: 68
ಜಾತಿ: ಲಿಂಗಾಯತ

ಕ್ಷೇತ್ರ: ಗೋವಿಂದರಾಜನಗರ
ವಿದ್ಯಾರ್ಹತೆ: ಬಿಎ

ಮೂಲತಃ ಜನತಾ ಪರಿವಾರದವರಾದ ಸೋಮಣ್ಣ, 1994ರಿಂದ 2004ರ ವರೆಗೆ ಬಿನ್ನಿಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಸತತ ಮೂರು ಬಾರಿ ಆಯ್ಕೆಯಾಗಿದ್ದರು. 2008ರಲ್ಲಿ ಕ್ಷೇತ್ರ ಮರುವಿಂಗಡಣೆ ನಂತರ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದರು. 2009ರಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆಗೊಂಡು ಸಚಿವರಾದರು. ರಾಜೀನಾಮೆ ನಂತರ ಗೋವಿಂದರಾಜನಗರ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರಿಯಾ ಕೃಷ್ಣ ಅವರ ಎದುರು ಸಚಿವರಾಗಿದ್ದುಕೊಂಡೇ ಸೋಲುಂಡು ಮಂತ್ರಿಗಿರಿಗೆ ರಾಜೀನಾಮೆ ನೀಡಿದ್ದರು. ನಂತರ ಪರಿಷತ್ ಸದ್ಯರಾಗಿ ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾದರು. 2013ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಪ್ರಿಯಾಕೃಷ್ಣ ವಿರುದ್ಧ ಮತ್ತೊಮ್ಮೆ ವಿರುದ್ಧ ಸೋಲುಂಡಿದ್ದರು. 2018ರ ಚುನಾವಣೆಯಲ್ಲಿ ಗೆದ್ದು ಬಂದಿದ್ದಾರೆ.

***

ಸಿ.ಟಿ. ರವಿ
ವಯಸ್ಸು: 52
ಜಾತಿ: ಒಕ್ಕಲಿಗ

ಕ್ಷೇತ್ರ: ಚಿಕ್ಕಮಗಳೂರು
ವಿದ್ಯಾರ್ಹತೆ: ಸ್ನಾತಕೋತ್ತರ ಪದವಿ (ಮುಕ್ತ ವಿವಿ)‌

ಮೊದಲ ಸಲ ವಿಧಾನಸಭೆಗೆ ಸ್ಪರ್ಧಿಸಿದ್ದು 1994ರಲ್ಲಿ. ಕಾಂಗ್ರೆಸ್‌ ಅಭ್ಯರ್ಥಿ ಸಾಗಿರ್ ಅಹ್ಮದ್‌ ಎದುರು ಕೇವಲ 982 ಮತಗಳ ಅಲ್ಪ ಅಂತರದಿಂದ ಸೋಲುಕಂಡ ಅವರು, ನಂತರದ ನಾಲ್ಕು ಚುನಾವಣೆಗಳಲ್ಲಿ ಸತತ ಗೆಲುವುಗಳನ್ನು ಕಂಡವರು. ಮೊದಲ ಸೋಲಿನ ಬಳಿಕ ಜಿಲ್ಲೆಯಾದ್ಯಾಂತ ಪ್ರವಾಸ ಕೈಗೊಂಡು ಬಾಬಾ ಬುಡನ್‌ಗಿರಿ ದತ್ತ ಪೀಠ ವಿಚಾರವಾಗಿ ಹೋರಾಟ ಸಂಘಟಿಸಿದ್ದು, ರವಿ ಅವರು ರಾಜಕೀಯ ಜೀವನಕ್ಕೆ ತಿರುವು ನೀಡಿತು. 2004ರ ಚುನಾವಣೆಯಲ್ಲಿ ರವಿ ಸಾಗಿರ್‌ ವಿರುದ್ಧ ಬರೋಬ್ಬರಿ 24,893 ಮತಗಳ ಅಂತರದ ಗೆಲವು ಸಾಧಿಸಿದರು. ಅದಾದ ಬಳಿಕ ರವಿ ತಿರುಗಿ ನೋಡಿದ್ದೇ ಇಲ್ಲ. ತಾಲ್ಲೂಕು ಮಾತ್ರವಲ್ಲದೆ ಜಿಲ್ಲೆಯಲ್ಲಿಯೂ ಬಿಜೆಪಿಗೆ ನೆಲೆ ಕಂಡುಕೊಳ್ಳಲು ಶ್ರಮಿಸಿದರು.

***

ಬಸವರಾಜ ಬೊಮ್ಮಾಯಿ
ವಯಸ್ಸು: 59 ವರ್ಷ
ಜಾತಿ: ಸಾದರ ಲಿಂಗಾಯತ

ಕ್ಷೇತ್ರ: ಶಿಗ್ಗಾವಿ–ಸವಣೂರು
ವಿದ್ಯಾರ್ಹತೆ: ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ

ಬಸವರಾಜ ಬೊಮ್ಮಾಯಿ ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್‌.ಆರ್.ಬೊಮ್ಮಾಯಿ ಅವರ ಮಗ. 1995ರಲ್ಲಿ ಜನತಾದಳದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ. 1996–1997ರಲ್ಲಿ ಮುಖ್ಯಮಂತ್ರಿ ಆಗಿದ್ದ ಜೆ.ಎಚ್‌ ಪಟೇಲ್‌ ಅವರಿಗೆ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ. 1997–2003ರಲ್ಲಿ ವಿಧಾನಪರಿಷತ್‌ಗೆ ಸ್ಥಳೀಯ ಸಂಸ್ಥೆಗಳಿಂದ ‌(ಧಾರವಾಡ–ಹಾವೇರಿ–ಗದಗ) ನಡೆದ ಚುನಾವಣೆಯಲ್ಲಿ ಸತತ ಎರಡು ಬಾರಿ ಆಯ್ಕೆ. 2008, 2013 ಹಾಗೂ 2018ರಲ್ಲಿ ಶಾಸಕರಾಗಿ ಆಯ್ಕೆ. ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ ಹಾಗೂ ಜಗದೀಶ ಶೆಟ್ಟರ್ ಅವರ ಸಂಪುಟದಲ್ಲಿ ಜಲಸಂಪನ್ಮೂಲ ಖಾತೆ ನಿರ್ವಹಣೆ.

***

ಕೋಟ ಶ್ರೀನಿವಾಸ ಪೂಜಾರಿ
ವಯಸ್ಸು: 60
ಜಾತಿ: ಬಿಲ್ಲವ
ಕ್ಷೇತ್ರ: ಉಡುಪಿ ಜಿಲ್ಲೆಯ ಕೋಟ, ವಿಧಾನ ಪರಿಷತ್‌ ಸದಸ್ಯ
ವಿದ್ಯಾಭ್ಯಾಸ: 7ನೇ ತರಗತಿ

ಕರಾವಳಿಯ ಪ್ರಬಲ ಹಾಗೂ ಹಿಂದುಳಿದ ಸಮುದಾಯವಾದ ಬಿಲ್ಲವ ಸಮಾಜಕ್ಕೆ ಸೇರಿದವರು ಕೋಟ ಶ್ರೀನಿವಾಸ ಪೂಜಾರಿ. ಉಡುಪಿ ಜಿಲ್ಲೆಯ ಕೋಟದ ಬಡ ಕುಟುಂಬದಲ್ಲಿ ಜನಿಸಿದ ಕೋಟ ರಾಜಕೀಯಕ್ಕೆ ಬರುವ ಮುನ್ನ ಛಾಯಾಗ್ರಹಕರಾಗಿದ್ದವರು. ಸಂಘ ಪರಿವಾರಕ್ಕೆ ಅತೀವ ನಿಷ್ಠೆ ಹೊಂದಿದ್ದಾರೆ ಗ್ರಾಮ ಪಂಚಾಯತ್ ಸದಸ್ಯರಾಗಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷ, ತಾಲ್ಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದರು. ಬ್ರಹ್ಮಾವರ ವಿಧಾನಸಭಾ ಕ್ಷೇತ್ರದಿಂದ 2 ಬಾರಿ ಸ್ಪರ್ಧಿಸಿ ಕಡಿಮೆ ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ, ಪ್ರಧಾನ ಕಾರ್ಯದರ್ಶಿಗಳಾಗಿ, ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರಾಗಿ ಹಾಗೂ ಈಚೆಗೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿ ಜವಾಬ್ದಾರಿ ನಿಭಾಯಿಸಿದ್ದಾರೆ. ಮೂರು ಬಾರಿ ವಿಧಾನಪರಿಷತ್‌ ಸದಸ್ಯರಾಗಿ ಆಯ್ಕೆಯಾಗಿರುವ ಶ್ರೀನಿವಾಸ್‌, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕನಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಈ ಹಿಂದೆ ಮುಜರಾಯಿ, ಬಂದರು ಹಾಗೂ ಒಳನಾಡು ಖಾತೆಯನ್ನೂ ನಿಭಾಯಿಸಿದ ಅನುಭವವನ್ನು ಹೊಂದಿದ್ದಾರೆ.

***

ಜೆ.ಸಿ ಮಾಧುಸ್ವಾಮಿ
ವಯಸ್ಸು: 65
ಜಾತಿ: ಲಿಂಗಾಯತ
ಕ್ಷೇತ್ರ: ಚಿಕ್ಕನಾಯಕನಹಳ್ಳಿ (ತುಮಕೂರು)
ವಿದ್ಯಾಭ್ಯಾಸ: ಎಲ್‌ಎಲ್‌ಬಿ

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ವಿಧಾನಸಭೆ ಕ್ಷೇತ್ರದಿಂದ 1989ರಿಂದ ಈ ವರೆಗೆ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಜೆ.ಸಿ ಮಾಧುಸ್ವಾಮಿ ಮೂಲತಃ ಜನತಾ ಪರಿವಾರದವರು. 1989ರಲ್ಲಿ ಜನತಾದಳದಿಂದ ಮೊದಲಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದ ಅವರು 1994ರ ಚುನಾವಣೆಯಲ್ಲಿ ಸೋತರು. 1997ರಲ್ಲಿ ಎದುರಾದ ಉಪಚುನಾವಣೆಯಲ್ಲಿ ಜೆಡಿಯುನಿಂದ ಸ್ಪರ್ಧಿಸಿ ಗೆದ್ದಿದ್ದರು. ಸೇರಿ ಚುನಾವಣೆ ಎದುರಿಸಿದರಾದರೂ ಆಗಲೂ ಸೋತಿದ್ದರು. 2004ರಲ್ಲಿ ಜೆಡಿಯುನಿಂದ ಆಯ್ಕೆಯಾಗಿದ್ದರು. 2008ರ ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡಿದ್ದರು. 2013ರಲ್ಲಿ ಯಡಿಯೂರಪ್ಪ ಅವರ ನೇತೃತ್ವದ ಕೆಜೆಪಿ ಮೂಲಕ ಅವರು ಸ್ಪರ್ಧಿಸಿದರೂ ಆ ಚುನಾವಣೆಯಲ್ಲೂ ಸೋಲು ಕಂಡಿದ್ದರು. 2018ರಲ್ಲಿ ಬಿಜೆಪಿ ಸೇರಿ ಚುನಾವಣೆ ಎದುರಿಸಿದ ಅವರು ಗೆಲುವು ಸಾಧಿಸಿದ್ದರು. ಸಮಾಜವಾದಿ ನೆಲೆಗಟ್ಟಿನಲ್ಲಿ ರಾಜಕಾರಣ ಮಾಡಿಕೊಂಡು ಬಂದಿದ್ದ ಮಾಧುಸ್ವಾಮಿ, ಉತ್ತಮ ವಾಗ್ಮಿ, ಸಂಸದೀಯ ಪಟು. ತುಮಕೂರು ಭಾಗದಲ್ಲಿ ಅವರು ಪ್ರಬಲ ಲಿಂಗಾಯತ ನಾಯಕರು.

***

ಚಂದ್ರಕಾಂತಗೌಡ ಚನ್ನಪ್ಪಗೌಡ ಪಾಟೀಲ (ಸಿಸಿ ಪಾಟೀಲ್‌)
ವಯಸ್ಸು: 60
ಜಾತಿ: ಲಿಂಗಾಯತ ಪಂಚಮಸಾಲಿ
ಕ್ಷೇತ್ರ: ನರಗುಂದ ವಿಧಾನಸಭಾ
ವಿದ್ಯಾರ್ಹತೆ: ಪಿಯುಸಿ

2004, 2008 ಮತ್ತು 2018ರಲ್ಲಿ ಶಾಸಕರಾಗಿ ಆಯ್ಕೆ. 2008ರಲ್ಲಿ ಯಡಿಯೂರಪ್ಪ ಸರ್ಕಾರದಲ್ಲಿ ಸಂಸದೀಯ ಕಾರ್ಯದರ್ಶಿಯಾಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾಗಿ (2010-2012) ಕಾರ್ಯನಿರ್ವಹಣೆ. 2007ರಲ್ಲಿ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ 9 ತಿಂಗಳು ಕಾರ್ಯ. 2016ರಿಂದ ಇಲ್ಲಿಯವರೆಗೆ ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಕಾರ್ಯ. 2008ರ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಸಿಸಿ ಪಾಟೀಲ್‌, ವಿಧಾನಸಭೆಯಲ್ಲೇ ಅಶ್ಲೀಲ ಚಿತ್ರ ವೀಕ್ಷಿಸಿ ಮಂತ್ರಿ ಸ್ಥಾನವನ್ನೂ ಕಳೆದುಕೊಂಡಿದ್ದರು.

***

ಎಚ್‌. ನಾಗೇಶ್‌
ವಯಸ್ಸು: 61
ಜಾತಿ: ದಲಿತ
ಕ್ಷೇತ್ರ: ಮುಳಬಾಗಲು ಮೀಸಲು
(ಕೋಲಾರ ಜಿಲ್ಲೆ)
ವಿದ್ಯಾಭ್ಯಾಸ: ಬಿ.ಇ

ಅದೃಷ್ಟದಾಟದಲ್ಲಿ ಗೆದ್ದವರು ಎಚ್‌ ನಾಗೇಶ್‌. ಕೋಲಾರದ ಮುಳಬಾಗಲು ವಿಧಾನಸಭೆಯಲ್ಲಿಯೂ ಅದೃಷ್ಟ ಮೇಲೆ ಜಯ ಸಾಧಿಸಿದ್ದ ಅವರು, ಈಗಲೂ ಅದೇ ಆಧಾರದಲ್ಲೇ ಸಚಿವರಾಗುತ್ತಿದ್ದಾರೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಕೊತ್ತೂರು ಮಂಜುನಾಥ್‌ ಎಂಬುವವರಿಗೆ ಮುಳಬಾಗಲು ಕ್ಷೇತ್ರಕ್ಕೆ ಟಿಕೆಟ್‌ ನೀಡಿತ್ತು. ಕ್ಷೇತ್ರ ಮಟ್ಟಿಗೆ ಪ್ರಬಲರಾಗಿದ್ದ ಮಂಜುನಾಥ್‌ ಅವರು ನಕಲಿ ಜಾತಿ ಪ್ರಮಾಣ ಪತ್ರದ ಪ್ರಕರಣದಲ್ಲಿ ಚುನಾವಣೆ ಹೊತ್ತಲ್ಲೇ ಉಮೇದುವಾರಿಕೆ ಕಳೆದುಕೊಂಡರು. ಆಗ ಮಂಜುನಾಥ್‌ ಅವರು ಪಕ್ಷೇತ್ರ ಅಭ್ಯರ್ಥಿಯಾಗಿದ್ದ ಎಚ್. ನಾಗೇಶ್‌ ಅವರಿಗೆ ಬೆಂಬಲ ಘೋಷಿಸಿದ್ದರು. ಆ ಚುನಾವಣೆಯಲ್ಲಿ ನಾಗೇಶ್‌ ಗೆದ್ದರು ಕೂಡ. ಮೈತ್ರಿ ಸರ್ಕಾರದಲ್ಲಿ ಆರಂಭದಲ್ಲಿ ಅವರು ಸಚಿವರಾಗದೇ ಹೋದರೂ, ಸಂಪುಟಣೆ ವಿಸ್ತರಣೆ ವೇಳೆ ಅವರಿಗೆ ಮಂತ್ರಿಯಾಗುವ ಅವಕಾಶ ದೊರೆತಿತ್ತು. ಸರ್ಕಾರ ಪತನಗೊಳಿಸುವಲ್ಲಿ ಬಿಜೆಪಿಗೆ ಅವರು ನೀಡಿದ ನೆರವಿನ ಫಲವಾಗಿ ಈ ಸರ್ಕಾರದಲ್ಲೂ ಅವರಿಗೆ ಮಂತ್ರಿಗಿರಿ ಸಿಕ್ಕಿದೆ.

***

ಔರಾದ್ ಶಾಸಕ ಪ್ರಭು ಚವಾಣ್
ವಯಸ್ಸು: 50
ಜಾತಿ: ಪರಿಶಿಷ್ಟ ಜಾತಿ (ಲಂಬಾಣಿ)
ಕ್ಷೇತ್ರ: ಔರಾದ್ (ಮೀಸಲು)
ವಿದ್ಯಾರ್ಹತೆ: ಪಿಯುಸಿ

2008ರಿಂದ ಈ ವರೆಗೆ ಅವರು ಮೂರು ಬಾರಿ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ಚುನಾವಣೆಯಲ್ಲಿ ನಿರ್ಣಾಯಕರೆನಿಸುವ ಲಂಬಾಣಿ ಸಮುದಾಯವನ್ನು ಗಮನದಲ್ಲಿಟ್ಟುಕೊಂಡು ಪ್ರಭು ಚವಾಣ್‌ ಅವರಿಗೆ ಸಂಪುಟದಲ್ಲಿ ಸ್ಥಾನ ಒದಗಿಸಲಾಗಿದೆ.

***
ಶಶಿಕಲಾ ಜೊಲ್ಲೆ
ವಯಸ್ಸು:50

ಜಾತಿ: ಲಿಂಗಾಯತ
ಕ್ಷೇತ್ರ: ನಿಪ್ಪಾಣಿ, ಬೆಳಗಾವಿ ಜಿಲ್ಲೆ
ವಿದ್ಯಾರ್ಹತೆ: ಎಸ್ಸೆಸ್ಸೆಲ್ಸಿ

2008ರಲ್ಲಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. 2013ರಲ್ಲಿ ಗೆದ್ದ ಬೆಳಗಾವಿ ಜಿಲ್ಲೆಯ ಏಕೈಕ ಶಾಸಕಿ ಎನಿಸಿದ್ದರು. 2018ರ ಚುನಾವಣೆಯಲ್ಲಿ 2ನೇ ಬಾರಿಗೆ ಗೆದ್ದಿದ್ದಾರೆ.‌ ಇದೇ ಮೊದಲಿಗೆ ಸಚಿವ ಸ್ಥಾನ ದೊರೆತಿದೆ. ಜೊಲ್ಲೆ ಉದ್ಯೋಗ ಸಮೂಹದ ಮೂಲಕ ಸಮಾಜಸೇವಾ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಅವರ ಪತಿ, ಅಣ್ಣಾಸಾಹೇಬ ಜೊಲ್ಲೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಹಾಲಿ ಸಂಸದ.

* ಇವನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT