ಶನಿವಾರ, ಫೆಬ್ರವರಿ 22, 2020
19 °C
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಹೇಳಿಕೆ

ಸಮ್ಮಿಶ್ರ ಸರ್ಕಾರ ಬೀಳಿಸಿದ್ದು ಸಿದ್ದರಾಮಯ್ಯ: ನಳಿನ್‌ ಕುಮಾರ್‌ ಕಟೀಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಥಣಿ: ‘ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು 17 ಮಂದಿ ಶಾಸಕರು ಉರುಳಿಸಿದರು ಎಂದು ಅವರನ್ನು ಅನರ್ಹಗೊಳಿಸಲಾಯಿತು. ಆದರೆ, ನಿಜವಾಗಿಯೂ ಸರ್ಕಾರ ಬೀಳಿಸಿದವರು ಸಿದ್ದರಾಮಯ್ಯ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಆರೋಪಿಸಿದರು.

ಶೇಡಬಾಳ ಪಟ್ಟಣದಲ್ಲಿ ಬುಧವಾರ ಕಾಗವಾಡ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಧರ್ಮಸ್ಥಳದಲ್ಲಿ ಪ್ರಕೃತಿ ಚಿಕಿತ್ಸೆಗೆಂದು ಹೋಗಿದ್ದ ಸಿದ್ದರಾಮಯ್ಯ ಅವರು ಲೋಕಸಭಾ ಚುನಾವಣೆ ನಂತರ ಸರ್ಕಾರ ಬೀಳುತ್ತದೆ ಎಂದು ಬೆಂಬಲಿಗರೊಂದಿಗೆ ಹೇಳಿದ್ದರು. ಬಳಿಕ ಅವರೇ ಕೆಡವಿದರು. ಹೀಗಾಗಿ, ರಾಜೀನಾಮೆ ನೀಡಿರುವ ಶಾಸಕರು ‘ಅನರ್ಹ ಶಾಸಕ’ರಲ್ಲ. ನಿಜವಾಗಿಯೂ ಸಿದ್ದರಾಮಯ್ಯನವರೇ ಅನರ್ಹರು’ ಎಂದು ದೂರಿದರು.

‘ಉಪ ಚುನಾವಣೆ ಬಳಿಕ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ನಿರುದ್ಯೋಗಿ ಆಗಲಿದ್ದಾರೆ. ಕಾಂಗ್ರೆಸ್ ಮನೆ ಸಂಪೂರ್ಣ ಖಾಲಿಯಾಗಲಿದೆ. ಸಿದ್ದರಾಮಯ್ಯ ಹಾಗೂ ದಿನೇಶ್‌ ಗುಂಡೂರಾವ್ ಮಾತ್ರ ಅಲ್ಲಿ ಉಳಿಯಲಿದ್ದಾರೆ’ ಎಂದು ಟೀಕಿಸಿದರು.

‘ಹೋದ ಚುನಾವಣೆಯಲ್ಲಿ ಗೆದ್ದಿದ್ದ ಶ್ರೀಮಂತ ಪಾಟೀಲರು, ಕ್ಷೇತ್ರದ ಅಭಿವೃದ್ಧಿಗಾಗಿ ರಾಜೀನಾಮೆ ನೀಡಿ, ಮತ್ತೆ ಕಣದಲ್ಲಿದ್ದಾರೆ’ ಎಂದರು.

‘ಕಾಗವಾಡ ಮತಕ್ಷೇತ್ರದ ಉಸ್ತುವಾರಿಯನ್ನಾಗಿ ಕುಡಚಿ ಶಾಸಕ ಪಿ.ರಾಜೀವ ಅವರನ್ನು ಕಳುಹಿಸಿದ್ದೇವೆ. ಅವರು ಶ್ರೀಕೃಷ್ಣನಂತೆ ಸಾರಥಿಯಾಗಿ ಕೆಲಸ ಮಾಡಲಿದ್ದಾರೆ. ಶ್ರೀಕೃಷ್ಣನ ಚಕ್ರ ಕೆಲಸ ಮಾಡುತ್ತದೆ. ಕಾಗೆ (ರಾಜು ಕಾಗೆ) ಕಾಡಿಗೆ ಹೋಗುತ್ತದೆ’ ಎಂದರು.

ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ಶಾಸಕ ಪಿ. ರಾಜೀವ, ಮುಖಂಡ ಸಂಜಯ ಪಾಟೀಲ, ಅಭ್ಯರ್ಥಿ ಶ್ರೀಮಂತ ಪಾಟೀಲ ಮಾತನಾಡಿದರು.

ಪಕ್ಷದ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಶಶಿಕಾಂತ ನಾಯಿಕ, ಬೀದರ್ ಸಂಸದ ಭಗವಂತ ಖೂಬಾ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಸಂಭಾಜಿ ಪಾಟೀಲ, ಸುಧಾಕರ ಭಗತ, ಎಪಿಎಂಸಿ ಅಧ್ಯಕ್ಷ ರವೀಂದ್ರ ಪೂಜಾರಿ, ಪಿಎಲ್‌ಡಿ ಬ್ಯಾಂಕ ಅಧ್ಯಕ್ಷ ಶೀತಲ ಪಾಟೀಲ, ಮುಖಂಡರಾದ ಮಹೇಶ ಟೆಂಗಿನಕಾಯಿ, ನಿಂಗಪ್ಪ ಖೋಕಲೆ, ಸೀಮಾ, ಭರತೇಶ ನರಸಗೌಡರ, ಅಪ್ಪಾಸಾಬ ಚೌಗಲಾ, ಅಭಿಜಿತ ಪಾಟೀಲ ಇದ್ದರು.

ಇದಕ್ಕೂ ಮುನ್ನ ಮಂಗಸೂಳಿಯಿಂದ ಶೇಡಬಾಳದವರೆಗೆ 11 ಕಿ.ಮೀ.ವರೆಗೆ ದ್ವಿಚಕ್ರವಾಹನ ಮೆರವಣಿಗೆ ನಡೆಯಿತು. ಮುಖಂಡರು ತೆರೆದ ವಾಹನದಲ್ಲಿ ಮತಯಾಚಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು