ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಂಪರೆ ಗೌರವಿಸಿದರಷ್ಟೇ ಪಾಲ್ಗೊಳ್ಳುವೆ

ಉಳವಿ ಜಾತ್ರೆಯ ಬಗ್ಗೆ ಮುರುಘಾ ಶರಣರ ಪ್ರತಿಕ್ರಿಯೆ
Last Updated 12 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

ಚಿತ್ರದುರ್ಗ: ಮುರುಘಾ ಪರಂಪರೆಯನ್ನು ಗೌರವಿಸಿ ಆಹ್ವಾನಿಸಿದರೆ ಮಾತ್ರ ಉಳವಿ ಚೆನ್ನಬಸವೇಶ್ವರ ಜಾತ್ರೆಯ ರಥೋತ್ಸವದಲ್ಲಿ ಪಾಲ್ಗೊಳ್ಳುತ್ತೇವೆ. ಶಾಂತಿಗೆ ಭಂಗವುಂಟಾಗುವ ಕೆಲಸವನ್ನು ಮಠ ಯಾವತ್ತೂ ಮಾಡುವುದಿಲ್ಲ ಎಂದು ಶಿವಮೂರ್ತಿ ಮುರುಘಾ ಶರಣರು ತಿಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಉಳವಿ ಚೆನ್ನಬಸವೇಶ್ವರ ಟ್ರಸ್ಟ್‌ ಮಾಡಿರುವ ಆರೋಪಕ್ಕೆ ಶರಣರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದರು.

‘ಶರಣರ ಶೂನ್ಯ ತತ್ವವನ್ನು ಮುಂದುವರಿಸಿಕೊಂಡು ಬಂದಿರುವುದು ಮುರುಘಾ ಮಠದ ಹೆಗ್ಗಳಿಕೆ. ಜಯದೇವ ಸ್ವಾಮೀಜಿ ಉಳವಿಗೆ ತೆರಳಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಪರಿಪಾಠವಿತ್ತು. ಮಲ್ಲಿಕಾರ್ಜುನ ಸ್ವಾಮೀಜಿ ಕೂಡ ಇದನ್ನು ಮುಂದುವರಿಸಿಕೊಂಡು ಬಂದರು. ಹಲವು ವರ್ಷ ರಥೋತ್ಸವಕ್ಕೆ ಚಾಲನೆ ನೀಡಿದ್ದೇವೆ. ಇತ್ತೀಚೆಗೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಮರುಘಾ ಪರಂಪರೆಯನ್ನು ಅಗೌರವದಿಂದ ಕಾಣುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮಠಾಧೀಶರು ತಂಗಲು ದೇವಸ್ಥಾನದಲ್ಲಿ ಮೀಸಲಾಗಿದ್ದ ಕೊಠಡಿಯನ್ನು ಧ್ವಂಸ ಮಾಡಲಾಗಿದೆ. 2004ರಲ್ಲಿ ಅಸ್ತಿತ್ವಕ್ಕೆ ಬಂದ ಟ್ರಸ್ಟ್‌ ಕಿತ್ತೂರು ಕುಟುಂಬದ ಹಿಡಿತದಲ್ಲಿದೆ. ಇದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಹೂಡಿದ ಮೊಕದ್ದಮೆಯ ವಿಚಾರಣೆ ನಡೆಯುತ್ತಿದೆ. ನ್ಯಾಯಾಂಗ ವ್ಯವಸ್ಥೆಯ ಮೇಲೆ ಅಪಾರ ನಂಬಿಕೆ ಇದ್ದು, ನ್ಯಾಯಾಲಯದ ಆದೇಶಕ್ಕೆ ಮಠ ಬದ್ಧವಾಗಿರುತ್ತದೆ’ ಎಂದು ಹೇಳಿದರು.

‘2018ರ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಮುಜರಾಯಿ ಸಚಿವರಾಗಿದ್ದ ರುದ್ರಪ್ಪ ಲಮಾಣಿ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಆರ್‌.ವಿ.ದೇಶಪಾಂಡೆ ಅವರ ಸಮ್ಮುಖದಲ್ಲಿ ಸಮಾಲೋಚನಾ ಸಭೆ ನಡೆದಿತ್ತು. ಸಭೆಯ ತೀರ್ಮಾನದಂತೆ ರಥೋತ್ಸವದಲ್ಲಿ ಪಾಲ್ಗೊಂಡಿದ್ದೆವು. ಸಭೆಯಲ್ಲಿ ನೀಡಿದ್ದ ವಾಗ್ದಾನಕ್ಕೆ ಟ್ರಸ್ಟ್‌ ಬದ್ಧತೆ ತೋರಲಿಲ್ಲ. ಇದರಿಂದ ಸಾವಿರಾರು ಭಕ್ತರಿಗೆ ನೋವಾಗಿದೆ’ ಎಂದರು.

‘ಮಠದ ಪರಂಪರೆಯಂತೆ ಜಾತ್ರಾ ಮಹೋತ್ಸವಕ್ಕೆ ಉಳವಿಗೆ ತೆರಳುತ್ತೇವೆ. ದೇಗುಲದ ಸಮೀಪದಲ್ಲೇ ಇರುವ ಶಾಖಾ ಮಠದಲ್ಲಿ ಸಹಜ ಶಿವಯೋಗ ಹಾಗೂ ಚಿಂತನಾ ಕಾರ್ಯಕ್ರಮಗಳಲ್ಲಿ ಮಾತ್ರ ಪಾಲ್ಗೊಳ್ಳುತ್ತೇವೆ’ ಎಂದು ಪ್ರತಿಕ್ರಿಯೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT