ಮಂಗಳವಾರ, ಸೆಪ್ಟೆಂಬರ್ 28, 2021
21 °C

ಅಂದು ಸಂವಿಧಾನಕ್ಕೆ ನಮಸ್ಕಾರ, ಈಗ ಗುಂಡು: ಮೋದಿ ವಿರುದ್ಧ ದೇವನೂರ ಮಹಾದೇವ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ‘ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸಂವಿಧಾನಕ್ಕೆ ನಮಸ್ಕರಿಸಿದ್ದ ಪ್ರಧಾನಿಯವರು ಈಗ ಅದೇ ಸಂವಿಧಾನಕ್ಕೆ ಗುಂಡು ಹಾರಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಸಾಹಿತಿ ದೇವನೂರ ಮಹಾದೇವ ಅವರು ನರೇಂದ್ರ ಮೋದಿ ವಿರುದ್ಧ ಇಲ್ಲಿ ಶನಿವಾರ ಕಿಡಿಕಾರಿದರು.

ನಗರದ ಗಾಂಧಿ ಮೈದಾನದಲ್ಲಿ ಜಿಲ್ಲಾ ಪ್ರಗತಿಪರ ಜನಾಂದೋಲನಾ ಸಮಿತಿಯಿಂದ ನಡೆದ ಜನಾಂದೋಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಮಹಾತ್ಮ ಗಾಂಧಿ ಕಾಲಿಗೆ ನಮಸ್ಕರಿಸಿದ್ದ ಗೋಡ್ಸೆ, ನಂತರ ಅವರ ಎದೆಗೇ ಗುಂಡು ಹಾರಿಸಿದ್ದ. ಅದೇ ರೀತಿ ಪ್ರಧಾನಿಯೂ ಅತ್ತ ನಮಸ್ಕರಿಸಿ ಇತ್ತ ಗುಂಡು ಹಾರಿಸುತ್ತಿದ್ದಾರೆ’ ಎಂದು ಹೇಳಿದರು.

‘ಸ್ವಾತಂತ್ರ್ಯ ನಂತರದ ಭಾರತದಲ್ಲಿ ಕಟ್ಟಿದ್ದ ಸಂಸ್ಥೆಗಳನ್ನು ಈಗ ಕೆಡವಿ ಹಾಕಲಾಗುತ್ತಿದೆ. ದೇಶದಲ್ಲಿದ್ದ ಸಾಮರಸ್ಯಕ್ಕೆ ಧಕ್ಕೆ ತರಲಾಗಿದೆ. ಕಟ್ಟುವ ಬದಲಿಗೆ ವಿಭಜನೆಯ ಸಿದ್ಧಾಂತಕ್ಕೆ ಆದ್ಯತೆ ಸಿಗುತ್ತಿದೆ’ ಎಂದು ದೇವನೂರ ಮಹಾದೇವ ಟೀಕಿಸಿದರು.

‘ಶೇ 99ರಷ್ಟಿರುವ ಭಾರತೀಯರು, ಶೇ 1ರಷ್ಟಿರುವ ಕೋಮುವಾದಿಗಳ ನಡುವೆ ಸಂಘರ್ಷ ನಡೆಯುತ್ತಿದೆ. ಧರ್ಮದ ಆಧಾರದ ಮೇಲೆ ಪೌರತ್ವ ನೀಡಲು ಮುಂದಾಗಿರುವುದು ಖಂಡನೀಯ. ಸಂವಿಧಾನ ಉಳಿಸಲು ಈಗ ವಿದ್ಯಾರ್ಥಿ ಸಮೂಹ ಟೊಂಕಕಟ್ಟಿ ನಿಂತಿದೆ’ ಎಂದು ಹೇಳಿದರು.

‘ಪ್ರಧಾನಿಯನ್ನು ನಾವೇ ಆಯ್ಕೆ ಮಾಡಿದ್ದೆವು. ಈಗ ಆತನೇ ನಮ್ಮ ಮತದಾರರ ಪೌರತ್ವ ಕೇಳುತ್ತಿದ್ದಾನೆ. ಇದು ದುರಂತ ಅಲ್ಲವೇ? ಇಂಥ ಪ್ರಧಾನಿ ಆಯ್ಕೆ ಮಾಡಿದ್ದಕ್ಕೆ ಮತದಾರರೇ ಪೌರತ್ವ ಸಾಬೀತು ಪಡಿಸುವ ಪರಿಸ್ಥಿತಿ ಬಂದಿದೆ. ಪೌರತ್ವ (ತಿದ್ದುಪಡಿ) ಕಾಯ್ದೆ ಜಾರಿಯಾದರೆ ದೇಶದ ಮೂಲ ನಿವಾಸಿಗಳ ಕಥೆಯೇನು’ ಎಂದು ಪ್ರಶ್ನಿಸಿದರು.

‘ಅರಣ್ಯ ನಿವಾಸಿಗಳ ಬಳಿ ದಾಖಲೆ ಕೇಳಿದರೆ ಅವರು ಮರ, ನದಿ, ಬೆಟ್ಟ, ವನ್ಯಪ್ರಾಣಿಗಳನ್ನು ತೋರಿಸುತ್ತಾರೆ. ಅವರು ಎಲ್ಲಿಂದ ದಾಖಲೆ ತರಬೇಕು. ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾದರೆ ಅರಣ್ಯ ನಿವಾಸಿಗಳದ್ದು ಅರಣ್ಯರೋದನ ಆಗಲಿದೆ’ ಎಂದೂ ದೇವನೂರು ಹೇಳಿದರು.

‘ಉದ್ಯೋಗ ಸೃಷ್ಟಿ ಆಗುತ್ತಿಲ್ಲ. ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಬ್ಯಾಂಕ್‌ನಲ್ಲಿ ಇಟ್ಟಿದ್ದ ನಮ್ಮ ಹಣಕ್ಕೇ ಗ್ಯಾರಂಟಿ ಇಲ್ಲ. ನೆರೆ ಪರಿಹಾರ ಕೇಳಿದರೆ ಪ್ರಧಾನಿ ಕಠೋರವಾಗಿ ನಡೆದುಕೊಂಡರು. ಇದು ಜನನಾಯಕನ ಲಕ್ಷಣವೇ’ ಎಂದು ಪ್ರಶ್ನಿಸಿದರು.

ಸಾಮಾಜಿಕ ಹೋರಾಟಗಾರ ಮಹೇಂದ್ರಕುಮಾರ್‌ ಮಾತನಾಡಿ, ‘ದಲಿತ ಸಮುದಾಯದವರು ದೇವಸ್ಥಾನ ಪ್ರವೇಶಿಸಿದರೆ ಆ ಊರಿಗೆ ಕೇಡಾಗಲಿದೆಯೆಂದರೆ ಅದು ದೇವರೇ ಅಲ್ಲ. ಅದು ಸಮಾಜಘಾತುಕ ಶಕ್ತಿ. ಇದನ್ನು ಹೇಳಿದರೆ ನಾನು ಹಿಂದೂ ಸಮಾಜದ ವಿರೋಧಿಯೇ’ ಎಂದು ಪ್ರಶ್ನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು