ಮಂಗಳವಾರ, ಜನವರಿ 28, 2020
22 °C
ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ

ಭತ್ತದ ಖರೀದಿ ಕೇಂದ್ರ ಆರಂಭಕ್ಕೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ‘ಕೊಡಗು ಜಿಲ್ಲೆಯಲ್ಲಿ ಅಗತ್ಯವಿರುವ ಕಡೆ 15 ದಿನಗಳ ಒಳಗಾಗಿ ಭತ್ತದ ಖರೀದಿ ಕೇಂದ್ರ ಆರಂಭಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭತ್ತದ ಖರೀದಿ ಆರಂಭಿಸಲು ವಿಳಂಬವಾಗಿರುವ ಬಗ್ಗೆ ಶಾಸಕ ಕೆ.ಜಿ.ಬೋಪಯ್ಯ ಹಾಗೂ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ.ಬೋಪಣ್ಣ ಅವರು ಗಮನ ಸೆಳೆದರು. ಬಳಿಕ ದೀರ್ಘವಾದ ಚರ್ಚೆ ನಡೆದು, ಖರೀದಿ ಕೇಂದ್ರ ಆರಂಭಿಸಲು ಸೂಚನೆ ನೀಡಲಾಯಿತು.

ಕೆ.ಜಿ.ಬೋಪಯ್ಯ ಮಾತನಾಡಿ, ‘ಭತ್ತದ ಕೊಯ್ಲು ಪೂರ್ಣವಾಗಿದೆ. ಖರೀದಿ ಕೇಂದ್ರ ಆರಂಭವಾಗದ ಕಾರಣಕ್ಕೆ ಗದ್ದೆಗಳಲ್ಲಿ ರೈತರು ಫಸಲು ಇಟ್ಟಿದ್ದಾರೆ. ಕೆಲವರು ಕ್ವಿಂಟಲ್‌ ಭತ್ತಕ್ಕೆ ₹ 1,200ರಂತೆ ಮಾರಾಟ ಮಾಡುತ್ತಿದ್ದಾರೆ. ಗೋಣಿಕೊಪ್ಪಲು ಸೇರಿದಂತೆ ಜಿಲ್ಲೆಯ ಹಲವು ಕಡೆಯಿರುವ ಆರ್‌ಎಂಸಿ ಗೋದಾಮಿನಲ್ಲಿ ಭತ್ತದ ದಾಸ್ತಾನು ಮಾಡುವ ಕ್ರಮ ಆಗಬೇಕು’ ಎಂದು ಕೋರಿದರು. ತೇವಾಂಶದ ಬಗ್ಗೆಯೂ ಪರಿಶೀಲಿಸಿ ಸರ್ಕಾರ ನಿಗದಿ ಪಡಿಸಿರುವ ದರದಲ್ಲಿ ಭತ್ತ ಖರೀದಿಸಬೇಕು ಎಂದು ಸಚಿವರು ಆದೇಶಿಸಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪ್ರಭಾರ ಉಪ ನಿರ್ದೇಶಕ ಗೌರವ್‌ ಮಾತನಾಡಿ, ‘ಜ.1ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. 13 ಅಕ್ಕಿ ಗಿರಣಿಗಳನ್ನು ಗುರುತಿಸಲಾಗಿದೆ. ಶುಕ್ರವಾರ ಮಧ್ಯಾಹ್ನದ ತನಕ ಕುಶಾಲನಗರದಲ್ಲಿ 21, ಮಡಿಕೇರಿಯಲ್ಲಿ 5 ರೈತರು ನೋಂದಣಿ ಮಾಡಿದ್ದಾರೆ’ ಎಂದು ಮಾಹಿತಿ ನೀಡಿದರು.

ತಿಂಗಳಿಗೊಮ್ಮೆ ಅದಾಲತ್‌

‘ಎಲ್ಲ ಇಲಾಖೆಗಳ ನಡುವೆಯೂ ಸಮನ್ವಯತೆ ಮೂಡಬೇಕು. ಹೀಗಾಗಿ, ಜಿಲ್ಲಾಧಿಕಾರಿ ಕಚೇರಿಯಲ್ಲಿ ತಿಂಗಳಿಗೆ ಒಮ್ಮೆ ಅದಾಲತ್‌ ನಡೆಯಬೇಕು. ಅಲ್ಲಿ ಎಲ್ಲ ವಿಚಾರಗಳ ಕುರಿತೂ ಚರ್ಚೆ ನಡೆಯಬೇಕು ಎಂದು ಸಚಿವರು ಸೂಚನೆ ನೀಡಿದರು.

‘ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಲಾಗುತ್ತಿದೆ. ಕಡತ ವಿಲೇವಾರಿಯಲ್ಲಿ ವಿಳಂಬ ಧೋರಣೆ ತೋರಬಾರದು. ಸಾರ್ವಜನಿಕರನ್ನು ಅಲೆದಾಡಿಸಬಾರದು. ಜನರ ಭಾವನೆ ಅರ್ಥೈಸಿಕೊಳ್ಳಬೇಕು. ಪ್ರಾಕೃತಿಕ ವಿಕೋಪದಿಂದ, ಜಿಲ್ಲೆಯ ಜನರು ಸಾಕಷ್ಟು ತೊಂದರೆಯಲ್ಲಿ ಇದ್ದಾರೆ. ಮಾನವೀಯತೆಯಿಂದ ಅಧಿಕಾರಿಗಳು ಅವರ ನೆರವಿಗೆ ಧಾವಿಸಬೇಕು’ ಎಂದು ಹೇಳಿದರು.

ಅರಣ್ಯಾಧಿಕಾರಿಗಳ ವಿರುದ್ಧ ಕಿಡಿ

ಸಭೆಯಲ್ಲಿ ಅರಣ್ಯಾಧಿಕಾರಿಗಳ ವಿರುದ್ಧ ಶಾಸಕ ಕೆ.ಜಿ.ಬೋಪಯ್ಯ ಅವರು ಆಕ್ರೋಶ ವ್ಯಕ್ತಪಡಿಸಿ ಜನರಿಗೆ ತೊಂದರೆ ನೀಡುತ್ತಿರುವ ಅಧಿಕಾರಿಗಳ ಅಮಾನತು ಮಾಡಬೇಕು ಎಂದು ಪಟ್ಟು ಹಿಡಿದರು.

ಮುಕ್ಕೊಡ್ಲು, ಹಮ್ಮಿಯಾಲ, ಹೆಮ್ಮೆತ್ತಾಳ್‌ ಭಾಗದಲ್ಲಿ ಸೇತುವೆ ಬಳಿ ದೊಡ್ಡ ಮರಗಳು ಬಿದ್ದಿದ್ದು ಅದನ್ನು ತೆರವು ಮಾಡಬೇಕು. ಹಲವು ಬಾರಿ ಸೂಚನೆ ನೀಡಿದ್ದರೂ ಗಮನ ಹರಿಸಿಲ್ಲ ಎಂದು ರಂಜನ್‌ ಅವರು ಡಿಸಿಎಫ್‌ ಪ್ರಭಾಕರ್‌ ಅವರನ್ನು ತರಾಟೆಗೆ ತೆಗೆದುಕೊಂಡರು.

‘ಬೆಳೆ ನಾಶ ಮಾಡುತ್ತಿದ್ದ ಕಾಡು ಹಂದಿಗೆ ಗುಂಡು ಹೊಡೆದರೂ ಕೇಸ್‌ ದಾಖಲಿಸುತ್ತಾರೆ. ಮಾಲ್ದಾರೆ ವ್ಯಾಪ್ತಿಯಲ್ಲಿ ವಿದ್ಯುತ್‌ ಸಂಪರ್ಕ ಕಲ್ಪಿಸಲು ಅರಣ್ಯಾಧಿಕಾರಿಗಳು ಬಿಡುತ್ತಿಲ್ಲ. 40 ಮನೆಗೆ ವಿದ್ಯುತ್‌ ಇದೆ. ಆದರೆ, ಮೂರು ಮನೆಗೆ ವಿದ್ಯುತ್‌ ನೀಡಲು ಅರಣ್ಯಾಧಿಕಾರಿಗಳು ಸತಾಯಿಸುತ್ತಿದ್ದಾರೆ. ಅದಲ್ಲದೇ, ಕೇರಳಕ್ಕೆ ಸಂಪರ್ಕ ಕಲ್ಪಿಸುವ ಮಾಕುಟ್ಟ ಅಂತರ ರಾಜ್ಯ ಹೆದ್ದಾರಿಯ ಅಭಿವೃದ್ಧಿಗೆ ವನ್ಯಜೀವಿ ವಲಯದ ಅರಣ್ಯಾಧಿಕಾರಿಗಳು ಅಡ್ಡಿ ಪಡಿಸುತ್ತಿದ್ದಾರೆ’ ಎಂದು ಬೋಪಯ್ಯ ದೂರಿದರು.

ಅದಕ್ಕೆ ಸಚಿವ ಸೋಮಣ್ಣ ಪ್ರತಿಕ್ರಿಯಿಸಿ, ಅರಣ್ಯಾಧಿಕಾರಿಗಳು ಮಾನವೀಯತೆ ನೆಲೆಯಲ್ಲಿ ಕಾರ್ಯ ನಿರ್ವಹಿಸಬೇಕು. ಜತೆಗೆ, ನಿಯಮಾವಳಿಯನ್ನೂ ಬಿಡಬಾರದು. ಸಮಸ್ಯೆಯಿದ್ದರೆ ನನ್ನ ಗಮನಕ್ಕೆ ತನ್ನಿ. ಶಾಶ್ವತ ರಸ್ತೆ ನಿರ್ಮಾಣಕ್ಕೆ ಒಂದು ಎಕರೆ ಜಾಗದ ಅಗತ್ಯವಿದೆ. ಅದನ್ನು ಮಂಜೂರು ಮಾಡಿಸಿಕೊಡುತ್ತೇನೆ. ವಿಳಂಬ ಮಾಡದೆ ಕಾಮಗಾರಿ ಆರಂಭಿಸಬೇಕು. ಜತೆಗೆ, ಮುಂದಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು, ಬೆಂಗಳೂರಿನಲ್ಲಿ ಶೀಘ್ರವೇ ಅರಣ್ಯಾಧಿಕಾರಿಗಳ ಸಭೆ ಕರೆಯಲಾಗುವುದು’ ಎಂದು ಹೇಳಿದರು.

ಸಾಗುವಳಿ ಪತ್ರ ವಿತರಣೆಗೆ ಸೂಚನೆ

ಐಟಿಡಿಪಿ ಅಧಿಕಾರಿ ಮಾತನಾಡಿ, 5 ಹಾಡಿಗಳಿಗೆ ಇನ್ನೂ ಮೂಲ ಸೌಕರ್ಯ ಕಲ್ಪಿಸಬೇಕು. ಅದಕ್ಕೆ ಅರಣ್ಯಾಧಿಕಾರಿಗಳಿಂದ ಅನುಮತಿ ಸಿಗುತ್ತಿಲ್ಲ. 1876 ಮಂದಿ ಹಕ್ಕುಪತ್ರಕ್ಕೆ ಸಲ್ಲಿಸಿದ್ದ ಅರ್ಜಿಗಳು ತಿರಸ್ಕೃತಗೊಂಡಿವೆ ಎಂದು ಹೇಳಿದರು. ಅದಕ್ಕೆ ಸೋಮಣ್ಣ ಪ್ರತಿಕ್ರಿಯಿಸಿ, ‘ಸಿಸಿಎಫ್‌, ಎಸಿ, ಸೆಸ್ಕ್‌ ಎಂಜಿನಿಯರ್‌, ಇಒಗಳು ಹಾಡಿ ಪ್ರದೇಶದಕ್ಕೆ ತೆರಳಿ ವಾಸ್ತವ ಸ್ಥಿತಿ ಅರಿಯಬೇಕು. ಫೆ.4ರ ಒಳಗೆ ಹಕ್ಕುಪತ್ರ ವಿತರಣೆ ಮಾಡಬೇಕು’ ಎಂದು ಸೂಚನೆ ನೀಡಿದರು.

ಹಾರಂಗಿಯಲ್ಲಿ ಹೂಳು

ಹಾರಂಗಿಯ ಹೂಳು ತೆರವು ಮಾಡಲು ₹ 130 ಕೋಟಿಯ ಅನುದಾನಕ್ಕೆ ಒಪ್ಪಿಗೆ ನೀಡಲಾಗಿದೆ. ಅದಕ್ಕೆ ಕೂಡಲೇ ಆಡಳಿತಾತ್ಮಕ ಅನುಮೋದನೆ ಪಡೆದು ಹೂಳು ತೆರವು ಕಾರ್ಯ ಆರಂಭಿಸಬೇಕು ಎಂದು ಸಚಿವರು ಸೂಚನೆ ನೀಡಿದರು.

ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚಯ್ಯ ಮಾತನಾಡಿ, ‘ಮಕ್ಕಂದೂರು– ತಂತಿಪಾಲ– ಮುಕ್ಕೊಡ್ಲು ರಸ್ತೆ ಅಭಿವೃದ್ಧಿಗೆ ₹ 10 ಕೋಟಿ ಮಂಜೂರಾಗಿತ್ತು. ಅದನ್ನು ಪೂರ್ಣ ಬಿಡುಗಡೆ ಮಾಡಲಾಗಿದೆ. ಆದರೆ, ರಸ್ತೆ ಮಾತ್ರ ಸುಧಾರಣೆ ಕಂಡಿಲ್ಲ’ ಎಂದು ಗಮನ ಸೆಳೆದರು.

ಶಾಸಕರು, ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಆ ಭಾಗದ ಜಿಲ್ಲಾ ಪಂಚಾಯಿತಿ ಸದಸ್ಯರು ಭೇಟಿ ಪರಿಶೀಲಿಸಲಿ. ಬಳಿಕ ತಪ್ಪುಕಂಡು ಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಸುನಿಲ್‌ ಸುಬ್ರಮಣಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ.ಹರೀಶ್‌, ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌, ಸಿಇಒ ಕೆ.ಲಕ್ಷ್ಮಿಪ್ರಿಯಾ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್‌ ಹಾಜರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು