ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ದುರ್ಬಲ ಆರ್ಥಿಕ ನೀತಿಗಳೇ ಕಾರಣ: ಜನರ ಪ್ರತಿಕ್ರಿಯೆಗಳು

Last Updated 26 ಆಗಸ್ಟ್ 2019, 20:17 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಜಾವಾಣಿ’ಯ ಸೋಮವಾರ ಸಂಚಿಕೆಯಲ್ಲಿ ‍ಪ್ರಕಟವಾದ (ಆಗಸ್ಟ್‌ 26) ‘ಐಸಿಯುನಲ್ಲಿ ಪೀಣ್ಯ ಕೈಗಾರಿಕಾ ಪ್ರದೇಶ’ ವರದಿಗೆ ರಾಜ್ಯದಾದ್ಯಂತ ಓದುಗರು ಪ್ರತಿಕ್ರಿಯಿಸಿದ್ದು, ಈ ಸ್ಥಿತಿಗೆ ದೇಶದ ದುರ್ಬಲ ಆರ್ಥಿಕ ನೀತಿಗಳೇ ಕಾರಣ ಎಂದು ಆಕ್ರೋಶ ಹೊರಹಾಕಿದ್ದಾರೆ.

ವಿಷಮಆರ್ಥಿಕತೆ

ದೇಶದಲ್ಲಿ ಆರ್ಥಿಕತೆ ಎಷ್ಟರಮಟ್ಟಿಗೆ ಕುಗ್ಗಿದೆ ಎಂಬುದಕ್ಕೆ ಪೀಣ್ಯ ಕೈಗಾರಿಕಾ ಪ್ರದೇಶದ ಇಂದಿನ ಸ್ಥಿತಿಯೇ ನಿದರ್ಶನ. ಜಾಗತೀಕರಣದ ಹೆಸರಿನಲ್ಲಿ ಖಾಸಗಿಯವರಿಗೆ ಆದ್ಯತೆ ನೀಡಿದರೆ ಇದೇ ದುರ್ಗತಿ ಎದುರಾಗಲಿದೆ.

–ಪಿ.ಉಮೇಶ್, ಹರಿಹರ

ಉದ್ಯೋಗಿಗಳ ಪಾಡೇನು?

ದೇಶದಲ್ಲಿ ಕೃಷಿಯನ್ನು ಬೇರುಸಮೇತ ಕಿತ್ತು ಹಾಕಲಾಗುತ್ತಿದೆ. ಈಗ ಕಾರ್ಮಿಕ ಕ್ಷೇತ್ರದ ಸರದಿ. ಉದ್ಯೋಗ ಸೃಷ್ಟಿಸಿ ದೇಶದ ಆರ್ಥಿಕತೆ ಹೆಚ್ಚಿಸಬೇಕಾದ ಸರ್ಕಾರವೇ ಉದ್ಯೋಗ ಕಸಿಯುವ ಕೆಲಸ ಮಾಡಿದರೆ ಕಾರ್ಮಿಕರ ಭವಿಷ್ಯ ಏನು?

–ಶ್ರೀನಾಥ್‌, ಗಂಗಾವತಿ

ಕಾರ್ಮಿಕರು ಇನ್ನೂ ಅಸಂಘಟಿತ

ಭಾರತದ ಆರ್ಥಿಕತೆ ಮಂದಗತಿಯಲ್ಲಿದ್ದು, ತಯಾರಿಕಾ ವಲಯ ಅವನತಿಯ ಹಂತದಲ್ಲಿದೆ. ಉದ್ಯೋಗ ಪಡೆದು ಜೀವನ ಸುಧಾರಿಸಿಕೊಳ್ಳುವ ಧೈರ್ಯದಲ್ಲಿದ್ದ ಕಾರ್ಮಿಕರು ಈಗ ಭಯದಲ್ಲಿ ಬದುಕುತ್ತಿದ್ದಾರೆ. ತೆರಿಗೆ ವ್ಯವಸ್ಥೆ ಸುಧಾರಣೆಯ ಭರದಲ್ಲಿ ದೇಶವನ್ನೇ ಮುಳುಗಿಸುತ್ತಿದ್ದಾರೆ.

–ಎ.ಎಸ್.ರಘು, ಮೈಸೂರು

ಸರ್ಕಾರವೇ ಪೋಷಿಸಬೇಕು

ಕೈಗಾರಿಕೆಗಳನ್ನು ನಂಬಿ ಜೀವನ ನಡೆಸುತ್ತಿರುವವರು ಕೆಲಸ ಕಳೆದುಕೊಂಡರೆ ಅವರ ಕುಟುಂಬಗಳ ಸ್ಥಿತಿ ಏನು? ವಿದೇಶಿ ಕೈಗಾರಿಕೆಗಳಿಗೆ ಬೆಂಬಲ ನೀಡುವ ಸರ್ಕಾರಗಳು ದಿವಾಳಿಯಲ್ಲಿರುವ ಸ್ಥಳೀಯ ಕೈಗಾರಿಕೆಗಳನ್ನು ಏಕೆ ಪೋಷಿಸುತ್ತಿಲ್ಲ?

–ಭೀಮಾಶಂಕರ, ಶಹಾಪೂರ

ಆರ್ಥಿಕ ನೀತಿ ದುರ್ಬಲ

ಇಲ್ಲಿಯವರೆಗೆ ಲಾಭ–ನಷ್ಟದ ನಡುವೆ ನಡೆದು ಬಂದಿದ್ದ ಕೈಗಾರಿಕೆಗಳು ಏಕಾಏಕಿ ಸ್ಥಗಿತಗೊಳ್ಳಬೇಕಾದರೆ ನಮ್ಮ ಆರ್ಥಿಕ ನೀತಿಗಳು ಎಷ್ಟು ದುರ್ಬಲ ಎನ್ನುವುದು ತಿಳಿಯುತ್ತದೆ. ಹೊರಗುತ್ತಿಗೆ ಕಾರ್ಮಿಕರನ್ನು ನೇಮಕ ಮಾಡಿ ಸ್ಥಳೀಯರ ಹೊಟ್ಟೆ ಖಾಲಿ ಮಾಡುತ್ತಿದ್ದಾರೆ.

–ಹನುಮೇಶ, ಯಶವಂತಪುರ

ದುಡಿಯುವ ವರ್ಗದ ಹರಣ

ಮುಕ್ತ ಆರ್ಥಿಕತೆ ಹೆಸರಲ್ಲಿ ಜಾರಿಯಾಗುತ್ತಿರುವ ನೀತಿಗಳ ವೈಫಲ್ಯವಿದು. ಈ ನೀತಿಗಳಿಂದ ಉದ್ಯಮಿಗಳು ಲಾಭ ಮಾಡಿಕೊಳ್ಳುತ್ತಿದ್ದು, ಕಾರ್ಮಿಕರನ್ನು ಬೀದಿಗೆ ತಂದು ನಿಲ್ಲಿಸಿದೆ. ಕ್ರಮೇಣ ದುಡಿಯುವ ವರ್ಗದ ಹರಣ ಮಾಡುತ್ತಿದೆ.

–ಕೆ.ಮಹಾಂತೇಶ, ಸಿಐಟಿಯು ರಾಜ್ಯ ಕಾರ್ಯದರ್ಶಿ

ಕೈಗಾರೀಕರಣಕ್ಕೆ ತಿಲಾಂಜಲಿ

ಕೈಗಾರಿಕಾ ಕ್ಷೇತ್ರ ಕುಗ್ಗಿರುವುದಕ್ಕೆಪೀಣ್ಯ ಒಂದು ನಿದರ್ಶನವಾದರೆ, ಇಂತಹ ಕೈಗಾರಿಕಾ ಪ್ರದೇಶಗಳು ದೇಶದಲ್ಲಿ ಸಾಕಷ್ಟಿವೆ. ಕೈಗಾರೀಕರಣ ಮಾಡಬೇಕಾದ ಸರ್ಕಾರವೇ ಕಣ್ಣುಮುಚ್ಚಿ ಅದರ ಅಂತ್ಯಕ್ಕೆ ನಾಂದಿ ಹಾಡುತ್ತಿರುವುದು ದುರಂತ.

–ಗುರುದೇವ್ ಭಂಡಾರ್ಕರ್, ಹೊಸನಗರ

ಆಶ್ವಾಸನೆ ನೀಡಿದವರು ಎಲ್ಲಿದ್ದಾರೆ?

ಕಾರ್ಮಿಕರನ್ನು ಸಭೆ ಸೇರಿಸಿ ನಿಮ್ಮ ಪರ ನಾವಿದ್ದೇವೆ.. ನಿಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತೇವೆ ಎಂಬ ಸುಳ್ಳು ಭರವಸೆಗಳನ್ನು ನೀಡಿ ಪಾತಾಳಕ್ಕೆ ತಳ್ಳಿದ ಕಪಟ ರಾಜಕಾರಣಿಗಳು ಈಗ ಎಲ್ಲಿದ್ದಾರೆ?

–ಅಶ್ವತ್ಥ, ಚಿಕ್ಕಮಗಳೂರು

ಕಾರ್ಮಿಕರಿದ್ದರೆ ಆರ್ಥಿಕತೆ

ಕೈಗಾರಿಕೆಗಳು ಬೆಳೆದರೆ ಕಾರ್ಮಿಕರು ಬದುಕುತ್ತಾರೆ. ಕಾರ್ಮಿಕರು ಬದುಕಿದರೆ ಕೈಗಾರಿಕೆಗಳು ಉಳಿಯುತ್ತವೆ. ಇವರಿಬ್ಬರೂ ಉಳಿದಾಗ ಮಾತ್ರ ದೇಶದ ಆರ್ಥಿಕತೆ ಭದ್ರವಾಗಿ ಉಳಿಯುತ್ತದೆ ಎಂಬ ಸತ್ಯ ಸರ್ಕಾರಕ್ಕೆ ಅರಿವಾಗಬೇಕು.

–ಬಿ.ಜಿ.ಮಲ್ಲಿಕಾರ್ಜುನ್, ಜಮಖಂಡಿ

ಕಾರ್ಮಿಕರು ಅತಂತ್ರ

ನಿರುದ್ಯೋಗದಿಂದ ಬೇಸತ್ತ ದೇಶದ ಮೂಲೆಮೂಲೆಯ ಜನರು ಬೆಂಗಳೂರಿನತ್ತ ಮುಖ ಮಾಡುತ್ತಿದ್ದರು. ಕೊನೆಗೆ ಇಲ್ಲಿನ ಕೈಗಾರಿಕೆಗಳಲ್ಲಿ ಉದ್ಯೋಗ ಪಡೆದು ಕುಟುಂಬಗಳನ್ನು ಪೋಷಿಸುತ್ತಿದ್ದರು. ಕೈಗಾರಿಕೆಗಳ ಸ್ಥಗಿತದಿಂದ ಅವರು ಅತಂತ್ರರಾಗಿದ್ದಾರೆ.

–ವಿಜಯ್‌, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT