ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವಿನ ಗುರಿಗಿಂತ ಖುಷಿಯ ಸಂಭ್ರಮ..!

Last Updated 3 ಅಕ್ಟೋಬರ್ 2019, 17:50 IST
ಅಕ್ಷರ ಗಾತ್ರ

ಗೆಲ್ಲಲೇಬೇಕು ಎನ್ನುವವರಿಗಿಂತ ಖುಷಿ ಪಡಲಿಕ್ಕಾಗಿಯೇ ಬಂದಿದ್ದವರು ಹಲವರಿದ್ದರು. ನೋಂದಣಿಯ ಗಡುವು ಮುಗಿದಿದ್ದರೂ; ನಿಮ್ಮ ಸ್ಪರ್ಧೆಯಲ್ಲಿ ನಾವೂ ಭಾಗಿದಾರರಲ್ಲ. ಆದರೆ ನಮಗೂ ಆಟವಾಡಲು ಅವಕಾಶ ಕೊಡಬೇಕು ಎಂದು ಪಟ್ಟು ಹಿಡಿದವರಲ್ಲಿ ಹಿರಿಯರೂ ಇದ್ದರು..!

ಮೈಸೂರಿನ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿನ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಕಚೇರಿ ಸಭಾಂಗಣ ಹಾಗೂ ಹೊರಾಂಗಣದಲ್ಲಿ ಗುರುವಾರ ನಡೆದ ‘ಪಾರಂಪರಿಕ ಆಟಗಳ ಸ್ಪರ್ಧೆ’ಯ ಚಿತ್ರಣವಿದು.

ನಾ ಮುಂದು, ತಾ ಮುಂದು... ಎಂದು ಚಿಣ್ಣರಿಗಿಂತ ಮುಂದಿದ್ದವರು ಮಧ್ಯವಯಸ್ಕ, ಹಿರಿಯ ಮಹಿಳೆಯರು. ಕಾಲೇಜು ಯುವತಿಯರು ತಾವೇನು ಕಮ್ಮಿಯಿಲ್ಲ ಎಂಬಂತೆ ಹಳ್ಳಿಗಳಿಂದಲೂ ಪಾರಂಪರಿಕ ಆಟಗಳಲ್ಲಿ ಭಾಗಿಯಾಗಲು ತಂಡೋಪ ತಂಡವಾಗಿ ಬಂದಿದ್ದರು.

ಒಬ್ಬರಿಗೆ ಮೂರು ಆಟಕ್ಕೆ ಮಾತ್ರ ಅವಕಾಶವಿದ್ದುದರಿಂದ ತಮ್ಮೊಳಗೆ ವಿಂಗಡಿಸಿಕೊಂಡು, ಎಲ್ಲರೂ ಬಹುತೇಕ ಆಟೋಟಗಳಲ್ಲಿ ಭಾಗಿಯಾಗಿ ಖುಷಿಪಟ್ಟರು. ತಮ್ಮ ಬಾಲ್ಯದ ದಿನಗಳ ನೆನಪಿನಂಗಳಕ್ಕೆ ಜಾರಿದರು. ಮಧ್ಯಾಹ್ನದ ಊಟವನ್ನು ತಮ್ಮ ಮನೆಗಳಿಂದಲೇ ತಂದು, ಒಂದೆಡೆ ಒಟ್ಟಾಗಿ ಕುಳಿತು ಪರಸ್ಪರ ಹಂಚಿಕೊಂಡು ತಿಂದರು.

ದಿನವಿಡಿ ಉಲ್ಲಾಸದಿಂದ, ಸಂತಸವಾಗಿ ಕಾಲ ಕಳೆದರು. ತಮ್ಮ ಆಟೋಟ ಮುಗಿದ ಬಳಿಕ ಸ್ಪರ್ಧೆ ನಡೆದಿದ್ದ ಎಲ್ಲೆಡೆಯೂ ತೆರಳಿ ವೀಕ್ಷಿಸಿದರು. ಆಟದ ಪಟ್ಟುಗಳನ್ನು ಸೂಕ್ಷ್ಮವಾಗಿ ಗಮನಿಸಿ, ಸ್ಪರ್ಧಿಗಳನ್ನು ಹುರಿದುಂಬಿಸಿದರು.

ಪ್ರಶಸ್ತಿಗೆ ಬಂದವರಲ್ಲ..:

‘ಎಲ್ಲ ಆಟಗಳನ್ನು ಆಡಬೇಕು ಎಂಬ ಉತ್ಸಾಹದಿಂದಲೇ ಇಲ್ಲಿಗೆ ಬಂದೆವು. ನೋಂದಣಿ ಮುಗಿದಿದೆ ಎಂದರು. ನಾವೂ ಸ್ಪರ್ಧಿಗಳಲ್ಲ. ಆಟವಾಡಿ ಖುಷಿಪಡಲು ಬಂದವರು. ಅವಕಾಶ ಕೊಡಿ ಎಂಬ ನಮ್ಮ ಮನವಿಗೆ ಅಧಿಕಾರಿಗಳು ಸ್ಪಂದಿಸಿದರು. ಬಿಲ್ಲು–ಬಾಣ ಹೂಡಿ ಬಹು ವರ್ಷಗಳಾಗಿತ್ತು. ಗೆಳತಿ ಗಿರಿಜಾ ಜತೆ ಖುಷಿಯಿಂದ ಬಾಣವೂಡಿದೆ. ಪಗಡೆಯಾಡಿದೆ. ಚೌಕಾಬಾರವನ್ನು ಆಡಿ ಸಂತಸಪಟ್ಟೆ. ಅಳಗುಳಿ ಮನೆಯನ್ನು ಆಡಿ ಸಂಭ್ರಮಿಸಿದೆವು’ ಎಂದು 69ರ ಇಳಿ ವಯಸ್ಸಿನ ನಿವೃತ್ತ ಶಿಕ್ಷಕಿ ಸರಸ್ಪತಿ ಸುರೇಶ್‌ ತಮಗಾದ ಆನಂದದ ಪರಿಯನ್ನು ಬಿಚ್ಚಿಟ್ಟರು.

‘ವಂಶಪಾರಂಪರ್ಯವಾಗಿ ಪಗಡೆ ಆಟ ನಮ್ಮ ಕುಟುಂಬದಲ್ಲಿದೆ. ಸಮಾರಂಭಗಳಲ್ಲಿ ಬಂಧು–ಮಿತ್ರರು ಕೂಡಿದಾಗ ಪಗಡೆಯಾಟ ಇರಲೇ ಬೇಕು. ಎರಡು ಆಟವನ್ನಷ್ಟೇ ನಾವೂ ಆಡೋದು. ತುಂಬಾ ಖುಷಿ ನೀಡುವ ಆಟವಿದು. ಪಗಡೆ ಆಟವಿದೆ ಎಂಬ ಕಾರಣಕ್ಕೆ ಸಮಾರಂಭವೊಂದಕ್ಕೆ ಮುಂಚಿತವಾಗಿಯೇ ಹೋಗಿ ಇಲ್ಲಿಗೆ ಬಂದಿರುವೆ’ ಎಂದು ನಾಗಲಕ್ಷ್ಮೀ ಪಗಡೆಯೊಂದಿಗಿನ ತಮ್ಮ ಒಡನಾಟವನ್ನು ಹಂಚಿಕೊಂಡರು.

‘ಚಿಕ್ಕಂದಿನಲ್ಲಿ ಆಡಿದ್ದ ಆಟಗಳೆಲ್ಲವೂ ಮರೆತು ಹೋಗಿದ್ದವು. ಈಚೆಗಂತೂ ಫೋನ್‌, ಬುಕ್ಸ್‌ನಿಂದ ಹೊರಬರಲಾಗುತ್ತಿರಲಿಲ್ಲ. ಎಲ್ಲರೊಟ್ಟಿಗೆ ಬೆರೆಯಬೇಕು ಎಂದೇ ನಾವಿಬ್ಬರೂ ಇಲ್ಲಿಗೆ ಬಂದು ಚೌಕಾಬಾರ, ಹಾವು–ಏಣಿ, ಮೂರು ಕಾಲಿನ ಓಟದ ಆಟದಲ್ಲಿ ಭಾಗಿಯಾದೆವು’ ಎಂದು ಪ್ರಥಮ ಪಿಯು ವಿದ್ಯಾರ್ಥಿಗಳಾದ ಹರ್ಷಿತಾ, ಶ್ವೇತಾಂಜಲಿ ಎಸ್‌.ತಿಳಿಸಿದರು.

‘ನಾವು ಟೆರೇಷಿಯನ್ ಕಾಲೇಜಿನ ವಿದ್ಯಾರ್ಥಿನಿಯರು. ದೇಸಿ ಆಟಗಳಲ್ಲಿ ಭಾಗಿಯಾಗಲಿಕ್ಕಾಗಿಯೇ ಅನುಮತಿ ಪಡೆದು ಬಂದಿದ್ದೇವೆ. ಎಲ್ಲರೂ ವಿವಿಧ ಆಟೋಟಗಳಲ್ಲಿ ಭಾಗಿಯಾಗಿ ಖುಷಿಪಟ್ಟೆವು. ಚಿಕ್ಕಂದಿನಲ್ಲಿ ಆಡಿದ್ದ ಆಟಗಳನ್ನು ಇದೀಗ ಗೆಳತಿಯರೊಟ್ಟಿಗೆ ಮತ್ತೊಮ್ಮೆ ಆಡಿ ಸಂಭ್ರಮಿಸಿದೆವು’ ಎಂದು ಮಂಡ್ಯದ ಸಹನಾ, ಮಳವಳ್ಳಿ ಸನಿಹದ ರಾವಣಿಯ ಸ್ಪಂದನಾ, ನಂಜನಗೂಡಿನ ಶಾಂತಿ, ಪಾಂಡವಪುರ ತಾಲ್ಲೂಕಿನ ಚಿನಕುರಳಿಯ ರಕ್ಷಿತಾ, ಕೊಳ್ಳೇಗಾಲದ ಸರ್ಲಿನ್ ಅಮೃತಾ, ತಿ.ನರಸೀಪುರ ತಾಲ್ಲೂಕಿನ ಕುಪ್ಪೇಗಾಲದ ಅನಿತಾ, ಮೈಸೂರಿನ ಹೆಬ್ಬಾಳದ ಪವಿತ್ರಾ ಹೇಳಿದರು.

‘ಊರಲ್ಲಿ ಈಗಲೂ ಬುಗರಿ ಆಡುತ್ತೇವೆ. ಇಲ್ಲಿಯೂ ಬುಗರಿ ಆಡಿದೆವು. ತುಂಬಾ ಖುಷಿಯಾಯ್ತು. ನಮ್ಮ ಆಟ ಮುಗಿದ ಬಳಿಕ ಗೋಣಿಚೀಲದ ಓಟದಲ್ಲೂ ಭಾಗಿಯಾದೆವು. ಹಾವು–ಏಣಿಯನ್ನು ಕುತೂಹಲದಿಂದ ಆಡಿದೆವು’ ಎಂದು ಸರಗೂರಿನ ಪದವಿ ವಿದ್ಯಾರ್ಥಿಗಳಾದ ಮಹೇಶ್, ವೇಣು, ವಿನು, ಚೇತನ್ ಪಾರಂಪರಿಕ ಆಟಗಳ ಸಂಭ್ರಮವನ್ನು ಹೇಳಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT