ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಮುಂಗಾರು ಬಿರುಸು: ಹಲವೆಡೆ ಉತ್ತಮ ಮಳೆ

ತಾಳಿಕೋಟೆ– ಹಡಗಿನಾಳ ರಸ್ತೆಯ ನೆಲಮಟ್ಟದ ಸೇತುವೆ ಜಲಾವೃತ
Last Updated 11 ಜೂನ್ 2020, 21:18 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಬಿರುಸು ಪಡೆದಿದ್ದು, ಹಲವೆಡೆ ಉತ್ತಮ ಮಳೆಯಾಗಿದೆ. ಕೃಷಿ ಚಟುವಟಿಕೆಗಳು ಆರಂಭವಾಗಿವೆ.ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಜಿ.ಕೋಡಿಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ಹಸುವೊಂದು ಸಾವಿಗೀಡಾಗಿದೆ.

ಕೊಡಗು ಜಿಲ್ಲೆಯಲ್ಲಿ ಗುರುವಾರ ಬೆಳಿಗ್ಗೆ ಬಿಡುವು ಕೊಟ್ಟಿದ್ದ ಮಳೆ, ಸಂಜೆ ಬಳಿಕ ಜೋರಾಗಿ ಸುರಿಯಲು ಆರಂಭಿಸಿದ್ದು, ಮುಂಗಾರು ಬಿರುಸು ಪಡೆದಿದೆ.ಮಡಿಕೇರಿ, ಗಾಳಿಬೀಡು, ತಲಕಾವೇರಿ, ಭಾಗಮಂಡಲ, ನಾಪೋಕ್ಲು, ಕಕ್ಕಬ್ಬೆ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಬುಧವಾರ ರಾತ್ರಿಯೂ ಮಳೆ ಅಬ್ಬರಿಸಿತ್ತು.

ಹಾಸನದಲ್ಲಿ ಮಧ್ಯಾಹ್ನ ಅರ್ಧ ತಾಸು ಜೋರು ಮಳೆ ಸುರಿದಿದೆ. ಸಕಲೇಶಪುರದಲ್ಲಿ ಸಂಜೆ ತುಂತುರು ಮಳೆಯಾಯಿತು.ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಹಾಗೂ ವರುಣಾದಲ್ಲಿ ಮಳೆಯಾಗಿದೆ.

ಚಿತ್ರದುರ್ಗ ನಗರ ಸೇರಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಬಿರುಸಿನ ಗಾಳಿ ಸಹಿತ ಉತ್ತಮ ಮಳೆ ಸುರಿಯಿತು.ಹೊಳಲ್ಕೆರೆ ಪಟ್ಟಣವೂ ಸೇರಿ ತಾಲ್ಲೂಕಿನಾದ್ಯಂತ ಸೋನೆ ಮಳೆ ಸುರಿಯಿತು.

ದಾವಣಗೆರೆ ನಗರ ಸೇರಿ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗಿದೆ.ಉಚ್ಚಂಗಿದುರ್ಗ ಗ್ರಾಮದ ಸುತ್ತಮುತ್ತ ಬುಧವಾರ ಸಂಜೆ ಧಾರಾಕಾರವಾಗಿ ಮಳೆ ಸುರಿದು ಅವಾಂತರ ಸೃಷ್ಟಿಸಿತು.ಉಚ್ಚಂಗಿದುರ್ಗ, ಬೇವಿನಹಳ್ಳಿ, ಕರಡಿ ದುರ್ಗ ಗ್ರಾಮಗಳಲ್ಲಿ 50ಕ್ಕೂ ಹೆಚ್ಚು ಮರಗಳು ಧರೆಗೆ ಉರುಳಿವೆ. ವಿದ್ಯುತ್‌ ಕಂಬಗಳು ಉರುಳಿ ಬಿದ್ದಿದ್ದವು. ಇದರಿಂದರಸ್ತೆಯಲ್ಲಿ ಸಂಚಾರ ಕಡಿತಗೊಂಡಿತ್ತು. ಉಚ್ಚಂಗಿ ದುರ್ಗ-ಮಡಕಿ ನಿಚ್ಚಾಪುರ ರಸ್ತೆ ಸಂಪೂರ್ಣ ಜಲಾವೃತಗೊಂಡಿತ್ತು.

ಹರಪನಹಳ್ಳಿ ತಾಲ್ಲೂಕಿನ ಬೆಸ್ಕಾಂ ತೆಲಿಗಿ ಉಪವಿಭಾಗದಲ್ಲಿ 2 ವಿದ್ಯುತ್ ಟ್ರಾನ್ಸ್‌ಫಾರ್ಮರ್ ಮತ್ತು 15 ವಿದ್ಯುತ್ ಕಂಬಗಳು ಧರೆಗುರುಳಿದ್ದು, ₹ 3 ಲಕ್ಷ ಹಾನಿಯಾಗಿದ. ಶಿವಮೊಗ್ಗ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದೆ.

ಉಡುಪಿ, ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂಗಾರು ಮಳೆ ಮುಂದುವರಿದಿದೆ. ಎಲ್ಲೆಡೆಯೂ ಉತ್ತಮ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆಗಳು ಆರಂಭವಾಗಿವೆ.

ಮಂಗಳೂರು ನಗರದಲ್ಲಿ ಎರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಮಂಗಳೂರು ತಾಲ್ಲೂಕಿನಲ್ಲಿ 6.3 ಸೆಂ.ಮೀ., ಬೆಳ್ತಂಗಡಿ ತಾಲ್ಲೂಕಿನಲ್ಲಿ 5.8 ಸೆಂ.ಮೀ. ಸೇರಿದಂತೆ ಸರಾಸರಿ 4.6 ಸೆಂ.ಮೀ. ಮಳೆಯಾಗಿದೆ.

ವಿಜಯಪುರ, ಹೊಸಪೇಟೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗಿದೆ.ಕಾರವಾರದಲ್ಲಿ 8 ಸೆ.ಮೀ, ಕುಮಟಾದಲ್ಲಿ 7.8 ಸೆ.ಮೀ,ಅಂಕೋಲಾ ಮತ್ತು ಭಟ್ಕಳದಲ್ಲಿ 6.3 ಸೆ.ಮೀ ಹಾಗೂ ಹೊನ್ನಾವರದಲ್ಲಿ 6.1 ಸೆ.ಮೀ ಮಳೆಯಾಗಿದೆ.

ವಿಜಯಪುರ ಜಿಲ್ಲೆಯ ತಾಳಿಕೋಟೆಯಲ್ಲಿ ಡೋಣಿ ನದಿ ಜಲಾನಯನ ಪ್ರದೇಶದಲ್ಲಿ ಸುರಿದ ಮಳೆಯಿಂದಾಗಿ ಪಟ್ಟಣದ ಪಕ್ಕದಲ್ಲಿ ಹರಿಯುತ್ತಿರುವ ಡೋಣಿ ನದಿ ಮೈದುಂಬಿಕೊಂಡು ಹರಿಯುತ್ತಿದೆ. ಇದರಿಂದಾಗಿ ಡೋಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ತಾಳಿಕೋಟೆ– ಹಡಗಿನಾಳ ರಸ್ತೆಯಲ್ಲಿನ ನೆಲಮಟ್ಟದ ಸೇತುವೆ ಬೆಳಗಿನಿಂದ ಸಂಜೆಯವರೆಗೆ ಜಲಾವೃತವಾಗಿ ಸಂಚಾರಕ್ಕೆ ಅಡ್ಡಿಯಾಗಿತ್ತು. ಹೊಸಪೇಟೆಯಲ್ಲಿ ಬುಧವಾರ ರಾತ್ರಿ ಆರಂಭಗೊಂಡ ಮಳೆ ಗುರುವಾರವೂ ಮುಂದುವರಿದಿದೆ.

ಬೀದರ್‌ ಜಿಲ್ಲೆಯ ವಿವಿಧೆಡೆ ಹಾಗೂ ಯಾದಗಿರಿ ಜಿಲ್ಲೆಯ ಶಹಾಪುರ, ಹುಣಸಗಿ ತಾಲ್ಲೂಕುಗಳಲ್ಲಿ ಉತ್ತಮ ಮಳೆ ಸುರಿಯಿತು.ಗುರುವಾರ ಬೆಳಿಗ್ಗೆ 8ಕ್ಕೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿಸೇಡಂ ತಾಲ್ಲೂಕುಗೋಲಕುಂದಾ ಗ್ರಾಮದಲ್ಲಿ 77.7 ಮಿ.ಮೀ. ಮಳೆ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT