ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಪಗಾವಲು ಭೇದಿಸುವ ಕಲೆ ಕರಗತ

ಮತ ಖರೀದಿಯ ಸುತ್ತ ಮುತ್ತ
Last Updated 23 ಮಾರ್ಚ್ 2019, 20:23 IST
ಅಕ್ಷರ ಗಾತ್ರ

ಹೊಳೆಗೊಂದು ಹರಿವಿನ ದಾರಿ ಇರುತ್ತದಲ್ಲ; ಹಾಗೆಯೇ ಈ ಚುನಾವಣಾ ಹಣ ಕೂಡ ತನ್ನ ಹರಿವಿಗಾಗಿ ಮಾರ್ಗವೊಂದನ್ನು ಕಂಡುಕೊಂಡಿದೆ. ಹರಿವನ್ನು ತಡೆಯಲು ನಿಂತವರನ್ನೇ ಕುರುಡರನ್ನಾಗಿ ಮಾಡಿ ಗುಪ್ತಗಾಮಿನಿಯಾಗಿ ಓಡುವ ಈ ಕುರುಡು ಕಾಂಚಾಣ ಎಲ್ಲಿಯೋ ಕುಣಿದು, ಯಾರದೋ ತೆಕ್ಕೆಗೆ ಬೀಳುತ್ತದೆ. ಯಾರನ್ನೋ ಬೀಳಿಸಿ, ಮತ್ಯಾರನ್ನೋ ಮೇಲೆತ್ತುತ್ತದೆ. ಯಾರಿಗೆ ಗೊತ್ತು, ನೀವು ಹೊರಟಿರುವ ವಾಹನದಲ್ಲೇ ಆ ಮತ ಬಂಡವಾಳವೂ ಪ್ರಯಾಣ ಬೆಳೆಸುತ್ತಿರಬಹುದು...

ಮತದಾರರ ಖರೀದಿಗಾಗಿ ಆಮಿಷವೆಂಬ ‘ಅಪರಾಧ’ ಕೃತ್ಯ ತಡೆಯಲು ಚುನಾವಣೆ ಆಯೋಗ ಆಯಾ ಲೋಕಸಭಾ ಕ್ಷೇತ್ರದ ಸರಹದ್ದಿನುದ್ದಕ್ಕೂ ಸರ್ಪಗಾವಲು, ಪೊಲೀಸರನ್ನು ಒಳಗೊಂಡ ವಿಚಕ್ಷಣ ದಳ, ವೀಕ್ಷಕರ ತಂಡವನ್ನು ನೇಮಿಸಿರುತ್ತದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಹದ್ದಿನಕಣ್ಣುಗಳು, ಕಂಡಕಂಡಲ್ಲಿ ಚೆಕ್‌ಪೋಸ್ಟ್‌ಗಳು ಇರುತ್ತವೆ.

ಎಲ್ಲರ ಕಣ್ಣಿಗೂ ಮಣ್ಣೆರಚಿ, ಮತದಾರನ ಜೇಬಿಗೆ ಹಣ ತಲುಪಿಸುವ ಮಾಯಾಜಾಲವನ್ನು ರಾಜಕಾರಣಿಗಳು, ಅವರ ಬೆಂಬಲಿಗರು ನಿರ್ಮಿಸಿಕೊಂಡಿದ್ದಾರೆ. ಯಾವುದಾದರೂ ಮಾರ್ಗದಲ್ಲಿ ಮತದಾರನ ಮನೆಗೆ ಹಣ ತಲುಪಿಸುವಲ್ಲಿ ಕಡೆಗೂ ಯಶಸ್ವಿಯಾಗುತ್ತಲೇ ಇದ್ದಾರೆ.

ಅಧಿಕಾರದಲ್ಲಿದ್ದ ಪಕ್ಷದ ಹಣ ಹಂಚಿಕೆ ಜವಾಬ್ದಾರಿಯನ್ನು 2009ರಲ್ಲಿ ನಡೆದ ಚುನಾವಣೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೊತ್ತಿದ್ದರು. 2014ರಲ್ಲಿ ನಡೆದ ಚುನಾವಣೆಯಲ್ಲಿ ಮಾಜಿ ಅಧಿಕಾರಿಯೂ ಆಗಿದ್ದ ಸಲಹೆಗಾರರೊಬ್ಬರು ಇದನ್ನು ನಿರ್ವಹಿಸಿದ್ದರು.

ಅಧಿಕಾರದಲ್ಲಿ ಇಲ್ಲದ ಪಕ್ಷದವರು ರಾಜಧಾನಿಯಲ್ಲಿಕುಳಿತು ಕ್ಷೇತ್ರಗಳಿಗೆ ಹಣ ಹೊಂದಿಸಿ, ಕಳುಹಿಸುವ ಜವಾಬ್ದಾರಿಯನ್ನು ಪಕ್ಷದ ಪ್ರಮುಖರಿಗೆ ವಹಿಸುವುದು ರೂಢಿ. ಪಕ್ಷದಲ್ಲಿ ಪ್ರಭಾವಿ ಹುದ್ದೆಯಲ್ಲಿ (ಅಧ್ಯಕ್ಷ, ಶಾಸಕಾಂಗ ಪಕ್ಷದ ನಾಯಕ) ಇರುವವರ ಮಕ್ಕಳು ಅಥವಾ ಹತ್ತಿರದ ಸಂಬಂಧಿಗಳು ನಿರ್ವಹಿಸುವುದು ಉಂಟು.

108–ಆಂಬುಲೆನ್ಸ್‌ ಶುರುವಾದ ಕಾಲದಲ್ಲಿ ಅದರಲ್ಲೇ ಹಣ ಸಾಗಿಸಲಾಗಿತ್ತು. ಅದು ಜಾಗೃತ ದಳಕ್ಕೆ ಗೊತ್ತಾದ ಮೇಲೆ ಹೊಯ್ಸಳ, ಗರುಡದಂತಹ ಪೊಲೀಸ್‌ ವಾಹನ ಬಳಸಲಾಯಿತು. ಅದಾದ ಬಳಿಕ ಕೆಎಸ್‌ಆರ್‌ಟಿಸಿಯ ‘ಸಾರಥಿ’ ಹಣ ಸಾಗಣೆ ವಾಹನವಾಯಿತು.

ಪೊಲೀಸ್ ಅಥವಾ ಕರ್ನಾಟಕ ಸರ್ಕಾರ ಎಂದು ಬೋರ್ಡ್‌ ಇರುವ ವಾಹ ನಗಳನ್ನು ಈಗಲೂ ಬಳಸಲಾಗುತ್ತಿದೆ.

‌ಇದಕ್ಕೆ ಮೊದಲು ಎಲ್ಲ ಖಾಸಗಿ ಬಸ್‌ಗಳಲ್ಲಿ ಲೋಡುಗಟ್ಟಲೆ ತುಂಬಿ ಕಳುಹಿಸಲಾಗುತ್ತಿತ್ತು. ಅದೀಗ ನಿಂತಿದೆ. ಅದರ ಬದಲು ಹಾಲು ಹಾಗೂ ತರಕಾರಿ ಸಾಗಣೆ ವಾಹನ, ಜಲ್ಲಿ–ಮರಳು ಸಾಗಣೆ ವಾಹನ, ದ್ರಾಕ್ಷಿ, ತೆಂಗಿನಕಾಯಿ ಸಾಗಿಸುವ ವಾಹನಗಳನ್ನು ಬಳಕೆ ಮಾಡಲಾಗುತ್ತಿದೆ. ಸ್ಥಳೀಯ ಮಟ್ಟದಲ್ಲಿ ವಿತರಣೆ ಮಾಡುವಾಗ ಸೀಟಿನ ಕೆಳಗೆ ದೊಡ್ಡ ಡಿಕ್ಕಿಯಿರುವ ದ್ವಿಚಕ್ರವಾಹನಗಳನ್ನು ಉಪಯೋಗಿಸಲಾಗುತ್ತಿದೆ.

ವಿತರಣೆಯ ಜಾಲ

ಸ್ಟ್ರಾಂಗ್ ರೂಂಗಳಲ್ಲಿ ಅಥವಾ ಜಿಲ್ಲಾ ಕೇಂದ್ರದಲ್ಲಿ ಅಥವಾ ಅಭ್ಯರ್ಥಿಗೆ ಸುರಕ್ಷಿತವೆನಿಸಿದ ಯಾವುದಾದರೂ ಒಂದು ಸ್ಥಳದಲ್ಲಿ ಸಂಗ್ರಹಿಸಿಟ್ಟ ಹಾಗೂ ಅಲ್ಲಿಗೆ ಪೂರೈಕೆಯಾಗುವ ಹಣವನ್ನು ತಲುಪಿಸುವ ವ್ಯವಸ್ಥಿತ ಜಾಲ ಇದೆ.

ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆ ಜಾರಿಯಲ್ಲಿದ್ದು, ಹಣ ಹಂಚಿಕೆಯೂ ಈ ವಿಕೇಂದ್ರೀಕರಣ ಮಾದರಿಯೊಳಗೆ ನಡೆಯುತ್ತದೆ. ತಮ್ಮ ಪಕ್ಷದ ಶಾಸಕ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಮುಖೇನ ಹಣ ಒಂದು ಹಂತದಿಂದ ಇನ್ನೊಂದು ಹಂತಕ್ಕೆ ಹೋಗುತ್ತದೆ. ನಗರ ಪ್ರದೇಶಗಳಲ್ಲಿ ಸ್ಥಳೀಯ ಪಾಲಿಕೆ, ನಗರಸಭೆ, ಪುರಸಭೆ ಸದಸ್ಯರು ಈ ಜಾಲದ ಫಲಾನುಭವಿಗಳು. ಇದರ ಜತೆಗೆ ಪಕ್ಷ ಅಥವಾ ಅಭ್ಯರ್ಥಿ ಜತೆಗೆ ನಿಕಟವಾಗಿ ಗುರುತಿಸಿಕೊಂಡವರನ್ನು ಬಳಕೆ ಮಾಡಲಾಗುತ್ತದೆ. ಇವರೆಲ್ಲರ ಮೇಲೆ ಆಯೋಗ ನೇರ ಕಣ್ಣಿಟ್ಟಿರುವುದರಿಂದ ಇವರು ತೋರಿಸಿದ ವ್ಯಕ್ತಿಗಳ ಮೂಲಕ ಸರಬರಾಜು ಆಗುತ್ತದೆ.

ತರಕಾರಿ ಮಂಡಿ, ಬಾಳೆಕಾಯಿ ಮಂಡಿ, ತೆಂಗು, ಅಡಕೆ ಮಂಡಿ, ಲೇವಾದೇವಿಗಾರರು, ಗುತ್ತಿಗೆದಾರರಿಗೆ ಗ್ರಾಮೀಣ ಪ್ರದೇಶದ ಪ್ರಭಾವಿಗಳು, ವ್ಯಾಪಾರಿಗಳು, ಸ್ಥಳೀಯ ಪುಢಾರಿಗಳ ಜತೆ ಸಂಬಂಧ ಇರುತ್ತದೆ. ಅವರ ಮುಖೇನ ಮೂಲೆಮೂಲೆಗೆ ಹಣ ತಲು‍ಪಿಸುವ ವ್ಯವಸ್ಥೆ ಇದೆ.

ಗ್ರಾಮೀಣ ಹಂತಕ್ಕೆ ತಲು‍ಪಿದ ಮೇಲೆ ಅಲ್ಲಿಂದ ಮನೆಗೆ ಮನೆಗೆ ತಲುಪಿಸುವ ವಿಧಾನ ಬೇರೆಯೇ ಇದೆ.

ಗ್ರಾಮದಲ್ಲಿರುವ ಪಕ್ಷದ ಪ್ರಮುಖರು ಅಥವಾ ಅಲ್ಲಿ ತನ್ನದೇ ಆದ ಪ್ರಭಾವ ಇರುವ ವ್ಯಕ್ತಿಯನ್ನು ಹಿಡಿದು ಆತನಿಗೆ ತಲುಪಿಸಲಾಗುತ್ತದೆ. ಇದು ಒಂದು ವಿಧಾನ.

ಸ್ವಸಹಾಯ ಸಂಘಗಳು, ಹಾಲು ಉತ್ಪಾದಕರ ಸಂಘಗಳು, ಮಹಿಳಾ ಸ್ವಸಹಾಯ ಸಂಘಗಳು ಕೂಡ ವಿತರಣೆಯ ಕೊಂಡಿಗಳಂತೆ ಕೆಲಸ ಮಾಡುವುದು ರಹಸ್ಯವಲ್ಲ. ಇಲ್ಲಿ ಪಕ್ಷಭೇದವಿಲ್ಲ. ಎಲ್ಲ ಪಕ್ಷದವರು ಇವರನ್ನು ಬಳಸಿಕೊಂಡಿದ್ದು ಇದೆ.

ಇತ್ತೀಚಿನ ವರ್ಷಗಳಲ್ಲಿ ಕಂತೆಕಂತೆ ಹಣ ಸಾಗಿಸುವುದು ಅಪಾಯಕರ ಎಂದು ಗೊತ್ತಾದ ಬಳಿಕ ಇದಕ್ಕಾಗಿ ಮತ್ತೊಂದು ವಿಧಾನ ಬಳಸಲಾಯಿತು. ಮೈಸೂರಿನಿಂದ ಬೆಂಗಳೂರಿಗೆ, ತುಮಕೂರಿನಿಂದ ಬೆಂಗಳೂರಿಗೆ ನಿತ್ಯವೂ ರೈಲಿನಲ್ಲಿ ಓಡಾಡುವವರು, ಅವರು ಯಾವ ಕ್ಷೇತ್ರದವರು, ಯಾವ ಊರಿನವರು ಎಂದು ಪತ್ತೆ ಹಚ್ಚಿ ಅವರ ಮೂಲಕ ₹20 ಸಾವಿರದಿಂದ ₹50 ಸಾವಿರದವರೆಗೆ ದಿನವೂ ಕಳುಹಿಸುವ ವ್ಯವಸ್ಥೆಯನ್ನೂ ರಾಜಕೀಯ ವ್ಯಕ್ತಿಗಳು ನಡೆಸಿದ ನಿದರ್ಶನವಿದೆ.

ಚುನಾವಣೆ ಘೋಷಣೆಯಾಗುತ್ತಿದ್ದಂತೆ ಮತ ಬುಟ್ಟಿಗೆ ಹಾಕಿಕೊಳ್ಳಲು ಇನ್ನೊಂದು ಪದ್ಧತಿ ಅನುಸರಿಸುತ್ತಾರೆ. ಊರಿನಲ್ಲಿ ವ್ಯಾಪಾರಕ್ಕಿಳಿದು ನಷ್ಟ ಅನುಭವಿಸುತ್ತಿರುವವರು, ಯಾವುದೋ ಕಾರಣಕ್ಕೆ ಭಾರಿ ಸಾಲ ಮಾಡಿಕೊಂಡು ಕಷ್ಟದಲ್ಲಿ ಇರುವವರು, ಹೂಡಿಕೆ ಮಾಡಿ ಕೈಸುಟ್ಟುಕೊಂಡವರನ್ನು ಹುಡುಕಲಾಗುತ್ತದೆ. ಅವರನ್ನು ಕರೆಸಿ, ಸಾಲದ ಪ್ರಮುಖ ಮೊತ್ತವನ್ನು ತೀರಿಸುವ ವಾಗ್ದಾನ ಮಾಡಲಾಗುತ್ತದೆ. ನೀರಿಗೆ ಬಿದ್ದವನು ಬದುಕಲು ಹುಲ್ಲುಕಡ್ಡಿಯ ಆಸರೆ ಸಾಕು ಎಂದು ಕಾಯುತ್ತಿರುವುದು ವಾಸ್ತವ. ಅಂತಹವನನ್ನು ಹಿಡಿದು, ಊರಿನ ಇಡೀ ವ್ಯವಹಾರವನ್ನು ವಹಿಸಿ, ಜನರಿಗೆ ಹಣ ತಲುಪಿಸುವ ವ್ಯವಸ್ಥೆ ಮಾಡುವುದು ಉಂಟು.

ನಂಬಿಕೆಯ ಮೇಲೆ ವ್ಯವಹಾರ

ಇಲ್ಲಿ ಎಲ್ಲವೂ ನಡೆಯುವುದು ನಂಬಿಕೆಯ ಮೇಲೆ. ಒಬ್ಬಿಬ್ಬರು ಕೈಕೊಡುವುದು ಮಾಮೂಲು. ಆದರೆ, ನಂಬಿದವರು ಕೈಕೊಟ್ಟರೆ ಸೋಲು ಖಚಿತ. ಸಂಗ್ರಹಿಸಿಟ್ಟ ಎಲ್ಲ ಹಣವೂ ಯಾರೋ ಒಬ್ಬಿಬ್ಬರ ಪಾಲಾಗಿ, ಕೊನೆಯಲ್ಲಿ ಹಣ ಕಡಿಮೆ ಬಂದು ಸೋಲಬೇಕಾಗುತ್ತದೆ. ಹೀಗಾಗಿ, ಪರ್ಯಾಯ ವ್ಯವಸ್ಥೆ ಮಾಡಿಕೊಂಡಿರುವುದು ಉಂಟು.

ವಿಧಾನಸಭೆ ಚುನಾವಣೆಯಲ್ಲಿ ಹಿಂದಿನ ಸರ್ಕಾರದಲ್ಲಿ ಇಬ್ಬರು ಪ್ರಭಾವಿ ಸಚಿವರನ್ನು ಅಂದಿನ ನಾಯಕರು ನೆಚ್ಚಿಕೊಂಡಿದ್ದರು. ಮೈಸೂರು ಭಾಗದ ಒಬ್ಬರು ಸಚಿವರು ಭಾರೀ ಗಂಟು ಇಟ್ಟುಕೊಂಡು ಸಂಪರ್ಕ ಕಳೆದುಕೊಂಡರು. ಕೊನೆಗೆ ಉತ್ತರ ಕರ್ನಾಟಕ ಹಾಗೂ ಬೆಂಗಳೂರು ಆಸುಪಾಸಿನ ‍ಸಚಿವರು ಕೈಹಿಡಿದರು. ಇದರಿಂದಾಗಿ ಕಾಂಗ್ರೆಸ್‌ ನಾಯಕರು ಬಚಾವಾದರು.

ಸ್ಥಳೀಯ ಮಟ್ಟದಲ್ಲಿ ಹಣ ಹಂಚುವಾಗ ದೇವರ ಫೋಟೋ ಇಟ್ಟು, ಅರಿಶಿನ–ಕುಂಕುಮದ ಜತೆಗೆ ಕೊಡುವುದು ಉಂಟು. ಆಯಾ ಪ್ರದೇಶದ ಪ್ರಭಾವಿ ದೈವಗಳಾದ ಧರ್ಮಸ್ಥಳದ ಮಂಜುನಾಥ, ಸವದತ್ತಿ ಎಲ್ಲಮ್ಮ, ಸಿಗಂದೂರು ಪರಮೇಶ್ವರಿ, ಕೊಲ್ಲಾಪುರದ ಮಹಾಲಕ್ಷ್ಮಿ, ಗೊರವನಹಳ್ಳಿ ಮಹಾಲಕ್ಷ್ಮಿ ಹೀಗೆ ದೇವರುಗಳು ‘ಮತ’ವನ್ನು ಸಂಗ್ರಹಿಸಿಕೊಡುವ ಶಕ್ತಿಯಾಗುವುದು ಉಂಟು.

ಮಸೀದಿ, ದೇವಸ್ಥಾನದಲ್ಲೇ ಲೆಕ್ಕ ಚುಕ್ತಾ

ಮತದಾರರಿಗೆ ನೇರವಾಗಿ ಹಣ ತಲುಪಿಸುವ ವಿಧಾನ ಒಂದಿದೆ. ಹಾಗೆ ಹಣ ಪಡೆದವರು ಮತ್ತೊಬ್ಬರಿಗೆ ವೋಟು ಹಾಕುತ್ತಾರೆ ಎಂಬ ಅಪನಂಬಿಕೆಯಿಂದಾಗಿ ಮತ್ತೊಂದು ಪದ್ಧತಿ ಚಾಲ್ತಿಯಲ್ಲಿದೆ.

ಊರಿನ ಪ್ರಮುಖರನ್ನು ದೇವಸ್ಥಾನ ಅಥವಾ ಮಸೀದಿಯಲ್ಲಿ ಸೇರಿಸುವುದು. ನಿಮ್ಮ ಬಳಿ ಎಷ್ಟು ವೋಟಿದೆ ಎಂದು ವಿವರಣೆ ಪಡೆದು ಜನರಿಗೆ ತಕ್ಕಂತೆ ಹಣ ಎಣಿಸಿಕೊಡುವುದು. ಅದರ ಜತೆಗೆ ದೇವಸ್ಥಾನ ಅಥವಾ ಮಸೀದಿ ಅಭಿವೃದ್ಧಿಗೆ ಮುಫತ್ತಾಗಿ ಇಷ್ಟು ಕೊಡುತ್ತೇವೆ. ಒಂದೇ ಒಂದು ವೋಟು ಕೈತಪ್ಪಬಾರದು ಎಂದು ದೇವರ ಎದುರು ವಾಗ್ದಾನ ಮಾಡಿಸುವ ನೈಪುಣ್ಯವನ್ನೂ ರಾಜಕಾರಣಿಗಳು ತೋರುವುದುಂಟು.

ಬಳ್ಳಾರಿ ಮತ್ತು ₹500 ಕೋಟಿ
ಹಿಂದಿನ ಸರ್ಕಾರದ ಅವಧಿಯಲ್ಲಿ ಶ್ರೀರಾಮುಲು ಸಂಸದರಾಗಿ ಆಯ್ಕೆ ಯಾದ ಕಾರಣಕ್ಕೆ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಚುನಾವಣೆ ನಡೆಯಿತು. ಆ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲಿಸಿಕೊಳ್ಳುವುದು ಸರ್ಕಾರಕ್ಕೆ ಪ್ರತಿಷ್ಠೆಯಾಗಿತ್ತು. ಏನಾದರೂ ಮಾಡಿ ಗೆಲ್ಲಿಸಲೇಬೇಕು ಎಂದು ‘ಪವರ್‌ ಫುಲ್‌’ ನಾಯಕರಿಗೆ ಜವಾಬ್ದಾರಿ ವಹಿಸಲಾಗಿತ್ತು. ಕೊನೆಗೂ ಕಾಂಗ್ರೆಸ್‌ನಿಂದ ಎನ್‌.ವೈ. ಗೋಪಾಲಕೃಷ್ಣ ಗೆದ್ದರು.

ಅದಾದ ಮೇಲೆ ಕಡತವೊಂದಕ್ಕೆ ಸಹಿ ಹಾಕಲು ‘ಪವರ್‌ ಫುಲ್‌’ ನಾಯಕರು ಅಂದಿನ ವ್ಯವಸ್ಥಾಪಕ ನಿರ್ದೇಶಕರಿಗೆ ಒತ್ತಡ ಹಾಕಿದರು. ‘ಹಣಕಾಸು ಇಲಾಖೆ ಮುಖ್ಯಮಂತ್ರಿ ಬಳಿ ಇದೆ. ಅವರು ತಕರಾರು ತೆಗೆಯುತ್ತಾರೆ. ಹಾಗೆಲ್ಲ ಮಾಡಲು ಆಗುವುದಿಲ್ಲ. ನಿಯಮ ಪಾಲನೆ ಮಾಡಲೇಬೇಕು’ ಎಂದು ‘ಸಿಂಗ್‌ಜಿ’ ಖಡಕ್‌ ಆಗಿ ಹೇಳಿ ದರು. ಪವರ್‌ಫುಲ್ ನಾಯಕರು ಅವರನ್ನು ಯಕ್ಕಾಮಕ್ಕಾ ಬೈದದ್ದಲ್ಲದೇ, ಮುಖ್ಯಮಂತ್ರಿಯನ್ನೂ ಟೀಕಿಸಿದರು. ಇದನ್ನು ತಡೆಯಲಾಗದ ‘ಸಿಂಗ್‌ಜಿ’ ಸೀದಾ ಮುಖ್ಯಮಂತ್ರಿ ಹೋಗಿ ಅಲವತ್ತುಕೊಂಡರು.

ಅವರು ಕುಳಿತಲ್ಲೇ ಫೋನ್ ತೆಗೆದುಕೊಂಡು, ‘ಏನಪ್ಪಾ. . . ಅಧಿಕಾರಿಗೆ ಹೀಗೆಲ್ಲಾ ಬೈಯೋದಾ’ ಎಂದು ಖಾರವಾಗಿ ಹೇಳಿದರು.

‘ಬಳ್ಳಾರಿ ಚುನಾವಣೆ ನೋಡಿಕೊಂಡು ಗೆಲ್ಲಿಸಿಕೊಂಡು ಬಾ ಎಂದು ನೀವೇ ಹೇಳಿದ್ದೀರಿ. ಅದನ್ನು ಮಾಡಿದ್ದೇನೆ. ಆ ಖರ್ಚು ಎಲ್ಲಿಂದ ಹೊಂದಿಸುವುದು ನೀವೇ ಹೇಳಿ’ ಎಂದು ಪವರ್‌ಫುಲ್‌ ನಾಯಕರು ಪ್ರಶ್ನೆ ಹಾಕಿದರು.

‘ಓ ಅದಾ. . ಆದರೂ ಸ್ವಲ್ಪ ಹುಷಾರಾಗಿ ಹ್ಯಾಂಡಲ್ ಮಾಡಪ್ಪ. ಅಧಿಕಾರಿಗಳನ್ನು ಬೈದರೆ ಕೆಲಸ ಆಗುತ್ತದಾ. ಜಾಗೃತೆ’ ಎಂದು ಹೇಳಿ ಮುಖ್ಯಮಂತ್ರಿ ಫೋನ್ ಇಟ್ಟರು. ಸಿಂಗ್‌ಜಿ ಅದೇ ವಾರದಲ್ಲಿ ಕಂದಾಯ ಇಲಾಖೆ(ವಿಪತ್ತು ನಿರ್ವಹಣೆ)ಗೆ ವರ್ಗ ಆದರು. ಬಳಿಕ ಅಲ್ಪಾವಧಿಯಲ್ಲಿ ಹಣಕಾಸು ಇಲಾಖೆಗೆ ವರ್ಗ ಆಗಿ, ಅಲ್ಲಿಂದ ಕೇಂದ್ರ ಸೇವೆಗೆ ತೆರಳಿದರು.

ಪೊಲೀಸರಿಗೆ ಹಬ್ಬವೋ ಹಬ್ಬ

ಚುನಾವಣೆ ಬಂತೆಂದರೆ ಪೊಲೀಸರು ಸೇರಿದಂತೆ ವಿವಿಧ ಜಾಗೃತ ದಳ, ಚೆಕ್‌ಪೋಸ್ಟ್‌ಗಳಲ್ಲಿ ಕೆಲಸ ಮಾಡುವವರಿಗೆ ಹಬ್ಬವೋ ಹಬ್ಬ. ಸಾಗಿಸುವ ಹಣಕ್ಕೆ ಲೆಕ್ಕ ಇರುವುದಿಲ್ಲ, ಅಧಿಕೃತ ವಾರಸುದಾರರು ಇರುವುದಿಲ್ಲ. ಹೇಳಿಕೇಳಿ ಅದು ಹಡಬೆ ದುಡ್ಡು. ಹೀಗಾಗಿ ₹5 ಕೋಟಿ ಸಿಕ್ಕರೆ ತೋರಿಸುವುದು ₹2 ಕೋಟಿಯೋ ₹3 ಕೋಟಿಯೋ ಇರುತ್ತದೆ. ಚುನಾವಣಾ ಆಯೋಗದ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಇಲ್ಲದಿದ್ದರೆ ದುಡ್ಡು ಮಂಗಮಾಯ. ಎಲ್ಲರೂ ಸೇರಿ ಹಂಚಿಕೊಂಡು ಬಿಡುವ ಪರಿಪಾಟ ಇದೆ. ಚಿನ್ನ, ಬೆಳ್ಳಿಯ ವಿಚಾರದಲ್ಲೂ ಇದು ನಡೆಯುತ್ತದೆ. ಹೀಗಾಗಿ, ಚುನಾವಣೆ ಬಂತೆಂದರೆ ಎಲ್ಲರಿಗೂ ಹಬ್ಬ.

ಹವಾಲಾ ದಾರಿ

ಹಣ ಹಂಚಿಕೆ ತಡೆಯಲು ಆಯೋಗ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಆರಂಭಿಸುವ ಮುನ್ನ ಹಣವನ್ನು ಬೇರೆ ಬೇರೆ ನಾನಾ ವಿಧಾನಗಳಲ್ಲಿ ಸಾಗಿಸಲಾಗುತ್ತಿತ್ತು.

ದೂರದ ಊರಿಗೆ ಈಗ ಹಣ ಸಾಗಿಸುವ ಪದ್ಧತಿ ಇಲ್ಲ. ಅದೇನಿದ್ದರೂ ಹವಾಲಾ ಮೂಲಕ ಸಾಗಣೆಯಾಗುತ್ತದೆ. ಬೆಂಗಳೂರಿನಲ್ಲಿರುವ ವ್ಯಕ್ತಿಯ ಮೂಲಕ ಬೆಳಗಾವಿಯೋ ತೀರ್ಥಹಳ್ಳಿಯೋ ಜೇವರ್ಗಿಯೋ ಹೀಗೆ ಹಣ ತಲುಪುತ್ತದೆ. ಎಲ್ಲ ಪಕ್ಷಗಳಲ್ಲೂ ಹವಾಲಾ ಜಾಲದ ಸಂಪರ್ಕ ಇರುವ ನಾಯಕರು ಇದನ್ನು ನಡೆಸುವುದು ರೂಢಿ.

ಅಧಿಕಾರಿಗಳು ವಾಸನಾಗ್ರಹಿಗಳು

ವಾಸನೆ ಹಿಡಿದು ಪತ್ತೆಹಚ್ಚುವುದರಲ್ಲಿ ನಾಯಿಯೇ ಅತಿ ಕುಶಲಮತಿ. ಆದರೆ, ಅಧಿಕಾರದ ವಾಸನೆ ಹಿಡಿಯುವಲ್ಲಿ ನಾಯಿಗಿಂತ ಅಧಿಕಾರಿಗಳೇ ಚಾಣಾಕ್ಷರು ಎಂದು ಹಿಂದೆ ಗೃಹ ಸಚಿವರಾಗಿದ್ದವರು ಹೇಳುತ್ತಿದ್ದುದುಂಟು.

ರಾಜ್ಯದಲ್ಲಿ ಒಂದು ಪಕ್ಷದ ಸರ್ಕಾರ ಇದ್ದಾಗ ನಮ್ಮ ಕಡೆ ಕಣ್ಣೆತ್ತಿಯೂ ನೋಡದ ಅಧಿಕಾರಿಗಳು ನಾಲ್ಕು ವರ್ಷ ಕಳೆಯುವ ಹೊತ್ತಿಗೆ ಮೂಗನ್ನು ಹೊರಳಿಸಿ ಚುರುಕಾಗುತ್ತಾರೆ. ಮುಂದೆ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬುದು ಮೊದಲು ಗೊತ್ತಾಗುವುದು ಈ ಮಂದಿಗೆ. ಮುಖ ನೋಡಲು ಹಿಂಜರಿಯುತ್ತಿದ್ದವರು ಜನ್ಮ ದಿನ, ವಿವಾಹ ವಾರ್ಷಿಕೋತ್ಸವದ ದಿನ ವನ್ನು ತಿಳಿದುಕೊಂಡು ಸ್ವೀಟ್ ಬಾಕ್ಸ್‌, ಹೂಗುಚ್ಛ ಹಿಡಿದು ಮನೆಗೆ ಬರುತ್ತಾರೆ. ಸುಮ್ಮನೆ ಶುಭಾಶಯ ಹೇಳಿ ಹೋಗುತ್ತಾರೆ. ಮುಂದೆ ಅಧಿಕಾರ ಬಂದರೆ ಅನುಕೂಲಕ್ಕೆ ಬರುತ್ತದೆ, ಇವರು ಪ್ರಭಾವಿ ಹುದ್ದೆಯಲ್ಲಿರುತ್ತಾರೆ ಎಂಬ ಲೆಕ್ಕದ ಆಧಾರದ ಮೇಲೆ ಹೀಗೆ ಆಡುತ್ತಾರೆ.

ಈ ಮಂದಿಯೇ ಚುನಾವಣೆಯ ವೆಚ್ಚವನ್ನು ನೀಡುತ್ತಾರೆ. ಆದರೆ, ಅವರು ಪಕ್ಷ ಭೇದ ಮಾಡುವುದಿಲ್ಲ. ಅಧಿಕಾರಕ್ಕೆ ಬಂದೇ ಬರುತ್ತಾರೆ ಎಂಬ ಲೆಕ್ಕಾಚಾರ ಹಾಕಿ ಅಧಿಕಾರ ಹಿಡಿಯುವವರಿಗೆ ₹2 ಕೋಟಿ ಕಪ್ಪ ಕೊಟ್ಟರೆ, ವಿರೋಧ ಪಕ್ಷದಲ್ಲಿ ಕೂರಬಹುದಾದವರಿಗೂ ₹1 ಕೋಟಿ ನೀಡುತ್ತಾರೆ. ಯಾವ ಪಕ್ಷದ ಸರ್ಕಾರ ಬಂದರೂ ಕೆಲವರು ಶಾಸಕರಾಗಿ, ಪ್ರಭಾವಿಗಳಾಗಿ ಇರುತ್ತಾರೆ. ಅಂತಹವರಿಗೆ ₹10 ಲಕ್ಷದಿಂದ ₹50 ಲಕ್ಷದವರೆಗೂ ಅಧಿಕಾರಿಗಳು ಚುನಾವಣೆ ನಿಧಿ ಕೊಡುವ ಪದ್ಧತಿ ಇದೆ.

ಎಣ್ಣೆ ಬದಲು ಟೋಕನ್‌

ಚುನಾವಣೆ ಬಂತೆಂದರೆ ಕಳಪೆ ದರ್ಜೆ ವಿಸ್ಕಿ, ಬ್ರಾಂಡಿ ಉತ್ಪಾದಿಸುವವರಿಗೆ ಹಾಗೂ ಕುಡಿಯುವವರಿಗೆ ಸಂಭ್ರಮ. ಇತ್ತೀಚಿನ ದಿನಮಾನಗಳಲ್ಲಿ ಕಳಪೆ ದರ್ಜೆಯ ಮದ್ಯ ಕುಡಿದು ಅವಘಡ, ಅಪಖ್ಯಾತಿ ಬರುವುದನ್ನು ತಪ್ಪಿಸಲು ‘ಎಣ್ಣೆ’ ಪೂರೈಸುವುದನ್ನು ರಾಜಕಾರಣಿಗಳು ಬಹುತೇಕ ನಿಲ್ಲಿಸಿದ್ದಾರೆ.

ಅದರ ಬದಲು, ಕುಡುಕರಿಗೆ, ಪ್ರಚಾರಕ್ಕೆ, ಸಭೆಗೆ ಬರುವವರಿಗೆ ಟೋಕನ್ ನೀಡಲಾಗುತ್ತದೆ. ಅದನ್ನು ತಮ್ಮ ಆಸುಪಾಸಿನ ನಿರ್ದಿಷ್ಟ ವೈನ್ ಸ್ಟೋರ್ ಅಥವಾ ಬಾರ್‌ಗೆ ಕೊಟ್ಟರೆ 2 ಅಥವಾ 3 ಪೆಗ್‌ನಷ್ಟು (180 ಎಂ.ಎಲ್‌/ಕ್ವಾರ್ಟರ್‌) ಯಾವುದೋ ಕಡಿಮೆ ದರದ ಮದ್ಯವನ್ನು ಅಂಗಡಿಯಾತ ನೀಡುವ ವ್ಯವಸ್ಥೆ ಬಂದಿದೆ.

‘ಮಾರಿ’ ಕೊಂಡವರು

ಮತದಾರರಷ್ಟೇ ಮಾರಿಕೊಳ್ಳುವವರಲ್ಲ. ಅವರಿಂದ ಆಯ್ಕೆಯಾಗುವ ಶಾಸಕರೂ ಮಾರಿಕೊಂಡವರೇ.

ಈಗ ಬಿಜೆಪಿಯಿಂದ ರಾಜ್ಯಸಭಾ ಸದಸ್ಯರಾಗಿರುವ ಉದ್ಯಮಿಯೊಬ್ಬರು ದಶಕದ ಹಿಂದೆ ಮೊದಲ ಬಾರಿಗೆ ಕರ್ನಾಟಕ ವಿಧಾನಸಭೆಯಿಂದ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಶಾಸಕರಿಗೆ ಆ ಕಾಲಕ್ಕೆ ತಲಾ ₹10 ಲಕ್ಷ ಇನಾಮು ಕೊಟ್ಟಿದ್ದರು.

ಬೆಳಗಾವಿಯ ಪ್ರಭಾವಿ ಉದ್ಯಮಿ, ಬಿಜೆಪಿಯ ಹಾಲಿ ಶಾಸಕರೊಬ್ಬರು (ಆಗ ಜೆಡಿಎಸ್‌ನಲ್ಲಿದ್ದರು) ಈ ಮೊತ್ತವನ್ನು ತೆಗೆದುಕೊಂಡು ಹೋಗು ಎಂದು ಅದೇ ಜಿಲ್ಲೆಯ ಶಾಸಕರೊಬ್ಬರಿಗೆ ಸೂಚಿಸಿದರು. ‘ಅಷ್ಟು ಕಾಸು ಇಟ್ಟುಕೊಂಡು ರೈಲಿನಲ್ಲಿ ಹೋದರೆ ತಲೆ ಕಡಿದು ದುಡ್ಡು ತೆಗೆದುಕೊಂಡು ಹೋದರೆ ಏನು ಮಾಡುವುದು? ಡಿ.ಡಿ.ಯಲ್ಲಿ ಕೊಡು’ ಎಂದು ಆ ಶಾಸಕರು ಪಟ್ಟು ಹಿಡಿದರು.

‘ಏಯ್... ಮಗ್ನಾ. ಯಾವನ್ಲೇ ನೀನು? ಲಂಚದ್ ದುಡ್ಡು ಯಾವ್ನು ನಿನ್ಗ ಡಿ.ಡಿ. ಕೊಡ್ತಾನೋ ಮಾರಾಯ. ಬೇಕಾದ್ರೆ ತೊಗೊಂಡು ಹೋಗು’ ಎಂದು ಗುಟ್ಕಾವನ್ನು ಬಾಯಿಂದ ಉಗಿಯುತ್ತಲೇ ಗದರಿಸಿದ್ದರು. ಆದರೂ ದುರ್ಯೋಧನನ ಛಲ ಬಿಡದ ಶಾಸಕ, ನೀನೇ ತಂದುಕೊಡಾ ಬೆಳಗಾವಿಗೆ ಎಂದು ಅಲ್ಲಿಯೇ ತರಿಸಿಕೊಂಡಿದ್ದರು.

ಜಾತಿ ಹಾಗೂ ಹೈಕಮಾಂಡ್ ಬಲ ಇಲ್ಲದೆ ರಾಜ್ಯಸಭೆ, ವಿಧಾನಪರಿಷತ್ತಿನ ಸದಸ್ಯರಾಗಬೇಕಾದರೆ ಕ್ರಮವಾಗಿ ₹50 ಕೋಟಿಯಿಂದ ₹10 ಕೋಟಿವರೆಗೂ ನೀಡಲೇಬೇಕಾಗಿದೆ. ಇದರಲ್ಲಿ ಪಕ್ಷದ ನಿಧಿ ಜತೆಗೆ, ಶಾಸಕರ ಪಾಲು ಸೇರಿರುತ್ತದೆ ಎಂಬುದು ಗುಟ್ಟೇನಲ್ಲ.

ಹಣ ಸಂಗ್ರಹಕ್ಕೆ ಸ್ಟ್ರಾಂಗ್ ರೂಂ

ಇಡೀ ಚುನಾವಣೆಯ ಖರ್ಚನ್ನು ಕೆಲವರು ವಹಿಸಿಕೊಳ್ಳುವುದು ಉಂಟು. ರಾಜ್ಯ ಘಟಕದ ಅಧ್ಯಕ್ಷ ಅಥವಾ ಪ್ರಭಾವಿ ಹುದ್ದೆಯಲ್ಲಿರುವವರು ಇದನ್ನು ನಿರ್ವಹಿಸುವುದು ಚಾಲ್ತಿಯಲ್ಲಿದೆ.

ಇಂತಹವರು ತಮ್ಮ ನಂಬಿಕಸ್ತರ ಮೂಲಕ ಈ ಅವಧಿ ಯಲ್ಲಿ ಸ್ಟ್ರಾಂಗ್ ರೂಂ ನಿರ್ಮಿಸಿಕೊಂಡಿರುತ್ತಾರೆ. ಸಾಮಾನ್ಯವಾಗಿ ಗೇಟೆಡ್ ಕಮ್ಯುನಿಟಿಗಳ ಒಳಗಿರುವ ಫ್ಲ್ಯಾಟ್ ಅಥವಾ ಮನೆ ಯನ್ನು ನಿರ್ದಿಷ್ಟ ಅವಧಿಗೆ ಬಾಡಿಗೆ ಪಡೆಯಲಾಗುತ್ತದೆ. ಸುತ್ತಲೂ ಸಿ.ಸಿ ಟಿ.ವಿ ಅಳವಡಿಸಲಾಗುತ್ತದೆ. ಈ ಅವಧಿಗಾಗಿ ನಂಬಿಕಸ್ತ ಹುಡು ಗರನ್ನು ನೇಮಿಸಿಕೊಳ್ಳಲಾಗುತ್ತದೆ. ಕೆಲಸಕ್ಕೆ ಬರುತ್ತಿದ್ದಂತೆ ಮೊಬೈಲ್ ಕಿತ್ತು ಕೊಂಡು, ಬಟ್ಟೆ–ಬರೆಗಳನ್ನು ಕಳಚಿ ಕೇವಲ ಚೆಡ್ಡಿ ಮತ್ತು ಬನಿಯನ್ ಕೊಡಲಾ ಗುತ್ತದೆ. ಸ್ಟ್ರಾಂಗ್ ರೂಂ ನಿರ್ವಹಿಸುವ ವ್ಯಕ್ತಿಗೆ ಮಾತ್ರ ಎಲ್ಲ ವಿವರಗಳೂ ಗೊತ್ತಿರುತ್ತವೆ. ಅಲ್ಲಿ ಬಂದ ಹಣವನ್ನು ಕೂಡಿಟ್ಟು ರಕ್ಷಿಸುವುದು, ಬೇಕೆಂದಾಗ ಕೊಡುವುದಷ್ಟೇ ಇಲ್ಲಿನವರ ಕೆಲಸ. ಚುನಾವಣೆ ಮುಗಿಯವವರೆಗೂ ಅವರು ಹೊರ ನಡೆಯುವಂತಿಲ್ಲ.

ಅಲ್ಲಿಗೆ ಹಣ ತಲುಪಿಸುವುದು ಹಾಗೂ ಅಲ್ಲಿಂದ ಹಣ ಕೊಂಡೊ ಯ್ಯಲು ಬೇರೆ ನಂಬಿಕಸ್ತರನ್ನು ನಿಯೋಜಿಸಲಾಗುತ್ತದೆ. ಯಾರು ಹೇಳಿದರು, ಯಾರಿಗೆ ತಲುಪಿಸಬೇಕು, ಯಾರು ಬಂದ ಇಸಿದುಕೊಳ್ಳುತ್ತಾರೆ ಎಂಬುದು ಯಾರಿಗೂ ಗೊತ್ತಿರುವುದಿಲ್ಲ. ಮೇಲಿನಿಂದ ಬಂದ ನಿರ್ದೇಶನ ಗಳನ್ನು ಪಾಲಿಸುವುದಷ್ಟೇ ಹುಡುಗರ ಕೆಲಸ. ಇದೆಲ್ಲವೂ ಒಂದು ನಿರ್ದಿಷ್ಟ ಕೋಡ್‌ ವರ್ಡ್‌ ಆಧಾರದ ಮೇಲೆ ನಡೆಯುತ್ತದೆ.

ಕಂತೆ ಕಂತೆ ಲೆಕ್ಕ ಹಾಕಿ ರಟ್ಟಿನ ಬಾಕ್ಸ್‌ನಲ್ಲಿ ಹಣವನ್ನು ಕೂಡಿಡಲಾಗುತ್ತದೆ. ಅದರ ಮೇಲೆ ಕೋಡ್‌ವರ್ಡ್‌ನಲ್ಲಿ ಮೊತ್ತ ಬರೆಯಲಾಗುತ್ತದೆ. ಬಾಕ್ಸ್ ತೆರೆದರೆ ಗುರುತು ಬೀಳುವಂತೆ ಅದರ ಮೇಲೆ ಪೇಪರ್ ಅಂಟಿಸಿ ಗೀಚಲಾಗಿರುತ್ತದೆ. ಯಾವುದಾದರೂ ವ್ಯಕ್ತಿ ಕದಿಯಲು ಬಾಕ್ಸ್‌ ತೆರೆದರೆ ಸಿಕ್ಕಿ ಬೀಳುವುದು ಗ್ಯಾರಂಟಿ ಎನ್ನುತ್ತಾರೆ ಈ ಕೆಲಸ ಮಾಡಿದವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT