ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾನೂ ಸಚಿವ ಸ್ಥಾನದ ಆಕಾಂಕ್ಷಿ’: ಶಾಸಕ ರಂಜನ್‌

ರಾಜ್ಯದಲ್ಲಿನ ರಾಜಕೀಯ ಬೆಳವಣಿಗೆಗಳು ಸುಳ್ಳು: ಶಾಸಕ ಕೆ.ಜಿ.ಬಿ
Last Updated 29 ಮೇ 2020, 14:19 IST
ಅಕ್ಷರ ಗಾತ್ರ

ಮಡಿಕೇರಿ: ‘ಯಾರೇ ಅಧಿಕಾರಕ್ಕೆ ಬರಬೇಕಾದರೆ ಲಾಬಿ ಮಾಡಲೇಬೇಕು. ನಾನೂ ಸಹ ಸಚಿವ ಸ್ಥಾನದ ಆಕಾಂಕ್ಷಿಯೇ. ಇದು ಸೂಕ್ತವಾದ ಸಮಯ ಅಲ್ಲವೆಂದು ಸುಮ್ಮನಿದ್ದೇನೆ’ ಎಂದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್‌ ಇಲ್ಲಿ ಪ್ರತಿಕ್ರಿಯಿಸಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿ, ‘ಸಚಿವ ಸ್ಥಾನ ಸಿಗದ ಹಿರಿಯ ಶಾಸಕರಿಗೆ ಅಸಮಾಧಾನವಿದೆ. ಮಂತ್ರಿ ಸ್ಥಾನಕ್ಕೆ ಎಲ್ಲರೂ ಲಾಬಿ ಮಾಡುವುದು ಸಹಜ. ಹಾಗೆಯೇ ಯಾವುದೂ ಸಿಗುವುದಿಲ್ಲ. ಈ ಬೆಳವಣಿಗೆಯಿಂದ ಸರ್ಕಾರಕ್ಕೆ ತೊಂದರೆ ಆಗಲಿದೆ; ಮುಖ್ಯಮಂತ್ರಿ ಅವರನ್ನು ಸ್ಥಾನದಿಂದ ಕೆಳಗೆ ಇಳಿಸುತ್ತಾರೆ ಎಂಬುದೆಲ್ಲವೂ ಸುಳ್ಳು’ ಎಂದು ರಂಜನ್‌ ಪ್ರತಿಕ್ರಿಯಿಸಿದರು.

‘ಬೇಕಿದ್ದರೆ ನೇರವಾಗಿ ಮುಖ್ಯಮಂತ್ರಿ ಹಾಗೂ ರಾಷ್ಟ್ರ ನಾಯಕರೊಂದಿಗೆ ಮಾತನಾಡುತ್ತೇನೆ. ಮೊದಲ ಬಾರಿ ಶಾಸಕನಾದವನಿಗೆ ಸಚಿವಸ್ಥಾನ ಸಿಗುತ್ತೆ. ರಾಜಕೀಯವಾಗಿ ಐದು ಬಾರಿ ಶಾಸಕರಾದವರಿಗೆ ಸಚಿವ ಸ್ಥಾನ ಬೇಡವೇ? ನಾನೂ ಕೂಡ ನೂರಕ್ಕೆ ನೂರರಷ್ಟು ಸಚಿವಸ್ಥಾನ ಆಕಾಂಕ್ಷಿಯೇ. ಸದ್ಯದಲ್ಲೇ ‌ಮತ್ತೊಮ್ಮೆ ಸಂಪುಟ ವಿಸ್ತರಣೆ ಆಗಲಿದೆ. ಈಗ ದೇಶ ಹಾಗೂ ರಾಜ್ಯದ ಪರಿಸ್ಥಿತಿ ಸರಿಯಿಲ್ಲ; ಅದರತ್ತ ಗಮನ ಹರಿಸಬೇಕಿದೆ’ ಎಂದು ಹೇಳಿದರು.

ರಾಜಕೀಯ ಬೆಳವಣಿಗೆಗಳೆಲ್ಲವೂ ಸುಳ್ಳು; ಬೋಪಯ್ಯ

ಇನ್ನು ರಾಜಕೀಯ ಬೆಳವಣಿಗೆ ಕುರಿತು ಶಾಸಕ ಕೆ.ಜಿ.ಬೋಪಯ್ಯ ಅವರೂ ಪ್ರತಿಕ್ರಿಯೆ ನೀಡಿದ್ದಾರೆ. ‘ಮಂತ್ರಿ ಸ್ಥಾನಕ್ಕೆ ರಾಜ್ಯದಲ್ಲಿ ಏನೆಲ್ಲ ನಡೆಯುತ್ತಿದೆ ಎನ್ನುವುದೆಲ್ಲವೂ ಸುಳ್ಳು; ಇದೆಲ್ಲವೂ ಊಹಾ ಪೋಹಾಗಳಿಂದ ಕೂಡಿದೆ’ ಎಂದು ಶಾಸಕ ಕೆ.ಜಿ‌.ಬೋಪಯ್ಯ ಹೇಳಿದರು.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿ, ‘ನಾವು 117 ಶಾಸಕರೂ ಪಕ್ಷದ ಪರ ಇದ್ದೇವೆ. ಬಿಜೆಪಿಯಲ್ಲಿ ಯಾವುದೇ ಭಿನ್ನಮತವಿಲ್ಲ. ಇವೆಲ್ಲವೂ ಸತ್ಯಕ್ಕೆ ದೂರವಾದ ಮಾತುಗಳು. ಬಿಜೆಪಿಯ 117 ಶಾಸಕರು ಯಡಿಯೂರಪ್ಪ ಅವರ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ.‌ ಮುಂದಿನ ಮೂರು ವರ್ಷ ಅಧಿಕಾರ ಮಾಡುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಬಿ.ಎಸ್‌.ಯಡಿಯೂರಪ್ಪ ಅವರೇ ನಮ್ಮ ನಾಯಕರು. ಯಾರಿಗೆ ಅಸಮಾಧಾನವಿದ್ದರೂ ಅದನ್ನು ಸರಿಪಡಿಸಿಕೊಳ್ಳುವ ಸಾಮರ್ಥ್ಯ ಅವರಿಗಿದೆ ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದ್ದಾರೆ.

ಅವರವರ ಅಧಿಕಾರ ಉಳಿಸಿಕೊಳ್ಳಲು ಇದೆಲ್ಲವೂ ಸಾಮಾನ್ಯ. ಇದೆಲ್ಲವನ್ನು ರಾಜ್ಯ ಮತ್ತು ಕೇಂದ್ರ ನಾಯಕರು ನೋಡಿಕೊಳ್ಳುತ್ತಾರೆ. ನಾನೂ ಯಾರೊಂದಿಗೂ ಸಭೆಯಲ್ಲಿ ಭಾಗವಹಿಸಿಲ್ಲ; ಅವರ ಸಂಪರ್ಕದಲ್ಲೂ ಇಲ್ಲ ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT