ಬುಧವಾರ, ಜೂನ್ 3, 2020
27 °C
ಪ್ರತಿಭೆಗೊಂದು ವೇದಿಕೆ

ಬಡಮಕ್ಕಳ ನಾಟ್ಯ ಪ್ರೀತಿಯ ‘ನಿದಂ’

ವನಿತಾ ಜೈನ್‌ Updated:

ಅಕ್ಷರ ಗಾತ್ರ : | |

ಭರತನಾಟ್ಯ ಕಲೆ ಶ್ರೀಮಂತರ ಸ್ವತ್ತಾಗಿಯೇ ಉಳಿಯದೆ ಬಡಮಕ್ಕಳ ಪ್ರತಿಭೆಗೂ ದಕ್ಕುವಂತಾಗಬೇಕು ಎನ್ನುವ ಉದ್ದೇಶ ‘ನಿದಂ’ (ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಡಾನ್ಸ್‌, ಆರ್ಟ್‌ ಅಂಡ್‌ ಮ್ಯೂಸಿಕ್‌) ಸಂಸ್ಥೆಯದು. ಇಂಥ ಸದಾಶಯದಿಂದ ಕೊಳಚೆ ಪ್ರದೇಶಗಳ ಬಡ ಮಕ್ಕಳಿಗೆ ಉಚಿತ ಕಲಾ ಕಾರ್ಯಾಗಾರವನ್ನು ಸಂಸ್ಥೆಯ ಪೂರ್ಣಿಮಾ ರಜಿನಿ ಆಯೋಜಿಸಿದ್ದಾರೆ.

ಆರು ವರ್ಷಗಳಿಂದ ‘ನಿದಂ’ ಮೂಲಕ ಡೇ ಕೇರ್‌, ನರ್ಸರಿ, ಎಲ್‌ಕೆಜಿ–ಯುಕೆಜಿ ಮಕ್ಕಳಿಗಾಗಿ ಅವರು ವಿಶೇಷ ಕಾರ್ಯಕ್ರಮವನ್ನು ರೂಪಿಸಿದ್ದಾರೆ. ಆದರೆ ಇಲ್ಲಿ ಆರು ವರ್ಷದೊಳಗಿನ ಮಕ್ಕಳಿಗೆ ಮಾತ್ರ ಆದ್ಯತೆ. ಒಂಬತ್ತು ತಿಂಗಳ ಈ ಸೃಜನಾತ್ಮಕ ಕಾರ್ಯಕ್ರಮದಲ್ಲಿ ವಿವಿಧ ಚಟುವಟಿಕೆಗಳ ಮೂಲಕ ಮಕ್ಕಳ ಆಸಕ್ತಿ–ಅಭಿರುಚಿ ಗುರುತಿಸಿ, ಅವರ ಪ್ರತಿಭಾ ಶಕ್ತಿ ಕಂಡುಕೊಂಡು ಪೂರಕ ತರಬೇತಿ ನೀಡುತ್ತಾರೆ. 

ಈ ಕಾರ್ಯಕ್ರಮ ಕೇವಲ ಆರ್ಥಿಕವಾಗಿ ಸಬಲರಾಗಿರುವ ಪೋಷಕರ ಮಕ್ಕಳಿಗೆ ಸೀಮಿತಗೊಳಿಸದೆ ಕೊಳಚೆ ಪ್ರದೇಶಗಳ ಬಡ ಮಕ್ಕಳಿಗೆ ವಿಸ್ತರಿಸುತ್ತಿರುವುದು ವಿಶೇಷ. ಎಷ್ಟೋ ಸಲ ‘ಸರಿಯಾದ ಮಾರ್ಗದರ್ಶನದ ಕೊರತೆಯಿಂದಾಗಿ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸುವುದೇ ತಡವಾಗುತ್ತದೆ. ಮಕ್ಕಳಿಗೆ ಆಸಕ್ತಿ ಇಲ್ಲದ ಅಥವಾ ಅವರ ಸಾಮರ್ಥ್ಯಕ್ಕೆ ಎಟುಕದ ಕ್ಷೇತ್ರಗಳಲ್ಲಿ ತೊಡಗಿಸಲು ಹೋಗಿ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ತೊಡಕುಂಟು ಮಾಡುವ ಅಪಾಯವೂ ಇದೆ. ಇಂತಹ ಅಚಾತುರ್ಯಗಳನ್ನು ತಪ್ಪಿಸುವುದಕ್ಕಾಗಿಯೇ ಈ ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ’ ಎನ್ನುತ್ತಾರೆ ನಿದಂನ ಸಂಸ್ಥಾಪಕ ನಿರ್ದೇಶಕಿಯೂ ಆಗಿರುವ ನೃತ್ಯ ಕಲಾವಿದೆ ಪೂರ್ಣಿಮಾ ರಜಿನಿ.

‘ಬಡತನದಲ್ಲಿರುವ ಬೆಳೆಯುವ ಮಕ್ಕಳಿಗೂ ನೃತ್ಯದಂತಹ ಕಲೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ವಿಶೇಷ ವ್ಯಕ್ತಿಗಳಾಗಿ ಗುರುತಿಸಿಕೊಳ್ಳುವ ಹವಣಿಕೆ ಇರುತ್ತದೆ. ಆದರೆ ಅವರ ಪರಿಸ್ಥಿತಿ ಶಿಲೆ ಇದ್ದರೂ ಶಿಲ್ಪಕಾರನಿಲ್ಲ ಎಂಬತ್ತಿರುತ್ತದೆ ಕೌಟುಂಬಿಕ ಹಿನ್ನೆಲೆ, ಆರ್ಥಿಕ ಪರಿಸ್ಥಿತಿ ಹೀಗೆ ನಾನಾ ಕಾರಣಗಳಿಂದಾಗಿ ಇಂತಹ ಸೃಜನಶೀಲ ಲಲಿತ ಕಲೆಗಳತ್ತ ಅವರು ಗಮನ ಹರಿಸುವುದೇ ಇಲ್ಲ. ಒಟ್ಟಿನಲ್ಲಿ ಸೂಕ್ತ ವೇದಿಕೆ ಸಿಗದೆ ಅವರೊಳಗಿನ ಪ್ರತಿಭೆ ಕಮರಿ ಹೋಗುವುದೇ ಹೆಚ್ಚು ಎನ್ನಬಹುದು. ಹಾಗಾಗಿ ಅಂತಹ ಮಕ್ಕಳ ಪ್ರತಿಭೆಯನ್ನು ಹೊರ ತಂದು, ಪ್ರೋತ್ಸಾಹಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಉಚಿತವಾಗಿ ನಡೆಸುತ್ತಿದ್ದೇವೆ’ ಎನ್ನುವುದು ಅವರ ವಿವರಣೆ.

ಈ ಕಾರ್ಯಕ್ರಮದ ವಿಶೇಷತೆ
ಈ ಕಾರ್ಯಕ್ರಮದಲ್ಲಿ ಯೋಗ, ಹಸ್ತಮುದ್ರಾ, ‌ಶ್ಲೋಕಗಳನ್ನು ಕಲಿಸಲಾಗುತ್ತದೆ. ಹಾಗೆಯೇ ನೃತ್ಯದಲ್ಲಿ ಬಳಸಲಾಗುವ ಕಣ್ಣಿನ ವ್ಯಾಯಾಮ, ಕತ್ತಿನ ವ್ಯಾಯಾಮ, ಉಸಿರಾಟದ ವ್ಯಾಯಾಮಗಳನ್ನು ಮಾಡಿಸಲಾಗುತ್ತದೆ. ಸಂಗೀತಕ್ಕೆ ಬೇಕಾದ ಸರಳ ವರಸೆಗಳನ್ನೂ ಹೇಳಿಕೊಡಲಾಗುತ್ತದೆ. ಮಕ್ಕಳ ಶ್ರವಣ ಶಕ್ತಿ, ಸ್ಮರಣ ಶಕ್ತಿ, ಆಂಗಿಕ ಹಾವ–ಭಾವ, ಕ್ರಿಯಾಶೀಲತೆ, ಸೃಜನಶೀಲತೆಯನ್ನು ಪರೀಕ್ಷಿಸಲಾಗುತ್ತದೆ. ಇಲ್ಲಿ ಆಯ್ಕೆಯಾಗುವ ಮಕ್ಕಳನ್ನು ಮುಂದಿನ ತರಬೇತಿಗೆ ತೆಗೆದುಕೊಂಡು ಹೋಗಲಾಗುತ್ತದೆ.

‘ಇದೆಲ್ಲ ಒಂದು ಎರಡು ದಿನಗಳಲ್ಲಿ ಮುಗಿಯುವುದಲ್ಲ. ನಿರಂತರ ಪ್ರಯತ್ನ, ಶ್ರಮದ ಅಗತ್ಯವಿದೆ. ಬಡ ಮಕ್ಕಳನ್ನೂ ಮುಖ್ಯ ಭೂಮಿಕೆಗೆ ತರುವುದು ನಮ್ಮ ಉದ್ದೇಶ. ಈ ವಯಸ್ಸಿನ ಮಕ್ಕಳನ್ನು 45 ನಿಮಿಷ ಒಂದು ಕಡೆ ಕೂಡಿಸುವುದೇ ಸವಾಲು. ಅಂಥದ್ದರಲ್ಲಿ ಅವರಿಗೆ ಯಾವುದರಲ್ಲಿ ಒಲವು ಹೆಚ್ಚಿದೆ, ಅವರ ಸಾಮರ್ಥ್ಯವೇನು ಎನ್ನುವುದನ್ನು ಅಳೆಯಬೇಕು. ನಂತರ ಅವರ ಪಾಲಕರನ್ನೂ ಕರೆದು ಸಮಾಲೋಚನೆ ಮಾಡಲಾಗುವುದು. ಮೊದಲ ಹಂತವಾಗಿ ಸಿದ್ಧಾಪುರ, ತಿಲಕನಗರದ ಬಡ ಮಕ್ಕಳಿಗೆ ತರಬೇತಿ ಆರಂಭಿಸಲಾಗಿದೆ. ಎಲ್ಲಾ ಕಾರ್ಪೋರೇಶನ್‌ ಶಾಲೆಗಳಲ್ಲಿಯೂ ಈ ಕಾರ್ಯಕ್ರಮವನ್ನು ಪರಿಚಯಿಸಲಾಗುವುದು’ ಎನ್ನುತ್ತಾರೆ ಪೂರ್ಣಿಮಾ.

ಕಲಾವಿದೆ ಪೂರ್ಣಿಮಾ ರಜನಿ
ಕಲಾವಿದೆ ಪೂರ್ಣಿಮಾ ರಜಿನಿ ಕಳೆದು ಎರಡು ದಶಕಗಳಿಂದ ನೃತ್ಯ ಶಿಕ್ಷಕಿಯಾಗಿ ತೊಡಗಿಸಿಕೊಂಡವರು. ಹಲವಾರು ರಾಷ್ಟ್ರೀಯ–ಅಂತರರಾಷ್ಟ್ರೀಯ ನೃತ್ಯ ಕಾರ್ಯಕ್ರಮಗಳನ್ನು ನಿರ್ಮಿಸಿ, ನಡೆಸಿಕೊಟ್ಟಿದ್ದಾರೆ. ದೂರದರ್ಶನದ ಗ್ರೇಡೆಡ್‌ ಕಲಾವಿದೆಯೂ ಆಗಿರುವ ಅವರು ‘ನಿದಂ’ ಮೂಲಕ ನೃತ್ಯ ಪ್ರತಿಭೆಗಳನ್ನು ಪೋಷಿಸಿ, ಬೆಳೆಸುವ ಕೆಲಸ ಮಾಡುತ್ತಿದ್ದಾರೆ. 

ಪೂರ್ಣಿಮಾ ಅವರ ನೃತ್ಯ ಪ್ರೇಮ ಮೊಳಕೆಯೊಡೆದಿದ್ದು ಏಳನೇ ವಯಸ್ಸಿನಲ್ಲಿ. ನೆರೆಮನೆಯ ಗೆಳತಿಯ ನೃತ್ಯಭಂಗಿಗಳಿಗೆ ಮನಸೋತ ಪೂರ್ಣಿಮಾ ಸ್ವಯಂ ಆಸಕ್ತಿಯಿಂದ ನೃತ್ಯ ತರಬೇತಿಗೆ ಸೇರಿಕೊಂಡರು. ಅವರ ನೃತ್ಯಾಸಕ್ತಿಯನ್ನು ಪೋಷಿಸಿದವರು ತಂದೆ ಶೇಷಾದ್ರಿ, ತಾಯಿ ಪ್ರೇಮಾ. ಮಾರ್ಗದರ್ಶಕರಾಗಿ ಜೊತೆಗಿದ್ದವರು ಗುರು ರಾಧಾ ಶ್ರೀಧರ್.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು