ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು: 2018ರ ನೆರೆ ಸಂತ್ರಸ್ತರಿಗೆ ಮನೆ ಹಸ್ತಾಂತರ

ಕೊನೆಗೂ ಕೊಡಗು ನೆರೆ ಸಂತ್ರಸ್ತರಿಗೆ ಸೂರು: ಮೊಗದಲ್ಲಿ ಅರಳಿದ ನಗು
Last Updated 4 ಜೂನ್ 2020, 7:06 IST
ಅಕ್ಷರ ಗಾತ್ರ

ಜಂಬೂರು (ಸೋಮವಾರಪೇಟೆ ತಾಲ್ಲೂಕು): ಕೊಡಗಿನಲ್ಲಿ ಪ್ರಕೃತಿ ವಿಕೋಪ ಸಂಭವಿಸಿ, ಎರಡು ವರ್ಷಗಳ ಬಳಿಕ ನೆರೆ ಸಂತ್ರಸ್ತರಿಗೆ ಗುರುವಾರ ಸೂರು ಲಭಿಸಿತು. ಹಲವು ತಿಂಗಳಿಂದ ಚಾತಕ ಪಕ್ಷಿಯಂತೆ ಸ್ವಂತ ಸೂರಿಗಾಗಿ ಕಾದಿದ್ದ ಸಂತ್ರಸ್ತರ ಮೊಗದಲ್ಲಿ ಕೊನೆಗೂ ನಗು ಅರಳಿತು.

ಮನೆ ಸಿಕ್ಕ ಖುಷಿಯಲ್ಲಿ ಸಿಹಿ ವಿತರಣೆ ಮಾಡಿ ಸಂಭ್ರಮಿಸಿದರು. ತೋರಣ ಹಾಗೂ ಹೂವುನಿಂದ ಹೊಸ ಮನೆಗಳು ಸಿಂಗಾರಗೊಂಡಿದ್ದವು. ಸೋಮವಾರಪೇಟೆ ತಾಲ್ಲೂಕಿನ ಜಂಬೂರಿನಲ್ಲಿ 383, ಮಡಿಕೇರಿ ತಾಲ್ಲೂಕಿನ 80 ಮನೆಗಳು ಸೇರಿ ಒಟ್ಟು 463 ಮನೆಗಳನ್ನು ಹಸ್ತಾಂತರ ಮಾಡಲಾಯಿತು. ಸಚಿವರಾದ ವಿ.ಸೋಮಣ್ಣ ಹಾಗೂ ಆರ್‌.ಅಶೋಕ್‌ ಅವರು ಸಂತ್ರಸ್ತರಿಗೆ ಕೀ ಹಸ್ತಾಂತರ ಮಾಡಿದರು. ಕೀ ಪಡೆಯುತ್ತಿದ್ದಂತೆಯೇ ಫಲಾನುಭವಿಗಳು ಸಂತಸಪಟ್ಟರು. ಜಂಬೂರಿಗೆ ಫೀಲ್ಡ್‌ ಮಾರ್ಷಲ್‌ ಕೆ.ಎಂ. ಕಾರ್ಯಪ್ಪ ಬಡಾವಣೆ ಎಂದು ಹೆಸರಿಡಲಾಗಿದೆ. ಪ್ರತಿಮನೆಗೆ ₹ 9.85 ಲಕ್ಷ ವೆಚ್ಚ ಮಾಡಲಾಗಿದೆ. ಡಬಲ್‌ ಬೆಡ್‌ರೂಂ ಮನೆ ನಿರ್ಮಿಸಿ, ವಿತರಣೆ ಮಾಡಲಾಗಿದೆ. ಅತ್ಯಾಧುನಿಕ ಸೌಲಭ್ಯವುಳ್ಳ ಮನೆಗಳನ್ನೇ ನಿರ್ಮಿಸಿಕೊಡಲಾಗಿದೆ.

2018ರ ಆಗಸ್ಟ್‌ನಲ್ಲಿ ಸುರಿದ ಭಾರಿ ಮಳೆ, ಪ್ರವಾಹ ಹಾಗೂ ಭೂಕುಸಿತದಿಂದ ಮಡಿಕೇರಿ, ಮಾದಾಪುರ, ಕರ್ಣಂಗೇರಿ, ಹಾಲೇರಿ, ಸೂರ್ಲಬ್ಬಿ, ಉದಯಗಿರಿ, ಸಂಪಾಜೆ, 2ನೇ ಮೊಣ್ಣಂಗೇರಿ, ಮದೆನಾಡು, ಗಾಳಿಬೀಡು, ಕಾಲೂರು ಭಾಗದಲ್ಲಿ ನೂರಾರು ಮಂದಿ ಆಶ್ರಯ ಕಳೆದುಕೊಂಡಿದ್ದರು. ಅವರಿಗೆ ಈಗ ಮನೆ ವಿತರಣೆ ಮಾಡಲಾಯಿತು.

‘ಇಷ್ಟು ದಿನ ಬಾಡಿಗೆ ಮನೆಯಲ್ಲಿದ್ದೆವು. ಆರಂಭದಲ್ಲಿ ಸರ್ಕಾರವೇ ಬಾಡಿಗೆ ಪಾವತಿಸುತ್ತಿತ್ತು. ಕ್ರಮೇಣ ಬಾಡಿಗೆ ಹಣ ಬರಲಿಲ್ಲ. ಹೇಗಪ್ಪ ಭವಿಷ್ಯ ಎಂಬ ಚಿಂತೆ ಕಾಡಲಾರಂಭಿಸಿತು. ಇನ್ನೇನು ಕೊಡಗಿನಲ್ಲಿ ಜೋರು ಮಳೆಯೂ ಆರಂಭವಾಗಲಿದೆ. ಅದರ ಆತಂಕವೂ ಇತ್ತು. ಈಗ ಸರ್ಕಾರದಿಂದ ಶಾಶ್ವತ ಸೂರು ಸಿಕ್ಕಿರುವುದು ನೆಮ್ಮದಿ ತಂದಿದೆ’ ಎಂದು ಸಂತ್ರಸ್ತರೊಬ್ಬರು ಖುಷಿಪಟ್ಟರು.

ಮುಖ್ಯಮಂತ್ರಿ ಗೈರು: ಮನೆ ಹಸ್ತಾಂತರ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಕರೆಸಬೇಕೆಂದು ಜಿಲ್ಲೆಯ ಶಾಸಕರು ಪಟ್ಟು ಹಿಡಿದು, ಮೇ 28ಕ್ಕೆ ನಿಗದಿಗೊಂಡಿದ್ದ ಕಾರ್ಯಕ್ರಮವನ್ನು ಜೂನ್‌ 4ಕ್ಕೆ ಮುಂದೂಡಿದ್ದರು. ಆದರೆ, ಲಾಕ್‌ಡೌನ್‌ ವಿಸ್ತರಣೆಯಿಂದ ಗುರುವಾರವೂ ಮುಖ್ಯಮಂತ್ರಿ ಮನೆ ಹಸ್ತಾಂತರ ಕಾರ್ಯಕ್ರಮಕ್ಕೆ ಬರಲಿಲ್ಲ.

ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್‌, ವಿಧಾನ ಪರಿಷತ್‌ ಸದಸ್ಯರಾದ ಸುನಿಲ್‌ ಸುಬ್ರಮಣಿ, ವೀಣಾ ಅಚ್ಚಯ್ಯ, ಸಂಸದ ಪ್ರತಾಪ್‌ ಸಿಂಹ, ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್‌ ಡಿ. ಪನ್ನೇಕರ್‌, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಲಕ್ಷ್ಮೀಪ್ರಿಯಾ, ಎಸಿ ಜವರೇಗೌಡ ಹಾಜರಿದ್ದರು.

ಜೆಡಿಎಸ್‌ ಕಾರ್ಯಕರ್ತರ ಪ್ರತಿಭಟನೆ

‘ಮೈತ್ರಿ’ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿ ಅವರು ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸಾಕಷ್ಟು ಕೆಲಸ ಮಾಡಿದ್ದರು. ಸಂತ್ರಸ್ತರ ಕಣ್ಣೀರು ಒರೆಸಿದ್ದರು. ಅವರ ಕೊಡುಗೆಯಿಂದ ಇಷ್ಟೊಂದು ಮನೆಗಳು ನಿರ್ಮಾಣವಾಗಿವೆ. ಮನೆ ಹಸ್ತಾಂತರ ಕಾರ್ಯಕ್ರಮಕ್ಕೆ ಅವರಿಗೂ ಆಹ್ವಾನ ನೀಡಬೇಕಿತ್ತು. ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿದೆ ಎಂದು ಆಪಾದಿಸಿ ಜೆಡಿಎಸ್‌ ಜಿಲ್ಲಾ ಅಧ್ಯಕ್ಷ ಕೆ.ಎಂ.ಬಿ.ಗಣೇಶ್‌ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT