ಬುಧವಾರ, ಜುಲೈ 28, 2021
27 °C
ಮೋಟಾರು ವಾಹನ (ಎಂ.ವಿ) ಕಾಯ್ದೆ: ರಾಜ್ಯದಲ್ಲಿ ಗೆಜೆಟ್‌ ಪ್ರಕಟಣೆ ವಿಳಂಬ

ದುಬಾರಿ ದಂಡ: ಅಧಿಸೂಚನೆ ಹೊರಡಿಸದ ರಾಜ್ಯ ಸರ್ಕಾರ, ಗೊಂದಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಂದರ್ಭಿಕ ಚಿತ್ರ

ಬೆಂಗಳೂರು: ಮೋಟಾರು ವಾಹನ (ಎಂ.ವಿ) ಕಾಯ್ದೆಗೆ ತಂದಿರುವ ತಿದ್ದುಪಡಿ ಸೆ.1ರಿಂದ ಜಾರಿಗೊಳಿಸಿ ಕೇಂದ್ರ ಸರ್ಕಾರವು ಆ. 30ರಂದು ವಿಶೇಷ ಗೆಜೆಟ್‌ ಮೂಲಕ ಅಧಿಸೂಚನೆ ಹೊರಡಿಸಿದೆ. ಆದರೆ, ಅದಕ್ಕೆ ಪೂರಕವಾಗಿ ರಾಜ್ಯ ಸರ್ಕಾರವು ವಿಶೇಷ ಗೆಜೆಟ್‌ ಮೂಲಕ ಅಧಿಸೂಚನೆ ಹೊರಡಿಸದೇ ಇರುವುದು ಗೊಂದಲಗಳಿಗೆ ಕಾರಣವಾಗಿದೆ.

ರಾಜ್ಯ ಸರ್ಕಾರವು ಇನ್ನೂ ಅಧಿಸೂಚನೆ ಹೊರಡಿಸದೇ ಇರುವುದರಿಂದ ಕಾಯ್ದೆಯಲ್ಲಿರುವಂತೆ ಭಾರಿ ದಂಡ ವಿಧಿಸಲು ಅವಕಾಶ ಇದೆಯೇ ಎಂಬ ಜಿಜ್ಞಾಸೆ ಮೂಡಿದೆ.

‘ಮೋಟಾರು ವಾಹನ ಕಾಯ್ದೆಗೆ ತಂದಿರುವ ತಿದ್ದುಪಡಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಆಗಸ್ಟ್‌ 9ರಂದು ಗೆಜೆಟ್‌ ಹೊರಡಿಸಿದೆ. ಆಗಸ್ಟ್ 30ರಂದು ಅಧಿಸೂಚನೆಯನ್ನೂ ಹೊರಡಿಸಿರುವುದರಿಂದ ಕಾಯ್ದೆ ದೇಶದಾದ್ಯಂತ ಜಾರಿಗೆ ಬಂದಂತಾಗಿದೆ’ ಎಂದು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.‌

ಆದರೆ, ಕಾಯ್ದೆಯಲ್ಲಿರುವ ಸೆಕ್ಷನ್‌ 200ರ ಅಡಿಯಲ್ಲಿ ನೀಡಲಾಗಿರುವ ಅಧಿಕಾರವನ್ನು ಚಲಾಯಿಸಿ ಮತ್ತು ಈ ಸಂಬಂಧ ಈಗಾಗಲೇ ಹೊರಡಿಸಲಾಗಿರುವ ಅಧಿಸೂಚನೆಗಳನ್ನು ರದ್ದುಪಡಿಸಿ, ರಾಜ್ಯ ಸರ್ಕಾರವು ಗೆಜೆಟ್‌ನಲ್ಲಿ ಅಧಿಸೂಚನೆ ಹೊರಡಿಸಬೇಕು. ಈ ಸಂಬಂಧ ಸಾರಿಗೆ ಇಲಾಖೆ ಮಂಗಳವಾರ (ಸೆ. 2) ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಿದೆ’ ಎಂದೂ ಅವರು ವಿವರಿಸಿದರು.

ಅಧಿಸೂಚನೆಗೂ ಮೊದಲೇ ದಂಡ

ಕುಡಿದು ವಾಹನ ಚಲಾಯಿಸಿದ ಅಪರಾಧಕ್ಕೆ ಇಬ್ಬರಿಗೆ ‘ಕೇಂದ್ರ ಮೋಟಾರು ವಾಹನ (ತಿದ್ದುಪಡಿ) ಕಾಯ್ದೆ–2019’ರ ಅನ್ವಯ ಇಂಡಿ ಜೆಎಂಎಫ್‌ಸಿ ನ್ಯಾಯಾಲಯವು ಆ. 23ರಂದೇ ತಲಾ ₹ 10 ಸಾವಿರ ದಂಡ ವಿಧಿಸಿತ್ತು. ಝಳಕಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಸ್ಥಳೀಯ ರತನ್‌ ತಳವಾರ ಮತ್ತು ಬಳ್ಳೊಳ್ಳಿಯ ನಜೀರ್‌ ಕೊಕರೆ ಅವರಿಗೆ ದಂಡ ವಿಧಿಸಲಾಗಿತ್ತು.

‘ಚಾಲನಾ ಪರವಾನಗಿ ಇಲ್ಲದೆ ಮತ್ತು ಮದ್ಯ ಸೇವಿಸಿದ್ದ ಬಗ್ಗೆ ಇಬ್ಬರೂ ತಪ್ಪು ಒಪ್ಪಿಕೊಂಡಿದ್ದಾರೆ. ಅದರಂತೆ, ಕಾಯ್ದೆಯ ಸೆಕ್ಷನ್‌ 181 (ಚಾಲನಾ ಪ್ರಮಾಣ ಪತ್ರ ಇಲ್ಲದೆ ವಾಹನ ಚಾಲನೆ) ಮತ್ತು 185 ಅಡಿ (ಮದ್ಯ ಸೇವಿಸಿ ಅಪಾಯಕಾರಿಯಾಗಿ ವಾಹನ ಚಾಲನೆ) ಇಬ್ಬರಿಗೂ ತಲಾ ₹ 10,000 ದಂಡ ವಿಧಿಸಲಾಗಿದೆ’ ಎಂದು ನ್ಯಾಯಾಧೀಶರು ಈ ಆದೇಶದಲ್ಲಿ ತಿಳಿಸಿದ್ದಾರೆ.

ಕುಡಿದು ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದ ಬಾಗಲಕೋಟೆ ಜಿಲ್ಲೆಯ ಶಿಪ್ಪರಮಟ್ಟಿಯ ವ್ಯಕ್ತಿಯೊಬ್ಬರು ಆಗಸ್ಟ್ 28ರಂದು, ಇದೇ ರೀತಿಯ ಪ್ರಕರಣದಲ್ಲಿ ಜಮಖಂಡಿಯಲ್ಲಿ ಆಗಸ್ಟ್ 31ರಂದು ಚಾಲಕನೊಬ್ಬ ಸ್ಥಳೀಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ₹ 10 ಸಾವಿರ ದಂಡ ಪಾವತಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು