ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿಗೆ ಹೆಚ್ಚಿದ ಪ್ರವಾಸಿಗರ ಸಂಖ್ಯೆ

ಮೃಗಾಲಯಕ್ಕೆ ನಾಲ್ಕು ವರ್ಷದಲ್ಲೇ ಅತ್ಯಧಿಕ ಭೇಟಿ; ಮೈಸೂರು ಅರಮನೆಗೂ ದಾಖಲೆ ಸಂಖ್ಯೆ
Last Updated 21 ಅಕ್ಟೋಬರ್ 2018, 12:51 IST
ಅಕ್ಷರ ಗಾತ್ರ

ಮೈಸೂರು: ಈ ಬಾರಿಯ ನಾಡಹಬ್ಬ ದಸರಾ ವೀಕ್ಷಿಸಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಮೈಸೂರಿಗೆ ಬಂದಿದ್ದಾರೆ. ಅಂಬಾವಿಲಾಸ ಅರಮನೆ ಹಾಗೂ ಚಾಮರಾಜೇಂದ್ರ ಮೃಗಾಲಯಕ್ಕೆ ದಾಖಲೆ ಸಂಖ್ಯೆಯಲ್ಲಿ ಭೇಟಿ ಕೊಟ್ಟಿದ್ದಾರೆ.

ಕೊಡಗಿನಲ್ಲಿ ಉಂಟಾಗಿದ್ದ ಪ್ರವಾಹದ ಹಿನ್ನೆಲೆಯಲ್ಲಿ ಈ ಬಾರಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಅದು ಹುಸಿಯಾಗಿದೆ. ಮೈಸೂರಿನ ಅಂಬಾವಿಲಾಸ ಅರಮನೆಗೆ ಅ.10ರಿಂದ 20ರ ವರೆಗೆ ಒಟ್ಟು 1,83,592 ಪ್ರವಾಸಿಗರು ಭೇಟಿ ಕೊಟ್ಟಿದ್ದಾರೆ. ಅ.20ರಂದು ಬರೋಬ್ಬರಿ 32,884 ಪ್ರವಾಸಿಗರು ಅರಮನೆ ವೀಕ್ಷಿಸಿದ್ದಾರೆ.

ಈ ಬಾರಿಯ ದಸರೆಯನ್ನು ಹೆಚ್ಚು ವ್ಯವಸ್ಥಿತವಾಗಿ ಹಮ್ಮಿಕೊಂಡಿದ್ದು ಇದಕ್ಕೆ ಕಾರಣವಾಗಿದೆ. ಅರಮನೆ ಸೇರಿದಂತೆ ಮೈಸೂರಿನ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ವಾಹನ ನಿಲುಗಡೆ, ಆಹಾರ ವ್ಯವಸ್ಥೆ ಉತ್ತಮವಾಗಿತ್ತು. ಅಂತೆಯೇ, ದಸರೆಯ ಕಾರ್ಯಕ್ರಮಗಳಿಗೂ ಹೆಚ್ಚಿನ ರಂಗು ಸೇರಿಸಲಾಗಿತ್ತು. ಯುವಕರನ್ನು ಸೆಳೆಯಲೆಂದೇ ಹಮ್ಮಿಕೊಂಡಿದ್ದ ಯುವ ದಸರಾ ಹಾಗೂ ಯುವ ಸಂಭ್ರಮ ಕಾರ್ಯಕ್ರಮಗಳನ್ನು ಹೆಚ್ಚು ಆಕರ್ಷಕವಾಗಿ ರೂಪಿಸಿದ್ದ ಕಾರಣ, ರಾಜ್ಯದ ವಿವಿಧಡೆಗಳಿಂದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದಾರೆ.

ಮೈಸೂರು ಅರಮನೆಗೆ ಈ ವರ್ಷ ಭೇಟಿ ಕೊಟ್ಟವರ ಸಂಖ್ಯೆ ಕಳೆದ ವರ್ಷಕ್ಕಿಂತ ಹೆಚ್ಚಿದೆ. 2017ರಲ್ಲಿ ಸೆ.21ರಿಂದ 30ರ ವರೆಗೆ ನಡೆಸಿದ್ದ ದಸರೆಯಲ್ಲಿ 1.6 ಲಕ್ಷ ಪ್ರವಾಸಿಗರು ಬಂದಿದ್ದರು. ಅದಕ್ಕೆ ಹೋಲಿಸಿದಲ್ಲಿ 20 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ. ಅರಮನೆಯಲ್ಲಿ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು. ಇದರಿಂದಾಗಿ ಹೊರರಾಜ್ಯ, ವಿದೇಶಗಳಿಂದಲೂ ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು ಬಂದಿದ್ದಾರೆ ಎಂದು ಅರಮನೆ ಆಡಳಿತ ಮಂಡಳಿಯ ಉಪ ನಿರ್ದೇಶಕ ಟಿ.ಎಸ್‌.ಸುಬ್ರಹ್ಮಣ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಮೃಗಾಲಯ ವೀಕ್ಷಿಸಲೂ ಹೆಚ್ಚಿದ ಆಸಕ್ತಿ:ಕಳೆದ 4 ವರ್ಷಗಳಿಗೆ ಹೋಲಿಸಿದಲ್ಲಿ ಚಾಮರಾಜೇಂದ್ರ ಮೃಗಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಈ ವರ್ಷ ವಿಜಯದಶಮಿಯಂದು 32,301 ಮಂದಿ ಹಾಗೂ ಆಯುಧಪೂಜೆಯ ದಿನದಂದು 22,398 ಮಂದಿ ಭೇಟಿ ಕೊಟ್ಟಿದ್ದಾರೆ. ಇದರಿಂದಾಗಿ ಒಟ್ಟಾರೆಯಾಗಿ ಮೃಗಾಲಯಕ್ಕೆ ₹ 43.14 ಲಕ್ಷ ಆದಾಯ ಸಿಕ್ಕಿದೆ. 2017ರಲ್ಲಿ ₹ 28.41 ಲಕ್ಷ, 2016ರಲ್ಲಿ ₹ 30.34, 2015ರಲ್ಲಿ ₹ 29.78 ಲಕ್ಷ ಆದಾಯ ಲಭಿಸಿತ್ತು.

‘ದಸರಾ ವೀಕ್ಷಿಸಲು ಬಂದವರೆಲ್ಲ ಮೃಗಾಲಯಕ್ಕೆ ಭೇಟಿ ಕೊಟ್ಟಿದ್ದಾರೆ. ಮೃಗಾಲಯವನ್ನು ಆದ್ಯತೆಯ ಮೇಲೆ ವೀಕ್ಷಿಸಿದ್ದಾರೆ’ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT