ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ಆರಂಭಕ್ಕೆ ವಿರೋಧ: ಸಾಮಾಜಿಕ ಜಾಲತಾಣಗಳಲ್ಲಿ ಪೋಷಕರ ಆಕ್ಷೇಪ

Last Updated 3 ಜೂನ್ 2020, 21:15 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕು ಹರಡುವಿಕೆ ಹೆಚ್ಚುತ್ತಿರುವಾಗ ಶಾಲೆ‌ ಆರಂಭಿಸುವ ಪ್ರಸ್ತಾವವನ್ನು ಶಿಕ್ಷಣ ಇಲಾಖೆ ಮುಂದಿಟ್ಟಿರುವುದಕ್ಕೆ ಸಾರ್ವಜನಿಕರು, ಪೋಷಕರು ಹಾಗೂ ಶಿಕ್ಷಕರಿಂದ ವಿರೋಧ ವ್ಯಕ್ತವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ನಡೆಗೆ ವಿರೋಧವಾದ ಅಭಿಪ್ರಾಯಗಳೇ ಹೆಚ್ಚಿವೆ. ‘ಮಕ್ಕಳನ್ನು ಪ್ರಯೋಗಕ್ಕೆ ಒಳಪಡಿಸಬೇಡಿ’ ಎಂದು ಹಲವರು ಮನವಿ ಮಾಡಿದ್ದಾರೆ.

‘ಜುಲೈಯಿಂದ ಶಾಲೆ ಆರಂಭಿಸುವುದು ಮೂರ್ಖ ನಿರ್ಧಾರ ಎಂಬುದನ್ನು ಸರ್ಕಾರಕ್ಕೆ ಮನವರಿಕೆ ಮಾಡುತ್ತೇವೆ’ ಎಂದು ಪ್ರತಿಪಾದಿಸಿರುವ ಕೆಲವರು ಇದರ ಸಲುವಾಗಿ ‘ರಾಜ್ಯದಲ್ಲಿ ಶೂನ್ಯ ಕೋವಿಡ್‌ ಪ್ರಕರಣ ದಾಖಲಾಗುವವರೆಗೆ ಅಥವಾ ಔಷಧ ಕಂಡುಹಿಡಿಯುವವರೆಗೆ ಶಾಲೆ ಇಲ್ಲ’ ಎಂಬ ಡಿಜಿಟಲ್‌ ಸಹಿ ಸಂಗ್ರಹ ಅಭಿಯಾನ ಶುರು ಮಾಡಿದ್ದಾರೆ. ಒಟ್ಟು 5 ಲಕ್ಷ ಸಹಿ ಸಂಗ್ರಹಿಸಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಿಗೆ ಕಳುಹಿಸಲು ಈ ಸಮೂಹ ನಿರ್ಧರಿಸಿದೆ.

‘ಶಾಲೆ ಆರಂಭದ ದಿನಾಂಕ ಪ್ರಕಟಿಸಿ ಪೋಷಕರ ಅಭಿಪ್ರಾಯ ಕೇಳುವುದರಲ್ಲಿ ಅರ್ಥವಿಲ್ಲ. ಕೊರೊನಾ ಏರುಗತಿಯ ಈ ಸ್ಥಿತಿಯಲ್ಲಿ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರ್ಣಗೊಳ್ಳದೆ ಇರುವಾಗ ಜುಲೈ 1ರಿಂದ ಶಾಲೆ ಆರಂಭಿಸುವುದಕ್ಕೆ ನಮ್ಮ ಸಮ್ಮತಿ ಇಲ್ಲ’ ಎಂದು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್‌ ಪ್ರತಿಕ್ರಿಯಿಸಿದರು.

ಸಚಿವ ಸುರೇಶ್ ಕುಮಾರ್‌ ಅವರಿಗೆ ಪತ್ರ ಬರೆದಿರುವಮಾಜಿ ಶಿಕ್ಷಣ ಸಚಿವ ತನ್ವೀರ್‌ ಸೇಠ್‌, ಸದ್ಯ ಶಾಲೆ ಆರಂಭಿಸಬೇಡಿ ಎಂದು ಸಲಹೆ ನೀಡಿದ್ದಾರೆ. ಕೋವಿಡ್‌ ನಿಯಂತ್ರಣಕ್ಕೆ ಬರುವವರೆಗೆ ಶಾಲೆ ಆರಂಭ ಬೇಡ
ಎಂದು ವಿಧಾನ ಪರಿಷತ್‌ ಸದಸ್ಯ ರಘು ಆಚಾರ್ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದಾರೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ ಕೊನೆಗೊಳ್ಳುವವರೆಗೆ ಶಾಲಾ ಕಚೇರಿಯನ್ನೂ ತೆರೆಯಬಾರದು ಎಂದು ಆರ್‌ಟಿಇ ವಿದ್ಯಾರ್ಥಿಗಳು, ಪೋಷಕರ ಸಂಘದ ಸಂಚಾಲಕ ಬಿ.ಎನ್‌.ಯೋಗಾನಂದ ಹೇಳಿದ್ದಾರೆ.

*
ಇದೇ 5ರಿಂದ ಶಾಲಾ ಕಚೇರಿ ತೆರೆಯುವ ನಿರ್ಧಾರ ಕೈಬಿಡಬೇಕು. ರಜೆ ಸಮಯದಲ್ಲಿ ಶಿಕ್ಷಕರು ಕಾಲಹರಣ ಮಾಡಿಲ್ಲ. ಕೋವಿಡ್‌ ನಿಯಂತ್ರಣಕ್ಕೆ ಶ್ರಮಿಸಿದ್ದಾರೆ.
–ವಿ.ಎಂ.ನಾರಾಯಣಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ

*
ಖಾಸಗಿ ಲಾಬಿಗೆ ಮಣಿದಿಲ್ಲ. ಶಾಲೆಗಳನ್ನು ಆರಂಭಿಸುವ ಯಾವುದೇ ತರಾತುರಿಯ ನಿರ್ಧಾರವನ್ನು ಸರ್ಕಾರ ಕೈಗೊಳ್ಳುವುದಿಲ್ಲ.
–ಎಸ್.ಸುರೇಶ್ ಕುಮಾರ್‌, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT