ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದಿದ ಮಾಧ್ಯಮ ಕಣ್ಗಾವಲು ಶಕ್ತಿ: ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ಕಳವಳ

Last Updated 8 ಡಿಸೆಂಬರ್ 2018, 8:09 IST
ಅಕ್ಷರ ಗಾತ್ರ

ತುಮಕೂರು: ಬಂಡವಾಳಶಾಹಿ, ಕಾರ್ಪೊರೇಟ್ ವ್ಯವಸ್ಥೆಯ ಹಿಡಿತಕ್ಕೆ ಸಿಲುಕಿರುವ ಮಾಧ್ಯಮ ಕ್ಷೇತ್ರದ ಸಂವೇದನೆ, ಕಣ್ಗಾವಲು ಶಕ್ತಿ ಕುಂದಿದೆ ಎಂದು ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ಕಳವಳ ವ್ಯಕ್ತಪಡಿಸಿದರು.

ಶನಿವಾರ ನಗರದಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ಆಯೋಜಿಸಿದ್ಧ ಸಮೂಹ ಮಾಧ್ಯಮ ಮತ್ತು ಬಂಡಾಯ ಪ್ರಜ್ಞೆ ಎಂಬ ವಿಷಯ ಕುರಿತ ರಾಜ್ಯಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಬಂಡವಾಳಶಾಹಿಗಳ ಹಿಡಿತಕ್ಕೆ ಸಿಲುಕಿರುವ ಮಾಧ್ಯಮಗಳು ಅದಕ್ಕೆ ವ್ಯತಿರಿಕ್ತವಾಗಿ ನಡೆಯಲು ಸಾಧ್ಯವೆ? ಎಂದು ಪ್ರಶ್ನಿಸಿದರು.

ಬಡವರು, ರೈತರು, ಮಹಿಳೆಯರ ಸಮಸ್ಯೆ ಸೇರಿದಂತೆ ನೂರೆಂಟು ಸಾಮಾಜಿಕ ಸಮಸ್ಯೆಗಳನ್ನು ಪರಿಣಾಮಕಾರಿ ರೀತಿಯಲ್ಲಿ ಬಿಂಬಿಸಲು ಸಾಧ್ಯವಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಸಿನಿ ತಾರೆಯರ ಮದುವೆ, ಅರತಕ್ಷತೆಯಂತಹದ್ದೇ ಆದ್ಯತೆಯ ವಿಷಯಗಳಾಗಿವೆ. ಮಳೆ ಇಲ್ಲದೇ, ಬೆಳೆ ಇಲ್ಲದೇ, ಸಾಲದ ಹೊರೆಗೆ ತತ್ತರಿಸಿದ ರೈತರ ಸಮಸ್ಯೆ, ಬೆಳೆದ ಬೆಳೆಗೆ ನ್ಯಾಯಯುತವಾಗಿ ಸಿಗಬೇಕಾದ ಬೆಲೆ ಸಿಗದೇ ಇರುವ ಬಗ್ಗೆ, ರಸಗೊಬ್ಬರ ಬೆಲೆ ಹೆಚ್ಚಳ ಹೀಗೆ ಹತ್ತು ಹಲವು ಸಮಸ್ಯೆಗಳು ಮಾದ್ಯಮಗಳಿಗೆ ಮುಖ್ಯ ವಿಷಯಗಳೇ ಅಲ್ಲ ಎಂಬುವಂತಾಗಿದೆ ಎಂದು ಹೇಳಿದರು.

ಮಹಾರಾಷ್ಟ್ರದ ವಿಧರ್ಭ ಪ್ರಾಂತ್ಯದಲ್ಲಿ ಈ ಬಾರಿ ಬರ ಮತ್ತಷ್ಟು ಅವರಿಸಿದೆ. ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆಯುತ್ತಿರುವ ರೈತರ ಮಕ್ಕಳು ಶುಲ್ಕ ಕಟ್ಟಲು, ವಸತಿ ನಿಲಯಕ್ಕೆ, ಊಟಕ್ಕೆ ಹಣ ಪಾವತಿಗೂ ಕಷ್ಟ ಪಡುತ್ತಿದ್ದಾರೆ. ಉನ್ನತ ಶಿಕ್ಷಣವನ್ನು ಮೊಟಕುಗೊಳಿಸುತ್ತಿದ್ದಾರೆ. ಕೆಲವರು ಡಾಬಾ, ಹೊಟೆಲ್ ಗಳಲ್ಲಿ ಕೆಲಸ ಮಾಡಿ ಶಿಕ್ಷಣ ಮುಂದುವರಿಸುತ್ತಿದ್ದಾರೆ. ಆದರೆ, ಮಾಧ್ಯಮಗಳ ಕಣ್ಣಿಗೆ ಇದು ಮಹತ್ವದ, ಗಂಭೀರ ವಿಷಯವೇ ಅಲ್ಲ ಎಂಬಂತೆ ಇವೆ ಎಂದು ವಿಷಾದಿಸಿದರು.

ಸಾಲ ಮಾಡಿದ ರೈತ, ಆತ್ಮಹತ್ಯೆ ಮಾಡಿಕೊಂಡ ರೈತ ಅಥವಾ ಬರಕ್ಕೆ ತತ್ತರಿಸಿ ಗುಳೇ ಹೊರಟವರು ತಮ್ಮ ವೀಕ್ಷಕರು, ಓದುಗರಲ್ಲ. ಅವರಿಂದೇನೂ ಲಾಭವಿಲ್ಲ. ಹೀಗಾಗಿ ಲಾಭ ಇರುವ ಮಹಾನಗರ ಕೇಂದ್ರಿತ, ಸಿನಿಮಾ, ಕಾರ್ಪೊರೇಟ್ ವಲಯ ಒಲೈಕೆ ವಿಷಯಗಳ ಮೇಲೆ ಕೇಂದ್ರಿಕೃತವಾದ ಅಂಶಗಳ ಮೇಲೆ ಗಮನಹರಿಸಿವೆ ಎಂದು ವಿಶ್ಲೇಷಿಸಿದರು.

ಮಾಧ್ಯಮ, ವ್ಯಾಪಾರಿ ಮತ್ತು ರಾಜಕೀಯ ವ್ಯವಸ್ಥೆ ಎಲ್ಲವೂ ಒಂದೇ ಆಗಿವೆ. ಕಣ್ಗಾವಲಾಗಿ ಕೆಲಸ ಮಾಡುತ್ತಿದ್ದ ಮಾಧ್ಯಮಗಳು ಶಕ್ತಿ ಕಳೆದುಕೊಂಡಿವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ‘ಮಾಧ್ಯಮ ಸಂವೇದನೆಯಾದರೆ, ಉದ್ಯಮ ಸಂಪಾದನೆ. ಇವೆರಡನ್ನೂ ಸಮತೋಲನಗೊಳಿಸುವ ಸೈದ್ಧಾಂತಿಕ ಚಿಂತನೆ ನಡೆಯಬೇಕಿದೆ’ ಎಂದು ಹೇಳಿದರು.

ಬಂಡಾಯ ಎಂಬುದು ಬದಲಾವಣೆಯ ಭಾಷೆಯೇ ಹೊರತು ಬಲಿಗೊಳಿಸುವ ಭಾಷೆಯಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT