ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಲ್‌ ದಿ ಬೆಸ್ಟ್‌ ಮಕ್ಕಳೇ. ಆತಂಕ ಬೇಡ, ಪರೀಕ್ಷೆ ಚೆನ್ನಾಗಿ ಬರೆಯಿರಿ’

Last Updated 26 ಜನವರಿ 2019, 2:29 IST
ಅಕ್ಷರ ಗಾತ್ರ

ಬೆಂಗಳೂರು: ‘ಆಲ್‌ ದಿ ಬೆಸ್ಟ್‌ ಮಕ್ಕಳೇ. ಆತಂಕ ಬೇಡ, ಪರೀಕ್ಷೆ ಚೆನ್ನಾಗಿ ಬರೆಯಿರಿ’.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಅಂತಿಮ ಹಂತದ ತಯಾರಿಯಲ್ಲಿರುವ ರಾಜ್ಯದ 8.50 ಲಕ್ಷ ವಿದ್ಯಾರ್ಥಿಗಳಿಗೆ ಹೀಗೆಂದು ಧೈರ್ಯ ತುಂಬಿ, ಆತ್ಮೀಯ ಪ್ರೀತಿಯಿಂದ ಶುಭ ಕೋರಿದವರು ಪ್ರೌಢಶಿಕ್ಷಣಪರೀಕ್ಷಾ ಮಂಡಳಿ ನಿರ್ದೇಶಕಿ ವಿ.ಸುಮಂಗಲಾ.

ಪರೀಕ್ಷೆಯ ಆತಂಕ ನಿವಾರಣೆ ಉದ್ದೇಶದಿಂದ ‘ಪ್ರಜಾವಾಣಿ’ ಶುಕ್ರವಾರ ಫೋನ್‌– ಇನ್‌ ಕಾರ್ಯಕ್ರಮ ನಡೆಸಿತು. ‘ಪರೀಕ್ಷಾ ಭೀತಿ’ ಎಂಬ ‘ಗುಮ್ಮ’ವನ್ನು ತಲೆಯೊಳಗೆ ತುಂಬಿಕೊಂಡು ಅವ್ಯಕ್ತ ಸಂಕಟ ಅನುಭವಿಸುತ್ತಿರುವ ವಿದ್ಯಾರ್ಥಿಗಳು ಮತ್ತು ಪೋಷಕರ ಹತ್ತು ಹಲವು ಸಂದೇಹಗಳಿಗೆ ಆಪ್ತ ಸಮಾಲೋಚಕಿಯಂತೆ ಸಲಹೆ ನೀಡಿದ ಅವರು, ಸಮಸ್ಯೆಗಳಿಗೆ ಪರಿಹಾರ ಸೂಚಿಸಿದರು.

ಅನಗತ್ಯ ವಿಷಯಗಳಿಗೆ ಗಮನಹರಿಸಬೇಡಿ. ಚಿತ್ತ ಚಾಂಚಲ್ಯಕ್ಕೆ ಒಳಗಾಗದೇ ಗುರಿಯನ್ನು ಕೇಂದ್ರೀಕರಿಸಿನಿರಾತಂಕವಾಗಿ ಅಂತಿಮ ಕ್ಷಣದ ಸಿದ್ಧತೆಗಳನ್ನು ಹೀಗೆ ಮಾಡಿಕೊಳ್ಳಿ ಎಂದು ಕಿವಿಮಾತನ್ನೂ ಹೇಳಿದರು.

ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್‌ ವಿಷಯಗಳು ಓದಿದ್ದು ನೆನಪಿನಲ್ಲಿ ಉಳಿಯದೇ ಉತ್ತರ ಬರೆಯುವಾಗ ಮರೆತು ಹೋಗುವ ಮನೋ ಸಮಸ್ಯೆಯ ಬಗ್ಗೆ ಕೆಲವು ವಿದ್ಯಾರ್ಥಿಗಳು ಮತ್ತು ಪೋಷಕರು ಚಡಪಡಿಕೆ ವ್ಯಕ್ತಪಡಿಸಿದರು. ಅದಕ್ಕೆ ಸುಮಂಗಲಾ ಅವರ ಸರಳ ಉತ್ತರ ಹೀಗಿತ್ತು– ‘ಅಯ್ಯೋ ಪುಟ್ಟ, ಗಾಬರಿ ಮಾಡಿಕೊಳ್ಳಬೇಡ, ಪುಸ್ತಕದಲ್ಲಿ ಏನಿದೆಯೋ ಅಷ್ಟೇ ಪರೀಕ್ಷೆಯಲ್ಲಿ ಬರುತ್ತೆ. ಯಾವುದನ್ನೂ ಬಾಯಿಪಾಠ ಮಾಡಿಕೊಳ್ಳದೇ ವಿಷಯವನ್ನು ಚೆನ್ನಾಗಿ ಓದಿಕೊ. ಮೇಷ್ಟ್ರು ಪಾಠ ಮಾಡಿದನ್ನು ಸರಿಯಾಗಿ ಅಭ್ಯಾಸ ಮಾಡು. ಓದು, ಬರೆದು ಓದು, ಕಲಿತಿದ್ದನ್ನು ಸ್ಮರಣೆ ಮಾಡಿಕೊ’ ಎಂದು ಸಮಾಧಾನ ಹೇಳಿದರು.

ಪರೀಕ್ಷೆ ಬಗ್ಗೆ ಮಕ್ಕಳಿಗಿಂತ ಹೆಚ್ಚು ದಿಗಿಲಿಗೆ ಒಳಗಾಗಿದ್ದ ಪೋಷಕರಿಗೆ, ‘ನಿಮ್ಮ ಮಗಳು ಒಂಬತ್ತನೇ ಕ್ಲಾಸ್‌ನಲ್ಲಿ ಎಷ್ಟು ಪರ್ಸೆಂಟ್‌ ತಗೊಂಡಿದ್ದಾಳೆ’ ಎಂದು ಕೇಳಿದರು. ಆ ಕಡೆಯಿಂದ ‘96 ಪರ್ಸೆಂಟ್‌ಮೇಡಂ’ ಎಂಬ ಉತ್ತರ ಬಂತು. ‘ಚೆನ್ನಾಗಿ ಅಭ್ಯಾಸ ಮಾಡುತ್ತಿದ್ದಾಳೆ ಬಿಡಿ. ಅನಗತ್ಯವಾಗಿ ಒತ್ತಡ ಹಾಕಬೇಡಿ. ನಿಮಗೆ ಇನ್ನೇಕೆ ಆತಂಕ’ ಎಂದು ಸುಮಂಗಲಾ ಧೈರ್ಯ ತುಂಬಿದರು.

ಪೋಷಕರು ಮತ್ತು ಶಿಕ್ಷಕರು ಪ್ರತಿಷ್ಠೆಗಾಗಿ ವಿದ್ಯಾರ್ಥಿಗಳ ಮೇಲೆ ಮಾನಸಿಕ ಒತ್ತಡ ಹೇರುತ್ತಿದ್ದಾರೆ. ಈ ಪ್ರವೃತ್ತಿ ಖಾಸಗಿ ಶಾಲೆಗಳಲ್ಲಿ ಹೆಚ್ಚು. ಅಲ್ಲಿನ ವಿದ್ಯಾರ್ಥಿಗಳಿಗೆ ಭಾವನೆ ಹಂಚಿಕೊಳ್ಳಲು ಆಗುವುದಿಲ್ಲ. ಮನೆ ಮತ್ತು ಶಾಲೆಯಲ್ಲಿ ಮುಕ್ತ ವಾತಾವರಣ ಇರುವುದಿಲ್ಲ. ಇಂತಹ ಮಕ್ಕಳ ಮನೋಸ್ಥಿತಿ ‘ಒತ್ತಡದ ಸ್ಫೋಟ’ಕ್ಕೆ ಕಾರಣವಾಗುತ್ತದೆ ಎಂದೂ ವಿಶ್ಲೇಷಿಸಿದರು.

ಸರ್ಕಾರಿ ಶಾಲೆಗಳ ಮಕ್ಕಳ ಮೇಲೆ ಒತ್ತಡ ಇರುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಪರೀಕ್ಷೆಯ ಭಯ ಇಲ್ಲದೇ ಎದುರಿಸುತ್ತಾರೆ. ಪರೀಕ್ಷೆ ಎದುರಿಸುವಾಗ ಭಯಮುಕ್ತ ಮತ್ತು ನಿರಾತಂಕದ ಮನಸ್ಥಿತಿಯನ್ನು ನಿರ್ಮಿಸಿಕೊಳ್ಳುವುದು ಅತಿ ಮುಖ್ಯ. ಅವರ ಸಂದೇಹ ಮತ್ತು ಸಮಸ್ಯೆಗಳ ಪರಿಹಾರಕ್ಕೆ ನಾವು ಸದಾ ಸಿದ್ಧರಿದ್ದೇವೆ ಎಂದು ಅವರು ಹೇಳಿದರು.

ಸುಮಾರು ಎರಡು ಗಂಟೆ ನಡೆದ ಫೋನ್‌–ಇನ್‌ನಲ್ಲಿ ರಾಜ್ಯದ ವಿವಿಧ ಭಾಗಗಳಿಂದ ನಿರಂತರ ಫೋನ್‌ ಕರೆಗಳು ಬಂದವು. ‘ಪ್ರಜಾವಾಣಿ’ ಫೇಸ್‌ಬುಕ್‌ನಲ್ಲಿಕಾರ್ಯಕ್ರಮದ ನೇರ ಪ್ರಸಾರ ನಡೆಯಿತು.

ಫಟಾಫಟ್‌ ಪ್ರಶ್ನೋತ್ತರ

ಕಿರಣ್‌ ರೆಡ್ಡಿ, ಹುಬ್ಬಳ್ಳಿ; ವನಮಾಲಾ, ಧಾರವಾಡ: 10 ತರಗತಿಯಲ್ಲಿಯೂ ಸಿಬಿಎಸ್‌ಇ ಪಠ್ಯಕ್ರಮ ಪರಿಚಯಿಸಲಾಗಿದೆ. ಇದರಿಂದ ಮಕ್ಕಳಿಗೆ ಗಣಿತದಲ್ಲಿ ತುಂಬಾ ತೊಂದರೆ ಆಗುತ್ತಿದೆಯಲ್ಲಾ ಮೇಡಂ?

ನಿರ್ದೇಶಕಿ: ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಕೆಲವು ವರ್ಷಗಳಿಂದ ಹಂತ–ಹಂತವಾಗಿ 6ನೇ ತರಗತಿಯಿಂದ ಪಠ್ಯಗಳನ್ನು ಪರಿಷ್ಕರಿಸಲಾಗಿದೆ. ಅದರಿಂದ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗಿಲ್ಲ. ಬದಲಾದ ಪಠ್ಯದ ಬೋಧನೆ ಕುರಿತು ಸರ್ಕಾರಿ ಶಾಲಾ ಶಿಕ್ಷಕರೆಲ್ಲರಿಗೂ ತರಬೇತಿ ನೀಡಲಾಗಿದೆ. ಪಠ್ಯ ಕಲಿಕೆಯಲ್ಲಿ ಕೊರತೆ ಕಂಡರೆ, ಮುಖ್ಯಶಿಕ್ಷಕರು ಅಥವಾ ಶಿಕ್ಷಣಾಧಿಕಾರಿಗಳ ಗಮನಕ್ಕೆ ತನ್ನಿ.

* ಹಮೀದ್‌, ವಿಟ್ಲ, ದಕ್ಷಿಣ ಕನ್ನಡ: ಪರೀಕ್ಷೆ ಬರೆಯುವ ವೇಳೆ, ಜಾಗೃತ ದಳದ (ಸ್ಕ್ವಾಡ್‌) ಸಿಬ್ಬಂದಿ ಬಂದು, ಕೆಲವೊಮ್ಮೆ ವಿದ್ಯಾರ್ಥಿಗಳನ್ನು ತಪಾಸಣೆ ಮಾಡುತ್ತಾರೆ. ಇದರಿಂದ ಅವರ ಅಮೂಲ್ಯ ಸಮಯ ವ್ಯರ್ಥವಾಗುತ್ತದೆ.

ನಿರ್ದೇಶಕಿ: ಜಾಗೃತ ದಳದವರು ವಿದ್ಯಾರ್ಥಿಗಳನ್ನು ತಪಾಸಣೆ ಮಾಡಬಹುದು ಎಂಬ ನಿಯಮವೇ ಪರೀಕ್ಷಾ ಕ್ರಮದಲ್ಲಿ ಇಲ್ಲ. ಉತ್ತರಿಸುವಲ್ಲಿ ತಲ್ಲೀನವಾಗಿರುವ ವಿದ್ಯಾರ್ಥಿಗಳಿಗೆ ತೊಂದರೆ ಕೊಡಬೇಡಿ ಎಂದು ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಅನುಮಾನಾಸ್ಪದವಾಗಿ ನಡೆದುಕೊಳ್ಳುತ್ತ ವಿದ್ಯಾರ್ಥಿ ಮೇಲೆ ಕಣ್ಣಿಡಬಹುದಾಗಿದೆ.

ನಿರ್ಮಲಾ, ಕೊಪ್ಪಳ: ಮಿಸ್‌, ಛಲೋ ಮಾರ್ಕ್ಸ್ ತಗೋಬೇಕಾದರೆ ಬೆಳಿಗ್ಗೆ ಎಷ್ಟಕ್ಕ ಎದ್ದು ಓದಬೇಕ್ರಿ?

ನಿರ್ದೇಶಕಿ: ನೋಡು ಪುಟ್ಟ, ಪ್ರತಿಯೊಬ್ಬರೂ ಓದುವ ಕ್ರಮ ಬೇರೆಯೇ ಇರುತ್ತದೆ. ನಿನಗೆ ಸಮಯ ಹೊಂದಿಕೆ ಆಗುವಂತೆ ವೇಳಾಪಟ್ಟಿ ಮಾಡಿಕೊಂಡು ಓದು. ಅರ್ಥವಾಗದ ವಿಷಯಗಳ ಬಗ್ಗೆ ಟೀಚರ್‌ಗಳಿಂದ ತಿಳಿದುಕೊ. ಶಾಲಾ ಅವಧಿ ಹೊರತಾಗಿ ದಿನಕ್ಕೆ ಕನಿಷ್ಠ ಮೂರು ಗಂಟೆಯಾದರೂ ಆಸಕ್ತಿಯಿಂದ ಓದು. ಓದಿದ್ದನ್ನು ಮನನ ಮಾಡು. ತುಂಬಾ ಕಷ್ಟವೆನಿಸುವ ವಿಷಯಕ್ಕೆ ಹೆಚ್ಚು ಸಮಯ ಕೊಡು.

ಉಮೇಶ್‌, ದಾವಣಗೆರೆ: ನಮ್ಮ ಕಡೆ ಪರೀಕ್ಷಾ ಕೇಂದ್ರಗಳನ್ನು ಅಸಮರ್ಪಕವಾಗಿ ಗುರುತಿಸುತ್ತಾರಲ್ಲ?

ಶೇಖರಪ್ಪ, ಹಿರಿಯ ಸಹಾಯಕ ನಿರ್ದೇಶಕ: ಶಾಲೆಗಳಲ್ಲಿನ ಮೂಲಸೌಕರ್ಯಗಳನ್ನು ಪರಿಶೀಲಿಸಿಯೇ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಮತ್ತು ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರು (ಡಿಡಿಪಿಐ) ಪರೀಕ್ಷಾ ಕೇಂದ್ರ ಗುರುತಿಸಲುಮಂಡಳಿಗೆ ಪ್ರಸ್ತಾವ ಸಲ್ಲಿಸುತ್ತಾರೆ. ಅದರ ಪ್ರಕಾರ ಮಂಡಳಿ ನಿರ್ಧಾರ ತಳೆಯುತ್ತೆ. ದಾವಣಗೆರೆಯ ಕೆಲವೆಡೆ ಇರುವ ಸಮಸ್ಯೆ ಗಮನಕ್ಕೆ ಬಂದಿದೆ, ಈ ವರ್ಷ ಹೆಚ್ಚುವರಿ ಕೇಂದ್ರ ತೆರೆಯಲು ಯೋಜಿಸಿದ್ದೇವೆ.

ನಾಸಿರ್‌ ಅಹ್ಮದ್‌, ಶಿಕಾರಿಪುರ: ಹಿಂದಿನ ವಾರ್ಷಿಕ ಪರೀಕ್ಷೆಗಳಲ್ಲಿ 625ಕ್ಕೆ 625 ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ವೆಬ್‌ಸೈಟ್‌ನಲ್ಲಿ ಹಾಕಿ. ಹೆಚ್ಚು ಅಂಕ ಗಳಿಸಲು ಹೇಗೆ ಬರೆಯಬೇಕೆಂದು ಎಲ್ಲರಿಗೂ ಗೊತ್ತಾಗುತ್ತೆ...

ನಿರ್ದೇಶಕಿ: ಉತ್ತರ ಪತ್ರಿಕೆಗಳ ಗೌಪ್ಯತೆ ಕಾಪಾಡಬೇಕು ಎಂಬ ಪರೀಕ್ಷಾ ನಿಯಮವಿದೆ. ಅಲ್ಲದೇ, ಅವುಗಳನ್ನು ಬಹಿರಂಗಪಡಿಸಲು ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳೇ ಇಚ್ಛಿಸುವುದಿಲ್ಲ. ಮಂಡಳಿ ಸಿದ್ಧಪಡಿಸುವ ಮಾದರಿ ಉತ್ತರಗಳಂತೆಯೇ (ಕೀ ಆನ್ಸರ್ಸ್), ಆ ವಿದ್ಯಾರ್ಥಿಗಳು ಬರೆದಿರುತ್ತಾರೆ.

ಜೀವಿತಾ, ಗ್ರೀನ್‌ಟೆಕ್‌ ಇಂಟರ್‌ನ್ಯಾಷನಲ್‌ ಶಾಲೆ, ಬೆಂಗಳೂರು: ಪರೀಕ್ಷೆ ಹೇಗೆ ಬರೆಯಬೇಕೆಂದು ಟಿಪ್ಸ್‌ ಕೊಡಿ ಮಿಸ್‌.

ನಿರ್ದೇಶಕಿ: ನೀನು ಪರೀಕ್ಷೆಗಳನ್ನು ಪಾಸಾಗುತ್ತಾ 1ರಿಂದ 9ನೇ ತರಗತಿಗಳನ್ನು ದಾಟಿ ಬಂದಿರುವೆಯಲ್ಲ. ಆ ಒಂಬತ್ತು ವರ್ಷಗಳಲ್ಲಿ ಹೇಗೆ ಬರೆದಿದ್ದಿಯೋ, ಹಾಗೆನೇ ಈ ಪರೀಕ್ಷೆಯನ್ನೂ ಬರೆ. ಗೊತ್ತಿರುವ ಪ್ರಶ್ನೆಗಳಿಗೆ ಮೊದಲು ಉತ್ತರಿಸು. ಕಷ್ಟದ ಪ್ರಶ್ನೆಗೆ ಹೆಚ್ಚು ಸಮಯ ಮೀಸಲಿಡು. ಒಂದು ಲೆಕ್ಕ ಬಿಡಿಸಲು, ಮೂರ್ನಾಲ್ಕು ವಿಧಗಳು ಇರುತ್ತವೆ. ಅವುಗಳನ್ನು ಶಿಕ್ಷಕರಿಂದ ತಿಳಿದುಕೊ.

ಎಂ.ವಿ.ಲೋಕನಾಥ, ನಿಖಿಲಾ ವಿದ್ಯಾಸಂಸ್ಥೆ, ಕೆ.ಆರ್‌.ನಗರ, ಮೈಸೂರು: ಪರೀಕಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಲು ಹುಣಸೂರಿನಲ್ಲಿ ಕಾರ್ಯಾಗಾರ ಮಾಡಿದರು. ನಮ್ಮ ತಾಲ್ಲೂಕಿನಲ್ಲಿಯೂ ಅದನ್ನು ಆಯೋಜಿಸಿ.

ನಿರ್ದೇಶಕಿ: ಬಹುತೇಕ ಡಿಡಿಪಿಐಗಳು ಇಂತಹ ಕಾರ್ಯಾಗಾರಗಳನ್ನು ಆಯೋಜಿಸುತ್ತಿದ್ದಾರೆ. ನಿಮ್ಮ ಕಾಳಜಿ, ಸಲಹೆಗೆ ಧನ್ಯವಾದ.

ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕಿ ವಿ.ಸುಮಂಗಲಾ
ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕಿ ವಿ.ಸುಮಂಗಲಾ

ಕೆ.ಆರ್‌.ನಗರದಲ್ಲೂ ಇದನ್ನು ಆಯೋಜಿಸಲು ಅಲ್ಲಿನ ಡಿಡಿಪಿಐ ಮಮತಾ ಅವರಿಗೆ ತಿಳಿಸುತ್ತೇನೆ.

ಅಭಿಷೇಕ್‌ ಪ್ರಭು, ಬೈಂದೂರು, ಉಡುಪಿ: ಸಿಬಿಎಸ್‌ಇ ಪಠ್ಯಕ್ರಮದಿಂದಾಗಿ ಪ್ರಶ್ನಾಕ್ರಮದಲ್ಲಿ ಬದಲಾವಣೆ ಆಗಿದೆಯಾ?

ನಿರ್ದೇಶಕಿ: ಕಳೆದ ವರ್ಷದ ಪರೀಕ್ಷೆ, ಈ ವರ್ಷದ ಮಾದರಿ ಪ್ರಶ್ನೆಪತ್ರಿಕೆಗಳಲ್ಲಿ ಹಾಗೂ ಪೂರ್ವಭಾವಿ ಪರೀಕ್ಷೆಯಲ್ಲಿ ಇದ್ದ ಪ್ರಶ್ನಾಕ್ರಮವೇ ವಾರ್ಷಿಕ ಪರೀಕ್ಷೆಯಲ್ಲಿ ಇರಲಿದೆ.http://kseeb.kar.nic.in/ ಜಾಲತಾಣದಲ್ಲಿ ಮಾದರಿ ಪ್ರಶ್ನೆಪತ್ರಿಕೆಗಳಿವೆ. ಅಭ್ಯಾಸಕ್ಕೆ ಅವುಗಳನ್ನು ಬಳಸಿಕೊಳ್ಳಿ.

* ನಸ್ರಿನ್‌, ಸರ್ಕಾರಿ ಉರ್ದು ಪ್ರೌಢಶಾಲೆ, ಸಿರ್ಸಿ : ಮೇಡಂ, ನಮಗೆ ಇನ್ನೂ ಪಾಸಿಂಗ್‌ ಪ್ಯಾಕೇಜ್‌ ಸಿಕ್ಕಿಲ್ಲ?

ನಿರ್ದೇಶಕಿ: ಮಂಡಳಿಯಿಂದ ಪಾಸಿಂಗ್‌ ಪ್ಯಾಕೇಜ್‌ ಅಂತ ಏನೂ ನೀಡಲ್ಲ. ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಡೌನ್‌ಲೋಡ್‌ ಮಾಡಿಕೊಂಡು, ಉತ್ತರ ಬರೆಯುವ ಕ್ರಮವನ್ನು ಮಕ್ಕಳಿಗೆ ಅಭ್ಯಾಸ ಮಾಡಿಸಿ.

ಚನ್ನಬಸವ, ಆದರ್ಶ ಶಾಲೆ, ಮಾನ್ವಿ: ಮಿಸ್‌, ಸಮಾಜ ವಿಜ್ಞಾನದಲ್ಲಿ ಇಂಟರ್ನಲ್‌ ಪ್ರಶ್ನೆಗಳನ್ನೇ ಕೇಳ್ತಿರಾ ಅಥವಾ ಎಕ್ಸ್‌ಟರ್ನಲ್‌ ಸಹ ಬರ್ತಾವಾ?

ನಿರ್ದೇಶಕಿ: ನೋಡು ಪುಟ್ಟ, ಯಾವು ಪ್ರಶ್ನೆ ಬರ್ತಾವೆ ಅಂತ ನನಗೂ ಗೊತ್ತಿಲ್ಲ. ನಿನಗೆ ಪಠ್ಯಪುಸ್ತಕ ಕೊಟ್ಟಿದ್ದಾರಲ್ವ. ಅದರಲ್ಲಿನ ಎಲ್ಲ ಪಾಠಗಳನ್ನು ಚೆನ್ನಾಗಿ ಓದಿ, ಮನನ ಮಾಡಿಕೊ. ಫೆಬ್ರುವರಿಯಲ್ಲಿ ಮತ್ತೊಂದು ಪೂರ್ವಸಿದ್ಧತಾ ಪರೀಕ್ಷೆ ನಡೆಸಲಾಗುತ್ತೆ. ಅದನ್ನು ಚೆನ್ನಾಗಿ ಬರೆ. ನಿನಗೆ ಆಲ್‌ ದ ಬೆಸ್ಟ್‌.

ವಿನುತಾ, ರಾಣಿಬೆನ್ನೂರು: ಶಾಲೆಯಲ್ಲಿ ಫ್ರೆಂಡ್ಸ್‌ ಹತ್ತಿರ ನೋಡಿಕೊಂಡು, ಕೇಳಿಕೊಂಡು ಬರೆಯುತ್ತಿದ್ದೆವು. ಬೋರ್ಡ್‌ ಎಕ್ಸಾಂ ಸ್ಟ್ರಿಕ್‌ ಮಾಡಿದರೆ, ನಮಗೆ ಬಹಳ ತೊಂದರೆ ಆಗುತ್ತೆ ಮೇಡಂ.

ನಿರ್ದೇಶಕಿ: ಅದಕ್ಕೆ ಅಲ್ವೇನಮ್ಮಾ, ಅದನ್ನು ಪರೀಕ್ಷೆ ಅನ್ನೋದು. ಅಲ್ಲಿ ಯಾರ ಉತ್ತರ ನೋಡಂಗಿಲ್ಲ. ಕೇಳೋ ಹಂಗಿಲ್ಲ. ಹೇಳೊ ಹಂಗಿಲ್ಲ. ಹೇಳಿಸಿಕೊಳ್ಳೊ ಹಂಗೂ ಇಲ್ಲ.

**

‘ಮಗಳಿಗೆ ಬೇಗ ಮದುವೆ ಮಾಡಿಸಬೇಡಿ, ಓದಿಸಿ’

ತಿಮ್ಮಣ್ಣ, ಜಗಳೂರು, ದಾವಣಗೆರೆ: ಮಗಳು ಈಗಾಗಲೇ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿ ಪಾಸ್‌ ಆಗಿದ್ದಾಳೆ ಮೇಡಂ, ಉತ್ತಮ ಅಂಕ ಗಳಿಸಿದ್ದಕ್ಕೆ ಸಿಗಬೇಕಾದ ಪ್ರೋತ್ಸಾಹಧನ ಇನ್ನೂ ತಲುಪಿಲ್ಲ.

‘ತಿಮ್ಮಣ್ಣ ಅವರೇ, ನನ್‌ ಮೊಬೈಲ್‌ ಸಂಖ್ಯೆ ಬರೆದುಕೊಳ್ಳಿ. ನಿಮ್ಮ ಮಗಳ ಹೆಸರು, ತೇರ್ಗಡೆಯಾದ ವರ್ಷ, ಶಾಲೆಯ ಕುರಿತ ಮಾಹಿತಿಯನ್ನು ಸಂದೇಶದ ಮೂಲಕ ಕಳುಹಿಸಿ. ಪ್ರೋತ್ಸಾಹಧನ ವಿತರಣೆ ಯಾವ ಹಂತದಲ್ಲಿದೆ ಎಂದು ಪರಿಶೀಲಿಸುತ್ತೇನೆ’ ಎಂದು ವಿ.ಸುಮಂಗಲಾ ಭರವಸೆ ನೀಡುತ್ತ, ಸಂಪರ್ಕ ಸಂಖ್ಯೆಯನ್ನು ತಾಳ್ಮೆಯಿಂದ ಹೇಳಿದರು.

ವಿದ್ಯಾರ್ಥಿನಿ ಕಾಲೇಜು ಓದುತ್ತಿದ್ದಾಳೆ ಎಂಬುದನ್ನು ಖಚಿತಪಡಿಸಿಕೊಂಡು, ‘ಮಗಳಿಗೆ ಬೇಗ ಮದುವೆ ಮಾಡಬೇಡಿ, ಚೆನ್ನಾಗಿ ಓದಿಸಿ’ ಎಂದು ಕಿವಿಮಾತು ಹೇಳಿದರು.

*

ಭಾಗ್ಯಶ್ರೀ, ಇಟಗಿ, ಯಲಬುರ್ಗಾ, ಕೊಪ್ಪಳ: ಇಂಗ್ಲಿಷ್‌–ಹಿಂದಿಗೆ ಯಾಕೆ ಕಡಿಮೆ ಟೈಮ್‌ ಇಟ್ಟಿದ್ದೀರಾ? ಹಳ್ಳಿಯವರಿಗೆ ಇಂಗ್ಲಿಷ್‌ ಕಷ್ಟ ಮಿಸ್‌.

ನಿರ್ದೇಶಕಿ: ಇವೆರಡು ದ್ವಿತೀಯ ಮತ್ತು ತೃತೀಯ ಭಾಷಾ ಪಠ್ಯಗಳು. ಇವುಗಳಲ್ಲಿನ ಪ್ರಶ್ನೆಗಳು ಗಣಿತ ಮತ್ತು ವಿಜ್ಞಾನದಷ್ಟು ಕಠಿಣ ಇರಲ್ಲ. ಹಾಗಾಗಿ 2 ಗಂಟೆ ಸಮಯ ನಿಗದಿ ಪಡಿಸಲಾಗಿದೆ. ಈ ಕುರಿತು ಬಹಳಷ್ಟು ದೂರುಗಳು ಬರುತ್ತಿವೆ. ಮುಂದಿನ ವರ್ಷದಿಂದ ಏನಾದರೂ ಬದಲಾವಣೆ ಮಾಡಲು ಪ್ರಯತ್ನಿಸುತ್ತೇವೆ.

**

ವಾಣಿ, ಯಲಹಂಕ: ನನ್ನ ಮಗನ ಕೈಬರಹ ಅಷ್ಟೇನು ಆಕರ್ಷಕವಾಗಿಲ್ಲ. ಇದರಿಂದ ಅಂಕಗಳಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದೇ?

ಕೆ.ಎಂ.ಗಂಗಾಧರಸ್ವಾಮಿ, ಹಿರಿಯ ಸಹಾಯಕ ನಿರ್ದೇಶಕ: ಉತ್ತರ ಪತ್ರಿಕೆಯಲ್ಲಿನ ಕೈಬರಹ ಓದುವಂತೆ ಇದ್ದರೆ ಸಾಕು. 30 ಅಂಕಗಳಿಗೆ ಬಹುಆಯ್ಕೆ ಮಾದರಿ ಪ್ರಶ್ನೆಗಳು ಇರುವುದರಿಂದ, ಕೈಬರಹದಿಂದಾಗಿ ಅಂಕಗಳಿಕೆಯಲ್ಲಿ ಹೆಚ್ಚೇನೂ ವ್ಯತ್ಯಾಸವಾಗದು.

*

ಮಹೇಶ, ಸ್ನೇಹಜ್ಯೋತಿ ಶಾಲೆ, ಮಾನ್ವಿ; ಮೊರಾರ್ಜಿ ದೇಸಾಯಿ ಶಾಲಾ ವಿದ್ಯಾರ್ಥಿಗಳು, ತುರುವೆಕೆರೆ : ಇನ್ನೂ ಕೆಲವು ಪ್ರಶ್ನೆ ಪತ್ರಿಕೆಗಳ ನೀಲ ನಕಾಶೆ (ಬ್ಲ್ಯೂ ಪ್ರಿಂಟ್‌) ನಮಗೆ ಸಿಕ್ಕಿಲ್ಲ.

ಶೇಖರಪ್ಪ: ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ನೀಲ ನಕಾಶೆಯ ಅಗತ್ಯವೇ ಇಲ್ಲ. ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುವವರಿಗೆ ಮಾತ್ರ ನಕಾಶೆ ಬೇಕಾಗುತ್ತದೆ. ಸ್ಮರಣೆ, ತಿಳುವಳಿಕೆ, ವಿಶ್ಲೇಷಣೆ ಮತ್ತು ಕೌಶಲ ಮಟ್ಟ ತಿಳಿಯುವ ಪ್ರಶ್ನೆಗಳನ್ನು ರಚಿಸಲು ಇದನ್ನು ರೂಪಿಸಲಾಗುತ್ತದೆ. ಈ ನಕಾಶೆಯನ್ನು ಬಿಟ್ಟು, ಓದಿನ ಕಡೆ ಗಮನ ಹರಿಸುವ ವಿದ್ಯಾರ್ಥಿಗಳು ಮಾತ್ರ ಉತ್ತಮ ಅಂಕ ಗಳಿಸುತ್ತಾರೆ. ಮಂಡಳಿ ಈಗಾಗಲೇ ಪ್ರತಿ ಅಧ್ಯಾಯಗಳಿಗೆ ನಿರ್ದಿಷ್ಟ ಅಂಕಗಳನ್ನು ನಿಗದಿ ಪಡಿಸಿದೆ. ಅದನ್ನು ಗಮನಿಸಿ.

*

ಸ್ಮಾರ್ಟ್ ವಾಚ್‌ ಬಳಕೆ ನಿಷೇಧ

‘ಸಾಮಾನ್ಯ ಕೈಗಡಿಯಾರಗಳನ್ನು(ಅನಲಾಗ್‌, ಮೆಕ್ಯಾನಿಕಲ್) ಪರೀಕ್ಷಾರ್ಥಿಗಳು ಕಟ್ಟಿಕೊಳ್ಳಬಹುದು. ಸ್ಮಾರ್ಟ್‌ ವಾಚ್‌ಗಳಿಂದ ನಕಲು ಮಾಡಲು ಅವಕಾಶ ಇದೆ. ಹಾಗಾಗಿ ವಿದ್ಯಾರ್ಥಿಗಳು ಅವುಗಳನ್ನು ಧರಿಸಿ, ಪರೀಕ್ಷಾ ಕೇಂದ್ರದ ಒಳಗೆ ಬರುವಂತಿಲ್ಲ’ ಎಂದು ವಿ.ಸುಮಂಗಲಾ ತಿಳಿಸಿದರು.

‘ಕೈಗಡಿಯಾರದ ಕುರಿತು ಅನುಮಾನ ಬಂದರೆ, ಕೇಂದ್ರದ ಮೇಲ್ವಿಚಾರಕರು ಅದನ್ನು ವಶಕ್ಕೆ ಪಡೆಯುತ್ತಾರೆ. ಪರೀಕ್ಷೆಯ ಬಳಿಕ, ಅದನ್ನು ವಿದ್ಯಾರ್ಥಿಗಳು ಹಿಂಪಡೆಯಬಹುದು’ ಎಂದು ಅವರು ಹೇಳಿದರು.

**

ಶಿಕ್ಷಕರಿಗೆ ಟಿಪ್ಸ್‌

* ವಿದ್ಯಾರ್ಥಿಯ ಮನಸ್ಥಿತಿ ಆಧರಿಸಿ ಮಾರ್ಗದರ್ಶನ ಮಾಡಿ

* ಸಾಧ್ಯವಾದರೆ, ಮಕ್ಕಳೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಮುಂಚೆಯೇ ಭೇಟಿ ನೀಡಿ

* ನೀಲ ನಕಾಶೆ ನೋಡಿ, ಅಭ್ಯಾಸ ಮಾಡಿರೆಂದು ಸಲಹೆ ನೀಡಬೇಡಿ

* ಮಾದರಿ ಪ್ರಶ್ನೆ ಪತ್ರಿಕೆಗಳಿಂದ ಪರೀಕ್ಷಾಭ್ಯಾಸ ಮಾಡಿಸಿ

ಪೋಷಕರಿಗೆ ಕಿವಿಮಾತು

* ಹೆಚ್ಚುಕಾಲ ಓದುವಂತೆ ಒತ್ತಾಯ ಮಾಡಬೇಡಿ

* ಮಕ್ಕಳನ್ನು ಪಕ್ಕದ ಮನೆಯ ಮಕ್ಕಳೊಂದಿಗೆ ಹೋಲಿಸಬೇಡಿ

* ಪರೀಕ್ಷೆ ಬಗ್ಗೆ ನೀವೇ ಟೆನ್ಷನ್‌ ಮಾಡಿಕೊಳ್ಳಬೇಡಿ

* ಪ್ರೋತ್ಸಾಹದ ಮಾತುಗಳನ್ನು ಸದಾ ಹೇಳಿ

**

ಅಂಕಿ–ಅಂಶ

8.41 ಲಕ್ಷ

ಈ ಬಾರಿಯ ಪರೀಕ್ಷಾರ್ಥಿಗಳು

2,842

ರಾಜ್ಯದಲ್ಲಿನ ಪರೀಕ್ಷಾ ಕೇಂದ್ರಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT