ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಕ್ಷಿದಾರರಿಗೆ ಕೋರ್ಟ್‌ ಪ್ರವೇಶ ನಿರ್ಬಂಧ

ಹೈಕೋರ್ಟ್‌ನ ಮೂರು ಪೀಠ: ಬೆಂಗಳೂರು ನಗರ, ಕಲಬುರ್ಗಿ ಜಿಲ್ಲಾ ನ್ಯಾಯಾಲಯಕ್ಕೆ ಅನ್ವಯ
Last Updated 18 ಮಾರ್ಚ್ 2020, 20:46 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಹೈಕೋರ್ಟ್‌ನ ಮೂರು ಪೀಠಗಳೂ ಸೇರಿದಂತೆ ಬೆಂಗಳೂರು ನಗರ ಮತ್ತು ಕಲಬುರಗಿ ಜಿಲ್ಲೆಯಲ್ಲಿರುವ ಎಲ್ಲಾ ನ್ಯಾಯಾಲಯಗಳಿಗೆ ಕಕ್ಷಿದಾರರು ಪ್ರವೇಶಿಸುವುದಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ.

ಗುರುವಾರದಿಂದ (ಮಾ. 19) ಈ ಕ್ರಮ ಜಾರಿಗೆ ಬರಲಿದೆ.

ಈ ಕುರಿತು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ ಬುಧವಾರ ನೋಟಿಸ್ ಹೊರಡಿಸಿದ್ದಾರೆ.

ಕರ್ನಾಟಕ ಹೈಕೋರ್ಟ್ ಬೆಂಗಳೂರಿನ ಪ್ರಧಾನ ಪೀಠ, ಕಲಬುರ್ಗಿ ಮತ್ತು ಧಾರವಾಡ ನ್ಯಾಯಪೀಠ, ಬೆಂಗಳೂರು ನಗರದಲ್ಲಿರುವ ಸಿಟಿ ಸಿವಿಲ್, ಜಿಲ್ಲಾ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನ್ಯಾಯಾಲಯಗಳು (ನಗರ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ) ಮತ್ತು ಕಲಬುರ್ಗಿ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳು ಮತ್ತು ನ್ಯಾಯಮಂಡಳಿಗಳ ಆವರಣ ಪ್ರವೇಶಿಸಲು ಕಕ್ಷಿದಾರರಿಗೆ ಅವಕಾಶ ಇಲ್ಲ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ವಕೀಲರು, ನ್ಯಾಯಾಲಯದ ಸಿಬ್ಬಂದಿ, ಸರ್ಕಾರಿ ಮತ್ತು ಸ್ಥಳೀಯ ಸಂಸ್ಥೆ ಅಧಿಕಾರಿಗಳು, ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ತಮ್ಮ ಅಧಿಕೃತ ಕಾರ್ಯಗಳ ನಿಮಿತ್ತ ಕೋರ್ಟ್‌ಗಳಿಗೆ ಭೇಟಿ ನೀಡಬಹುದು. ಒಂದೊಮ್ಮೆ ಕಕ್ಷಿದಾರರು ಕೋರ್ಟ್‌ಗೆ ಭೇಟಿ ನೀಡುವುದು ಅಗತ್ಯವಾದರೆ, ಅವರ ಪರ ವಕೀಲರು ಅನುಮತಿ ಪತ್ರ ನೀಡಬೇಕು. ಕಕ್ಷಿದಾರರಿಗೆ ಕೋರ್ಟ್ ಪ್ರವೇಶಿಸಲು ಅನುಮತಿ ನೀಡುವುದಕ್ಕೆ ಇರುವ ಕಾರಣಗಳನ್ನು ಸಂಕ್ಷಿಪ್ತವಾಗಿ ನಮೂದಿಸಬೇಕು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ವಿಚಾರಣೆಗೆ ಹಾಜರಾಗಬೇಕಾದ ಮತ್ತು ಖುದ್ದು ವಾದ ಮಂಡನೆ ಮಾಡಲು ಬಯಸುವ ಕಕ್ಷಿದಾರರು, ಕೋರ್ಟ್ ಪ್ರವೇಶ ದ್ವಾರ ಮತ್ತು ತಪಾಸಣಾ ಸ್ಥಳಗಳಲ್ಲಿ ತಾವು ಯಾವ ನಿರ್ದಿಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಜರಾಗಬೇಕಿದೆ ಎಂಬುದರ ಕುರಿತು ಲಿಖಿತವಾಗಿ ಅರ್ಜಿ ಮತ್ತು ದಾಖಲೆ ಸಲ್ಲಿಸಬೇಕು. ಒಂದು ವೇಳೆ ಯಾವುದಾದರೂ ಕಕ್ಷಿದಾರ ಕೋರ್ಟ್‌ಗೆ ಪ್ರಕರಣ ದಾಖಲಿಸಲು, ಆಕ್ಷೇಪಣಾ ಪತ್ರ ಅಥವಾ ಅರ್ಜಿಗಳನ್ನು ಸಲ್ಲಿಸಬೇಕಾದರೆ, ಆ ಪ್ರಕರಣಕ್ಕೆ ಸಂಬಂಧಿಸಿದ ವಿವರಗಳನ್ನು ಅರ್ಜಿ ಸ್ವರೂಪದಲ್ಲಿ ನೀಡಬೇಕು. ಆ ಅರ್ಜಿಗಳು ಪರಿಶೀಲನೆ ಮಾಡಿದ ನಂತರ ಕೋರ್ಟ್‌ನ ಸಂಬಂಧಪಟ್ಟ ಅಧಿಕಾರಿಯು ಕಕ್ಷಿದಾರರಿಗೆ ಕೋರ್ಟ್ ಪ್ರವೇಶಾವಕಾಶ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ನೋಟಿಸ್ ನಲ್ಲಿ ಸ್ಪಷ್ಟಪಡಿಸಲಾಗಿದೆ.

ನಿರ್ಣಯಕ್ಕೆ ಏನು ಕಾರಣ?

ಅರ್ಜಿಯೊಂದರ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್. ಓಕಾ ಅವರು ವಕೀಲರನ್ನು ಉದ್ದೇಶಿಸಿ, ‘ಗುರುವಾರದಿಂದ ಕೋರ್ಟ್ ಆವರಣ ಪ್ರವೇಶಿಸಲು ಕಕ್ಷಿದಾರರಿಗೆ ನಿರ್ಬಂಧ ಹೇರಲಾಗುವುದು’ ಎಂದು ತಿಳಿಸಿದರು.

ಇಂತಹ ನಿರ್ಣಯ ಕೈಗೊಳ್ಳಲು ಕಾರಣ, ಮಂಗಳವಾರ (ಮಾ.17) ಒಂದೇ ದಿನ ಸಿಟಿ ಸಿವಿಲ್ ಕೋರ್ಟ್‌ಗೆ 14 ಸಾವಿರ ಕಕ್ಷಿದಾರರು ಬಂದು ಹೋಗಿದ್ದಾರೆ. ಹೈಕೊರ್ಟ್‌ಗೆ ಭೇಟಿ ನೀಡಿದವರ ಪೈಕಿ ಸುಮಾರು 20 ಮಂದಿಗೆ ಹೆಚ್ಚಿನ ತಾಪಮಾನವಿತ್ತು. 80 ವರ್ಷದ ಹಿರಿಯ ವಕೀಲರೊಬ್ಬರಿಗೆ ಹೆಚ್ಚಿನ ತಾಪಮಾನವಿತ್ತು. ಆದರೆ, ಅವರಿಗ್ಯಾರಿಗೂ ಜ್ವರ, ಶೀತ ಅಥವಾ ಕೆಮ್ಮಿನ ಲಕ್ಷಣಗಳು ಇರಲಿಲ್ಲ ಎಂಬುದು ಸಮಾಧಾನಕರ ಸಂಗತಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT