ಬುಧವಾರ, ಜನವರಿ 29, 2020
27 °C
ಎಚ್‌ಡಿಕೆ ಹಂಚಿಕೆ ಮಾಡಿದ್ದ ಅನುದಾನ ರದ್ದು l ಮರು ಹಂಚಿಕೆ ಮಾಡಿದ ಬಿಎಸ್‌ವೈ ಸರ್ಕಾರ

ಮಠಕ್ಕೆ ಸುಣ್ಣ: ದೇಗುಲಕ್ಕೆ ಬೆಣ್ಣೆ

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

BSY

ಬೆಂಗಳೂರು: ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ 2019–20ನೇ ಸಾಲಿನ ಬಜೆಟ್‌ನಲ್ಲಿ 39 ಮಠಗಳಿಗೆ ಅನುದಾನ ಘೋಷಿಸಿ, ಮುಜರಾಯಿ ಇಲಾಖೆಗೆ ಒದಗಿಸಿದ್ದ ₹60 ಕೋಟಿಯನ್ನು ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದ ವಿವಿಧ ದೇವಸ್ಥಾನಗಳಿಗೆ ಹಂಚಿಕೆ ಮಾಡಿದೆ.

ಅಲ್ಲದೆ, ಸಮ್ಮಿಶ್ರ ಸರ್ಕಾರ ಜೂನ್‌, ಜುಲೈ ಹಾಗೂ ಆಗಸ್ಟ್‌ ತಿಂಗಳುಗಳಲ್ಲಿ 360 ಧಾರ್ಮಿಕ ಸಂಸ್ಥೆಗಳಿಗೆ ₹29.13 ಕೋಟಿ ಮಂಜೂರು ಮಾಡಿತ್ತು. ಆದರೆ, ಈ ಪೈಕಿ 356 ಧಾರ್ಮಿಕ ಸಂಸ್ಥೆಗಳಿಗೆ ₹ 17.38 ಕೋಟಿ ಮಂಜೂರು ಮಾಡಿ ಹೊರಡಿಸಿದ್ದ ಆದೇಶಗಳನ್ನೂ ಇದೇ 7ರಂದು ರದ್ದುಪಡಿಸಲಾಗಿದೆ.

‘ದ್ವೇಷದ ರಾಜಕೀಯ ಮಾಡುವುದಿಲ್ಲ’ ಎಂದು ಹೇಳಿಕೊಂಡು ಅಧಿಕಾರ ಚುಕ್ಕಾಣಿ ಹಿಡಿದಿರುವ ಯಡಿಯೂರಪ್ಪ ಸರ್ಕಾರ, ಇದೀಗ ಮಠಗಳಿಗೆ ತೆಗೆದಿಟ್ಟಿದ್ದ ಹಣವನ್ನೂ ದೇವಸ್ಥಾನಗಳಿಗೆ ಹಂಚಲು ನಿರ್ಧರಿಸಿರುವುದು ಚರ್ಚೆಗೆ ಕಾರಣವಾಗಿದೆ.

ಬಜೆಟ್‌ನಲ್ಲಿ ಕೊಟ್ಟ ಹಣ: 2019-20ನೇ ಸಾಲಿನ ಆಯವ್ಯಯದಲ್ಲಿ 39 ಮಠಗಳಿಗೆ ಅನುದಾನವೂ ಸೇರಿ, ಸಾಮಾನ್ಯ ಯೋಜನೆಯಡಿ ದೇವಸ್ಥಾನಗಳು ಮತ್ತು ಇತರ ಧಾರ್ಮಿಕ ಸಂಸ್ಥೆಗಳ ದುರಸ್ತಿ, ಜೀರ್ಣೋದ್ಧಾರ ಹಾಗೂ ನಿರ್ಮಾಣಗಳಿಗೆ ಒಟ್ಟು ₹110.67 ಕೋಟಿ ಅನುದಾನವನ್ನು ಕಂದಾಯ ಇಲಾಖೆಗೆ (ಮುಜರಾಯಿ) ಮೈತ್ರಿ ಸರ್ಕಾರ ಒದಗಿಸಿತ್ತು.

***

ದೇವರಿಗೆ ಹಣ ಹಂಚಿಕೆಯಲ್ಲಿ ರಾಜಕೀಯ

ಅನುದಾನ ಮರು ಹಂಚಿಕೆ ವೇಳೆ ಈ ನಿಯಮವನ್ನು ಗಾಳಿಗೆ ತೂರಿ, ಬಿಜೆಪಿ ಶಾಸಕರ ಶಿಫಾರಸಿನಂತೆ, ಅವರು ಪ್ರತಿನಿಧಿಸುವ ಕ್ಷೇತ್ರಗಳಲ್ಲಿರುವ ಧಾರ್ಮಿಕ ಸಂಸ್ಥೆಗಳಿಗೆ ಹೆಚ್ಚು ಅನುದಾನ ನೀಡಿ ಆದೇಶ ಹೊರಡಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಮುಜರಾಯಿ ಇಲಾಖೆಯ ಅಡಿಯಲ್ಲಿ ಇಲ್ಲದ ಖಾಸಗಿ ದೇವಸ್ಥಾನಗಳಿಗೆ ಅನುದಾನದಲ್ಲಿ ಸಿಂಹಪಾಲು ಸಿಕ್ಕಿದೆ ಎಂಬ ಆರೋಪವೂ ಇದೆ. ಅದರಲ್ಲೂ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ದೇವಸ್ಥಾನಗಳಿಗೆ ಹೆಚ್ಚು ಅನುದಾನ ನೀಡಲಾಗಿದೆ.

ಆದರೆ, ರದ್ದು ಮಾಡಿದ ಪಟ್ಟಿಯಲ್ಲಿದ್ದ ಎಚ್‌.ಡಿ. ರೇವಣ್ಣ ಪ್ರತಿನಿಧಿಸುವ ಹೊಳೆನರಸೀಪುರದಲ್ಲಿರುವ ಕನ್ನಿಕಾ ಪರಮೇಶ್ವರಿ ದೇವಸ್ಥಾನಕ್ಕೆ ನೀಡಿದ್ದ ₹ 1 ಕೋಟಿ ಅನುದಾನ ಆದೇಶವನ್ನು ಯಡಿಯೂರಪ್ಪ ಸೂಚನೆ ಮೇರೆಗೆ ಮತ್ತೆ ಪರಿಷ್ಕರಿಸಲಾಗಿದೆ ಎಂದು ಗೊತ್ತಾಗಿದೆ.

****

2019–20ರ ಬಜೆಟ್‌ನಲ್ಲಿ ಯಾವ ಮಠಕ್ಕೆ ಎಷ್ಟು ಅನುದಾನ

ಮಠಗಳು; ಘೋಷಣೆಯಾದ ಮೊತ್ತ (₹ ಕೋಟಿಗಳಲ್ಲಿ)

ತುಮಕೂರಿನ ಸಿದ್ಧಗಂಗಾಮಠ (ಪ್ರಾರ್ಥನಾ ಮಂದಿರಕ್ಕೆ); 5

ಬೆಂಗಳೂರಿನ ಸೊನ್ನೇನಹಳ್ಳಿಯ ಸ್ಫಟಿಕಪುರಿ ಮಹಾ ಸಂಸ್ಥಾನ ಶಾಖಾ ಮಠ; 5

ಶಿವಮೊಗ್ಗದ ಶ್ರೀ ರೇಣುಕಾನಂದ ಸ್ವಾಮೀಜಿ ನಾರಾಯಣಗುರು ಮಹಾಸಂಸ್ಥಾನ ಮಠ; 3

ಧಾರವಾಡದ ಮುರುಘಾಮಠ (ದಾಸೋಹ ನಿಲಯ); 3

ಉಡುಪಿ ಬಾರ್ಕೂರು ಮಹಾಸಂಸ್ಥಾನ ಮಠ; 3

ದಾವಣಗೆರೆ ಹೇಮ–ವೇಮ ಸದ್ಭೋವನ ವಿದ್ಯಾಪೀಠ (ವೇಮನ ಸಂಸ್ಥಾನ); 3

ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠ; 3

ಬೆಂಗಳೂರಿನ ಪುಷ್ಪಗಿರಿ ಮಹಾಸಂಸ್ಥಾನ ಮಠ; 2

ದಾವಣಗೆರೆಯ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಪೀಠ; 2

ಬಳ್ಳಾರಿ ಉಜ್ಜಯಿನಿ ಸದ್ಧರ್ಮ ಪೀಠ; 2

ಉಳಿದಂತೆ 29 ಮಠಗಳಿಗೆ (ತಲಾ 1 ಕೋಟಿ); 29

ಒಟ್ಟು ಮಠಗಳು (39) ; 60

****

ಧ್ವನಿ ಇಲ್ಲದ ಮಠಗಳನ್ನೂ ಸೇರಿಸಿ ಅವುಗಳ ಅಭಿವೃದ್ಧಿಗೆ ನಾನು ಅನುದಾನ ನೀಡಿದ್ದೆ. ಆದರೆ, ಆ ಹಣವನ್ನು ವರ್ಗಾಯಿಸುವ ಮೂಲಕ ಬಿಜೆಪಿ ಸರ್ಕಾರ ಸಣ್ಣತನ ಪ್ರದರ್ಶಿಸಿದೆ
-ಎಚ್‌.ಡಿ. ಕುಮಾರಸ್ವಾಮಿ
ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ

ಸದ್ಯ ಹಣದ ಕೊರತೆ ಇದೆ. ಈ ಬಗ್ಗೆ ವಿವಿಧ ಮಠಗಳ ಸ್ವಾಮೀಜಿಗಳ ಜೊತೆ ನಾನು ಮತ್ತು ಮುಖ್ಯಮಂತ್ರಿ ಮಾತನಾಡಿದ್ದೇವೆ. ಮುಂದೆ ಅನುದಾನ ನೀಡುತ್ತೇವೆ

-ಕೋಟ ಶ್ರೀನಿವಾಸ ಪೂಜಾರಿ ಮುಜರಾಯಿ ಸಚಿವ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು