ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Phone-In | ಕಡಿಮೆ ಬೆಲೆಗೆ ಕಳಪೆ ಬೀಜ ಖರೀದಿಸುವುದು ಆತ್ಮಹತ್ಯೆಗೆ ಸಮ: ಕೃಷಿ ಸಚಿವ

Last Updated 29 ಏಪ್ರಿಲ್ 2020, 8:49 IST
ಅಕ್ಷರ ಗಾತ್ರ

ಬೆಂಗಳೂರು: ಕಡಿಮೆ ಬೆಲೆಗೆ ಬಿತ್ತನೆ ಬೀಜ ಸಿಗುತ್ತದೆ ಎಂಬ ಆಸೆಗೆ ಬಿದ್ದು ರೈತರು ಕಳಪೆ ಬೀಜಗಳನ್ನು ಖರೀದಿಸಬಾರದು. ಇದು ಆತ್ಮಹತ್ಯೆಗೆ ಸಮಾನ ಎಂದು ಕೃಷಿ ಸಚಿವ ಬಿಸಿ ಪಾಟೀಲ ತಿಳಿಸಿದರು.

ರೈತರು ಎದುರಿಸುತ್ತಿರುವ ಸಂಕಷ್ಟಗಳನ್ನು ತಿಳಿಯಲು ಅನುಕೂಲವಾಗುವಂತೆ ಪ್ರಜಾವಾಣಿ ಆಯೋಜಿಸಿದ್ದ ಫೋನ್‌–ಇನ್‌ ಕಾರ್ಯಕ್ರಮದಲ್ಲಿ ಅವರು ರೈತರೊಂದಿಗೆ ಮಾತುಕತೆ ನಡೆಸಿದರು.

ಈ ವೇಳೆ ಮಾತನಾಡಿದ ಸಚಿವರು, ‘ಇನ್ನೇನು ಮುಂಗಾರು ಪ್ರಾರಂಭವಾಗುತ್ತಿದೆ. ರೈತರಿಗೆ ರಸಗೊಬ್ಬರ, ಬಿತ್ತನೆ ಬೀಜ ವಿತರಿಸಲು ತಯಾರಿ ಮಾಡಿಕೊಳ್ಳುತ್ತಿದ್ದೇವೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಎಲ್ಲವೂ ಸಿಗಲಿವೆ’ ಎಂದರು.

ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಸಚಿವರೊಂದಿಗೆ ಮಾತನಾಡಿದ ಹೆಚ್ಚಿನ ರೈತರು ದಲ್ಲಾಳಿಗಳ ಹಾವಳಿ ಹಾಗೂ ಕೃಷಿ ಉತ್ಪನ್ನಗಳನ್ನು ಅಧಿಕ ದರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಸಮಸ್ಯೆ ಹೇಳಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಸರ್ಕಾರ ನಿಗದಿಮಾಡಿರುವ ದರದಲ್ಲೇ ಕೃಷಿ ಉತ್ಪನ್ನಗಳ ಮಾರಾಟ ನಡೆಯಬೇಕು. ಪ್ರತಿ ಉತ್ಪನ್ನಗಳ ದರ ಪಟ್ಟಿಯನ್ನು ರೈತ ಸಂಪರ್ಕ ಕೇಂದ್ರದಲ್ಲಿ ಹಾಕಬೇಕು. ಇದನ್ನು ಮೀರಿದರೆ ದೂರು ನೀಡಿ. ತಕ್ಷಣ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

‘ಮಾರಾಟ ಮಾಡಲು ಶೇಖರಿಸಿಟ್ಟುಕೊಂಡಿದ್ದ ಸುಮಾರು 10,700 ಕ್ವಿಂಟಾಲ್‌ನಷ್ಟು ಕಳಪೆ ಬೀಜವನ್ನು ಕಳೆದ ವಾರ ವಶಕ್ಕೆ ಪಡೆದಿದ್ದೇವೆ. ಕಡಿಮೆ ಬೆಲೆಗೆ ಸಿಗುತ್ತದೆ ಎಂಬ ಆಸೆಯಿಂದ ಇಂತಹ ಕಳಪೆ ಬೀಜ ಖರೀದಿಸಬೇಡಿ. ಇದರಿಂದಾಗಿ ಮುಂದೆ ಅಧಿಕ ನಷ್ಟ ಎದುರಿಸುತ್ತೀರಿ. ಕಳಪೆ ಬೀಜ ಖರೀದಿಸುವುದು ಆತ್ಮಹತ್ಯೆಗೆ ಸಮಾನ. ಗೊಬ್ಬರ ಕೊಳ್ಳುವ ವೇಳೆ ಅದರ ಮೇಲೆ ಲೇಬಲ್‌ಗಳನ್ನು ಪರಿಶೀಲಿಸಿ. ದಿನಾಂಕ ಮುಗಿದಿದೆಯೇ ಗಮನಿಸಿ. ಅವಧಿ ಮುಗಿದವುಗಳನ್ನು ಖರೀದಿಸುವುದು ವ್ಯರ್ಥ’ ಎಂದು ಕಿವಿ ಮಾತು ಹೇಳಿದರು.

ಲಾಕ್‌ಡೌನ್‌ನಿಂದಾಗಿ ತೊಂದರೆಯಾಗಿದೆ ಎಂಬುದು ಗೊತ್ತು. ಸರ್ಕಾರ ರೈತರ ಪರ ಇದೆ. ಚಿಂತಿಸದಿರಿ ಎಂದು ಅಭಯ ನೀಡಿದರು. ಮುಂದುವರಿದು, ‘ನೈಸರ್ಗಿಕ ವಿಕೋಪದಂತಹ ಸಂದರ್ಭಗಳಲ್ಲಿ ತಕ್ಷಣವೇ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅದರಂತೆ ಪರಿಹಾರವನ್ನೂ ನೀಡಲಾಗುವುದು’ ಎಂದು ಹೇಳಿದರು.

ರೈತರಿಗಷ್ಟೇ ವಿನಾಯಿತಿ
ಫೋನ್‌ಇನ್‌ ಕಾರ್ಯಕ್ರಮದಲ್ಲಿ ಕರೆ ಮಾಡಿದ ರೈತರೊಬ್ಬರು,ಲಾಕ್‌ಡೌನ್‌ ಅವಧಿಯಲ್ಲಿ ಬೆಳೆ ಮಾರಾಟಕ್ಕೆ ಸಮಸ್ಯೆ ಆಗುತ್ತಿದೆ.ಬೆಂಬಲ ಬೆಲೆ ಸಿಗುತ್ತಿಲ್ಲಎಂದು ಅಳಲುತೋಡಿಕೊಂಡರು. ಇದಕ್ಕೆಪ್ರತಿಕ್ರಿಯಿಸಿದ ಸಚಿವರು, ಮಾರುಕಟ್ಟೆ ಕಲ್ಪಿಸಬೇಕು,ಸೂಕ್ತ ಬೆಲೆ ಸಿಗಬೇಕು ಎಂಬುದು ಎಲ್ಲರ ಬಯಕೆ. ಯಾರೋ ನಿಗದಿ ಮಾಡುವ ಬೆಲೆಗೆ ರೈತರು ಬೆಳೆ ಮಾರಾಟ ಮಾಡುವಂತಹ ಪರಿಸ್ಥಿತಿ ಇದೆ. ಅದನ್ನು ಸರಿಪಡಿಸಲಾಗುವುದು ಎಂದರು.

ಮುಂದುವರಿದು, ಲಾಕ್‌ಡೌನ್‌ ಅವಧಿಯಲ್ಲಿದೊಡ್ಡ ದೊಡ್ಡ ಕಂಪೆನಿಗಳನ್ನೇ ನಿಲ್ಲಿಸಲಾಗಿದೆ. ಆದರೆ, ರೈತರಿಗೆ ವಿನಾಯಿತಿ ನೀಡಿದ್ದೇವೆ. ರೈತರಿಗೆ ಸಮಸ್ಯೆಆಗದಂತೆ ನೋಡಿಕೊಳ್ಳಲಾಗುವುದು. ಇದೀಗ ಅಂತರರಾಜ್ಯ ಸಂಚಾರಕ್ಕೂ ಅವಕಾಶ ನೀಡಿರುವುದರಿಂದ ಮಾರಾಟಕ್ಕೆ ಹೆಚ್ಚಿನ ಅನುಕೂಲವಾಗಲಿದೆಎಂದರು.

ಮಾಸ್ಕ್‌ ಹಾಕೊಳ್ಳಿ ಸಾರ್‌, ಮಾಸ್ಕ್ ಹಾಕೊಳ್ಳಿ..
ಫೋನ್-ಇನ್‌ ಕಾರ್ಯಕ್ರಮ ವೀಕ್ಷಿಸುತ್ತಲೇ ಕರೆ ಮಾಡಿದ ರೈತರೊಬ್ಬರು, ‘ಮಾಸ್ಕ್‌ ಹಾಕೊಳ್ಳಿ ಸಾರ್‌ ಮಾಸ್ಕ್‌ ಹಾಕೊಳ್ಳಿ’ಎಂದರು. ರೈತರ ಮಾತಿಗೆ ನಗುತ್ತಲೇ ಪ್ರತಿಕ್ರಿಯಿಸಿದ ಸಚಿವರು, ಕಾರ್ಯಕ್ರಮ ನೋಡುತ್ತಿದ್ದೀರಾ ಎಂದರು. ಇದಕ್ಕುತ್ತರಿಸಿದ ರೈತ, ನನ್ನ ಮಗನ ಮೊಬೈಲ್‌ನಿಂದ ಲೈವ್‌ ನೋಡುತ್ತಿದ್ದೇನೆ. ‘ಮಾಸ್ಕ್‌ ಹಾಕೊಳ್ಳಿ’ ಎಂದು ಮತ್ತೆ ಮನವಿ ಮಾಡಿದರು.

ಮಾತನಾಡಲು ಅನುಕೂಲವಾಗಲಿ ಎಂಬ ಕಾರಣಕ್ಕೆ ಮಾಸ್ಕ್‌ ಬಿಚ್ಚಿದ್ದ ಸಚಿವರು, ರೈತರ ಕಾಳಜಿ ಕಂಡು ಸಂತಸಗೊಂಡು ಮಾಸ್ಕ್‌ ಧರಿಸಿದರು.

ಕೃಷಿ ಹೊಂಡ ಕಾರ್ಯಕ್ರಮ ನಿಲ್ಲಿಸಬೇಡಿ
ಕೃಷಿ ಹೊಂಡ ಯೋಜನೆಯು ಉತ್ತಮವಾದುದ್ದು. ಈ ಯೋಜನೆಯನ್ನು ನಿಲ್ಲಿಸಬೇಡಿ ಎಂದು ಅನೇಕರು ಮನವಿ ಮಾಡಿದರು.ಇದಕ್ಕೆ ಪ್ರತಿಯಾಗಿ, ‘ಹಣದ ಕೊರತೆಯಿಂದಾಗಿ ಈ ಬಾರಿಯ ಬಜೆಟ್‌ನಿಂದ ಯೋಜನೆಯನ್ನು ಕೈಬಿಡಲಾಗಿದೆ. ಇದೊಂದು ಒಳ್ಳೆಯ ಕಾರ್ಯಕ್ರಮ. ಮುಂದುವರಿಸಬೇಕು ಎಂದು ಹೆಚ್ಚಿನವರು ಬೇಡಿಕೆ ಇಟ್ಟಿದ್ದಾರೆ. ಹಾಗಾಗಿ ಯೋಜನೆಯನ್ನು ಮುಂದುವರಿಸುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಲಾಗುವುದು’ ಎಂದು ಭರವಸೆ ನೀಡಿದರು.

ರೈತರೊಂದಿಗೆ ಮಾತುಕತೆ

ತಂಬಾಕು ಬೆಳೆಯುವವರಿಗೆ ಟೊಬ್ಯಾಕೋ ಬೋರ್ಡ್‌ನಿಂದಲೇ ರಸಗೊಬ್ಬರ ನೀಡಲಾಗುತ್ತದೆ. ಆದರೆ, ಈ ಬಾರಿ ಲಾಕ್‌ಡೌನ್‌ ಇರುವುದರಿಂದ ಗೊಬ್ಬರ ಸಿಗುತ್ತದೆಯೇ ಎಂಬುದು ಗೊತ್ತಾಗುತ್ತಿಲ್ಲ.
-ನಂಜುಂಡ, ಮೈಸೂರು
ಸಚಿವ:
ಈ ವಿಚಾರವಾಗಿ ಬೋರ್ಡ್‌ ಜೊತೆಗೆ ಮಾತನಾಡಿ ಸಂಜೆಯೊಳಗೆ ನಿಮಗೆ ಮಾಹಿತಿ ನೀಡಲಾಗುವುದು.

**

ಹೊಳಲ್ಕೆರೆ ಕೃಷಿ ಇಲಾಖೆಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳು ರೈತರಿಗೇ ಗೊತ್ತಾಗದಂತೆ ಸುಮಾರು ₹ 70 ರಿಂದ ₹ 80 ಲಕ್ಷ ದಷ್ಟು ಅವ್ಯವಹಾರ ನಡೆದಿದೆ.
–ಪ್ರಕಾಶ್‌, ಚಿತ್ರದುರ್ಗ
ಸಚಿವ:
ರೈತರಿಗೆ ಅನ್ಯಾಯ ಮಾಡಿದವರು ಯಾರೇ ಆಗಲಿ, ಕೂಡಲೇ ಕ್ರಮ ಕೈಗೊಳ್ಳಲಾಗುವುದು. ತಕ್ಷಣವೇ ತನಿಖೆಗೆ ಆದೇಶ ನೀಡಲಾಗುವುದು. ಮೂರು ದಿನಗಳಲ್ಲಿ ವರದಿ ನೀಡುವಂತೆ ಸೂಚಿಸಲಾಗುವುದು.

**

ರಾಗಿ ಬೆಳೆದಿದ್ದೇವೆ. ಎಪಿಎಂಸಿಯಲ್ಲಿ ಬೆಂಬಲ ಬೆಲೆ ನೀಡುತ್ತಿಲ್ಲ
-ಶಿವು, ಬಳ್ಳಾರಿ
ಸಚಿವ:
ಸರ್ಕಾರ ನಿಗದಿಪಡಿಸಿರುವ ಬೆಂಬಲ ಬೆಲೆಯಂತೆಯೇ (₹ 3,150) ರೈತರಿಂದ ಖರೀದಿಸಬೇಕು. ರೈತರಿಗೆ ಮೋಸ ಮಾಡುವುದು ಅಪರಾಧ. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು.

**

ನರೇಗಾ ಯೋಜನೆಯಲ್ಲಿ ಪಪ್ಪಾಯ ಬೆಳೆದಿದ್ದೇವೆ. ಕೂಲಿ ಹಣ ಇನ್ನೂಬಿಡುಗಡೆಯಾಗಿಲ್ಲ
-ಚೆನ್ನಗಿರಿ, ನಿಜಲಿಂಗಪ್ಪ
ಸಚಿವ:
ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಮತ್ತು ಸಚಿವರಿಗೆ ಮಾಹಿತಿ ನೀಡಲಾಗುವುದು.

**

ಹತ್ತಿ ಬೆಳೆಗೆ ಬೆಲೆ ಇಲ್ಲ.ಮಾರಾಟ ಸಾಧ್ಯವಾಗುತ್ತಿಲ್ಲ. ಪರಿಹಾರ ಕೊಡಿ
-ಧಾರವಾಡ, ಕೃಷ್ಣಪ್ಪ
ಸಚಿವ:
ಸದ್ಯಕ್ಕೆ ಪರಿಹಾರದ ಪ್ರಶ್ನೆ ಬರೋದಿಲ್ಲ. ಬೆಂಬಲ ಬೆಲೆಯಂತೆ ಮಾರಾಟ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು.

**

ಕೊರೊನಾದಿಂದ ರೈತರಿಗೆ ಹೊಡೆತ ಬಿದ್ದಂತಾಗಿದೆ, ಹೂವಿನ ಬೆಳೆಗೆ ಮಾರುಕಟ್ಟೆ ಇಲ್ಲ. ಹೆಚ್ಚಿನ ರೈತರು ಆರ್ಥಿಕವಾಗಿ ಸಬಲರಲ್ಲ ನೆರವಾಗಿ
-ನಳಿನಿ, ಕೋಲಾರ
ಸಚಿವ:
ಸದ್ಯಕ್ಕೆ ಧಾರ್ಮಿಕ ಕಾರ್ಯಕ್ರಮಗಳಿಲ್ಲ ಹೂವಿಗೆ ಮಾರುಕಟ್ಟೆ ಇಲ್ಲ. ಹೂ ಬೆಳೆಗಾರರ ಸಮಸ್ಯೆ ಕುರಿತಂತೆ ಪರಿಶೀಲನೆ ಮಾಡಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಅದರಂತೆ ಕ್ರಮ ಕೈಗೊಳ್ಳಲಾಗುವುದು.

**

ಕೃಷಿ ಕಚೇರಿಯಲ್ಲಿ ಯಂತ್ರೋಪಕರಣಕ್ಕಾಗಿ 2 ವರ್ಷದ ಹಿಂದೆ ಅರ್ಜಿಹಾಕಿದ್ದೇವೆ, ಯಾವುದೇ ಪ್ರಯೋಜನವಾಗಿಲ್ಲ.
-ಶಂಕರೇಗೌಡ, ಗುಲ್ಬರ್ಗಾ
ಸಚಿವ:
ಸರಿಪಡಿಸಲಾಗುವುದು

**

ನೂರು ರೂಪಾಯಿ ಮೌಲ್ಯದ ನಿಂಬೆ ಮಾರಾಟ ಮಾಡಲು₹ 10 ಕಮಿಷನ್ ಕೊಡಬೇಕು
-ಶಿವು ಕುಂಬಾರ, ವಿಜಯಪುರ
ಸಚಿವ:
ಇದು ದೊಡ್ಡ ದುರಂತ. ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗುವುದು.

**

ತರಕಾರಿ ಮಾರಾಟಕ್ಕೆ ತೊಂದರೆಯಾಗಿದೆ
–ಶ್ರೀನಾಥ್‌, ಬೆಳಗಾವಿ
ಸಚಿವ:
ಯಾವುದೇ ಕಾರಣಕ್ಕೂ ಬೆಳೆ ನಿಲ್ಲಿಸಬೇಡಿ. ಲಾಕ್‌ಡೌನ್‌ ಅವಧಿಯಲ್ಲಿಯೂ ರೈತರಿಗೆ ಅವಕಾಶ ನೀಡಲಾಗಿದೆ. ಸರ್ಕಾರ ನಿಮ್ಮ ಜೊತೆಗಿದೆ.

**

₹ 10–12 ಲಕ್ಷ ಖರ್ಚು ಮಾಡಿ ಬೆಳೆ ಬೆಳೆದಿದ್ದೇವೆ. ಆದರೆ, ಮಾರಾಟ ಸಾಧ್ಯವಾಗುತ್ತಿಲ್ಲ
-ಮಾಲತೇಶ್‌, ವಿಜಯಪುರ
ಸಚಿವ:
ಈಗಾಗಲೇ ಆನ್‌ಲೈನ್‌ ಮಾರಾಟ ವ್ಯವಸ್ಥೆಯನ್ನು ಆರಂಭಿಸಲಾಗಿದೆ. ಮಾಹಿತಿಯನ್ನು ಸರಿಯಾಗಿ ಅಪ್‌ಡೇಟ್‌ ಮಾಡಿ ಮಾರಾಟ ಮುಂದುವರಿಸಿ.

ಪಡಿತರದಲ್ಲಿ ಸೇರಿಸಿಲ್ಲ
ಮೆಕ್ಕೆ ಜೋಳ ಮಾರಾಟ ಸಾಧ್ಯವಾಗುತ್ತಿಲ್ಲ ಎಂದು ಸಮಸ್ಯೆ ಹೇಳಿಕೊಂಡ ರೈತರೊಬ್ಬರೊಂದಿಗೆ ಮಾತನಾಡಿದ ಸಚಿವರು, ‘ಪಡಿತರ ಪಟ್ಟಿಯಲ್ಲಿ ಇಲ್ಲ ಎಂಬ ಕಾರಣಕ್ಕೆ ಸದ್ಯಕ್ಕೆ ಸರ್ಕಾರ ಮೆಕ್ಕೆಜೋಳ ಖರೀದಿಸುತ್ತಿಲ್ಲ. ಕೇಂದ್ರ ಸರ್ಕಾರ ಇದಕ್ಕೆ ₹ 1,880 ನಿಗದಿ ಮಾಡಿತ್ತು. ಹೀಗಾಗಿ ನಾವು, ‘ಬೆಂಬಲ ಬೆಲೆ ನಿಗದಿ ಮಾಡಿದ್ದರೂ ಖರೀದಿಸದಿರುವುದು ಏಕೆ?’ ಎಂದು ಪ್ರಶ್ನಿಸಿದ್ದೇವೆ. ಕೇಂದ್ರದ ಪ್ರತಿಕ್ರಿಯೆ ಬಳಿಕ ಕ್ರಮ ಕೈಗೊಳ್ಳಲಿದ್ದೇವೆಎಂದು ಹೇಳಿದರು.

ಪರಿಹಾರ ಸರಿಯಾಗಿ ಸಿಗುತ್ತಿಲ್ಲ
ಲೈವ್‌ ನೋಡಿ ಕಾಮೆಂಟ್‌ ಮಾಡಿದ ವ್ಯಕ್ತಿಯೊಬ್ಬರು, ರೈತರಿಗೆ ಸರಿಯಾದ ಬೆಲೆ ಇಲ್ಲ ಮತ್ತು ಬೆಳೆ ವಿಮೆ ಪರಿಹಾರ ಸಿಗುತ್ತಿಲ್ಲ ಎಂದು ಹಲವರು ಸಮಸ್ಯೆ ಹೇಳಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಲಾಕ್‌ಡೌನ್‌ ಉಪಯೋಗಿಸಿಕೊಂಡು ಕೆಲವು ಮಾರಾಟಗಾರರು ಗ್ರಾಹಕರಿಂದ ಹೆಚ್ಚಿನ ಬೆಲೆ ವಸೂಲಿ ಮಾಡುತ್ತಿದ್ದಾರೆ. ಕೆಲವರು ರೈತರಿಗೆ ಮೋಸ ಮಾಡುತ್ತಿದ್ದಾರೆ. ಯಾರೇ ಆಗಲಿ ಹೆಚ್ಚಿನ ಬೆಲೆಗೆ ಮಾರಾಟಮಾಡುವುದು, ರೈತರಿಗೆ ಮೋಸ ಮಾಡುವುದು ಕಂಡುಬಂದರೆ ಅಧಿಕಾರಿಗಳಿಗೆ ದೂರು ನೀಡಿ, ಕ್ರಮ ಕೈಗೊಳ್ಳುತ್ತೇವೆ. ಉಳಿದಂತೆ, ದಾಖಲಾತಿ ಸಮಸ್ಯೆಯಿಂದಾಗಿ ಕೆಲವರಿಗೆ ಪರಿಹಾರ ಸಿಕ್ಕಿಲ್ಲ. ಈಗಾಗಲೇ ಸಾಕ್ಟು ಹಣ ಬಿಡುಗಡೆ ಮಾಡಿದ್ದೇವೆ. ದಾಖಲಾತಿ ದೋಷಗಳನ್ನು ಸರಿಪಡಿಸಿಕೊಳ್ಳಿ. ಪರಿಹಾರ ದೊರೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT