ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಮೇಶ್‌ ಸಾವು: ಮುಂದುವರಿದ ಗೊಂದಲ; ಶೋಧ ಕಾರ್ಯ ಸ್ಥಗಿತ

ವೈದ್ಯಕೀಯ ಸೀಟು ಅಕ್ರಮ ಮಾರಾಟ ಪ್ರಕರಣದ ತನಿಖೆಗೆ ಕೊಂಚ ಹಿನ್ನಡೆ
Last Updated 15 ಅಕ್ಟೋಬರ್ 2019, 20:23 IST
ಅಕ್ಷರ ಗಾತ್ರ

ಬೆಂಗಳೂರು: ಕೊರಟಗೆರೆ ಕಾಂಗ್ರೆಸ್‌ ಶಾಸಕ ಡಾ. ಜಿ. ಪರಮೇಶ್ವರ ಅವರ ಆಪ್ತ ಸಹಾಯಕ ರಮೇಶ್‌ ಅವರ ನಿಗೂಢ ಸಾವು ಕುರಿತು ಗೊಂದಲ ಮುಂದುವರಿದಿದ್ದು, ವೈದ್ಯಕೀಯ ಸೀಟು ಅಕ್ರಮ ಮಾರಾಟ ಪ್ರಕರಣದ ತನಿಖೆಗೂ ಕೊಂಚ ಹಿನ್ನಡೆಯಾಗಿದೆ.

ಪರಮೇಶ್ವರ ಪ್ರಮುಖ ಟ್ರಸ್ಟಿಯಾಗಿರುವ ಸಿದ್ಧಾರ್ಥ ಶಿಕ್ಷಣ ಟ್ರಸ್ಟ್‌ ಮೇಲೆ ಕಳೆದ ವಾರ ನಡೆದ ಆದಾಯ ತೆರಿಗೆ ಇಲಾಖೆ ದಾಳಿಗೂ ರಮೇಶ್‌ ಆತ್ಮಹತ್ಯೆಗೂ ಸಂಬಂಧವಿಲ್ಲ. ಅವರಿಗೆ ಯಾವುದೇ ವಿಧದಲ್ಲೂ ಕಿರುಕುಳ ನೀಡಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

‘ಯಾವುದೇ ಬೇನಾಮಿ ಖಾತೆಯೂ ರಮೇಶ್‌ ಅವರ ಹೆಸರಿನಲ್ಲಿ ಇಲ್ಲ. ವೈದ್ಯಕೀಯ ಸೀಟು ಅಕ್ರಮ ಮಾರಾಟ ಹಗರಣದಲ್ಲೂ ಅವರ ಪಾತ್ರ ಇದ್ದಂತೆ ಕಾಣುವುದಿಲ್ಲ. ಪ್ರಾಥಮಿಕ ತನಿಖೆಯಿಂದ ಈ ಸಂಗತಿ ತಿಳಿದುಬಂದಿದೆ’ ಎಂದು ಈ ಅಧಿಕಾರಿ ಹೇಳಿದರು.

‘ರಮೇಶ್‌ ಅವರ ಮನೆ ಶೋಧಿಸಲು ವಾರೆಂಟ್‌ ಪಡೆಯಲಾಗಿತ್ತು. ಆದರೆ, ಅವರ ಮನೆಯನ್ನು ಶೋಧಿಸಲಿಲ್ಲ. ಅವರಿಂದ ಒಂದು ಸಣ್ಣ ಹೇಳಿಕೆಯನ್ನು ಪಡೆದಿಲ್ಲ. ಅವರನ್ನು ವಿಚಾರಣೆಗೆ ಒಳಪಡಿಸಲೂ ಇಲ್ಲ. ಅವರ ಆತ್ಮಹತ್ಯೆ ನಮಗೂ ಅಚ್ಚರಿ ಉಂಟುಮಾಡಿದೆ’ ಎಂದು ಅವರು ಸ್ಪಷ್ಟಪಡಿಸಿದರು.

‘ಮೃತರ ಮನೆ ಶೋಧಿಸಿಲ್ಲ. ಅವರನ್ನು ವಿಚಾರಣೆಗೆ ಒಳಪಡಿಸಿಲ್ಲ ಎಂದು ಐ.ಟಿ ಪ್ರತಿಪಾದಿಸುತ್ತಿದ್ದರೂ, ಅವರ ಮನೆಗೆ ಐ.ಟಿ ಅಧಿಕಾರಿಗಳ ತಂಡ ಕಾರಿನಿಂದ ಇಳಿದು ಬರುವ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಾಧ್ಯಮಗಳಲ್ಲೂ ಇದು ಪ್ರಸಾರವಾಗಿದೆ. ರಮೇಶ್‌ ಬರೆದಿದ್ದಾರೆ ಎನ್ನಲಾದ ಮರಣ‍ ಪತ್ರದಲ್ಲೂ ಐ.ಟಿ ಅಧಿಕಾರಿಗಳ ಕಿರುಕುಳ ಕುರಿತ ಪ್ರಸ್ತಾಪವಿದೆ.

ಈ ತಿಂಗಳ 10ರಂದು ಪರಮೇಶ್ವರ ಅವರ ಮನೆಯನ್ನು ಶೋಧಿಸುವಾಗ ರಮೇಶ್‌ ಅವರೂ ಇದ್ದರು. 12ನೇ ತಾರೀಖಿನವರೆಗೂ ಅವರು ಹಾಜರಿದ್ದರು. ಯಾವ ಸಂದರ್ಭದಲ್ಲೂ ಅವರು ಒತ್ತಡದಲ್ಲಿರುವಂತೆ ಕಂಡುಬರಲಿಲ್ಲ. ಅಧಿಕಾರಿಗಳ ಜತೆ ಅನ್ಯೋನ್ಯವಾಗಿ ಇದ್ದರು’ ಎಂದು ಮತ್ತೊಬ್ಬ ಹಿರಿಯ ಅಧಿಕಾರಿ ವಿವರಿಸಿದರು.

‘ಪರಮೇಶ ಅವರ ವೈಯಕ್ತಿಕ ವ್ಯವಹಾರಗಳು ರಮೇಶ್‌ ಅವರಿಗೆ ಚೆನ್ನಾಗಿ ಗೊತ್ತಿತ್ತು. ಅವರ ಹಣಕಾಸು ವ್ಯವಹಾರದ ಬಗ್ಗೆ ಮಾಹಿತಿ ಇತ್ತು ಎಂದು ಹೇಳಲಾಗುತ್ತಿದೆ. ಆದರೆ, ಆ ಬಗ್ಗೆ ಇನ್ನೂ ತನಿಖೆ ಕೈಗೊಂಡಿಲ್ಲ. ಮುಂದಿನ ಎಂಟು– ಹತ್ತು ದಿನಗಳಲ್ಲಿ ಎಲ್ಲ ಸಂಗತಿಗಳು ಗೊತ್ತಾಗಲಿವೆ’ ಎಂದು ಅವರು ಹೇಳಿದರು.

ವಿಚಲಿತರಾಗಿರುವ ಐ.ಟಿ ಅಧಿಕಾರಿಗಳು: ರಮೇಶ್‌ ಸಾವಿನಿಂದ ಐ.ಟಿ ಅಧಿಕಾರಿಗಳು ವಿಚಲಿತರಾಗಿದ್ದಾರೆ. ಘಟನೆ ಬಳಿಕ ಶೋಧ ಕಾರ್ಯಾಚರಣೆಯನ್ನು ಹಠಾತ್‌ ಸ್ಥಗಿತಗೊಳಿಸಿದ್ದಾರೆ. ಇದರಿಂದಾಗಿ ತನಿಖೆಗೆ ಅಡ್ಡಿಯಾಗಿದೆ. ಇದಾಗದಿದ್ದರೆ ಇಷ್ಟು ಹೊತ್ತಿಗೆ ಅಕ್ರಮ ಸೀಟು ಮಾರಾಟ ವ್ಯವಹಾರವನ್ನು ಒಂದು ತಾರ್ಕಿಕ ಅಂತ್ಯಕ್ಕೆ ಮುಟ್ಟಿಸಬಹುದಿತ್ತು ಅವರು ಒಪ್ಪಿಕೊಂಡರು.

ಜಾರಿ ನಿರ್ದೇಶನಾಲಯಕ್ಕೂ ಮಾಹಿತಿ

ವೈದ್ಯಕೀಯ ಸೀಟು ಅಕ್ರಮ ಮಾರಾಟ ಕುರಿತು ಐ.ಟಿ ಅಧಿಕಾರಿಗಳು ಜಾರಿ ನಿರ್ದೇಶನಾಲಯ (ಇ.ಡಿ) ಮತ್ತಿತರ ಸಂಸ್ಥೆಗಳಿಗೂ ಮಾಹಿತಿ ನೀಡಲಿದ್ದಾರೆ.

ತೆರಿಗೆ ಕಳ್ಳತನ ಹಾಗೂ ಬೇನಾಮಿ ಆಸ್ತಿ ನಿಯಂತ್ರಣ ಕಾಯ್ದೆಯಡಿ ತನಿಖೆ ನಡೆಸಲು ಐ.ಟಿಗೆ ಅಧಿಕಾರವಿದೆ. ಆದರೆ, ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆಯಡಿ ತನಿಖೆ ನಡೆಸುವ ಕಾರ್ಯವ್ಯಾಪ್ತಿ ಇ.ಡಿಗೆ ಮಾತ್ರ ಇದೆ. ಹೀಗಾಗಿ, ಇ.ಡಿಗೆ ಮಾಹಿತಿ ನೀಡುವ ಕುರಿತು ಪರಿಶೀಲಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಇದಲ್ಲದೆ, ಪ್ರಾದೇಶಿಕ ಆರ್ಥಿಕ ಗುಪ್ತಚರ ವಿಭಾಗಕ್ಕೂ ಮಾಹಿತಿ ನೀಡುವ ಸಾಧ್ಯತೆಯಿದೆ. ಆದರೆ, ತನಿಖೆ ಒಂದು ಹಂತಕ್ಕೆ ತಲುಪಿದ ಬಳಿಕ ಈ ಬಗ್ಗೆ ತೀರ್ಮಾನಿಸಲಾಗುವುದು ಎಂದು ಮೂಲಗಳು ಹೇಳಿವೆ.

ವಿಚಾರಣೆಗೆ ಹಾಜರಾದ ಪರಮೇಶ್ವರ

ಅಕ್ರಮ ಸೀಟು ಹಗರಣದ ಸಂಬಂಧ ಪರಮೇಶ್ವರ ಮಂಗಳವಾರ ಐ.ಟಿ ಅಧಿಕಾರಿಗಳ ಮುಂದೆ ಹಾಜರಾಗಿದ್ದು, ಒಂದೇ ಗಂಟೆಯೊಳಗಾಗಿ ವಿಚಾರಣೆ ಅಂ‌ತ್ಯಗೊಂಡಿತು.

ಇಲ್ಲಿನ ಐ.ಟಿ ಕೇಂದ್ರ ಕಚೇರಿಗೆ ಬೆಳಿಗ್ಗೆ 10 ಗಂಟೆಗೆ ಹಾಜರಾದ ಪರಮೇಶ್ವರ 11 ಗಂಟೆಗೆ ಹೊರ ಬಂದರು. ಐ.ಟಿ ಅಧಿಕಾರಿಗಳು ವಶಪಡಿಸಿಕೊಂಡಿರುವ ದಾಖಲೆ ಪರಿಶೀಲಿಸುತ್ತಿದ್ದು, ಈ ದಾಖಲೆಗಳನ್ನು ತೋರಿಸಿ ಪ್ರಶ್ನೆಗಳನ್ನು ಕೇಳಿದರು. ಸಮಗ್ರ ದಾಖಲೆ ಹಾಗೂ ಮಾಹಿತಿಯೊಂದಿಗೆ ವಿಚಾರಣೆಗೆ ಹಾಜರಾಗಲು ಮೂರು ದಿನ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು.

‘ಐ.ಟಿ ಅಧಿಕಾರಿಗಳಿಗೆ ದಾಖಲೆ ಪರಿಶೀಲಿಸಲು ಸ್ವಲ್ಪ ಕಾಲಾವಕಾಶ ಬೇಕು. ಇದಕ್ಕಾಗಿ ನಾನು ಕೂಡ ಮೂರು ದಿನ ಕಾಲವಕಾಶ ಕೇಳಿದ್ದೇನೆ. ಐ.ಟಿ ಅಧಿಕಾರಿಗಳೂ ಒಪ್ಪಿಕೊಂಡಿದ್ದಾರೆ. ಮೂರು ದಿನದ ಬಳಿಕ ಸಮನ್ಸ್ ನೀಡಿದರೆ ವಿಚಾರಣೆಗೆ ಹಾಜರಾಗುತ್ತೇನೆ’ ಎಂದು ಪರಮೇಶ್ವರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಉನ್ನತ ಮಟ್ಟದ ತನಿಖೆ ನಡೆಸಲಿ: ರಮೇಶ್‌ ಆತ್ಮಹತ್ಯೆ ಕುರಿತು ಇಲ್ಲಸಲ್ಲದ ಕಥೆಗಳು ಹುಟ್ಟಿಕೊಳ್ಳುತ್ತಿದ್ದು, ಸತ್ಯಾಸತ್ಯತೆ ಹೊರಬರಲು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಪರಮೇಶ್ವರ ಆಗ್ರಹಿಸಿದರು.

‘ನಾನೇ ಕೊಲೆ ಮಾಡಿಸಿದ್ದೇನೆ ಎಂದು ಕೆಲವರು ಹೇಳುತ್ತಿದ್ದಾರೆ. ಇನ್ನೂ ಅನೇಕರು ಅವರ ಹೆಸರಿನಲ್ಲಿ ನಾನು ಬೇನಾಮಿ ಆಸ್ತಿ ಮಾಡಿದ್ದೇನೆ. ಇದರಿಂದ ದಿಗಿಲುಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಚಾರ ಮಾಡುತ್ತಿದ್ದಾರೆ. ನನ್ನ ಮೇಲೆ ವೃಥಾ ಆರೋಪ ಬರುವುದು ಬೇಡ. ರಮೇಶ್ ಸಾವಿನ ಬಗ್ಗೆ ಸೂಕ್ತ ತನಿಖೆಯಾಗಲಿ’ ಎಂದು ಅವರು ಒತ್ತಾಯ ಮಾಡಿದರು.

ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಮನವಿ ಮಾಡುತ್ತೇನೆ ಎಂದು ಅವರು ತಿಳಿಸಿದರು.

ದಾಖಲೆ ಕೇಳಿದ ಪೊಲೀಸರು

ರಾಮನಗರ: ಶಾಸಕ ಡಾ. ಜಿ. ಪರಮೇಶ್ವರ್‌ ಅವರ ಆಪ್ತ ಸಹಾಯಕ ರಮೇಶ್‌ ಆತ್ಮಹತ್ಯೆ ಪ್ರಕರಣದ ತನಿಖೆ ಆರಂಭಿಸಿರುವ ಪೊಲೀಸರು, ಅವರ ಕೈ ಬರಹ ದೃಢಪಡಿಸಿಕೊಳ್ಳಲು ಕುಟುಂಬ ಸದಸ್ಯರಿಂದ ದಾಖಲೆ ಕೇಳಿ ನೋಟಿಸ್ ನೀಡಿದ್ದಾರೆ.

ರಮೇಶ್‌ ಮರಣ ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದು, ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸ್ಥಳದಲ್ಲಿ ಸಿಕ್ಕಿರುವ ಪತ್ರ ರಮೇಶ್‌ ಅವರದ್ದೋ ಇಲ್ಲವೋ ಎಂದು ದೃಢಪಡಿಸಿಕೊಳ್ಳಲು ಜ್ಞಾನಭಾರತಿ ಠಾಣೆ ಪೊಲೀಸರು ರಮೇಶ್‌ ಪತ್ನಿ ಸೌಮ್ಯಾರಿಗೆ ನೋಟಿಸ್ ನೀಡಿದ್ದು, ರಮೇಶ್‌ರ ಕೈ ಬರಹದ ಯಾವುದಾದರೂ ದಾಖಲೆ ಇದ್ದರೆ ಒದಗಿಸುವಂತೆ ಸೂಚಿಸಿದ್ದಾರೆ.

ಸಿದ್ಧಾರ್ಥ ವೈದ್ಯಕೀಯ ಶಿಕ್ಷಣ ಸಂಸ್ಥೆ ನೌಕರರ ₹ 4.7 ಕೋಟಿ ಮುಟ್ಟುಗೋಲು

ತುಮಕೂರು: ನಗರದ ಶಿವಶ್ರೀ ಸೌಹಾರ್ದ ಸಹಕಾರ ಸಂಸ್ಥೆಯಲ್ಲಿ ಸಿದ್ಧಾರ್ಥ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ಹೆಸರಿನಲ್ಲಿ ಠೇವಣಿ ಇಟ್ಟಿದ್ದ ₹ 4.7 ಕೋಟಿಯನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಅಖಿಲ ಭಾರತ ಕೋಟಾದಡಿ ಹಂಚಿಕೆ ಆಗಬೇಕಿದ್ದ ವೈದ್ಯಕೀಯ ಸೀಟುಗಳನ್ನು ಅಕ್ರಮವಾಗಿ ಹೆಚ್ಚಿನ ಹಣಕ್ಕೆ ಮಾರಾಟ ಮಾಡಿ ಆ ಹಣವನ್ನು ಬೇನಾಮಿಯಾಗಿ ಠೇವಣಿ ಇಟ್ಟರೇ ಎನ್ನುವ ಪ್ರಶ್ನೆ ಮೂಡಿದೆ. ಸಹಕಾರ ಸಂಸ್ಥೆ ತುಮಕೂರಿನಲ್ಲಿ ಮೂರು ಮತ್ತು ಬೆಂಗಳೂರಿನಲ್ಲಿ ಒಂದು ಶಾಖೆ ಹೊಂದಿದೆ.

ನಗರದ ಯಾವ ಯಾವ ಬ್ಯಾಂಕುಗಳಲ್ಲಿ ಮತ್ತು ಸಹಕಾರಿ ಸಂಸ್ಥೆಗಳಲ್ಲಿ ಶಾಸಕ ಜಿ.ಪರಮೇಶ್ವರ ಮತ್ತು ಅವರ ಅಣ್ಣನ ಮಗ ಆನಂದ್ ವ್ಯವಹಾರ ನಡೆಸಿದ್ದಾರೆ ಎನ್ನುವ ಬಗ್ಗೆಯೂ ಐ.ಟಿ ಮಾಹಿತಿ ಕಲೆ ಹಾಕಿದೆ. ಠೇವಣಿ ಹಣದ ಬಡ್ಡಿಯನ್ನು ಆನಂದ್ ಪಡೆಯುತ್ತಿದ್ದರು ಎನ್ನಲಾಗುತ್ತಿದೆ.

ಆನಂದ್, ಶಿವಶ್ರೀ ಸಹಕಾರ ಸಂಸ್ಥೆಯಲ್ಲಿ ₹ 6.7 ಕೋಟಿ ಸಾಲ ಸಹ ಪಡೆದಿದ್ದಾರೆ. ಸಾಲಕ್ಕೆ ಬೆಂಗಳೂರಿನ ಸದಾಶಿವನಗರದಲ್ಲಿನ ಮನೆ ಮತ್ತು ಎಂ.ಜಿ.ರಸ್ತೆಯಲ್ಲಿನ ವಾಣಿಜ್ಯ ಸಂಕೀರ್ಣವನ್ನು ಆಧಾರವಾಗಿಟ್ಟಿದ್ದಾರೆ. ವಾಣಿಜ್ಯ ಸಂಕೀರ್ಣದ ಬಾಡಿಗೆ ನೇರವಾಗಿ ಸಾಲಕ್ಕೆ ಜಮೆ ಆಗುವಂತೆ ಮಾಡಿದ್ದಾರೆ ಎನ್ನುತ್ತವೆ ಮೂಲಗಳು.

‘ಸಿದ್ಧಾರ್ಥ ವೈದ್ಯಕೀಯ ಶಿಕ್ಷಣ ಸಂಸ್ಥೆಯಲ್ಲಿ ವೈದ್ಯಕೀಯ ಸೀಟು ಮಾರಾಟ ನಡೆಯುತ್ತಿದೆ ಎಂದು ಒಂದು ವರ್ಷದ ಹಿಂದೆಯೇ ದೂರು ಬಂದಿತ್ತು. ಆಗ ಪರಮೇಶ್ವರ ಸಚಿವರಾಗಿದ್ದರು’ ಎನ್ನುತ್ತವೆ ಪೊಲೀಸ್ ಉನ್ನತ ಮೂಲಗಳು.

‘ವೈದ್ಯಕೀಯ ಶಿಕ್ಷಣ ಸಂಸ್ಥೆಯ ವ್ಯವಹಾರಗಳನ್ನು ನಾನೇ ನೋಡಿಕೊಳ್ಳುತ್ತಿದ್ದೆ. ಇದರಲ್ಲಿ ಚಿಕ್ಕಪ್ಪನ ಪಾತ್ರ ಇಲ್ಲ’ ಎಂದು ಆನಂದ್ ಐ.ಟಿ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ ಎನ್ನಲಾಗುತ್ತಿದೆ.

‘ಆನಂದ್ ಅವರು ಈಗ ವಿದೇಶದಲ್ಲಿ ಇದ್ದಾರೆ. ಅವರು ಶೀಘ್ರದಲ್ಲಿಯೇ ವಾಪಸ್ ಬರಲಿದ್ದು ವಿಚಾರಣೆ ಎದುರಿಸಲಿದ್ದಾರೆ’ ಎಂದು ಆನಂದ್ ಆಪ್ತ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT