ಸೋಮವಾರ, ಆಗಸ್ಟ್ 26, 2019
22 °C

ಹೇಮಾವತಿ ಜಲಾಶಯದಿಂದ ನೀರು ಬಿಡುಗಡೆಗೆ ಅನುಮತಿ 

Published:
Updated:

ಬೆಂಗಳೂರು: ಹೇಮಾವತಿ ಜಲಾಶಯದಿಂದ ಹೇಮಾವತಿ ಕಾಲುವೆ ಜಾಲಕ್ಕೆ ಆಗಸ್ಟ್ 7ರಿಂದ 14.53 ಟಿಎಂಸಿ ನೀರು ಬಿಡಲು ಸರ್ಕಾರ ಅನುಮತಿ ನೀಡಿದೆ.

ಆ. 6ರಂದು ಹೇಮಾವತಿ ಜಲಾಶಯದ ಒಳಹರಿವು 17,623 ಕ್ಯುಸೆಕ್‌ ಇದ್ದು, ಹೊರ ಹರಿವು 5,000 ಕ್ಯುಸೆಕ್‌ ಇದೆ. ಹೇಮಾವತಿ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಮುಂದಿನ ಕೆಲವು ದಿನಗಳಲ್ಲಿ ಹೆಚ್ಚಿನ ಹೊರ ಹರಿವನ್ನು ನಿರೀಕ್ಷಿಸಲಾಗುತ್ತಿದೆ ಎನ್ನಲಾಗಿದೆ.

ಹೇಮಾವತಿ ಜಲಾಶಯದಲ್ಲಿ ಹೆಚ್ಚಿನ ನೀರಿನ ಸಂಗ್ರಹವಿಲ್ಲದ ಕಾರಣ ಕೆರೆಗಳು ಮತ್ತು ಅಣೆಕಟ್ಟುಗಳಿಗೆ ನೀರು ತುಂಬಿಸುವ ಮೂಲಕ ಕುಡಿಯುವ ನೀರು ಪೂರೈಕೆಯ ಉದ್ದೇಶಕ್ಕೆ ಮಾತ್ರ ಲಭ್ಯ ನೀರನ್ನು ಬಳಸಲು ಹಾಗೂ ನೀರಾವರಿ ಉದ್ದೇಶಗಳಿಗೆ ನೀರು ಒದಗಿಸದೆ ಇರಲು ಉದ್ದೇಶಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಮುಂದಿನ ಕೆಲವು ದಿನಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯ ಹಿನ್ನೆಲೆಯಲ್ಲಿ ತಮಿಳುನಾಡಿಗೆ ನೀರು ಬಿಡುವುದರೊಂದಿಗೆ ಹೇಮಾವತಿ ಜಲಾಶಯದಿಂದ ಕಾಲುವೆ ಜಾಲಕ್ಕೆ ಮುಂದಿನ 25 ದಿನಗಳಿಗೆ 14.53 ಟಿಎಂಸಿ ನೀರು ಹರಿಸಿ, ಯೋಜನೆಯ ವ್ಯಾಪ್ತಿಗೆ ಬರುವ ಹಾಸನ, ತುಮಕೂರು ಹಾಗೂ ಮಂಡ್ಯ ಜಿಲ್ಲೆಗಳ ಕೆರೆಗಳು, ಆಣೆಕಟ್ಟೆಗಳನ್ನು ತುಂಬಿಸಲು ಸರ್ಕಾರ ಅನುಮತಿ ನೀಡಿದೆ.

Post Comments (+)