ಬಸ್ ಮಾಲೀಕರಿಗೆ ನೋಟಿಸ್

ಸಾಗರ: ಹಬ್ಬದ ಸಂದರ್ಭದಲ್ಲಿ, ಸಾಲು ಸಾಲು ಸರ್ಕಾರಿ ರಜೆಗಳು ಬಂದಾಗ ಸಾಗರದಿಂದ ಬೆಂಗಳೂರಿಗೆ ತೆರಳುವ ಹಾಗೂ ಬೆಂಗಳೂರಿನಿಂದ ಸಾಗರಕ್ಕೆ ಬರುವ ಖಾಸಗಿ ಬಸ್ ಗಳಲ್ಲಿ ಪ್ರಯಾಣಿಕರಿಂದ ಒಂದಕ್ಕೆ ಮೂರರಿಂದ ನಾಲ್ಕುಪಟ್ಟು ದರವನ್ನು ವಿಧಿಸುತ್ತಿರುವ ವಿಷಯ ಈಗ ಉಪವಿಭಾಗಾಧಿಕಾರಿ ಕಚೇರಿ ಮೆಟ್ಟಿಲು ಏರಿದೆ.
ನಾಗರಾಜ್ ಕೆ. ಎಂಬವರು ನೀಡಿರುವ ದೂರಿನ ಆಧಾರದ ಮೇರೆಗೆ ಪ್ರಕಾಶ್ ಟ್ರಾವೆಲ್ಸ್ನ ಇಬ್ಬರು ಮಾಲೀಕರು, ಸೀಬರ್ಡ್, ವಿನಯ ಟ್ರಾವೆಲ್ಸ್, ಕಡಲಮುತ್ತು, ಗಜಮುಖ, ವೈಷ್ಣವಿ ಟ್ರಾವೆಲ್ಸ್, ಗಜಾನನ ಟ್ರಾವೆಲ್ಸ್ನ ಮಾಲೀಕರಿಗೆ ಇಲ್ಲಿನ ಉಪವಿಭಾಗಾಧಿಕಾರಿ ನೋಟಿಸ್ ಕಳುಹಿಸಿದ್ದು, ಸೆ.6ರಂದು ಬೆಳಿಗ್ಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಸಾಗರದಿಂದ ಬೆಂಗಳೂರಿಗೆ ಸಾಮಾನ್ಯ ದಿನಗಳಲ್ಲಿ ₹ 400 ದರ ನಿಗದಿಪಡಿಸಲಾಗಿದೆ. ಹಬ್ಬ ಹಾಗೂ ಸಾಲು ಸಾಲು ರಜಾ ದಿನಗಳು ಬಂದಾಗ ₹1 ಸಾವಿರದಿಂದ 1400ರವರೆಗೂ ದರವನ್ನು ನಿಗದಿಪಡಿಸಿ ಪ್ರಯಾಣಿಕರಿಂದ ಒತ್ತಾಯಪೂರ್ವಕವಾಗಿ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಖಾಸಗಿ ಬಸ್ ಮಾಲೀಕರ ಮೇಲೆ ಇದೆ.
ಉದ್ಯೋಗಕ್ಕಾಗಿ, ಬೇರೆ ಬೇರೆ ವೃತ್ತಿಗಾಗಿ ಈ ಭಾಗದವರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ರಜೆ ಬಂದಾಗ ಊರಿಗೆ ಬರಲು ಇವರು ಬಯಸುವುದು ಸಹಜ. ಇದೇ ಸಂದರ್ಭವನ್ನು ಖಾಸಗಿ ಬಸ್ ಮಾಲೀಕರು ದುರುಪಯೋಗ ಮಾಡಿಕೊಂಡು ಪ್ರಯಾಣಿಕರನ್ನು ಶೋಷಿಸುತ್ತಿದ್ದಾರೆ ಎನ್ನಲಾಗಿದೆ.
ಸಾಗರದಿಂದ ಬೆಂಗಳೂರಿಗೆ ತೆರಳುವ ಹೆಚ್ಚಿನ ಬಸ್ಗಳು ಕಾಂಟ್ರಾಕ್ಟ್ ಕ್ಯಾರಿಯೇಜ್ ಎಂದು ಪರವಾನಗಿ ಪಡೆದಿವೆ. ಮದುವೆ ಹಾಗೂ ವಿಶೇಷ ಸಂದರ್ಭಗಳಲ್ಲಿ ಬಸ್ಗಳನ್ನು ಗುತ್ತಿಗೆ ಪಡೆಯುವ ರೀತಿಯಲ್ಲಿ ಈ ಬಸ್ಗಳು ಸಂಚಾರಕ್ಕೆ ಪರವಾನಗಿ ಪಡೆದಿವೆ. ಹೀಗಾಗಿ ಇವುಗಳು ಪ್ರಯಾಣಿಕರಿಗೆ ವಿಧಿಸುವ ದರವನ್ನು ನಿಯಂತ್ರಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂಬ ಮಾತು ಖಾಸಗಿ ಬಸ್ ಮಾಲೀಕರ ವಲಯದಲ್ಲಿ ಕೇಳಿಬರುತ್ತಿದೆ.
ಮತ್ತೊಂದೆಡೆ ಬೆಂಗಳೂರಿಗೆ ಪ್ರತಿನಿತ್ಯ ಸಂಚರಿಸುವ ಬಸ್ಗಳು ಪರವಾನಗಿ ನಿಯಮಗಳನ್ನು ರಾಜಾರೋಷವಾಗಿ ಉಲ್ಲಂಘಿಸುತ್ತಿರುವ ಬಗ್ಗೆಯೂ ದೂರುಗಳಿವೆ. ಏಕೆಂದರೆ ಕಾಂಟ್ರಾಕ್ಟ್ ಕ್ಯಾರಿಯೇಜ್ ಪರವಾನಗಿ ಪಡೆದಾಗ ಬಸ್ಗಳಲ್ಲಿ ಸರಕು ಸಾಗಾಣಿಕೆ ಮಾಡುವಂತಿಲ್ಲ. ಆದರೆ ಹೆಚ್ಚಿನ ಬಸ್ಗಳು ದೊಡ್ಡ ಮಟ್ಟದಲ್ಲಿ ಈ ಮೂಲಕವೇ ವರಮಾನ ಸಂಗ್ರಹಿಸುತ್ತಿವೆ ಎಂಬ ದೂರು ಇದೆ.
ಮತ್ತೊಂದು ನಿಯಮದ ಪ್ರಕಾರ ಕಾಂಟ್ರಾಕ್ಟ್ ಕ್ಯಾರಿಯೇಜ್ ಪ್ರಕಾರ ಬಸ್ ಓಡಿಸುವವರು ಟಿಕೆಟ್ ವಿತರಿಸುವ ಹಾಗಿಲ್ಲ. ಆದರೆ ಈಗ ಆನ್ಲೈನ್ ಮೂಲಕವೂ ಟಿಕೆಟ್ ಮಾಡುವ ಪದ್ಧತಿ ಜಾರಿಯಲ್ಲಿದೆ. ಅಲ್ಲದೆ ಸಾಗರದಿಂದ ಬೆಂಗಳೂರಿಗೆ ಎಂದು ಪರವಾನಗಿ ಪಡೆದವರು ಶಿವಮೊಗ್ಗದಲ್ಲಿ ಬಸ್ ನಿಲುಗಡೆ ಮಾಡುವಂತೆಯೇ ಇಲ್ಲ. ಈ ನಿಯಮಗಳನ್ನೂ ಬಹಿರಂಗವಾಗಿಯೇ ಉಲ್ಲಂಘಿಸಲಾಗುತ್ತಿದೆ.
‘ಬೆಂಗಳೂರಿಗೆ ಬಸ್ ಓಡಿಸುವ ವಹಿವಾಟು ಹಿಂದಿನಂತೆ ಲಾಭದಾಯಕವಲ್ಲ. ಸೀಜನ್ಗಳಲ್ಲಿ ಮಾತ್ರ ಬಸ್ನಲ್ಲಿ ಹೆಚ್ಚಿನ ಪ್ರಯಾಣಿಕರು ಇರುತ್ತಾರೆ. ಮಳೆಗಾಲದ ಮೂರು ತಿಂಗಳು ಬಹುತೇಕ ಬಸ್ಗಳು ಖಾಲಿ ಇರುತ್ತವೆ. ಹೀಗಾಗಿ ವಿಶೇಷ ಸಂದರ್ಭಗಳಲ್ಲಿ ಹೆಚ್ಚಿನ ದರ ವಿಧಿಸುವುದು ಅನಿವಾರ್ಯ’ ಎಂದು ಹೆಸರು ಹೇಳಲು ಇಚ್ಛಿಸದ ಬಸ್ ಮಾಲೀಕರೊಬ್ಬರು ತಮ್ಮ ಕ್ರಮಕ್ಕೆ ಸಮರ್ಥನೆ ನೀಡುತ್ತಾರೆ.
‘ಹಬ್ಬ ಹಾಗೂ ರಜಾ ದಿನಗಳಲ್ಲಿ ಹೆಚ್ಚಿನ ದರ ವಿಧಿಸುವುದು ಖಾಸಗಿ ಬಸ್ಗಳಿಗೆ ಮಾತ್ರ ಸೀಮಿತವಲ್ಲ. ಕೆಎಸ್ಆರ್ಟಿಸಿಯೇ ಹೆಚ್ಚಿನ ದರ ವಿಧಿಸುವಾಗ ನಾವು ಮಾಡುವುದರಲ್ಲಿ ತಪ್ಪೇನಿದೆ’ ಎಂಬ ವಾದವೂ ಖಾಸಗಿ ಬಸ್ ಮಾಲೀಕರ ವಲಯದಲ್ಲಿದೆ.
ಈ ನಡುವೆ ಹೆಚ್ಚಿನ ದರ ವಸೂಲಿ ಮಾಡುತ್ತಿರುವ ಖಾಸಗಿ ಬಸ್ ಮಾಲೀಕರಿಗೆ ನೋಟಿಸ್ ನೀಡಿರುವ ಕ್ರಮವನ್ನು ಇಲ್ಲಿನ ಬಳಕೆದಾರರ ವೇದಿಕೆ ಸ್ವಾಗತಿಸಿದ್ದು, ಸೆ.6ರಂದು ನಡೆಯಲಿರುವ ವಿಚಾರಣೆ ಸಂದರ್ಭದಲ್ಲಿ ಪ್ರಯಾಣಿಕರ ಪರವಾಗಿ ಅಹವಾಲು ಮಂಡಿಸಲು ವೇದಿಕೆಗೆ ಅವಕಾಶ ಕಲ್ಪಿಸಬೇಕು ಎಂದು ಉಪವಿಭಾಗಾಧಿಕಾರಿ ಅವರನ್ನು ಪತ್ರದ ಮೂಲಕ ಕೋರಲಾಗಿದೆ.
ಪ್ರಯಾಣಿಕರು ಅನಿವಾರ್ಯವಾಗಿ ಒಲ್ಲದ ಮನಸ್ಸಿನಿಂದಲೇ ಹೆಚ್ಚಿನ ದರ ತೆತ್ತು ಪ್ರಯಾಣಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆಗೆ ಉಪವಿಭಾಗಾಧಿಕಾರಿ ಯಾವ ರೀತಿ ಪರಿಹಾರ ನೀಡುತ್ತಾರೆ ಎಂದು ಕಾದು ನೋಡಬೇಕಿದೆ.
ಏನಿದು ಸಿಆರ್ಪಿಸಿ ಕಲಂ 133?
ಉಪವಿಭಾಗಾಧಿಕಾರಿ 8 ಖಾಸಗಿ ಬಸ್ ಮಾಲೀಕರಿಗೆ ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ ಕಲಂ 133ರ ಪ್ರಕಾರ ನೋಟಿಸ್ ನೀಡಿದ್ದಾರೆ. ಈ ಕಲಂ ಪ್ರಕಾರ ಯಾವುದೇ ವ್ಯಕ್ತಿ ತನ್ನ ವೃತ್ತಿ ಹಾಗೂ ನಡೆತೆಯನ್ನು ನಿಯಮಗಳನ್ನು ಉಲ್ಲಂಘಿಸಿ ಸಾರ್ವಜನಿಕರಿಗೆ ಉಪದ್ರವ ಉಂಟಾಗುವ ರೀತಿಯಲ್ಲಿ ವರ್ತಿಸಿದರೆ ಅದನ್ನು ನಿಯಂತ್ರಿಸುವ ಅಧಿಕಾರ ದಂಡಾಧಿಕಾರಿಗಳಾಗಿರುವ ಉಪವಿಭಾಗಾಧಿಕಾರಿಗೆ ಇದೆ.
****
ನಿಗದಿತ ದರಕ್ಕಿಂತ ನೂರು ಅಥವಾ ಇನ್ನೂರು ರೂ. ಹೆಚ್ಚಾದರೆ ಪರವಾಗಿಲ್ಲ. ರೂ.400 ರ ಬದಲು 1200 ನೀಡಬೇಕು ಎಂದರೆ ನಾವು ಒಂದು ಕುಟುಂಬದ ನಾಲ್ಕು ಜನ ಹಬ್ಬಕ್ಕೆ ಊರಿಗೆ ಬಂದು ಹೋಗಬೇಕಾದರೆ ಬಸ್ಗೆ ₹9,600 ನೀಡಬೇಕಾಗುತ್ತದೆ. ಹೀಗಾದರೆ ಹಬ್ಬಕ್ಕೆ ಊರಿಗೆ ಬರುವುದೇ ಬೇಡ ಅನಿಸುವುದಿಲ್ಲವೇ?
-ರಮೇಶ್. ತಾಳಗುಪ್ಪ, (ಬೆಂಗಳೂರಿನಲ್ಲಿ ಉದ್ಯೋಗಿ)
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.