ಭಾನುವಾರ, ಸೆಪ್ಟೆಂಬರ್ 15, 2019
30 °C

ಕಳ್ಳರು, ಸುಳ್ಳರಿಂದ ಫೋನ್‌ ಕದ್ದಾಲಿಕೆ: ಶ್ರೀರಾಮುಲು

Published:
Updated:

ಬಳ್ಳಾರಿ: ‘ರಾಜ್ಯದಲ್ಲಿ ನಡೆದ ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಸಿ.ಬಿ.ಐ. ತನಿಖೆಗೆ ಒಪ್ಪಿಸಿರುವುದು ಸ್ವಾಗತಾರ್ಹ. ಹಿಂದಿನ ಸರ್ಕಾರದಲ್ಲಿದ್ದ ಕಳ್ಳರು, ಸುಳ್ಳರು ಸೇರಿಕೊಂಡು ಫೋನ್‌ ಕದ್ದಾಲಿಸಿದ್ದಾರೆ’ ಎಂದು ಶಾಸಕ ಬಿ. ಶ್ರೀರಾಮುಲು ಆರೋಪಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಹಿಂದೆ ಫೋನ್ ಕದ್ದಾಲಿಸಿದ್ದ ಪ್ರಕರಣದಲ್ಲಿ ರಾಮಕೃಷ್ಣ ಹೆಗಡೆಯವರ ಸರ್ಕಾರ ಬಿದ್ದಿತ್ತು. ಸರ್ಕಾರ ಉಳಿಸಿಕೊಳ್ಳಲು ಎಚ್.ಡಿ.ಕುಮಾರಸ್ವಾಮಿ ಫೋನ್ ಕದ್ದಾಲಿಕೆ ಮಾಡಿದ್ದಾರೆ. ಪ್ರಕರಣವನ್ನು ಸಿ.ಬಿ.ಐ.ಗೆ ವಹಿಸಿದ ಬಳಿಕ ಉಲ್ಟಾ ಹೊಡೆಯುತ್ತಿದ್ದಾರೆ’ ಎಂದರು.

‘ರಾಷ್ಟ್ರಮಟ್ಟದ ನಾಯಕರ ಕರೆಗಳನ್ನು ಸಹ ಕದ್ದಾಲಿಸಲಾಗಿದೆ. ಇದರಲ್ಲಿ ಕೆಲ ಅಧಿಕಾರಿಗಳ ಕೈವಾಡವೂ ಇದೆ. ಹೀಗಾಗಿಯೇ ಪ್ರಕರಣವನ್ನು ಸಿ.ಬಿ.ಐ. ತನಿಖೆಗೆ ವಹಿಸಲಾಗಿದೆಯೇ ಹೊರತು ರಾಜಕೀಯ ಉದ್ದೇಶವಿಲ್ಲ’ ಎಂದು ಮುಖ್ಯಮಂತ್ರಿಗಳ ನಿರ್ಧಾರವನ್ನು ಸಮರ್ಥಿಸಿಕೊಂಡರು.

‘ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು, ಅವರಿಗೆ ರಾಜಕೀಯ ಮರುಜನ್ಮ ನೀಡಿದ, ನೆರೆಯಿಂದ ಪ್ರಭಾವಿತಗೊಂಡಿರುವ ಬಾದಾಮಿ ಕ್ಷೇತ್ರಕ್ಕೆ ಒಮ್ಮೆಯೂ ಭೇಟಿ ನೀಡಿಲ್ಲ. ಕಣ್ಣು ನೋವು ಎಂದು ದೆಹಲಿಗೆ ಹೋಗಿ ಬಿರಿಯಾನಿ ತಿಂದು ಬಂದಿದ್ದಾರೆ. ಹೀಗಾಗಿ ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ’ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

Post Comments (+)