ಶನಿವಾರ, ಜೂನ್ 6, 2020
27 °C

ಹೆಚ್ಚಿತು 'ನಿಜಾಮುದ್ದೀನ್‌' ಭೀತಿ: ಬಹುತೇಕ ಎಲ್ಲ ಜಿಲ್ಲೆಗಳ ಪ್ರತಿನಿಧಿಗಳು ಭಾಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದೆಹಲಿಯ ನಿಜಾಮುದ್ದೀನ್‌ ಪ್ರದೇಶದ ತಬ್ಲೀಗ್‌ ಜಮಾತ್‌ ಕೇಂದ್ರ ಕಚೇರಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದ ಕರ್ನಾಟಕದವರ ಪತ್ತೆ ಕಾರ್ಯ ನಡೆದಿದೆ.

ಬಹುತೇಕ ಎಲ್ಲ ಜಿಲ್ಲೆಗಳಿಂದ ಪ್ರತಿನಿಧಿಗಳು ಇದರಲ್ಲಿ ಭಾಗಿಯಾಗಿದ್ದಾರೆ. ಅಲ್ಲಿಗೆ ಹೋಗಿದ್ದವರು ಯಾರು, ಬಂದ ಮೇಲೆ ಎಷ್ಟು ಮಂದಿಗೆ ಕೊರೊನಾ ಸೋಂಕು ಇತ್ತು, ಎಷ್ಟು ಜನ ಅವರ ಸಂಪರ್ಕ ಮಾಡಿದ್ದರು ಎಂಬ ಖಚಿತ ಮಾಹಿತಿ ಇನ್ನಷ್ಟೇ ಸಿಗಬೇಕಾಗಿದೆ.

‘ಕರ್ನಾಟಕದ 391 ಜನ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದು ಖಚಿತವಾಗಿದ್ದು, ಅವರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಕೆಲವರು ಹೊರರಾಜ್ಯಗಳಿಗೆ ಪ್ರವಾಸಕ್ಕೆ ಹೋಗಿರುವ ಸಾಧ್ಯತೆ ಇದೆ. ಇದರಿಂದಾಗಿ ಸಂಖ್ಯೆ ಹೆಚ್ಚಾಗಬಹುದು’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

‘ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದವರು, ಅವರ ಸಂಪರ್ಕಕ್ಕೆ ಬಂದಿದ್ದವರು ಹಾಗೂ ನಿಜಾಮುದ್ದೀನ್ ರೈಲ್ವೆ ನಿಲ್ದಾಣದಿಂದ ಅವರ ಜತೆ ಪ್ರಯಾಣಿಸಿದವರು ಸೇರಿದಂತೆ ಸುಮಾರು 1,500 ಜನರ ಪಟ್ಟಿಯನ್ನು ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯ ಆರೋಗ್ಯ ಇಲಾಖೆಗೆ ಬುಧವಾರ ನೀಡಿದೆ. ಅದರ ಅನುಸಾರ 800 ಮಂದಿಯನ್ನು ಈಗಾಗಲೇ ಸಂಪರ್ಕಿಸಲಾಗಿದೆ. ಆ ಪೈಕಿ 143 ಮಂದಿಯ ಗಂಟಲ ದ್ರವ ಹಾಗೂ ರಕ್ತದ ಮಾದರಿಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಗಳಿಗೆ ಕಳುಹಿಸಿ, ಅವರನ್ನು ಕ್ವಾರಂಟೈನ್ ಕೇಂದ್ರಗಳಿಗೆ ದಾಖಲಿಸಲಾಗಿದೆ’ ಎಂದು ಆರೋಗ್ಯ ಇಲಾಖೆ ಮೂಲಗಳು ಹೇಳಿವೆ.

‘1,500 ಮಂದಿಯೂ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಹೇಳಲು ಸಾಧ್ಯವಿಲ್ಲ’ ಎಂದು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಕ್ತರ್ ತಿಳಿಸಿದರು.

ಜಿಲ್ಲಾವಾರು ಮಾಹಿತಿ: ಕರ್ನಾಟಕದ ಕೆಲವು ಜಿಲ್ಲೆಗಳಿಂದ ಹೋಗಿದ್ದವರ ಮಾಹಿತಿ ಹೀಗಿದೆ. ಕೊಡಗು–13 , ದಕ್ಷಿಣ ಕನ್ನಡ–21, ಧಾರವಾಡ– 15, ಬೆಳಗಾವಿ- 62, ಬಾಗಲಕೋಟೆ- 16, ಬಳ್ಳಾರಿ- 12, ವಿಜಯಪುರ– 10, ಗದಗ– 6,ಉತ್ತರ ಕನ್ನಡ- 2, ತುಮಕೂರು–13 (1 ಸಾವು), ಕೋಲಾರ– 34, ಚಾಮರಾಜನಗರ- 12, ಮೈಸೂರು- 12, ಯಾದಗಿರಿ-5, ಬೀದರ್-26,ಕಲಬುರ್ಗಿ-26.

₹24.10 ಲಕ್ಷ ಕೊಟ್ಟ ಬಿಎಸ್‌ವೈ 
ಬೆಂಗಳೂರು:
ಬಿ.ಎಸ್‌.ಯಡಿಯೂರಪ್ಪ ಅವರು ತಮ್ಮ ಒಂದು ವರ್ಷದ ವೇತನ ₹24.10 ಲಕ್ಷವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದರು

ಕಾಸು ಬಿಚ್ಚದ ರಾಜಕಾರಣಿಗಳು ಕೇವಲ ಸಂಸದರ ನಿಧಿ ಮತ್ತು ಶಾಸಕರ ನಿಧಿಯ ಹಣ ನೀಡುವುದಾಗಿ ಹೇಳಿ ಪ್ರಚಾರ ಗಿಟ್ಟಿಸುತ್ತಿರುವುದನ್ನು ‘ಪ್ರಜಾವಾಣಿ’ ಪ್ರಕಟಿಸಿತ್ತು. ಬುಧವಾರ ಬೆಳಿಗ್ಗೆಯೇ ವರ್ಷದ ವೇತನ ನೀಡುವುದಾಗಿ ಟ್ವೀಟ್‌ ಮಾಡಿದ ಯಡಿಯೂರಪ್ಪ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರಿಗೆ ಚೆಕ್‌ ಹಸ್ತಾಂತರಿಸಿದರು.

110ಕ್ಕೆ ಸೋಂಕಿತರ ಸಂಖ್ಯೆ
ರಾಜ್ಯದಲ್ಲಿ ಬುಧವಾರ ಒಂದೇ ದಿನ 9 ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 110ಕ್ಕೆ ತಲುಪಿದೆ. ಮೈಸೂರಿನಲ್ಲಿ 5, ಬೆಂಗಳೂರಿನಲ್ಲಿ 3 ಹಾಗೂ ದಕ್ಷಿಣ ಕನ್ನಡದಲ್ಲಿ ಒಂದು ಪ್ರಕರಣ ವರದಿಯಾಗಿದೆ.

ಎರಡು ನಗರ ಸೂಕ್ಷ್ಮ ಕ್ಷೇತ್ರ: ದೇಶದಲ್ಲಿ ಕೊರೊನಾ ಸೋಂಕು ಹರಡುತ್ತಿರುವ 25 ಪ್ರಮುಖ ಸೂಕ್ಷ್ಮ ಕ್ಷೇತ್ರಗಳ ಪಟ್ಟಿಯಲ್ಲಿ ರಾಜ್ಯದ ಬೆಂಗಳೂರು ಹಾಗೂ ಮೈಸೂರು ಸೇರಿವೆ. ಕಳೆದ 14 ದಿನಗಳಲ್ಲಿ ವೇಗವಾಗಿ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಜಿಲ್ಲೆಗಳ ಪಟ್ಟಿಯಲ್ಲಿ ರಾಜ್ಯದ ಚಿಕ್ಕಬಳ್ಳಾಪುರ ಸ್ಥಾನ ಪಡೆದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು