ಮಕ್ಕಳ ಹುಟ್ಟುಹಬ್ಬದಂದು ಸಸಿ ನೆಡಲು ಪಾಲಕರ ಪಣ

7
ಮುಂಡಗೋಡ: ‘ಬೆಂಕಿಯಿಂದ ಅರಣ್ಯ ರಕ್ಷಣೆ’ ಕಾರ್ಯಕ್ರಮದಲ್ಲಿ ಪಾಲಕರ ನಿರ್ಧಾರ

ಮಕ್ಕಳ ಹುಟ್ಟುಹಬ್ಬದಂದು ಸಸಿ ನೆಡಲು ಪಾಲಕರ ಪಣ

Published:
Updated:
Prajavani

ಮುಂಡಗೋಡ (ಉತ್ತರ ಕನ್ನಡ): ಪರಿಸರ ಉಳಿಸಲು ತಾಲ್ಲೂಕಿನ ಸುಳ್ಳಳ್ಳಿ ಗ್ರಾಮದಲ್ಲಿ ಪೋಷಕರು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ತಮ್ಮ ಮಕ್ಕಳ ಜನ್ಮದಿನದಂದು ಮನೆಯ ಆವರಣದಲ್ಲಿ ಒಂದೊಂದು ಸಸಿ ನೆಟ್ಟು ಪೋಷಿಸುವ ಪಣ ತೊಟ್ಟಿದ್ದಾರೆ.

ಕಾತೂರ ಅರಣ್ಯ ಇಲಾಖೆಯಿಂದ ಸುಳ್ಳಳ್ಳಿ ಗ್ರಾಮದಲ್ಲಿ ಶನಿವಾರ ‘ಬೆಂಕಿಯಿಂದ ಅರಣ್ಯ ರಕ್ಷಣೆ’ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಗ್ರಾಮಸ್ಥರೇ ವೈಯಕ್ತಿಕವಾಗಿ ಹಣ ಸಂಗ್ರಹಿಸಿ ಕಾರ್ಯಕ್ರಮಕ್ಕೆ ಪೆಂಡಾಲ್‌ ಹಾಕಿದ್ದರು. ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಲಘು ಉಪಾಹಾರ, ಚಹಾದ ವ್ಯವಸ್ಥೆಯನ್ನೂ ಅವರೇ ಮಾಡಿಸಿದ್ದರು.

ಜಾನಪದ ಕಲಾತಂಡಗಳ ಪರಿಸರ ಗೀತೆ, ಅರಣ್ಯನಾಶದಿಂದ ಮನುಕುಲ ಅವಸಾನದತ್ತ ಸಾಗುವ ಬೀದಿನಾಟಕ ನೋಡುಗರ ಹೃದಯ ತಟ್ಟಿತ್ತು. ಇಲಾಖೆ ಸಿಬ್ಬಂದಿ ಊಹಿಸಿದ್ದಕ್ಕಿಂತ ಹೆಚ್ಚಿನ ರೀತಿಯಲ್ಲಿ ಗ್ರಾಮಸ್ಥರ ಸ್ಪಂದನೆ ವ್ಯಕ್ತವಾಗಿ, ಅರಣ್ಯ ಸಿಬ್ಬಂದಿಯ ಮುಖದಲ್ಲಿ ಮಂದಹಾಸ ಬೀರಿತು.

‘ಕಾರ್ಯಕ್ರಮದಿಂದ ಪ್ರೇರಣೆಗೊಂಡಿರುವ ಗ್ರಾಮಸ್ಥರು ಮಕ್ಕಳ ಜನ್ಮದಿನದಂದು ಒಂದೊಂದು ಸಸಿ ನೆಡಲು ನಿರ್ಧರಿಸಿದ್ದಾರೆ. ಈ ಮೂಲಕ ಪರಿಸರ ಸಂರಕ್ಷಣೆಗೆ ಹೆಜ್ಜೆ ಇಡಲಿದ್ದಾರೆ’ ಎಂದು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷೆ ಬಸವಣ್ಣಿ ಹೇಳಿದರು.

ಕುಂದಗೋಳ ತಾಲ್ಲೂಕಿನ ಹರ್ಲಾಪುರದ ಜಾನಪದ ಕಲಾತಂಡದ ಸದಸ್ಯರು ಪ್ರಸ್ತುತಪಡಿಸಿದ ಪರಿಸರ ಕುರಿತ ನಾಟಕ, ಹಾಡುಗಳಿಗೆ ಸೇರಿದ್ದವರು ಚಪ್ಪಾಳೆ ಸುರಿಮಳೆಗರೆದರು. ಮನೆ ಆವರಣ, ಹೊಲಗದ್ದೆಗಳಲ್ಲಿ ಸಸಿಗಳನ್ನು ಬೆಳೆಸಲು ಗ್ರಾಮಸ್ಥರು ನಿರ್ಧರಿಸುವಂತೆ ಪ್ರೇರಣೆ ನೀಡಿತು. ರೈತರೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮನೆಯ ಕಾರ್ಯಕ್ರಮ ಎಂಬಂತೆ ನಡೆಸಿಕೊಟ್ಟರು. ಜನಪದ ಕಲಾ ತಂಡದ ಸದಸ್ಯರಿಗೆ ಗೌರವಧನ ನೀಡಿ ಸನ್ಮಾನಿಸಿದರು.

‘ಹೃದಯಸ್ಪರ್ಶಿ ಕಾರ್ಯಕ್ರಮ’: ‘ಕಳೆದ ವರ್ಷ ಪಕ್ಕದ ಬಸವನಕೊಪ್ಪದಲ್ಲಿ ಇಂತಹ ಕಾರ್ಯಕ್ರಮವನ್ನು ನೋಡಿದ್ದೆವು. ನಮ್ಮೂರಿನಲ್ಲಿ ಈ ಸಲ ಮಾಡಬೇಕೆಂದು ನಿರ್ಧರಿಸಿ ಉಪವಲಯ ಅರಣ್ಯಾಧಿಕಾರಿ ಬಿ.ವೀರೇಶ ಅವರಿಗೆ ಕೋರಿಕೆ ಸಲ್ಲಿಸಲಾಗಿತ್ತು. ಜಾನಪದ ಕಲಾ ತಂಡಗಳ ಪ್ರದರ್ಶನ ಹೃದಯಸ್ಪರ್ಶಿಯಾಗಿತ್ತು. ಪರಿಸರ ರಕ್ಷಣೆ ಹಾಗೂ ಬೆಂಕಿ ಬಿದ್ದಾಗ ಏನು ಮಾಡಬೇಕು ಎಂಬುದನ್ನು ಮನಮುಟ್ಟುವಂತೆ ಗಾಯನದ ಮೂಲಕ ಪ್ರಸ್ತುತಪಡಿಸಿದರು’ ಎಂದು ಗ್ರಾಮ ಅರಣ್ಯ ಸಮಿತಿ ಮಾಜಿ ಅಧ್ಯಕ್ಷ ಮೆಹಬೂಬ್‌ ಸಾಬ ಸುಳ್ಳಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.

ಡಿಎಫ್‌ಒ ಆರ್‌.ಜಿ.ಭಟ್ಟ, ಎಸಿಎಫ್‌ ಜಿ.ಆರ್‌.ಶಶಿಧರ ಮಾರ್ಗದರ್ಶನದಲ್ಲಿ ಆರ್‌ಎಫ್‌ಒ ಅಜಯ ನಾಯ್ಕ, ಉಪವಲಯ ಅರಣ್ಯಾಧಿಕಾರಿ ಬಿ.ವಿರೇಶ ಕಾರ್ಯಕ್ರಮ ನಡೆಸಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸರಸ್ವತಿ, ಬಸವನಕೊಪ್ಪ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಪರಮೇಶ್ವರ ಪಾಟೀಲ, ಮಹಾಬಲೇಶ್ವರ, ಅರಣ್ಯ ಸಿಬ್ಬಂದಿ ಹರೀಶ, ಲಕ್ಷ್ಮಣ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !