ಸೋಮವಾರ, ಜೂಲೈ 6, 2020
23 °C

ಕೆಲವೇ ದಿನಗಳಲ್ಲಿ ರೈತರ ಖಾತೆಗೆ ಹಣ: ಸಚಿವ ನಾರಾಯಣ ಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ಲಾಕ್ ಡೌನ್ ಅವಧಿಯಲ್ಲಿ ನಷ್ಟಕ್ಕೆ ಒಳಗಾದ ಹೂವು, ಹಣ್ಣು, ತರಕಾರಿ ಬೆಳೆಗಾರರ ಮಾಹಿತಿಯನ್ನು ಕಲೆಹಾಕಲಾಗಿದೆ. ಸಂಪೂರ್ಣ ವಿವರ ಸಿದ್ದಪಡಿಸಿ ರೈತರ ಖಾತೆಗೆ ಕೆಲವೇ ದಿನಗಳಲ್ಲಿ ಹಣ ವರ್ಗಾಯಿಸುತ್ತೇವೆ ಎಂದು ತೋಟಗಾರಿಕೆ ಸಚಿವ ನಾರಾಯಣ ಗೌಡ ತಿಳಿಸಿದ್ದಾರೆ.

 ವಿಕಾಸ ಸೌಧದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಚಿವರು ರೈತರ ಬೆಳೆ ಪರಿಹಾರದ ಬಗ್ಗೆ ಮಾಹಿತಿ ನೀಡಿದ್ದಾರೆ. ಕೋವಿಡ್ -19 ಹಿನ್ನೆಲೆಯಲ್ಲಿ ಲಾಕ್ಡೌನ್ ಆದಾಗ ಸಾಕಷ್ಟು ಬೆಳೆ ನಷ್ಟ ಆಗಿತ್ತು. ಹೂವಿನ ಬೆಳೆಗಾರರಿಗೆ ದೊಡ್ಡ ಪ್ರಮಾಣದಲ್ಲಿ ನಷ್ಟ ಆಗಿದೆ. ಹೂವಿಗೆ ಯಾವುದೇ ರೀತಿಯಲ್ಲಿ ಮಾರುಕಟ್ಟೆ ಒದಗಿಸುವ ಅವಕಾಶ ಇರಲಿಲ್ಲ. ಹೀಗಾಗಿ ಹೂವು ಬೆಳೆಗಾರರಿಗೆ ಮೊದಲು ಸರ್ಕಾರ ಪರಿಹಾರ ಘೋಷಣೆ ಮಾಡಿತ್ತು. ಒಟ್ಟು 12,735 ಹೆಕ್ಟೇರ್ ಪ್ರದೇಶದಲ್ಲಿ ಹೂ ಬೆಳೆಯಲಾಗಿದೆ. ಪರಿಹಾರವಾಗಿ ಪ್ರತಿ ಹೆಕ್ಟೇರ್ ಗೆ ತಲಾ ₹25 ಸಾವಿರ  ನೀಡಲು ₹ 31.83 ಕೋಟಿ ಸರ್ಕಾರ ಘೋಷಿಸಿದೆ ಎಂದರು.

 ಅಲ್ಲದೆ ಹಣ್ಣು, ತರಕಾರಿ ಬೆಳೆದ ರೈತರಿಗೂ ನಷ್ಟ ಆಗಿದೆ. ಹೊರ ರಾಜ್ಯ ಹಾಗೂ ಹೊರ ದೇಶಕ್ಕೆ ರಫ್ತು ಸ್ಥಗಿತವಾಗಿತ್ತು. ಸಂಸ್ಕರಣಾ ಘಟಕ, ವೈನ್, ಡಿಸ್ಟಿಲರಿಸ್ ಘಟಕ ಎಲ್ಲವೂ ಬಂದ್ ಆಗಿತ್ತು. ಉತ್ತಮ ಮಳೆ ಕೂಡ ಆಗಿದ್ದರಿಂದ ಫಸಲು ಚನ್ನಾಗಿಯೆ ಬಂದಿತ್ತು. ಹೀಗಾಗಿ ಉತ್ಪಾದನೆ ಹೆಚ್ಚಾಗಿ ಮಾರಾಟ ತೀರಾ ಕಡಿಮೆ ಆಯ್ತು. ಇದರಿಂದ ರೈತ ಸಂಕಷ್ಟಕ್ಕೆ ಸಿಲುಕಿದ್ದ. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಳಿ ಚರ್ಚಿಸಿದ್ದೆ. ನಮ್ಮ ಮನವಿಗೆ ಮುಖ್ಯಮಂತ್ರಿಗಳು ಸ್ಪಂಧಿಸಿದ್ದಾರೆ. ರೈತರಿಗೆ ಪರಿಹಾರ ನೀಡಲು ಒಪ್ಪಿಗೆ ಸೂಚಿಸಿ, ತಕ್ಷಣವೆ ಘೋಷಣೆ ಕೂಡ ಮಾಡಿದ್ದಾರೆ.

50,083 ಹೆಕ್ಟೇರ್ ನಲ್ಲಿ ತರಕಾರಿ, 41,054 ಹೆಕ್ಟೇರ್ ನಲ್ಲಿ ಹಣ್ಣು ಬಳೆಯಲಾಗಿದೆ. ಪ್ರತಿ ಹೆಕ್ಟೇರ್ ಗೆ 15 ಸಾವಿರ ರೂ. ಪರಿಹಾರ ಘೋಷಣೆ ಮಾಡಲಾಗಿದೆ. ಇದಕ್ಕಾಗಿ ಸರ್ಕಾರ ₹ 137 ಕೋಟಿ ಘೋಷಿಸಿದೆ. ಈಗಾಗಲೆ ಬೆಳೆ ಸಮೀಕ್ಷೆ ವರದಿ ಇಲಾಖೆಯಲ್ಲಿ ಲಭ್ಯವಿದೆ. ಪರಿಹಾರ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಬೆಳೆ ನಷ್ಟ ಆಗಿರುವ ಯಾವುದೆ ರೈತನ ಹೆಸರು ಪಟ್ಟಿಯಿಂದ ಕೈ ತಪ್ಪಿದ್ದಲ್ಲಿ, ಪಟ್ಟಿಗೆ ಸೇರಿಸಲು ಅವಕಾಶ ಇದೆ. ಸಂಪೂರ್ಣ ಮಾಹಿತಿ ಕಲೆ ಹಾಕಿ, ಅತಿ ಶೀಘ್ರದಲ್ಲಿ  ಹಣವನ್ನು ನೇರವಾಗಿ ರೈತರ ಖಾತೆಗೆ ಹಾಕುತ್ತೇವೆ. ಇನ್ನೂ ಪರಿಹಾರದ ಹಣ ಬಂದಿಲ್ಲ ಎಂದು ರೈತರು ಆತಂಕಗೊಳ್ಳೋದು ಬೇಡ. ಕೆಲವೇ ದಿನಗಳಲ್ಲಿ ರೈತರ ಖಾತೆಗೆ ಹಣ ಬರಲಿದೆ ಎಂದು ಹೇಳಿದರು.

ಇದಕ್ಕು ಮುನ್ನ ಮಿಡತೆ ಹಾವಳಿ ಸಂಬಂಧ, ಕೃಷಿ ಸಚಿವ ಬಿ.ಸಿ.ಪಾಟೀಲ ಅವರ ಜೊತೆಗೂಡಿ ಅಧಿಕಾರಿಗಳ ಜೊತೆ ಸಭೆ ನಡೆಸಿದರು.. ರಾಜಸ್ಥಾನದ ಗಡಿಯಲ್ಲಿ ಹುಟ್ಟಿ ದೇಶಾದ್ಯಂತ ಪಸರಿಸುತ್ತಿರುವ ಮಿಡತೆಯಿಂದ ರಾಜ್ಯದ ರೈತರಿಗೆ ಹಾನಿಯಿಲ್ಲ. ಗಾಳಿಯ ದಿಕ್ಕು ನಮ್ಮ ರಾಜ್ಯದ ಕಡೆ ಇಲ್ಲ, ಹೀಗಾಗಿ ಕರ್ನಾಟಕದೊಳಗೆ ಈ ಮಿಡತೆ ಗುಂಪು ಬರುವ ಸಾಧ್ಯತೆ ಕಡಿಮೆ ಇದೆ. ಕೋಲಾರದಲ್ಲಿ ಎಕ್ಕೆ ಗಿಡದ ಮೇಲೆ ಕಂಡುಬಂದಿರುವ ಮಿಡಿತೆ ಬೇರೆ ಪ್ರಭೇದದ್ದು. ರಾಜಸ್ಥಾನದಲ್ಲಿ ಹುಟ್ಟಿರುವ ಮಿಡತೆಗು ಇದಕ್ಕು ಸಂಬಂಧವಿಲ್ಲ. ಆದಾಗ್ಯೂ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವ ಬಗ್ಗೆ ಅಧಿಕಾರಿಗಳ ಜೊತೆ ಸಚಿವದ್ವಯರು ಚರ್ಚೆ ನಡೆಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಬೀದರ್, ಗುಲ್ಬರ್ಗ, ಯಾದಗಿರಿ, ಕೊಪ್ಪಳ ಜಿಲ್ಲೆಗೆ ಅಧಿಕಾರಿಗಳ ತಂಡ ಕಳುಹಿಸಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ಸಚಿವರು ಸೂಚನೆ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು