ಗುರುವಾರ , ಫೆಬ್ರವರಿ 20, 2020
31 °C
ಇನ್ನೂ ಆಗದ ಪೋಡಿ, ಜಮೀನು ಪತ್ತೆಗಾಗಿ ಹರಸಾಹಸ

4 ಎಕರೆ ಜಮೀನು ಪತ್ತೆಗಾಗಿ 15 ವರ್ಷಗಳಿಂದ ವೃದ್ಧನ ಅಲೆದಾಟ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: 1961–62ರಲ್ಲಿ ತಮ್ಮ ಕುಟುಂಬಕ್ಕೆ ಸರ್ಕಾರ ಮಂಜೂರು ಮಾಡಿದ್ದ 4 ಎಕರೆ ಜಮೀನಿನ ಪತ್ತೆಗಾಗಿ, 81 ವರ್ಷದ ವೃದ್ಧರೊಬ್ಬರು 15ವರ್ಷಗಳಿಂದ ಸರ್ಕಾರಿ ಕಚೇರಿಗಳಿಗೆ ಅಲೆಯುತ್ತಿದ್ದಾರೆ. 

ತಾಲ್ಲೂಕಿನ ಹರದನಹಳ್ಳಿ ಹೋಬಳಿಯ ಅಮಚವಾಡಿಯ ಗ್ರಾಮದ ಸರ್ವೆ ನಂಬರ್‌ 498ರಲ್ಲಿ 502 ಎಕರೆ 29 ಗುಂಟೆ ಜಮೀನು ಇದೆ. ಇದರಲ್ಲಿ  498/ಪಿ 54 ಬ್ಲಾಕ್‌ 30ರಲ್ಲಿ ಮೂಲತಃ ತಾಲ್ಲೂಕಿನ ನಿವಾಸಿ, ಸದ್ಯ ಬೆಂಗಳೂರಿನಲ್ಲಿ ವಾಸವಿರುವ ನರಸಿಂಹನ್‌ ಎಂಬುವವರಿಗೆ ಸೇರಿದ ನಾಲ್ಕು ಎಕರೆ ಜಮೀನು ಇದೆ. ಅವರ ಕುಟುಂಬಕ್ಕೆ ಸರ್ಕಾರ ಆಸ್ತಿ ಮಂಜೂರು ಮಾಡಿದ್ದು, ಜಮೀನಿಗೆ ಸಂಬಂಧಿಸಿದ ಎಲ್ಲ ದಾಖಲೆಗಳೂ ನರಸಿಂಹನ್‌ ಬಳಿ ಇವೆ. ಆದರೆ, ಸರ್ವೆ ನಂಬರ್‌ನಲ್ಲಿ ಜಾಗ ಎಲ್ಲಿದೆ ಎಂಬುದು ಅವರಿಗೆ ಗೊತ್ತಿಲ್ಲ.

ಜಾಗ ಗುರುತಿಸಲು ಅವರು ಸರ್ಕಾರಿ ಕಚೇರಿಗಳಿಗೆ 1989ರಲ್ಲೇ ಪತ್ರವ್ಯವಹಾರ ಆರಂಭಿಸಿದ್ದು,2005ರಿಂದ ಅಲೆದಾಡುತ್ತಿದ್ದಾರೆ. ಪ್ರಧಾನಿ, ರಾಜ್ಯಪಾಲ, ಮಂತ್ರಿಗಳು, ಅಧಿಕಾರಿಗಳು... ಹೀಗೆ ಎಲ್ಲರಿಗೂ ಪತ್ರಗಳ ಮೇಲೆ ಪತ್ರ ಬರೆಯುತ್ತಿದ್ದರೂ ಫಲ ಸಿಕ್ಕಿಲ್ಲ. 

‘502 ಎಕರೆ ಜಾಗದಲ್ಲಿ 220ಕ್ಕೂ ಹೆಚ್ಚು ಸ್ವಾಧೀನದಾರರು ಇದ್ದಾರೆ. ಆ ಜಾಗ ಪೋಡಿಯಾಗಿಲ್ಲ. ತಾಲ್ಲೂಕು ಕಚೇರಿಯಲ್ಲಿ ಆ ಸರ್ವೆ ನಂಬರ್‌ ನಕ್ಷೆ ಇಲ್ಲ ಎನ್ನುತ್ತಾರೆ. ನಾನು ಬೆಂಗಳೂರಿನ ಭೂ ಮಾಪನ ಇಲಾಖೆಯಿಂದ ನಕ್ಷೆ ಪಡೆದಿದ್ದೇನೆ. ಅದನ್ನು ಅಧಿಕಾರಿಗಳು ಒಪ್ಪುತ್ತಿಲ್ಲ’ ಎಂದು ನರಸಿಂಹನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಸುದೀರ್ಘ ಹೋರಾಟ: ತಂದೆ ವೆಂಕಟರಮಣ ಅಯ್ಯರ್‌ ನಿಧನದ ನಂತರ ನರಸಿಂಹನ್‌ 1989ರಲ್ಲಿ  ಖಾತೆ ಬದಲಾವಣೆ, ಜಮೀನು ಗುರುತಿಸಲು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ, 2006ರಲ್ಲಿ ರಾಜ್ಯ ಮಾಹಿತಿ ಆಯೋಗದ ಮೊರೆ ಹೋಗಿದ್ದರು. 2008ರ‌ ಮಾರ್ಚ್‌ನಲ್ಲಿ ತಂದೆಯವರ ಹೆಸರಿನಲ್ಲಿದ್ದ ಜಮೀನಿನ ಹಕ್ಕು, ನರಸಿಂಹನ್‌ ಅವರಿಗೆ ವರ್ಗಾವಣೆಗೊಂಡಿತ್ತು. 

2009ರ ನವೆಂಬರ್‌ 11ರಂದು ಆದೇಶ ಹೊರಡಿಸಿದ್ದ ಮಾಹಿತಿ ಆಯೋಗ, ‘ಪಹಣಿಯಲ್ಲಿ ಅರ್ಜಿದಾರರ ಹೆಸರಿದೆ. ಜಮೀನನ್ನು ಗುರುತಿಸುವ ಜವಾಬ್ದಾರಿ ಕಂದಾಯ ಇಲಾಖೆಯದ್ದು’ ಎಂದು ಹೇಳಿತ್ತು. ಅದಲ್ಲದೇ, ನಿಯಮಾ ನುಸಾರ ಕ್ರಮ ಕೈಗೊಳ್ಳುವಂತೆ ಅಂದಿನ ಜಿಲ್ಲಾಧಿಕಾರಿ ಮನೋಜ್‌ ಕುಮಾರ್‌ ಮೀನಾ ಅವರಿಗೆ ಸೂಚಿಸಿತ್ತು.

‘ಬದಲಾಯಿಸಲು ಸಾಧ್ಯವಿಲ್ಲ’: ಪ್ರಕರಣಕ್ಕೆ ಸಂಬಂಧಿಸಿದಂತೆ 2015ರ ಮಾರ್ಚ್‌ನಲ್ಲಿ ಅಂದಿನ ಜಿಲ್ಲಾಧಿಕಾರಿ, ಮಾನವ ಹಕ್ಕುಗಳ ಆಯೋಗದ ರಿಜಿಸ್ಟ್ರಾರ್‌ಗೆ ಪತ್ರ ಬರೆದು ಕೈಗೊಂಡಿದ್ದ ಕ್ರಮಗಳ ಬಗ್ಗೆ ವಿವರಿಸಿದ್ದರು. 

ನಿಯಮಗಳ ಅನ್ವಯ, ಮಂಜೂರು ಆಗಿರುವ ಜಮೀನು ಅನುಭವದಲ್ಲಿದ್ದರೆ ಮಾತ್ರ ಬದಲಾಯಿಸಬಹುದು. ತಮಗೆ ಮಂಜೂರು ಆಗಿರುವ ಜಮೀನು ಯಾವುದೆಂಬುದೇ ತಿಳಿದಿಲ್ಲ ಎಂದು ನರಸಿಂಹನ್‌ ಹೇಳಿದ್ದಾರೆ. ಹೀಗಾಗಿ, ಬದಲಾಯಿಸಲು ಸಾಧ್ಯವಿಲ್ಲ’ ಎಂದು ಪತ್ರದಲ್ಲಿ ಹೇಳಿದ್ದರು.

***

1961–62ರಲ್ಲಿ ಜಮೀನು ಮಂಜೂರು ಆಗಿರುವುದರಿಂದ ಸಂಬಂಧಿಸಿದ ಕಡತಗಳು ಸದ್ಯಕ್ಕೆ ಲಭ್ಯವಿಲ್ಲ. ದಾಖಲೆಗಳನ್ನು ಹುಡುಕುತ್ತಿದ್ದೇವೆ

- ಮಹೇಶ್‌, ತಹಶೀಲ್ದಾರ್‌ ಚಾಮರಾಜನಗರ

***

ಜಮೀನಿನ ಸದ್ಯದ ಪರಿಸ್ಥಿತಿ ಹೇಗಿದೆಯೋ ಗೊತ್ತಿಲ್ಲ. ಕಂದಾಯ ಇಲಾಖೆ ಅಧಿಕಾರಿಗಳು 4 ಎಕರೆ ಜಾಗವನ್ನು ಗುರುತಿಸಿ, ನನಗೆ ಸಿಗುವಂತೆ ಮಾಡಬೇಕು

- ನರಸಿಂಹನ್‌, ಅರ್ಜಿದಾರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು