ಶನಿವಾರ, ಜನವರಿ 25, 2020
22 °C

ಬಿಎಸ್‌ವೈಗೆ ಕರೆ ಮಾಡಿದ ಮೋದಿ: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಕರೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಪೌರತ್ವ(ತಿದ್ದುಪಡಿ) ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವಂತೆ ಸೂಚನೆ ನೀಡಿದ್ದಾರೆ.

ಶನಿವಾರ ಮುಂಜಾನೆ 6.30ಕ್ಕೆ ಕರೆ ಮಾಡಿದ್ದ ಮೋದಿ ಅವರು, ಉಪಚುನಾವಣೆಯಲ್ಲಿ 12 ಸ್ಥಾನ ಗೆದ್ದಿರುವುದಕ್ಕೆ ಮೊದಲಿಗೆ ಅಭಿನಂದನೆ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆಡಳಿತ ಹೇಗೆ ನಡೆಯುತ್ತಿದೆ ಎಂದು ವಿಚಾರಿಸಿದ ಪ್ರಧಾನಿ, ಆರ್ಥಿಕ
ಪರಿಸ್ಥಿತಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ವಿವರವನ್ನು ಪಡೆದರು.

ಬಿಜೆಪಿ ಸರ್ಕಾರವನ್ನು ಸದೃಢ ಪಡಿಸಿದ್ದನ್ನು ಶ್ಲಾಘಿಸಿದ ಅವರು, ಕರ್ನಾಟಕದ ಅಭಿವೃದ್ಧಿಗೆ ಎಲ್ಲ ರೀತಿಯ ನೆರವು ನೀಡುತ್ತೇವೆ. ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಬೇಕಾದ ಕ್ರಮವನ್ನೂ ಕೈಗೊಳ್ಳಿ. ಕೇಂದ್ರದ ಪಾಲನ್ನು ಸಕಾಲದಲ್ಲಿ ತಲುಪಿಸಲು ಬದ್ಧವಿದ್ದೇವೆ. ಉತ್ತಮ ಆಡಳಿತ ನೀಡುವತ್ತ ಗಮನ ಹರಿಸಿ’ ಎಂದು ಕಿವಿಮಾತು ಹೇಳಿದರು.

‘ಪೌರತ್ವ ಕಾಯ್ದೆ ಅನುಷ್ಠಾನದತ್ತ ಆದ್ಯ ಗಮನ ಹರಿಸಿ. ನಮ್ಮ ಪಕ್ಷದ ಮಹತ್ವದ ಕಾಯ್ದೆ ಹಾಗೂ ಯೋಜನೆ ಇದಾಗಿದ್ದು, ಸಚಿವರು ಹಾಗೂ ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿ ಎಂದು ನಿರ್ದೇಶನ ನೀಡಿದರು’ ಎಂದು ಮೂಲಗಳು ವಿವರಿಸಿವೆ.

‘ಇದು ಮೊದಲ ಕರೆಯೇನಲ್ಲ. ಮುಖ್ಯಮಂತ್ರಿಗಳ ಜತೆ ಆಡಳಿತಾತ್ಮಕ ವಿಷಯಗಳ ಬಗ್ಗೆ ಪ್ರಧಾನಿ ಮಾತನಾಡುತ್ತಿರುತ್ತಾರೆ. ಯಡಿಯೂರಪ್ಪನವರು ಅಧಿಕಾರ ವಹಿಸಿಕೊಂಡ ಬಳಿಕ ಇದು ಆರನೇ ಕರೆ’ ಎಂದು ಮುಖ್ಯಮಂತ್ರಿ ಆಪ್ತ ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು