ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಹಂಚಿಕೆ ತಡೆ ಅಷ್ಟು ಸುಲಭವಲ್ಲ: ಕೆ.ಜೆ. ಜಗದೀಶ್

ಮತ ಖರೀದಿಯ ಸುತ್ತ ಮುತ್ತ
Last Updated 23 ಮಾರ್ಚ್ 2019, 20:16 IST
ಅಕ್ಷರ ಗಾತ್ರ

ಸಂದರ್ಶನ: ರಾಜೇಶ್ ರೈ ಚಟ್ಲ

‘ಖಾಸಗಿ ಜಾಗಗಳಲ್ಲಿ (ಮನೆಗಳಲ್ಲಿ) ನಡೆಯುವ ಅಕ್ರಮಗಳನ್ನು ತಡೆಯುವುದು ಅಷ್ಟು ಸುಲಭ ವಲ್ಲ. ಕಾಸಿಗಾಗಿ ಮತ ಮಾರುವ, ಆಮಿಷಗಳಿಗೆ ಮರುಳಾಗುವ ವ್ಯವಸ್ಥೆ ಬದಲಾಗ ಬೇಕಾದರೆ ಜನರಲ್ಲಿ ಜಾಗೃತಿ ಮೂಡುವುದು ಅತೀ ಅಗತ್ಯ’ ಎನ್ನುತ್ತಾರೆ ರಾಜ್ಯ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ (ವೆಚ್ಚ ನಿರ್ವಹಣೆ)‌ ಕೆ.ಜೆ. ಜಗದೀಶ್.

* ಅಭ್ಯರ್ಥಿಯೊಬ್ಬರ ಚುನಾವಣಾ ವೆಚ್ಚ ಲೆಕ್ಕ ಹಾಕುವ ವಿಧಾನ ಹೇಗೆ?

ನಾಮಪತ್ರ ಸಲ್ಲಿಸಿದ ದಿನದಿಂದ ಫಲಿತಾಂಶ ಪ್ರಕಟವಾಗುವ ದಿನದವರೆಗೆ ಆಯೋಗ ನಿಗದಿಪಡಿಸಿದ ನಿರ್ದೇಶನದಂತೆ ಮಾಡುವ ಖರ್ಚು –ವೆಚ್ಚವನ್ನು ಅಭ್ಯರ್ಥಿಯ ಚುನಾವಣಾ ವೆಚ್ಚವಾಗಿ ಪರಿಗಣಿಸಲಾಗುತ್ತದೆ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಮುನ್ನ ಪ್ರತ್ಯೇಕವಾಗಿ ಬ್ಯಾಂಕ್‌ ಖಾತೆ ತೆರೆದು ಆ ಖಾತೆಯಿಂದಲೇ ವೆಚ್ಚ ನಿರ್ವಹಿಸಬೇಕು. ಆಯೋಗ ರಚಿಸಿದ ವಿವಿಧ ಲೆಕ್ಕ ವೀಕ್ಷಕ ತಂಡಗಳು ಅಭ್ಯರ್ಥಿಯ ವೆಚ್ಚಗಳ ಮೇಲೆ ನಿಗಾ ಇಟ್ಟು, ತನ್ನದೇ ಲೆಕ್ಕಪತ್ರ ಸಿದ್ಧಪಡಿಸುತ್ತವೆ. ಅಂತಿಮವಾಗಿ ಅಭ್ಯರ್ಥಿಯ ಮತ್ತು ಆಯೋಗದ ‘ಲೆಕ್ಕ’ಗಳ ಮಧ್ಯೆ ತಾಳೆಯಾಗಬೇಕು. ತಾಳೆಯಾಗದೇ ಇದ್ದರೆ ಅದನ್ನು ಹೆಚ್ಚುವರಿ ವೆಚ್ಚವಾಗಿ ಪರಿಗಣಿಸಲಾಗುತ್ತದೆ.

* ವೆಚ್ಚ ಲೆಕ್ಕ ಹಾಕಲು ಆಯೋಗ ರಚಿಸಿದ ತಂಡಗಳ ಸ್ವರೂಪ ಹೇಗಿರುತ್ತದೆ?

ಚುನಾವಣಾ ವೆಚ್ಚ ವೀಕ್ಷಕರು, ಸಹಾಯಕ ಚುನಾವಣಾ ವೆಚ್ಚ ವೀಕ್ಷಕರು, ವೆಚ್ಚ ನಿರ್ವಹಣಾ ತಂಡ, ವಿಡಿಯೊ ಕಣ್ಗಾವಲು ತಂಡ, ವಿಡಿಯೊ ವೀಕ್ಷಣಾ ತಂಡ, ಲೆಕ್ಕಪತ್ರ ತಂಡ ಹೀಗೆ ಪ್ರತಿಯೊಂದು ಲೋಕಸಭಾ ಕ್ಷೇತ್ರಗಳಲ್ಲೂ ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ. ಅಭ್ಯರ್ಥಿಗಳು ಚುನಾವಣಾ ಖರ್ಚು ವೆಚ್ಚದ ಸಂಪೂರ್ಣ ಮಾಹಿತಿಯನ್ನು ಫಲಿತಾಂಶ ಪ್ರಕಟವಾದ 30 ದಿನಗಳ ಒಳಗಾಗಿ ಜಿಲ್ಲಾ ಚುನಾವಣಾಧಿಕಾರಿ ಮೂಲಕ ಚುನಾವಣೆ ಆಯೋಗ ಸಲ್ಲಿಸಬೇಕು.

* ಚುನಾವಣಾ ಅಕ್ರಮ ತಡೆಗಟ್ಟಲು ಏನಿದೆ ವ್ಯವಸ್ಥೆ?

ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಕೈಗೊಳ್ಳುವ ಪ್ರಚಾರ ಕಾರ್ಯಕ್ರಮಗಳ ಮಾಹಿತಿ ಪಡೆದು ವಿಡಿಯೊ ಸರ್ವೆಲೆನ್ಸ್‌ ತಂಡಗಳು ಚಿತ್ರೀಕರಣ ಮಾಡಿಕೊಳ್ಳುತ್ತವೆ. ಈ ವಿಡಿಯೊಗಳನ್ನು ಆಯಾ ಕ್ಷೇತ್ರ ಚುನಾವಣಾಧಿಕಾರಿಗಳು ಪರಿಶೀಲಿಸಿ, ವೆಚ್ಚವನ್ನು ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೆ ಸೇರಿಸುತ್ತಾರೆ. ಮತದಾರರ ಓಲೈಕೆಗೆ ಹಣ, ಉಡುಗೊರೆ, ಮದ್ಯ, ಊಟ ಪೂರೈಸಿದರೆ, ಬೆದರಿಕೆ, ಶಸ್ತ್ರಗಳ ಬಳಕೆ ಸೇರಿದಂತೆ ಅಕ್ರಮ ನಡೆಸಿದರೆ ಫ್ಲೈಯಿಂಗ್‌ ಸ್ಕ್ವಾಡ್‌, ವಿಡಿಯೊ ಸರ್ವೆಲೆನ್ಸ್‌ ತಂಡ, ಎಸ್‌ಎಸ್‌ಟಿ ತಂಡಗಳು ಕಾರ್ಯಾಚರಣೆ ಕೈಗೊಂಡು, ಅಕ್ರಮ ಪತ್ತೆ ಹಚ್ಚಿ, ಪ್ರಕರಣ ದಾಖಲಿಸುತ್ತವೆ.

* ಈ ಎಲ್ಲ ಕಾರ್ಯಗಳಿಗೆ ಆಯೋಗದಿಂದ ಸಿಬ್ಬಂದಿ ನೇಮಕ ಹೇಗೆ?

ಚುನಾವಣಾ ಪ್ರಕ್ರಿಯೆಗಳಿಗೆಂದೇ ಆಯ್ದ ಆರು ಸಾವಿರ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದೆ. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸುವುದು ಆಯೋಗದ ಕೆಲಸ. ಹೀಗಾಗಿ, ಪ್ರತಿ ಸಿಬ್ಬಂದಿಯ ಆಯ್ಕೆಗೆ ಬದ್ಧತೆ, ಕಾರ್ಯತತ್ಪರತೆ, ಹೊಣೆಗಾರಿಕೆಯೇ ಅರ್ಹತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT