ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ಗಲಭೆ ವಿಡಿಯೊಗಳ ಅನುಕ್ರಮ ಬದಲಾಗಿದೆ: ಪೊಲೀಸ್‌ ಕಮಿಷನರ್‌ ಹರ್ಷ

Last Updated 11 ಜನವರಿ 2020, 14:22 IST
ಅಕ್ಷರ ಗಾತ್ರ

ಮಂಗಳೂರು: ಡಿಸೆಂಬರ್‌ 19ರಂದು ನಗರದಲ್ಲಿ ನಡೆದ ಗಲಭೆ ಮತ್ತು ಗೋಲಿಬಾರ್‌ಗೆ ಸಂಬಂಧಿಸಿದ ವಿಡಿಯೊ ತುಣುಕುಗಳ ಅನುಕ್ರಮ ಮತ್ತು ಸಂದರ್ಭ ಬದಲಿಸಿ ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗುತ್ತಿದೆ ಎಂದು ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌.ಹರ್ಷ ಹೇಳಿದ್ದಾರೆ.

ನಗರ ಪೊಲೀಸ್‌ ಕಮಿಷನರೇಟ್‌ನ ಅಧಿಕೃತ ವಾಟ್ಸ್‌ ಆ್ಯಪ್‌ ಗುಂಪಿನಲ್ಲಿ ಶನಿವಾರ ವಿಡಿಯೊ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಅವರು, ‘ಗಲಭೆಗೆ ಸಂಬಂಧಿಸಿದ ವಿಡಿಯೊ ತುಣುಕುಗಳನ್ನು ಸರಿಯಾದ ಅನುಕ್ರಮದಲ್ಲಿ ಮತ್ತು ಸರಿಯಾದ ಸಂದರ್ಭಗಳೊಂದಿಗೆ ಹೊಂದಿಸಿ ನೋಡದಿದ್ದರೆ ನೈಜ ಚಿತ್ರಣವನ್ನು ಅರಿಯಲು ಸಾಧ್ಯವಾಗುವುದಿಲ್ಲ’ ಎಂದಿದ್ದಾರೆ.

‘ಡಿ. 19ರಂದು ನಡೆದ ಗಲಭೆಯ ಆರೋಪಿಗಳ ಪತ್ತೆಗಾಗಿ ದೃಶ್ಯಾವಳಿಗಳನ್ನು ಮಂಗಳೂರು ಸಿಟಿ ಪೊಲೀಸ್‌ ಅಧಿಕೃತ ಫೇಸ್‌ಬುಕ್‌ ಪುಟದಲ್ಲಿ ಪ್ರಕಟಿಸಲಾಗಿದೆ. ಸಾರ್ವಜನಿಕರಿಂದಲೂ ಅತಿಹೆಚ್ಚಿನ ಸಂಖ್ಯೆಯಲ್ಲಿ ವಿಡಿಯೊ ಸಾಕ್ಷ್ಯಗಳು ಲಭ್ಯವಾಗಿವೆ. ಘಟನೆಗೆ ಸಂಬಂಧಿಸಿದಂತೆ ಹಲವಾರು ಚಾನೆಲ್‌ಗಳು ಸ್ಪಷ್ಟವಾದ ದೃಶ್ಯಾವಳಿಗಳನ್ನು ಬಿತ್ತರ ಮಾಡಿವೆ’ ಎಂದು ತಿಳಿಸಿದ್ದಾರೆ.

‘ಈ ಬೆಳವಣಿಗೆಗೆ ಸಂಬಂಧಿಸಿದಂತೆ ಕೆಲವು ಆಯ್ದ ದೃಶ್ಯಾವಳಿಗಳ ತುಣುಕುಗಳನ್ನು ಅನುಕ್ರಮ ಮತ್ತು ಸಂದರ್ಭಗಳನ್ನು ಬದಲಿಸಿ ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿದೆ. ಈ ತುಣುಕುಗಳನ್ನು ಸಮಗ್ರವಾಗಿ ನೋಡಿದಾಗ ಮಾತ್ರ ನೈಜ ಚಿತ್ರಣ ಅರಿಯಲು ಸಾಧ್ಯ. ಆದ್ದರಿಂದ ಈ ವಿಡಿಯೊ ತುಣುಕುಗಳನ್ನು ಸರಿಯಾದ ಅನುಕ್ರಮ ಮತ್ತು ಸಂದರ್ಭಗಳ ಆಧಾರದಲ್ಲಿ ಪರಿಶೀಲಿಸುವುದು ಅಗತ್ಯವಾಗಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

‘ಈಗಾಗಲೇ ಘಟನೆಯ ಕುರಿತು ಸಿಐಡಿ ತನಿಖೆ ಮತ್ತು ಮ್ಯಾಜಿಸ್ಟೀರಿಯಲ್‌ ವಿಚಾರಣೆ ಪ್ರಗತಿಯಲ್ಲಿದೆ. ನಮ್ಮ ಬಳಿ ಇರುವ ಎಲ್ಲ ಸಾಕ್ಷ್ಯಾಧಾರಗಳನ್ನು ಈ ತನಿಖಾ ಸಂಸ್ಥೆಗಳನ್ನು ಒದಗಿಸಲಾಗುವುದು. ಸಂಪೂರ್ಣ ತನಿಖೆಯ ಬಳಿಕ ಪೂರ್ಣ ಸತ್ಯ ಹೊರಬರಲಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT