ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸೋಂಕಿನ ಭೀತಿ; ನಾವ್ ಮಕ್ಕಳನ್ನು‌ ಶಾಲೆಗೆ ಕಳ್ಸೋದಿಲ್ಲ..!

‘ನೋ ವ್ಯಾಕ್ಸಿನ್‌, ನೋ ಸ್ಕೂಲ್‘‌ ಅಭಿಯಾನ
Last Updated 4 ಜೂನ್ 2020, 4:23 IST
ಅಕ್ಷರ ಗಾತ್ರ
ADVERTISEMENT
""

‘ನೋ ವ್ಯಾಕ್ಸಿನ್‌, ನೋ ಸ್ಕೂಲ್‌...‘ ‘ನಾನ್ ನನ್ನ ಮಕ್ಕಳನ್ನು ಸ್ಕೂಲಿಗೆ ಕಳಿಸೋಲ್ಲ... ಯಾರು ಏನಾದರೂ ಮಾಡ್ಕೊಳ್ಳಿ‘.. ಸೋಂಕು ಹೆಚ್ಚಾಗ್ತಿದೆ ಈಗ ಸ್ಕೂಲ್ ಮಾಡ್ತಾರಂತೆ. . ಹೇಗೆ ಮಕ್ಕಳನ್ನು ಧೈರ್ಯವಾಗಿ ಸ್ಕೂಲಿಗೆ ಕಳಿಸೋದು.. ಏನಾದರೂ ಆಗಲಿ, ಮಕ್ಕಳು ಶಾಲೆಗೆ ಹೋಗದಿದ್ದರೆ.. ಕಲಿಯೋದನ್ನೇ ಮರೆಯುತ್ತಾರಪ್ಪಾ...

ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ನಡುವೆಯೇ ಸರ್ಕಾರ ಜುಲೈ 1 ರಿಂದ ಶಾಲೆ ತೆರೆಯಲು ಮುಂದಾಗಿರುವ ಕ್ರಮಕ್ಕೆ ಅನೇಕ ಪೋಷಕರು ವ್ಯಕ್ತಪಡಿಸುತ್ತಿರುವ ಪ್ರತಿಕ್ರಿಯೆಗಳು ಇವು...

ಸರ್ಕಾರ ಶಾಲೆ ಆರಂಭಿಸಲು ಸರ್ಕಾರ ಆಸಕ್ತಿ ತೋರಿದ್ದರೂ, ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅನೇಕ ಪೋಷಕರು ‘ನಾವುಮಕ್ಕಳನ್ನು ಶಾಲೆಗೆ ಕಳಿಸಲ್ಲ‘ ಎನ್ನುತ್ತಿದ್ದಾರೆ. ‘ಸೋಂಕು ಹೆಚ್ಚಾಗುತ್ತಿರುವ ವೇಳೆಯಲ್ಲಿಸರ್ಕಾರ ಇಂತಹ ನಿರ್ಧಾರ ಕೈಗೊಳ್ಳಬಾರದು.ಸೋಂಕಿತರ ಸಂಖ್ಯೆ ಶೂನ್ಯವಾಗುವ ತನಕ ಅಥವಾ ಲಸಿಕೆ ಅಭಿವೃದ್ಧಿಪಡಿಸುವವರೆಗೆ ಶಾಲೆಗಳನ್ನು ಆರಂಭಿಸುವುದು ಬೇಡ‘ ಎಂಬುದು ಅನೇಕ ಪೋಷಕರ ಒತ್ತಾಯವೂ ಆಗಿದೆ.

ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಬಿರುಸಿನ ಚರ್ಚೆಗಳು ನಡೆಯುತ್ತಿವೆ. ಈ ಜಾಲತಾಣಗಳಲ್ಲಿ ‘ನೋ ವ್ಯಾಕ್ಸಿನ್‌, ನೋ ಸ್ಕೂಲ್’ ಎಂಬ ಅಭಿಯಾನ ಸುದ್ದಿ ಮಾಡುತ್ತಿದೆ.

ಮಕ್ಕಳನ್ನು ನೋಡಿಕೊಳ್ಳುವವರು ಯಾರು ?

‘ಎಷ್ಟೇ ಮುನ್ನೆಚ್ಚರಿಕಾ ಕ್ರಮಗಳನ್ನೂ ಕೈಗೊಂಡರೂ ಶಾಲೆಯಲ್ಲಿ ಮಕ್ಕಳು ಸ್ನೇಹಿತರ ಜೊತೆ ಸೇರುತ್ತಾರೆ. ಬಸ್ಸು, ವ್ಯಾನ್‌ಗಳಲ್ಲಿ ಹೋಗಬೇಕಾಗುತ್ತದೆ. ಈ ವೇಳೆಯಲ್ಲಿ ಅವರ ಮೇಲೆ ಗಮನ ಹರಿಸುವುದು ಯಾರು? ಹಾಗಾಗಿ ಶಾಲೆ ಪುನರಾರಂಭಕ್ಕೆ ಸರ್ಕಾರ ಅವಸರ ಮಾಡಬಾರದು. ಶಿಕ್ಷಣದಷ್ಟೇ ಆರೋಗ್ಯವೂ ಮುಖ್ಯ’ ಎಂಬುದು ಸರ್ಜಾಪುರ ಮುಖ್ಯ ರಸ್ತೆ ನಿವಾಸಿ ಭಾರತಿ ಉಮೇಶ್‌ ಅವರ ಅಭಿಪ್ರಾಯ. ಇವರ ಮಗ 8ನೇ ತರಗತಿ ಓದುತ್ತಿದ್ದಾನೆ.

ಮಗ ಮನೀಷ್‌ ಜೊತೆ ಉಮೇಶ್‌, ಭಾರತಿ

‘ಈಗ ಮಳೆಗಾಲ ಆರಂಭವಾಗಿದೆ. ಹಾಗಾಗಿ ಶೀತ, ನೆಗಡಿ ಮಕ್ಕಳಿಗೆ ಸಾಮಾನ್ಯ. ಈ ಕೊರೊನಾದಿಂದಾಗಿ ಮಕ್ಕಳು ಹುಷಾರು ತಪ್ಪಿದರೆ ಅದೊಂದು ತಲೆನೋವು. ಈಗ ಆನ್‌ಲೈನ್‌ನಲ್ಲಿ ಮಗನಿಗೆ ಪಾಠ ನಡೆಯುತ್ತಿದೆ. ಅದೇ ಸ್ವಲ್ಪ ದಿನ ಮುಂದುವರಿಯಲಿ’ ಎಂಬುದು ಅವರ ಒತ್ತಾಯ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಅಶ್ವಿನಿ ಸುಧಾಕರ್‌ ಅವರ ಹಿರಿಯ ಮಗಳು ಅಮೋಘ 9ನೇ ತರಗತಿಯಲ್ಲಿ ಹಾಗೂ ಕಿರಿಯವಳು ಐಶಾನಿ 4ನೇ ತರಗತಿಯಲ್ಲಿ ಓದುತ್ತಿದ್ದಾಳೆ. ‘ನಾವಿರುವ ಪರಿಸರದಲ್ಲಿ ಕೊರೊನಾ ಸೋಂಕು ಇಲ್ಲ. ಆದರೆ ಈ ಸೋಂಕು ಯಾರಿಂದ ಯಾವಾಗ ಬರುತ್ತೋ ಹೇಳಕ್ಕಾಗಲ್ಲ. ಮಕ್ಕಳನ್ನು ಶಾಲೆಗೆ ಕಳುಹಿಸಿದರೂ ಮನಸ್ಸಿನಲ್ಲಿ ಭಯ. ಕೊರೊನಾ ಸ್ವಲ್ಪ ನಿಯಂತ್ರಣ ಆಗುವವರೆಗೂ, ಅಕ್ಟೋಬರ್‌ ತನಕ ನಾನು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ. ನಾನು ಅವರಿಗೆ ಮನೆಯಲ್ಲಿಯೇ ಪಾಠ ಹೇಳಿಕೊಡುತ್ತೇನೆ’ ಎನ್ನುತ್ತಾರೆ ಅವರು.

ಮಗಳು ಅಮೋಘ, ಐಶಾನಿ ಜೊತೆ ಅಶ್ವಿನಿ ಸುಧಾಕರ್

‘ಈಗ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಬೆಂಗಳೂರಿನಲ್ಲಿ ಭಾರಿ ರಿಸ್ಕ್‌. ಇನ್ನು ಎರಡು ತಿಂಗಳು ಬಿಟ್ಟು ಶಾಲೆ ಆರಂಭಿಸಬಹುದಿತ್ತು. ಆಮೇಲೆ ಪಠ್ಯವನ್ನು ಕಡಿಮೆ ಮಾಡಿ, ಮಕ್ಕಳಿಗೆ ಪಾಠ ಮಾಡಬಹುದು. ನಂತರ ಶನಿವಾರವೂ ಇಡೀದಿನ ಪಾಠ ಮಾಡಲಿ. ಈಗ ಬಹಳ ಮಕ್ಕಳು ತಮ್ಮ ಊರಿಗೆ ಹೋಗಿದ್ದಾರೆ. ಶಾಲೆ ಆರಂಭ ಅಂದಾಗ ಇಲ್ಲಿಗೆ ಬರುತ್ತಾರೆ. ಬೇರೆ ಬೇರೆ ಏರಿಯಾಗಳಿಂದ ಮಕ್ಕಳು ಶಾಲೆಗೆ ಬರುತ್ತಾರೆ. ಹಾಗಾಗಿ ಸೋಂಕು ಭಯ ಜಾಸ್ತಿ. ಕೊರೊನಾ ಹತೋಟಿಗೆ ಬಂದಾಗ ಶಾಲೆ ಆರಂಭಿಸಬೇಕು’ ಎನ್ನುತ್ತಾರೆ ನಗರದ ದೇವಯ್ಯ ಪಾರ್ಕ್‌ ನಿವಾಸಿ ಶರಣ್. ಇವರ ಇಬ್ಬರು ಮಕ್ಕಳು ದೀಕ್ಷಿತ್‌, ಹರ್ಷಿತ್‌,5 ಹಾಗೂ 3ನೇ ತರಗತಿಯಲ್ಲಿ ಓದುತ್ತಿದ್ದಾರೆ.

ಮಕ್ಕಳಾದ ದೀಕ್ಷಿತ್, ಹರ್ಷಿತ್‌ ಜೊತೆ ಶರಣ್‌

‘ಇನ್ನು ಪ್ರಿ ನರ್ಸರಿ, ಎಲ್‌ಕೆಜಿ, ಯುಕೆಜಿ ಅಗತ್ಯವೇ ಮಕ್ಕಳಿಗೆ ಇಲ್ಲ. ನೇರವಾಗಿ ಒಂದನೇ ತರಗತಿಗೆ ಸೇರಿಸಬಹುದು. ಖಾಸಗಿ ಶಾಲೆಗಳು ಶುಲ್ಕಕ್ಕಾಗಿ ಇದನ್ನು ಓದುವುದು ಅನಿವಾರ್ಯ ಎಂಬಂತೆ ಮಾಡಿಬಿಟ್ಟಿವೆ. ನನ್ನ ಮಗನನ್ನು ಈ ವರ್ಷ ಎಲ್‌ಕೆಜಿ ಸೇರಿಸಬೇಕಿತ್ತು. ಆದರೆಒಂದು ವರ್ಷ ತಡವಾದರೂ ಪರವಾಗಿಲ್ಲ, ಮುಂದಿನ ವರ್ಷ ಸೇರಿಸುತ್ತೇನೆ. ಮಕ್ಕಳ ಆರೋಗ್ಯ ಮುಖ್ಯ’ ಎಂಬುದು ಬಾಣಸವಾಡಿಯ ದಿವ್ಯಾ ಪ್ರಸನ್ನ ನಿರ್ಧಾರ.

ವಿದ್ಯಾರ್ಥಿ–ಶಿಕ್ಷಕರಿಗೂ ಭಯ

ಪೋಷಕರಿಗಷ್ಟೇ ಅಲ್ಲ,ಶಾಲೆ ಪುನರಾರಂಭದ ವಿಚಾರ ಮಕ್ಕಳು ಹಾಗೂ ಶಿಕ್ಷಕರನ್ನೂ ಇಕ್ಕಟ್ಟಿಗೆ ಸಿಲುಕಿಸಿದೆ. ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿ ಅಥವಾ ಶಿಕ್ಷಕರಲ್ಲಿ ಸೋಂಕು ಕಾಣಿಸಿಕೊಂಡರೂ ಎಲ್ಲರಿಗೂ ಸೋಂಕು ಹರಡುವ ಅಪಾಯ ಇರುತ್ತದೆ. ಪೂರ್ತಿ ಶಾಲೆಯನ್ನೇ ಮುಚ್ಚಬೇಕಾಗುತ್ತದೆ.

ಭೂಮಿಕಾ

‘ಕೊರೊನಾ ಕಾರಣದಿಂದ ನನಗೆ ಈಗ ಹೊರಗೆ ಹೋಗಲು ಭಯವಾಗುತ್ತಿದೆ. ಹಾಗಿದ್ದಾಗ ಸ್ಕೂಲಿಗೆ ಹೋಗುವುದು ನಿಜಕ್ಕೂ ಕಷ್ಟ. ಶಾಲೆಯಲ್ಲಿ ಎಲ್ಲರೂ ಒಟ್ಟಾಗಿ ಕೂರಬೇಕು. ಸ್ಕೂಲ್‌ ವ್ಯಾನ್‌ನಲ್ಲೂ ಒಟ್ಟಿಗೆ ಕೂರಬೇಕು. ಎಲ್ಲರೂ ಗುಂಪಾಗಿ ಇರುವುದರಿಂದ ಕೊರೊನಾ ಸೋಂಕು ತಗಲುತ್ತದೆ ಎಂದು ಹೇಳಿದ್ದನ್ನು ಟಿವಿಯಲ್ಲಿ ನೋಡಿದ್ದೆ. ಈಗ ಆನ್‌ಲೈನ್‌ ತರಗತಿಗಳು ಚೆನ್ನಾಗಿ ನಡೆಯುತ್ತಿವೆ. ಅದನ್ನೇ ಸ್ವಲ್ಪ ದಿನ ಮುಂದುವರಿಸಲಿ’ ಎಂಬುದು ನಗರದ 10ನೇ ತರಗತಿ ವಿದ್ಯಾರ್ಥಿನಿ ಭೂಮಿಕಾ ಅಭಿಪ್ರಾಯ.

‘ಒಂದೊಂದು ತರಗತಿಯಲ್ಲಿ ಮಕ್ಕಳ ಸಂಖ್ಯೆ 40ರಿಂದ 50 ಇರುತ್ತದೆ. ಆಗ ಸಾಮಾಜಿಕ ಅಂತರ, ಮಾಸ್ಕ್‌ ಬಳಕೆ ಇವೆಲ್ಲಾ ಪಾಲನೆ ಆಗದಿದ್ದರೆ ಕಷ್ಟ. ನೂರಾರು ಮಕ್ಕಳ ಮೇಲೆ 8–9 ಶಿಕ್ಷಕರು ಎಷ್ಟು ಹೊತ್ತು ಕಾಯಬಹುದು? ಮಕ್ಕಳ ಪಾಲಕರು ಸಹ 2–3 ತಿಂಗಳು ಬಿಟ್ಟು ಶಾಲೆ ಆರಂಭ ಆಗಲಿ ಎನ್ನುತ್ತಿದ್ದಾರೆ’ ಎಂಬುದು ಶಿಕ್ಷಕಿ ವೀಣಾ ಅಭಿಪ್ರಾಯ.

ಸ್ವಲ್ಪ ದಿನ ಬಿಟ್ಟು ಶಾಲೆ ಆರಂಭಿಸಲಿ

6–7 ವರ್ಷಕ್ಕಿಂತ ಸಣ್ಣ ಮಕ್ಕಳು ಕೊರೊನಾ ಸೋಂಕನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಹೆತ್ತವರ ನಿರ್ದೇಶನದಂತೆ ಅವರು ಮಾಸ್ಕ್‌, ಸ್ಯಾನಿಟೈಸರ್‌ ಬಳಕೆ ಮಾಡಿದರೂ, ಯಾರೂ ಇಲ್ಲದೇ ಇದ್ದಾಗ ಶುಚಿತ್ವ, ಸಾಮಾಜಿಕ ಅಂತರವನ್ನು ನಿರ್ಲಕ್ಷಿಸಬಹುದು. ಹಾಗಾಗಿ ಆ ಮಕ್ಕಳಿಗೆ ರಿಸ್ಕ್‌ ಹೆಚ್ಚು. ಇನ್ನು ಸ್ವಲ್ಪ ದೊಡ್ಡ ಮಕ್ಕಳು ಅತಿ ಜಾಗ್ರತೆ ವಹಿಸಬಹುದು. ಇದು ಅವರ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರಬಹುದು ಎನ್ನುತ್ತಾರೆ ಪೀಪಲ್‌ ಟೀ ಆಸ್ಪತ್ರೆಯ ಮನೋವೈದ್ಯ ಡಾ. ಸತೀಶ್ ರಾಮಯ್ಯ.

ಡಾ. ಸತೀಶ್‌ ರಾಮಯ್ಯ

‘ಸರ್ಕಾರ ಈಗ ತುರ್ತಾಗಿ ಶಾಲೆ ಆರಂಭ ಮಾಡುವುದಕ್ಕಿಂತ ಎರಡು–ಮೂರು ತಿಂಗಳು ಬಿಟ್ಟು ಶಾಲೆ ಪುನರಾರಂಭ ಮಾಡಲಿ. ಈ ಕೊರೊನಾ ಸದ್ಯಕ್ಕೆ ಕಡಿಮೆಯಾಗುವ ಲಕ್ಷಣಗಳಿಲ್ಲ. 100ದಿನ ಶಾಲೆ, 100 ದಿನ ಆನ್‌ಲೈನ್‌ ತರಗತಿ, ಇಂತಹ ಯೋಜನೆ ಜಾರಿಯಾಗಲಿ.ಕೊರೊನಾ ಜೊತೆ ಮುನ್ನೆಚ್ಚರಿಕಾ ತೆಗೆದುಕೊಂಡು, ಹೊಸ ಜೀವನಕ್ರಮಕ್ಕೆ ಹೊಂದಿಕೊಳ್ಳುವುದನ್ನು ಮಕ್ಕಳಿಗೆ ಹೆತ್ತವರು ಕಲಿಸಿಕೊಡಬೇಕು.ಅದಕ್ಕಾಗಿ ಪೋಷಕರು ಈಗಲೇ ತಯಾರಿ ನಡೆಸಿ. ಸರ್ಕಾರದ ಮಾರ್ಗದರ್ಶಿ, ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮಕ್ಕಳಿಗೆ ತಿಳಿಸಿಹೇಳಬೇಕು‘ ಎಂದು ಅವರು ಸಲಹೆ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT