ಹಿಂದಿನ ಬಾಗಿಲಲ್ಲಿ ಬಂದು ಅಧಿಕಾರ ಕೇಳುತ್ತಿಲ್ಲ

ಶುಕ್ರವಾರ, ಏಪ್ರಿಲ್ 19, 2019
31 °C

ಹಿಂದಿನ ಬಾಗಿಲಲ್ಲಿ ಬಂದು ಅಧಿಕಾರ ಕೇಳುತ್ತಿಲ್ಲ

Published:
Updated:
Prajavani

*ಇಷ್ಟು ಕಿರಿಯ ವಯಸ್ಸಿಗೆ ರಾಜಕಾರಣ ಬೇಕಿತ್ತಾ?

ನಾನೂ ನಿರೀಕ್ಷೆ ಮಾಡಿರಲಿಲ್ಲ. ಆದರೆ ನನ್ನ ಪಕ್ಷದ ನಿರ್ಧಾರಕ್ಕೆ ತಲೆ ಬಾಗಲೇಬೇಕಾಯಿತು. ಜೆಡಿಎಸ್‌ ಭವಿಷ್ಯದ ದೃಷ್ಟಿಯಿಂದ ಹಿರಿಯರು ಈ ತೀರ್ಮಾನ ಕೈಗೊಂಡಿದ್ದಾರೆ. ಮುಖಂಡರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತೇನೆ. ಮಂಡ್ಯದಿಂದಲೇ ಪಕ್ಷ ಸಂಘಟನೆ ಆರಂಭಿಸುತ್ತೇನೆ. ನನ್ನ ಉಸಿರು ಇರುವವರೆಗೂ ಇಲ್ಲಿಯ ಜನರ ಜೊತೆಯಲ್ಲಿರುತ್ತೇನೆ.

*ಸಿನಿಮಾ ಕ್ಷೇತ್ರದಲ್ಲಿ ಸೋಲು ಕಂಡ ನಂತರ ರಾಜಕೀಯಕ್ಕೆ ಬಂದಿದ್ದೀರಾ?

ಸಿನಿಮಾ ಕ್ಷೇತ್ರದಲ್ಲಿ ನಾನು ಸೋತಿಲ್ಲ, ದೊಡ್ಡ ಅನುಭವ ಕೊಟ್ಟಿದೆ. ಮುಂದೆಯೂ ಒಂದು ಪ್ಯಾಷನ್‌ ಆಗಿ ಸಿನಿಮಾಯಾನ ಮುಂದುವರಿಸುತ್ತೇನೆ. ಆದರೆ ರಾಜಕಾರಣ ಬಲುದೊಡ್ಡ ಜವಾಬ್ದಾರಿ. ಅದನ್ನು ಹೊರಲು ಸಿದ್ಧನಾಗಿಯೇ ಬಂದಿದ್ದೇನೆ. ಎಚ್‌.ಡಿ.ದೇವೇಗೌಡರ ಕುಟುಂಬದಲ್ಲಿ ಅವರ ರಕ್ತ ಹಂಚಿಕೊಂಡು ಹುಟ್ಟಿದ್ದು ನನ್ನ ಪುಣ್ಯ. ಮಂಡ್ಯದ ಜನರು ನನ್ನ ರಾಜಕೀಯ ಜೀವನಕ್ಕೆ ರೂಪ ಕೊಡಲಿದ್ದಾರೆ.

*ಕುಟುಂಬ ರಾಜಕಾರಣದ ಆಪಾದನೆ ಇದೆಯಲ್ಲಾ?

ರಾಜಕಾರಣಿಗಳ ಮಕ್ಕಳು ಚುನಾವಣೆಯಲ್ಲಿ ಸ್ಪರ್ಧಿಸಲೇಬಾರದೇ. ನಾನೇನು ಹಿಂದಿನ ಬಾಗಿಲಲ್ಲಿ ಬಂದು ಅಧಿಕಾರ ಕೊಡಿ ಎಂದು ಕೇಳುತ್ತಿಲ್ಲ. ಎಂಎಲ್‌ಸಿ ಮಾಡಿ, ರಾಜ್ಯಸಭೆಗೆ ಕಳುಹಿಸಿ ಎಂದೂ ಬೇಡಿಕೆ ಇಟ್ಟಿಲ್ಲ. ಎಲ್ಲರಂತೆ ಚುನಾವಣೆಯಲ್ಲಿ ಸ್ಪರ್ಧಿಸಿ, ಜನರ ಆಶೀರ್ವಾದ ಕೇಳುತ್ತಿದ್ದೇನೆ. ಜನರ ತೀರ್ಮಾನವೇ ಅಂತಿಮ.

*ಪಕ್ಷದ ವಿಷಯಕ್ಕೆ ಬಂದರೆ ನಿಮ್ಮ ಕುಟುಂಬದವರೇ ಆದ ಪ್ರಜ್ವಲ್‌ ರೇವಣ್ಣ ಅವರಿಗೆ ಸ್ಪರ್ಧೆ ನೀಡುತ್ತಿದ್ದೀರಾ?

ನನ್ನ ತಮ್ಮ ಪ್ರಜ್ವಲ್‌ಗೆ ಹೋಲಿಸಿದರೆ ನನಗೆ ಅನುಭವ ಕಡಿಮೆ ಇದೆ. ಈಗ ನಾನು ಎಲ್ಲವನ್ನೂ ಕಲಿಯಬೇಕಾಗಿದೆ. ಇಬ್ಬರ ನಡುವೆ ಸ್ಪರ್ಧೆ ಇಲ್ಲ, ಒಗ್ಗಟ್ಟಿದೆ. ಒಟ್ಟಾಗಿ ಪಕ್ಷ ಕಟ್ಟುತ್ತೇವೆ. ಬೆಳೆಸುತ್ತೇವೆ.

*ನಿಮಗೆ ಮಂಡ್ಯ ಸಂಪರ್ಕ ಇರಲಿಲ್ಲ, ಈಗ ಏಕಾಏಕಿ ಬಂದರೆ ಜನ ನಂಬುತ್ತಾರಾ?

ಒಂದು ವರ್ಷದಿಂದ ಮಂಡ್ಯ ಜನರ ಸಂಪರ್ಕವಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಗಳ ಗೆಲುವಿನಲ್ಲಿ ನನ್ನ ಪಾತ್ರವೂ ಇದೆ. ಎಲ್ಲಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದೇನೆ. ಇಲ್ಲಿಯ ರೈತರ ಮನದಾಳ ಅರಿತಿದ್ದೇನೆ. ತಂದೆ, ತಾತ ಅವರಿಂದ ಕೇಳಿ ತಿಳಿದುಕೊಂಡಿದ್ದೇನೆ.

*ಮಂಡ್ಯ ಜನರು ನಿಮ್ಮನ್ನು ಏಕೆ ಗೆಲ್ಲಿಸಬೇಕು?

ಕಳೆದ 60 ವರ್ಷಗಳಿಂದ ದೇವೇಗೌಡರು ಇಲ್ಲಿಯ ಜನರ ಜೊತೆ ಇದ್ದಾರೆ. ಕಾವೇರಿ ಹೋರಾಟದಲ್ಲಿ ಗೌಡರ ಪಾತ್ರ  ದೊಡ್ಡದಿದೆ. 1996ರಿಂದ ಕುಮಾರಣ್ಣ ಮಂಡ್ಯ ಜನರ ಜೊತೆಯಲ್ಲಿದ್ದಾರೆ. ಇಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದಾರೆ. ರೈತರು ಆತ್ಮಹತ್ಯೆ ಮಾಡಿಕೊಂಡಾಗ ಅವರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ನಾನೂ ‘ಕುಮಾರ ಮಾರ್ಗ’ದಲ್ಲಿ ನಡೆಯುತ್ತೇನೆ. ಜನರ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆ ಇದೆ.

*ಗೆದ್ದರೆ ಕ್ಷೇತ್ರಕ್ಕೆ ಏನು ಕೊಡುವಿರಿ?

ಯುವಜನರಿಗೆ ಉದ್ಯೋಗ ಕಲ್ಪಿಸುವುದೇ ಮೊದಲ ಆದ್ಯತೆ. ‘ದೊಡ್ಡ ಹಳ್ಳಿ’ ಎಂಬ ಮಂಡ್ಯದ ಹಣೆ ಪಟ್ಟಿ ತೊಲಗಬೇಕು. ಕಾರ್ಖಾನೆಗಳು ಬರಬೇಕು. ಮಂಡ್ಯ ಇಡೀ ದೇಶದ ಮಾದರಿ ಕ್ಷೇತ್ರವಾಗಬೇಕು ಎಂಬುದೇ ನನ್ನ ಕನಸು.

*ತಾತ, ತಂದೆಯಂತೆ ಮುಖ್ಯಮಂತ್ರಿ ಆಗುವ ಕನಸಿದೆಯೇ?

ರಾತ್ರೋರಾತ್ರಿ ಯಾವುದೂ ಆಗುವುದಿಲ್ಲ. ಒಂದೊಂದೇ ಮೆಟ್ಟಿಲು ಹತ್ತಬೇಕು.

ಬರಹ ಇಷ್ಟವಾಯಿತೆ?

 • 5

  Happy
 • 3

  Amused
 • 0

  Sad
 • 0

  Frustrated
 • 9

  Angry

Comments:

0 comments

Write the first review for this !