ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಳು ವರ್ಷಗಳಿಂದ ನಡೆಯದ ಐಎಫ್‌ಎಸ್‌ ಪದೋನ್ನತಿ

ಅಕ್ಷರ ಗಾತ್ರ

ಧಾರವಾಡ: ರಾಜ್ಯ ಅರಣ್ಯ ಸೇವೆಯಿಂದ ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್)ಗೆ ಪದೋನ್ನತಿ ಹೊಂದುವ ಪ್ರಕ್ರಿಯೆಏಳು ವರ್ಷಗಳಿಂದ ನನೆಗುದಿಗೆ ಬಿದ್ದಿರುವುದರಿಂದ ರಾಜ್ಯದ ಪಾಲಿನ 37 ಹುದ್ದೆಗಳು ಖಾಲಿ ಇವೆ.

2013ರಿಂದಲೂ ಪದೋನ್ನತಿಗೆ ಜ್ಯೇಷ್ಠತಾ ಪಟ್ಟಿಯನ್ನು ಇಲಾಖೆ ಸಿದ್ಧಪಡಿಸಿಲ್ಲ. ಕಾರಣ ರಾಜ್ಯದ ಅಧಿಕಾರಿಗಳು ಉಪ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಷ್ಟೇ ಸೀಮಿತಗೊಂಡಿದ್ದು, ಉನ್ನತ ಹುದ್ದೆಗಳು ಅನ್ಯರಾಜ್ಯದವರ ಪಾಲಾಗಿವೆ. ಅರ್ಹತೆ ಇದ್ದರೂ ಹಲವು ಹಿರಿಯ ಅಧಿಕಾರಿಗಳು ಪದೋನ್ನತಿ ಇಲ್ಲದೇ ಈ ವರ್ಷವೂ ನಿವೃತ್ತಿ ಆಗುತ್ತಿದ್ದಾರೆ. ಇದರಿಂದ ಐಎಫ್‌ಎಸ್ ಹುದ್ದೆಯಲ್ಲಿ ರಾಜ್ಯದ 5 ಅಧಿಕಾರಿಗಳು ಮಾತ್ರ ಉಳಿಯಲಿದ್ದಾರೆ.

ಕರ್ನಾಟಕ ರಾಜ್ಯದ ಭಾರತೀಯ ಅರಣ್ಯ ಸೇವೆ ವೃಂದದಲ್ಲಿ ಒಟ್ಟು 164 ಹುದ್ದೆಗಳಿವೆ. ಇದರಲ್ಲಿ ಶೇ 66.5ರಷ್ಟನ್ನು ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಅಖಿಲ ಭಾರತ ನಾಗರಿಕ ಸೇವಾ ನಿಯಮಗಳ ಪ್ರಕಾರ ಶೇ 33.5ರಷ್ಟು ಐಎಫ್‌ಎಸ್ ಹುದ್ದೆಗಳನ್ನು ಆಯಾ ರಾಜ್ಯ ಸೇವೆಯಲ್ಲಿರುವ ಪದೋನ್ನತಿ ಮೂಲಕವೇ ಭರ್ತಿ ಮಾಡಬೇಕು ಎಂಬ ನಿಯಮವಿದೆ. ಆದರೆ ಏಳು ವರ್ಷಗಳಿಂದ ನಿಮಯ ಪಾಲನೆ ಆಗಿಲ್ಲ.

164ರಲ್ಲಿ 49 ಹುದ್ದೆಗಳು ರಾಜ್ಯ ಅರಣ್ಯ ಸೇವೆಗೆ ಮೀಸಲು. ನಿಯಮಾನುಸಾರ ಪ್ರತಿವರ್ಷವೂ ಪದೋನ್ನತಿ ಪ್ರಕ್ರಿಯೆಯನ್ನು ಕೇಂದ್ರ ಲೋಕಸೇವಾ ಆಯೋಗದ ತಂಡ ಬಂದು ನಡೆಸಲಿದೆ. ಪದೋನ್ನತಿಗೆ ಅರ್ಹತೆ ಇದ್ದೂ ವಂಚಿತರಾಗಿರುವ ಏಳು ಅಧಿಕಾರಿಗಳು ಈ ವರ್ಷ ನಿವೃತ್ತರಾಗಲಿದ್ದಾರೆ. ಹೀಗಾಗಿ ಖಾಲಿ ಇರುವ ಹುದ್ದೆಗಳು 44ಕ್ಕೆ ಏರಿಕೆಯಾಗಲಿವೆ.

2013ರ ನಂತರ ಇದು ಏಕಾಏಕಿ ಸ್ಥಗಿತಗೊಂಡಿರುವುದರಿಂದ ಅನ್ಯ ರಾಜ್ಯಗಳ ಅಧಿಕಾರಿಗಳ ಸಂಖ್ಯೆ ಹೆಚ್ಚಾಗಿದೆ. ಇದರಲ್ಲಿ ಉತ್ತರ ಪ್ರದೇಶ, ತಮಿಳುನಾಡು, ಪುದುಚೇರಿ, ಉತ್ತರಾಖಂಡ, ಆಂಧ್ರಪ್ರದೇಶದ ಅಧಿಕಾರಿಗಳ ಸಂಖ್ಯೆ ಅಧಿಕವಾಗಿದೆ. ಇಷ್ಟು ಮಾತ್ರವಲ್ಲ, ಇಲಾಖೆಯ ಉನ್ನತ ಹುದ್ದೆಗಳು ಕನ್ನಡಿಗರಿಗೆ ಲಭ್ಯವಾಗಿಲ್ಲ ಎಂಬ ಕೊರಗು ಪದೋನ್ನತಿ ಸಿಗದ ಅಧಿಕಾರಿಗಳದ್ದಾಗಿದೆ.

‘ವರ್ಗಾವಣೆಯಲ್ಲೂ 2018–19ನೇ ಸಾಲಿನ ನೇರ ನೇಮಕಾತಿ ಅಧಿಕಾರಿಗಳಿಗಿಂತಲೂ ರಾಜ್ಯ ಅರಣ್ಯ ಇಲಾಖೆ ಅಧಿಕಾರಿಗಳು ಕಿರಿಯರು ಎಂದು ಪರಿಗಣಿಸಿ ಕೇಡರ್ ಹುದ್ದೆಗಳನ್ನು ನಿರಾಕರಿಸಿರುವ ಉದಾಹರಣೆಗಳೂ ಇಲಾಖೆಯಲ್ಲಿ ನಡೆದಿವೆ. 1956ರ ಜ್ಯೇಷ್ಠತಾ ಕಾನೂನು ಪ್ರಕಾರ ಅರ್ಹರ ಪಟ್ಟಿ ಸಿದ್ಧಪಡಿಸಬೇಕು. ‘ಪವಿತ್ರಾ’ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಕೂಡ ಜ್ಯೇಷ್ಠತಾ ಪಟ್ಟಿಯನ್ನು ಶೀಘ್ರದಲ್ಲಿ ಸಿದ್ಧಪಡಿಸಲು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿತ್ತು. ಈ ತೀರ್ಪು ಪ್ರಕಟಗೊಂಡು ವರ್ಷಗಳೇ ಕಳೆದರೂ ಈ ಪಟ್ಟಿ ಸಿದ್ಧಪಡಿಸದಿರುವುದು ಹಿರಿಯ ಅಧಿಕಾರಿಗಳ ಹುದ್ದೆಯಲ್ಲಿರುವ ಅನ್ಯ ರಾಜ್ಯದವರ ಮೇಲೆ ಅನುಮಾನ ಮೂಡಿಸುತ್ತಿದೆ’ ಎಂದು ಪದೋನ್ನತಿಗೆ ಕಾದಿರುವ ಅಧಿಕಾರಿಯೊಬ್ಬರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT