ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆ ಪರಿಹಾರಕ್ಕೆ ಯಡಿಯೂರಪ್ಪ ಮನವಿ; ಪ್ರಧಾನಿ ಮೋದಿ ಮೌನ

ನೆರೆ ಪರಿಹಾರಕ್ಕೆ ಹೆಚ್ಚು ನೆರವು ಕೊಡುವಂತೆ ಮೂರ್ನಾಲ್ಕು ಬಾರಿ ಮನವಿ ಮಾಡಿದರೂ ಹಣ ಬರಲಿಲ್ಲ– ಸಿ.ಎಂ
Last Updated 3 ಜನವರಿ 2020, 0:51 IST
ಅಕ್ಷರ ಗಾತ್ರ

ತುಮಕೂರು: ಹಿಂದೆಂದೂ ಕಾಣದ ಪ್ರವಾಹದಿಂದ ಕೊಚ್ಚಿ ಹೋದ ಬದುಕು ಕಟ್ಟಿಕೊಡಲು ನೆರವಿಗೆ ಬನ್ನಿ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ವೇದಿಕೆಯಲ್ಲೇ ಗೋಗರೆದರೂ ಪ್ರಧಾನಿ ನರೇಂದ್ರ ಮೋದಿ ಅವರು ಮೌನ ವಹಿಸಿದ್ದು ರಾಜ್ಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಗುರುವಾರ ಇಲ್ಲಿ ನಡೆದ ರೈತರ ಸಮಾವೇಶದಲ್ಲಿ ಆಶಯ ಭಾಷಣ ಮಾಡಿದ ಯಡಿಯೂರಪ್ಪ ಅವರು,
ನೆರೆ ಪರಿಹಾರಕ್ಕೆ ಹೆಚ್ಚು ಹಣ, ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು₹ 50 ಸಾವಿರ ಕೋಟಿ ಹೆಚ್ಚುವರಿ ಅನುದಾನ ನೀಡುವಂತೆ ಕೋರಿದರು.

'ಈ ವರ್ಷ ರಾಜ್ಯದಲ್ಲಿ ಅತಿವೃಷ್ಟಿಯಿಂದ 3 ಲಕ್ಷ ಮನೆಗಳು ನೆಲಸಮವಾಗಿವೆ. ಸೇತುವೆ, ರಸ್ತೆಗಳು ಕೊಚ್ಚಿ ಹೋಗಿವೆ. ಒಟ್ಟು₹ 30 ಸಾವಿರ ಕೋಟಿ ನಷ್ಟವಾಗಿದೆ. ಹೆಚ್ಚಿನ ಪರಿಹಾರ ಕೊಡುವಂತೆ ಪ್ರಧಾನಿಯವರಿಗೆ ಮೂರ್ನಾಲ್ಕು ಬಾರಿ ಮನವಿ ಮಾಡಿಕೊಂಡರೂ ಇದುವರೆಗೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿಲ್ಲ' ಎಂದು ನೇರವಾಗಿಯೇ ಹೇಳಿದರು.

'ಕಿಸಾನ್‌ ಕಾರ್ಯಕ್ರಮಕ್ಕೆ ರಾಜ್ಯವನ್ನು ಆರಿಸಿಕೊಂಡಿರುವುದು ನಾಡಿನ ಆರೂವರೆ ಕೋಟಿ ಜನರಿಗೆ ಸಂದ ಗೌರವ ಎಂದೇ ಭಾವಿಸುವೆ. ಪ್ರಧಾನಿಯವರು 2023ರ ಹೊತ್ತಿಗೆ ರೈತರ ಆದಾಯ ದ್ವಿಗುಣಗೊಳಿಸುವ ಸಂಕಲ್ಪ ಮಾಡಿದ್ದಾರೆ. ರೈತರು ಬೆಳೆದ ಬೆಳೆಗೆ ಪ್ರೋತ್ಸಾಹದ ಬೆಲೆ, ನದಿ ಜೋಡಣೆ ಸೇರಿದಂತೆ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿದರೆ ಮೋದಿಯವರ ಸಂಕಲ್ಪವನ್ನು ನೂರಕ್ಕೆ ನೂರರಷ್ಟು ಪ್ರಮಾಣದಲ್ಲಿ ಸಾಧಿಸಬಹುದು' ಎಂದು ಅವರು ನುಡಿದರು.

'ರೈತರು ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಕ್ಕರೆ ಯಾವುದೇ ಪ್ರಕೃತಿ ವಿಕೋಪ, ಇನ್ನಾವುದೇ ಸಮಸ್ಯೆ ಬಂದರೂ ರೈತರು ತಡೆದುಕೊಳ್ಳುತ್ತಾರೆ.ರಾಜ್ಯದಲ್ಲಿ 1966ರಲ್ಲಿ ಪ್ರಾರಂಭವಾದ ನೀರಾವರಿ ಯೋಜನೆಗಳು ಇನ್ನೂ ಪೂರ್ಣಗೊಂಡಿಲ್ಲ. ಅವುಗಳನ್ನು ಪೂರ್ಣಗೊಳಿಸಲು ಹೆಚ್ಚುವರಿ ಅನುದಾನ ಕೊಡಬೇಕು' ಎಂದು ಮನವಿ ಮಾಡಿದರು.

ಬಳಿಕ ರೈತರನ್ನು ಉದ್ದೇಶಿಸಿ ಮಾತನಾಡಿದ ಮೋದಿ ಅವರು, ದೇಶದಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದರೇ ವಿನಃ ರಾಜ್ಯದ ಸಮಸ್ಯೆಗಳನ್ನು ಬಗೆಹರಿಸುವ ಭರವಸೆಯ ಒಂದೇ ಒಂದು ಮಾತನ್ನೂ ಉಚ್ಚರಿಸಲಿಲ್ಲ.

ಬೆಂಗಳೂರಿಗೆ ಮರಳಿದ ಮೋದಿ ಅವರು ರಾಜಭವನದಲ್ಲಿ ವಾಸ್ತವ್ಯ ಹೂಡಿದರು. ಈ ವೇಳೆ ಅವರನ್ನು ಭೇಟಿ ಮಾಡಿದ ಯಡಿಯೂರಪ್ಪ ರಾಜ್ಯಕ್ಕೆ ಹೆಚ್ಚಿನ ಅನುದಾನ, ನೆರವು ನೀಡುವಂತೆ ಲಿಖಿತ ಮನವಿ ಸಲ್ಲಿಸಿದರು.

ಪ್ರವಾಹದ ಭೀಕರತೆ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಹೊತ್ತಿನಲ್ಲೇ ಸುರಿದ ಭಾರಿ ಮಳೆಯಿಂದಾಗಿ ರಾಜ್ಯದ 8 ಜಿಲ್ಲೆಗಳು ತತ್ತರಿಸಿದ್ದವು. ಆಗ ಗೃಹ ಸಚಿವ ಅಮಿತ್ ಶಾ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ರಾಜ್ಯಕ್ಕೆ ಭೇಟಿ ನೀಡಿದ್ದರು. ಪ್ರಧಾನಿ ಭೇಟಿ ನೀಡಬೇಕು ಎಂಬ ಹಕ್ಕೊತ್ತಾಯವನ್ನು ಜನರು ಮಾಡಿದ್ದರು. ಆಗ ಮೋದಿ ಬಂದಿರಲಿಲ್ಲ.

ಪ್ರವಾಹದಿಂದ ಸಂಕಷ್ಟಕ್ಕೆ ತುತ್ತಾದ ಜನರಿಗೆ ನಿರೀಕ್ಷಿತ ನೆರವು ಕೇಂದ್ರದಿಂದ ಬಂದಿಲ್ಲ ಎಂಬ ಟೀಕೆಯೂ ವ್ಯಕ್ತವಾಗಿತ್ತು. ಈ ಭೇಟಿ ವೇಳೆ ಪ್ರಧಾನಿ ಅವರು ನೆರವು ಘೋಷಣೆ ಮಾಡಲಿದ್ದಾರೆ ಎಂಬ ಭರವಸೆ ಜನರಲ್ಲಿ ಇತ್ತು. ಆದರೆ ಅದು ಈಡೇರಲಿಲ್ಲ.

‘ಗೋ ಬ್ಯಾಕ್‌ ಮೋದಿ’
ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಿನಗಳ ಕರ್ನಾಟಕ ಭೇಟಿಯನ್ನು ಟೀಕಿಸಿ ನೆಟ್ಟಿಗರು ‘ಗೋ ಬ್ಯಾಕ್‌ ಮೋದಿ’ ಎಂಬಹ್ಯಾಷ್ ಟ್ಯಾಗ್‌ನಡಿ ಟ್ವಿಟರ್‌ನಲ್ಲಿ ಆರಂಭಿಸಿದ ಅಭಿಯಾನ ಗುರುವಾರ ರಾತ್ರಿ 8 ಗಂಟೆಯವರೆಗೂ ಭಾರತ ಮಟ್ಟದಲ್ಲಿ ಟಾಪ್ ಟ್ರೆಂಡಿಂಗ್‌ನಲ್ಲಿ ಇತ್ತು.

ಭೀಕರ ಪ್ರವಾಹದಿಂದ ಕಂಗೆಟ್ಟಾಗ ಪ್ರಧಾನಿ ನೆರವಿಗೆ ಬರಲಿಲ್ಲ. ಜಿಎಸ್‌ಟಿ ಪಾಲು ಕೊಡಲಿಲ್ಲ ಎಂದು ನೆಟ್ಟಿಗರು ಹರಿಹಾಯ್ದರು.ಇದಕ್ಕೆ ಪ್ರತಿಯಾಗಿ ಮೋದಿ ಅಭಿಮಾನಿಗಳು ನಡೆಸಿದ ‘ಮೋದಿ ಇನ್ ಕರ್ನಾಟಕ’ ಹ್ಯಾಷ್‌ಟ್ಯಾಗ್‌ನಡಿ 1300 ಟ್ವೀಟ್‌ಗಳು ಇದ್ದವು.

ಪಾಕ್‌ – ‘ಕೈ‘ ವಿರುದ್ಧ ಮೋದಿ ವಾಗ್ದಾಳಿ
‘ಪೌರತ್ವ (ತಿದ್ದುಪಡಿ) ಕಾಯ್ದೆ ಸಂಸತ್ ಕೈಗೊಂಡ ಐತಿಹಾಸಿಕ ನಿರ್ಧಾರ. ಆದರೆ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಇದರ ವಿರುದ್ಧ ಅನಗತ್ಯವಾಗಿ ವಿವಾದ ಎಬ್ಬಿಸುತ್ತಿವೆ. ಸಂಸತ್ತಿನ ವಿರುದ್ಧ ಆಂದೋಲನ ನಡೆಸುತ್ತಿವೆ’ ಎಂದು ನರೇಂದ್ರ ಮೋದಿ ಟೀಕಿಸಿದರು.

ಸಿದ್ಧಗಂಗಾ ಮಠದ ಆವರಣದಲ್ಲಿ ವಿದ್ಯಾರ್ಥಿಗಳನ್ನುಉದ್ದೇಶಿಸಿ ಮಾತನಾಡಿದ ಅವರು, ‘ಪಾಕಿಸ್ತಾನದ ಜನ್ಮವೇ ಧರ್ಮದ ಆಧಾರದಲ್ಲಿ ಆಗಿದೆ. ಹಿಂದೂಗಳು, ಸಿಖ್ಖರು, ಬೌದ್ಧರ ಮೇಲೆ ಅಲ್ಲಿ ದಬ್ಬಾಳಿಕೆಗಳು ನಡೆದವು. ಅವರ ಧಾರ್ಮಿಕ ಹಕ್ಕುಗಳನ್ನು ಕಸಿಯಲಾಯಿತು. ಈ ಸಮುದಾಯಗಳ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ನಡೆದವು. ಆದರೆ ಆ ಸಮಯದಲ್ಲಿ ಕಾಂಗ್ರೆಸ್ ಧ್ವನಿಯನ್ನೇ ಎತ್ತಲಿಲ್ಲ’ ಎಂದು ಕಿಡಿಕಾರಿದರು.

‘ಈಗಲೂ ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ದಬ್ಬಾಳಿಕೆಗಳು ನಡೆಯುತ್ತಿವೆ. ಕಾಂಗ್ರೆಸ್‌ನವರಿಗೆ ಆಂದೋಲನ ಮಾಡುವ ತಾಕತ್ತು ಇದ್ದರೆ ಅಲ್ಲಿ ಮಾಡಲಿ’ ಎಂದರು.

‘ಆ ದೇಶದಲ್ಲಿ ಅನ್ಯಾಯಕ್ಕೆ ಒಳಗಾಗಿ ಇಲ್ಲಿಗೆ ಬಂದ ಹಿಂದೂಗಳು, ಸಿಖ್ಖರು ಹಾಗೂ ಬೌದ್ಧರಿಗೆ ನಾವು ಪೌರತ್ವ ನೀಡುತ್ತಿದ್ದೇವೆ. ಇದರ ವಿರುದ್ಧ ಅನಗತ್ಯವಾಗಿ ಕಾಂಗ್ರೆಸ್ ಮುಖಂಡರು ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ಹೇಳಿದರು.

‘ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದುಗೊಳಿಸಿದೆವು. ಈ ಮೂಲಕ ಆ ರಾಜ್ಯದಲ್ಲಿ ಹೊಸ ಬದಲಾವಣೆ ಸಾಧ್ಯವಾಯಿತು. ಅಲ್ಲಿ ಆತಂಕವಾದ ಹತ್ತಿಕ್ಕಿ ಅಭಿವೃದ್ಧಿಗೆ ಮುನ್ನುಡಿ ಬರೆಯಲಾಗಿದೆ’ ಎಂದು ಹೇಳಿದರು.

ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಸಿದ್ಧಗಂಗಾ ಮಠದ ಆವರಣದಲ್ಲಿ ಬೆಳಿಗ್ಗೆಯಿಂದಲೇ ಸಡಗರ ಮನೆ ಮಾಡಿತ್ತು. ವಸತಿ ಶಾಲೆ ಮಕ್ಕಳು ಪ್ರಧಾನಿ ಅವರನ್ನು ಕಾಣಲು ಕಾತರದಿಂದ ಕಾಯುತ್ತಿದ್ದರು.

ನಡೆಯದ ಸಂವಾದ: ಮೋದಿ ವಿದ್ಯಾರ್ಥಿಗಳ ಜತೆ ಕೆಲ ಹೊತ್ತು ಸಂವಾದ ನಡೆಸುವರು ಎನ್ನಲಾಗುತ್ತಿತ್ತು. ‘ಪ್ರಶ್ನೆ ಕೇಳಬೇಕು’ ಎನ್ನುವ ಆಸೆಯಲ್ಲಿ ‘ವಾಟ್ಸ್‌ಆ್ಯಪ್ ಮಮ್ಮಿ, ಗೂಗಲ್ ಡ್ಯಾಡಿ’ ಸಿನಿಮಾದ ಬಾಲನಟಿ ಬೇಬಿಶ್ರೀ ಬೆಂಗಳೂರಿನಿಂದ ಬಂದಿದ್ದಳು. ಮೋದಿ ಅವರು ಬರುವುದಕ್ಕೂ ಮುನ್ನ ವೇದಿಕೆ ಮುಂಭಾಗದಲ್ಲಿಯೇ ವಿದ್ಯಾರ್ಥಿಗಳನ್ನು ಶಿಕ್ಷಕರು ಸಂವಾದಕ್ಕೆ ಸಜ್ಜುಗೊಳಿಸಿದ್ದರು.

ಮೋದಿ ಅವರುವಿದ್ಯಾರ್ಥಿಗಳ ಬಗ್ಗೆ ಯಾವುದೇ ಮಾತನಾಡಲಿಲ್ಲ. ಸಂವಾದವನ್ನೂ ನಡೆಸಲಿಲ್ಲ.

*
ನೆರೆ ನಷ್ಟಕ್ಕೆ ಪರಿಹಾರವಾಗಿ ₹36 ಸಾವಿರ ಕೋಟಿ ನೆರವು ಕೇಳಿದರೆ ಕೇಂದ್ರ ಕೊಟ್ಟಿದ್ದು ₹1200 ಕೋಟಿ. ಮೋದಿಯವರೇ ಕರ್ನಾಟಕದ ಬಗ್ಗೆ ಯಾಕೆ ತಾತ್ಸಾರ, ಯಾಕಿಷ್ಟು ದ್ವೇಷ?
-ಸಿದ್ದರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ

*
ಕರ್ನಾಟಕದ ಲೋಕಸಭೆ ಸ್ಥಾನಗಳ ಮೇಲೆ ಕಣ್ಣಿಡುವ ಬಿಜೆಪಿ, ಅಭಿವೃದ್ಧಿ ವಿಷಯದಲ್ಲಿ ರಾಜ್ಯವನ್ನು ನಿರ್ಲಕ್ಷಿಸುತ್ತದೆ. ನೆರೆ ಪರಿಹಾರದ ಬಗ್ಗೆ ಮೋದಿಯವರು ಯಾಕೆ ಮಾತನಾಡಲಿಲ್ಲ?
-ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT