ಬುಧವಾರ, ಮಾರ್ಚ್ 29, 2023
26 °C
ಇಸ್ಕಾನ್‌ನ ‘ಅಕ್ಷಯ ಪಾತ್ರೆ’ ಪ್ರತಿಷ್ಠಾನಕ್ಕೆ ಶಿಕ್ಷಣ ಇಲಾಖೆಯಿಂದ ನಿರ್ದೇಶನ

ಇಸ್ಕಾನ್‌ನ ಬಿಸಿಯೂಟದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಬಳಕೆ ಕಡ್ಡಾಯ

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಾಲಾ ಮಕ್ಕಳಿಗೆ ಪೂರೈಸುವ ಬಿಸಿಯೂಟದಲ್ಲಿ ಈರುಳ್ಳಿ– ಬೆಳ್ಳುಳ್ಳಿ ಕಡ್ಡಾಯವಾಗಿ ಬಳಸಬೇಕು ಎಂದು ಇಸ್ಕಾನ್‌ ಸಂಸ್ಥೆಯ ‘ಅಕ್ಷಯ ಪಾತ್ರೆ’ ಪ್ರತಿಷ್ಠಾನಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶನ ನೀಡಿದೆ.

ರಾಜ್ಯದ ಆರು ಜಿಲ್ಲೆಗಳ (ಬೆಂಗಳೂರು ನಗರ, ರಾಮನಗರ, ಮೈಸೂರು, ದಕ್ಷಿಣ ಕನ್ನಡ, ಧಾರವಾಡ, ಬಳ್ಳಾರಿ) 2,814 ಶಾಲೆಗಳ ಒಟ್ಟು 4,42,108 ವಿದ್ಯಾರ್ಥಿಗಳಿಗೆ ಅಕ್ಷಯ ಪಾತ್ರೆ ಪ್ರತಿಷ್ಠಾನ ನಿತ್ಯ ಬಿಸಿಯೂಟ ಪೂರೈಸುತ್ತಿದೆ.

ಬಿಸಿಯೂಟದಲ್ಲಿ ಈರುಳ್ಳಿ–ಬೆಳ್ಳುಳ್ಳಿ ಬಳಕೆ ಮಾಡದಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ರಾಜ್ಯ ಆಹಾರ ಆಯೋಗ, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಆದೇಶವನ್ನು ಪಾಲಿಸುವಂತೆ ಪ್ರತಿಷ್ಠಾನಕ್ಕೆ ನಿರ್ದೇಶನ ನೀಡಲು ಶಿಕ್ಷಣ ಇಲಾಖೆಗೆ ಸೂಚಿಸಿತ್ತು.

ಆಯೋಗದ ಸೂಚನೆಯಂತೆ, ಮಧ್ಯಾಹ್ನ ಉಪಾಹಾರ ಯೋಜನೆಯ (ರಾಜ್ಯಮಟ್ಟ) ಜಂಟಿ ನಿರ್ದೇಶಕ ಎಂ. ಆರ್‌. ಮಾರುತಿ, ಪ್ರತಿಷ್ಠಾನದ ಅಧ್ಯಕ್ಷರಿಗೆ ನ. 19ರಂದು ಪತ್ರ ಬರೆದಿದ್ದಾರೆ. ‘ಬಿಸಿಯೂಟ ತಯಾರಿಸುವ ಪ್ರಕ್ರಿಯೆಯಲ್ಲಿ ಸರ್ಕಾರದ ಆದೇಶವನ್ನು ಪಾಲಿಸುವ ನಿಟ್ಟಿನಲ್ಲಿ ಒಪ್ಪಂದದಲ್ಲಿರುವ ಷರತ್ತುಗಳ ಅನ್ವಯ ಬಿಸಿಯೂಟ ಸಿದ್ಧಪಡಿಸಿ, ಪೂರೈಸಬೇಕು. ಈರುಳ್ಳಿ ಮತ್ತು ಬೆಳ್ಳುಳ್ಳಿ ಕಡ್ಡಾಯವಾಗಿ ಬಳಸಬೇಕು’ ಎಂದು ಪತ್ರದಲ್ಲಿ ಸೂಚಿಸಿದ್ದಾರೆ.

‘ಪ್ರಜಾವಾಣಿ’ ಜೊತೆ ಮಾತನಾಡಿದ ಮಾರುತಿ, ‘64 ಸರ್ಕಾರೇತರ ಸಂಸ್ಥೆಗಳು ರಾಜ್ಯದ 15 ಜಿಲ್ಲೆಗಳಲ್ಲಿ ಬಿಸಿಯೂಟ ಪೂರೈಸುತ್ತಿವೆ. ಈ ಪೈಕಿ, ಅಕ್ಷಯ ಪಾತ್ರೆಪ್ರತಿಷ್ಠಾನವೂ ಒಂದು. ಬಿಸಿಯೂಟ ಯೋಜನೆಯಲ್ಲಿ ವಾರದ ಆರೂ ದಿನ ವಿದ್ಯಾರ್ಥಿಗಳಿಗೆ ಪೂರೈಸಬೇಕಾದ ಮೆನು ನೀಡಲಾಗಿದೆ. ಅದರ ಪ್ರಕಾರ ಗುರುವಾರ ಹೊರತುಪಡಿಸಿದ ಉಳಿದ ಎಲ್ಲ ದಿನಗಳಲ್ಲಿ ತರಕಾರಿ ಜೊತೆ ಈರುಳ್ಳಿ ಬಳಸಬೇಕು. ಸಾಂಬಾರು ಪದಾರ್ಥಗಳ ಜೊತೆ ಬೆಳ್ಳುಳ್ಳಿಯನ್ನು ಎಲ್ಲ ದಿನ ಉಪಯೋಗಿಸಬೇಕು. ಆದರೆ, ಅಕ್ಷಯ ಪಾತ್ರೆಪ್ರತಿಷ್ಠಾನ ಅದನ್ನು ಪಾಲಿಸುತ್ತಿಲ್ಲ’ ಎಂದರು.

‘ಶಿಕ್ಷಣ ಸಚಿವರಾಗಿದ್ದ ಎನ್‌. ಮಹೇಶ್‌, ಕೆಲ ಸಮಯ ಹಿಂದೆ ಬಿಸಿಯೂಟ ಕೇಂದ್ರಗಳಿಗೆ ಭೇಟಿ ನೀಡಿದ್ದಾಗ ಈರುಳ್ಳಿ– ಬೆಳ್ಳುಳ್ಳಿ ಉಪಯೋಗಿಸದಿರುವುದನ್ನು ಗಮನಿಸಿ, ಪ್ರತಿಷ್ಠಾನಕ್ಕೆ ನೋಟಿಸ್‌ ನೀಡುವಂತೆ ಸೂಚಿಸಿದ್ದರು. ಅದರಂತೆ ನೋಟಿಸ್‌ ಕೂಡಾ ನೀಡಲಾಗಿತ್ತು. ಕಳೆದ ವಾರ ರಾಜ್ಯಕ್ಕೆ ಭೇಟಿ ನೀಡಿದ್ದ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ರಾಷ್ಟ್ರೀಯ ಸಮಾಲೋಚಕರ ತಂಡ ಕೂಡ ಈ ಬಗ್ಗೆ ವರದಿ ಪಡೆದಿದೆ’ ಎಂದು ತಿಳಿಸಿದರು.

‘2016–17ನೇ ಸಾಲಿನ ಕರಾರು ಪತ್ರದಲ್ಲಿ ಈರುಳ್ಳಿ– ಬೆಳ್ಳುಳ್ಳಿ ಬಳಕೆ ಕುರಿತಂತೆ ಸ್ಪಷ್ಟವಾಗಿ ತಿಳಿಸಲಾಗಿದೆ. ಆ ಒಪ್ಪಂದಕ್ಕೆ ಪ್ರತಿಷ್ಠಾನ ಸಹಿ ಹಾಕಿದೆ. ಆದರೆ, ಈರುಳ್ಳಿ– ಬೆಳ್ಳುಳ್ಳಿ ಉಪಯೋಗಿಸುವುದು ಕಡ್ಡಾಯಗೊಳಿಸಿದ ಕಾರಣಕ್ಕೆ 2017–18ನೇ ಸಾಲಿನ ಕರಾರು ಪತ್ರಕ್ಕೆ ಸಂಸ್ಥೆ ಇನ್ನೂ ಸಹಿ ಆಗಿಲ್ಲ. ಈರುಳ್ಳಿ– ಬೆಳ್ಳುಳ್ಳಿ ಬಳಸಿ ಪ್ರತಿಷ್ಠಾನ ಬಿಸಿಯೂಟ ಪೂರೈಸದಿದ್ದರೆ, ಮುಂದಿನ ವರ್ಷದಿಂದ ಪರ್ಯಾಯ ಮಾರ್ಗ ಕಂಡುಕೊಳ್ಳಲು ಸರ್ಕಾರದ ಮಟ್ಟದಲ್ಲಿ ಚಿಂತನೆಯೂ ನಡೆದಿದೆ’ ಎಂದು ಹೇಳಿದರು.

‘ಈರುಳ್ಳಿ, ಬೆಳ್ಳುಳ್ಳಿ ಬದಲು ಪೌಷ್ಟಿಕಾಂಶ ಇರುವ ಇತರ ತರಕಾರಿಗಳನ್ನು ಅಡುಗೆಯಲ್ಲಿ ಬಳಸಲಾಗುತ್ತಿದೆ ಎಂದು ಪ್ರತಿಷ್ಠಾನ ಸಮರ್ಥನೆ ನೀಡಿದೆ. ಆದರೆ, ಅದನ್ನು ಆಹಾರ ಆಯೋಗ ಒಪ್ಪಿಲ್ಲ. ಅಲ್ಲದೆ, ಇತರ ಸಂಸ್ಥೆಗಳು ಪೂರೈಸುವ ಬಿಸಿಯೂಟ ಮತ್ತು ಪ್ರತಿಷ್ಠಾನ ಪೂರೈಸುವ ಬಿಸಿಯೂಟವನ್ನು ಪರೀಕ್ಷೆಗೊಳಪಡಿಸಿ ಹೋಲಿಕೆ ಮಾಡುವಂತೆ ಆಯೋಗ ಸೂಚಿಸಿದೆ. ಆ ನಿಟ್ಟಿನಲ್ಲೂ ಕ್ರಮ ತೆಗೆದುಕೊಳ್ಳಲಾಗುತ್ತಿದೆ’ ಎಂದು ವಿವರಿಸಿದರು.

‘ತಣ್ಣನೆ‌ ಬದಲು ಬಿಸಿಹಾಲು ಪೂರೈಸಿ’

‘ಕ್ಷೀರ ಭಾಗ್ಯ’ ಯೋಜನೆಯಡಿ ಶಾಲಾ ಮಕ್ಕಳಿಗೆ ಅಕ್ಷಯ ಪಾತ್ರೆ ಪ್ರತಿಷ್ಠಾನ ತಣ್ಣನೆಯ ಹಾಲನ್ನು ಪೂರೈಸುತ್ತಿದೆ. ಈ ಬಗ್ಗೆಯೂ ರಾಜ್ಯ ಆಹಾರ ಆಯೋಗ ಆಕ್ಷೇಪ ವ್ಯಕ್ತಪಡಿಸಿದೆ. ಹೀಗಾಗಿ, ಬಿಸಿಹಾಲು ನೀಡುವಂತೆ ಪ್ರತಿಷ್ಠಾನಕ್ಕೆ ಶಿಕ್ಷಣ ಇಲಾಖೆ ಸೂಚಿಸಿದೆ. ಬಿಸಿ ಹಾಲು ಪೂರೈಸಲು ಮೂರು ತಿಂಗಳ ಕಾಲಾವಕಾಶ ನೀಡುವಂತೆ ಪ್ರತಿಷ್ಠಾನ, ಶಿಕ್ಷಣ ಇಲಾಖೆಗೆ ಮನವಿ ಮಾಡಿದೆ.

**

ನಾವು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಮಾರ್ಗಸೂಚಿ ಪಾಲಿಸುತ್ತಿದ್ದು, ಬಿಸಿಯೂಟದಲ್ಲಿ ಪೌಷ್ಟಿಕಾಂಶಯುಕ್ತ ಆಹಾರ ಒದಗಿಸಲು ಬದ್ಧ
ನವೀನನೀರದ ದಾಸ, ಮುಖ್ಯ ವಕ್ತಾರ, ಅಕ್ಷಯ ಪಾತ್ರ ಪ್ರತಿಷ್ಠಾನ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು