ಸೋಮವಾರ, ಸೆಪ್ಟೆಂಬರ್ 16, 2019
22 °C

ಅಸಮರ್ಥ ಆಡಳಿತ ವ್ಯವಸ್ಥೆ: ನಷ್ಟದಲ್ಲಿ ವಾಯವ್ಯ ಸಾರಿಗೆ ಸಂಸ್ಥೆ

Published:
Updated:

ಹುಬ್ಬಳ್ಳಿ: ಮುಂಬೈ ಕರ್ನಾಟಕ ವ್ಯಾಪ್ತಿಯ 4,519 ಹಳ್ಳಿಗಳನ್ನು ರಾಜ್ಯ, ಹೊರ ರಾಜ್ಯದ ಪ್ರಮುಖ ನಗರ, ಪಟ್ಟಣಗಳೊಂದಿಗೆ ಬೆಸೆದಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಈ ಭಾಗದ ಜನಪ್ರಿಯ ಸಾರಿಗೆ. ಆದರೆ, ಭ್ರಷ್ಟ ಮತ್ತು ಅಸಮರ್ಥ ಆಡಳಿತ ವ್ಯವಸ್ಥೆಯಿಂದಾಗಿ ಸಂಸ್ಥೆ ನಷ್ಟದ ಹಾದಿಯಲ್ಲಿ ಇದೆ.

ಬಸ್ಸುಗಳ ಖರೀದಿ, ಸಿಬ್ಬಂದಿ ನೇಮಕ, ವರ್ಗಾವಣೆ ವಿಷಯದಲ್ಲಿ ಒಂದಲ್ಲ ಒಂದು ಹಗರಣ, ಭ್ರಷ್ಟಾಚಾರ ನಡೆಯುತ್ತಲೇ ಇದೆ. ಸಂಸ್ಥೆಯಲ್ಲಿ ಯಾವ ಪ್ರಮಾಣದಲ್ಲಿ ಭ್ರಷ್ಟಾಚಾರ ವ್ಯಾಪಿಸಿದೆ ಎಂದರೆ ಚಾಲಕರು, ನಿರ್ವಾಹಕರು ತಮ್ಮ ಹಕ್ಕುಬದ್ಧ ರಜೆ ಪಡೆಯಲು ಕೂಡ ಮೇಲಧಿಕಾರಿಗಳಿಗೆ ಲಂಚ ನೀಡಬೇಕಾದ ಸ್ಥಿತಿ ಇದೆ!

ಇದನ್ನೂ ಓದಿ... ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ನುಂಗಣ್ಣರ ದರ್ಬಾರ್‌!

ಹುಬ್ಬಳ್ಳಿಯ ಪ್ರಾದೇಶಿಕ ಕಾರ್ಯಾಗಾರದಲ್ಲಿ ಗುಜರಿ ವಸ್ತುಗಳ ಹಗರಣ ಮತ್ತು ಹಳೇ ಬಸ್‌ಗಳ ಚಾಸ್ಸಿ ನಂಬರ್‌ ಗಳನ್ನು ಹೊಸ ಬಸ್‌ಗಳಿಗೆ ಹಾಕಿ ಗುಜರಿಗೆ ಕಳುಹಿಸುವ ಮೂಲಕ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣಗಳು 2015ರಲ್ಲಿ ಬೆಳಕಿಗೆ ಬಂದಿದ್ದವು.

ಸಾರಿಗೆ ಸಂಸ್ಥೆಗಳಲ್ಲಿ ಸಾಮಾನ್ಯ ವಾಗಿ 8 ಲಕ್ಷ ಕಿ.ಮೀ ದೂರ ಕ್ರಮಿ ಸಿದ ವಾಹನಗಳನ್ನು ಗುಜರಿಗೆ ಹಾಕಲಾ ಗುತ್ತದೆ. ಆದರೆ, ಅವಧಿ ಮೀರಿದ ಬಸ್‌ಗಳ ಚಾಸ್ಸಿ ಸಂಖ್ಯೆಯನ್ನು ಕಡಿಮೆ ದೂರ ಕ್ರಮಿಸಿದ 14 ಬಸ್‌ಗಳಿಗೆ ಹಾಕಿ ಗುಜರಿಗೆ ಮಾರಾಟ ಮಾಡಿದ್ದ ಪ್ರಕರಣ ಬಾಗಲಕೋಟೆ ವಿಭಾಗದಲ್ಲಿ ನಡೆದಿತ್ತು.

ಹುಬ್ಬಳ್ಳಿ ಪ್ರಾದೇಶಿಕ ಕಾರ್ಯಾಗಾರದಲ್ಲಿ ಗುಜರಿ ವಸ್ತುಗಳ ಮಾರಾಟದಲ್ಲಿ ₹2.80 ಕೋಟಿ ದುರುಪಯೋಗವಾಗಿತ್ತು. ಈ ಸಂಬಂಧ ನಾಲ್ಕು ಮಂದಿ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡಲಾಗಿದೆ. ಇದರ ಬಳಿಕ ಎಂಎಸ್‌ಟಿಸಿ (ಮೆಟಲ್‌ ಆ್ಯಂಡ್‌ ಸ್ಟೀಲ್‌ ಟ್ರೇಡಿಂಗ್‌ ಕಾರ್ಪೊರೇಷನ್‌) ಮೂಲಕ ಆನ್‌ಲೈನ್‌ ಟೆಂಡರ್‌ ಆಹ್ವಾನಿಸಿ, ಗುಜರಿ ವಸ್ತುಗಳನ್ನು ಹರಾಜು ಮಾಡುವ ಪಾರದರ್ಶಕ ವ್ಯವಸ್ಥೆ ಜಾರಿಗೆ ಬಂದಿದೆ ಎನ್ನುತ್ತಾರೆ ಈ ಹಗರಣವನ್ನು ಬಯಲಿಗೆಳೆದು, ಹೋರಾಟ ನಡೆಸಿದ್ದ ಬಿಎಂಎಸ್‌ ಕಾರ್ಮಿಕ ಮುಖಂಡ ಸುಭಾಶ ಸಿಂಗ್‌ ಜಮಾದಾರ್‌.

*
ಪ್ರಯಾಣಿಕರ ಸಾಗಾಟದ ಜತೆಗೆ ಸರಕು– ಸಾಗಾಟ ವ್ಯವಸ್ಥೆ ಆರಂಭಿಸುವಂತೆ ಸರ್ಕಾರಕ್ಕೆ ಈ ಹಿಂದೆ ಪ್ರಸ್ತಾವ ಸಲ್ಲಿಸಿದ್ದರೂ ಇದುವರೆಗೂ ಜಾರಿಯಾಗಿಲ್ಲ.
-ಡಾ.ಕೆ.ಎಸ್‌.ಶರ್ಮಾ, ಅಧ್ಯಕ್ಷ, ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳ, ಹುಬ್ಬಳ್ಳಿ

ಇವನ್ನೂ ಓದಿ... 

ಸಾರಿಗೆ ಸಂಸ್ಥೆಗಳ ದರ ಪರಿಷ್ಕರಿಸದಿದ್ದರೆ ಉಳಿವು ಕಷ್ಟ!

ಬಿಳಿಯಾನೆ ಸಾಕಿ ಬಡವಾಯ್ತು ಬಿಎಂಟಿಸಿ!

ಸಾರಿಗೆ ಇಲಾಖೆಗಳಲ್ಲಿ ಕೊಳ್ಳೆ ಹೊಡೆದು ಸಿಕ್ಕಿಬಿದ್ದರು

Post Comments (+)